ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ಸಾಹಿತ್ಯ ಸಮ್ಮೇಳನ ನಾನು ಕಂಡಂತೆ

By * ವಿಶ್ವನಾಥ ಬಸವನಾಳಮಠ
|
Google Oneindia Kannada News

Vishwanath Basavanalmath
ಸುಮಾರು ನಲುವತ್ತು ವರ್ಷಗಳ ನಂತರ ರಾಜಧಾನಿ ಬೆಂಗಳೂರು 77ನೇ ಆಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಾಕ್ಷಿಯಾಗಿದೆ. 1970ಡಿಸೆಂಬರ್ 27ರಂದು ನಗರದ ಕೋಟೆ ಮೈದಾನದಲ್ಲಿ ಪ್ರೊ. ದೇ.ಜವರೇಗೌಡರ ಅಧ್ಯಕ್ಷತೆಯಲ್ಲಿ ನಡೆದ ಸಮ್ಮೇಳನಕ್ಕೂ ಮೊನ್ನೆ ಮುಕ್ತಾಯಗೊಂಡ 77ನೇ ಸಮ್ಮೇಳನಕ್ಕೂ ಮೂಲ ಆಶಯದಲ್ಲಿ ಹೆಚ್ಚೇನೂ ಬದಲಾವಣೆ ಇದ್ದಂತಿಲ್ಲ.

ಕಳೆದ ನಾಲ್ಕು ದಶಕಗಳಲ್ಲಿ ರಾಜ್ಯದ ಚಿತ್ರ ಅಮೂಲಾಗ್ರವಾಗಿ ಬದಲಾಗಿದೆ. ಅದರಲ್ಲೂ ವಿಶೇಷವಾಗಿ ರಾಜಧಾನಿ ಬೆಂಗಳೂರು ಉದ್ಯಾನ ನಗರಿಯ ಪೊರೆ ಕಳಚಿ ಐಟಿ-ಬಿಟಿ ನಗರ ಎಂಬ ಗಿಲೀಟು ಹೊದ್ದುಕೊಂಡಿದೆ. ಆದರೆ ಆಗಲೂ-ಈಗಲೂ ಬೆಂಗಳೂರಿನಲ್ಲಿ ಪರಭಾಷಿಕರ ಸವಾರಿ ನಡೆದೇ ಇದೆ. ಇದಿಷ್ಟು ಹಿಂದಿನ ಸಮ್ಮೇಳನದ ಫ್ಲ್ಯಾಶ್ ಬ್ಯಾಕ್ ಆದರೆ 77ನೇ ಅ.ಭಾ. ಸಮ್ಮೇಳನದ ಅನುಭವ ಇಲ್ಲಿದೆ.

ಈ ಸಮ್ಮೇಳನದಲ್ಲಿ ಸಭಾಂಗಣದ ವೇದಿಕೆ ಅದ್ದೂರಿಯಾಗಿಯೇ ಇತ್ತು. ಬೆಂಗಳೂರೆಂಬ ಮಾಯಾನಗರಿಯ ಮಲ್ಟಿಪ್ಲೆಕ್ಸ್, ಮಾಲ್, ಪಬ್ಬು-ಬಾರುಗಳ ಭರಾಟೆಯ ನಡುವೆಯೂ ದೂರದೂರಿನಿಂದ ಬಂದಿದ್ದ ಸಾಹಿತ್ಯಾಸಕ್ತರು ಉರಿಬಿಸಿಲಿನಲ್ಲೂ ಕೆಲ ನಿರೂಪಕರ-ಭಾಷಣಕಾರರ ಕನ್ನಡ ಉಚ್ಛಾರಣೆ ಕರ್ಣ ಕಠೋರವಾಗಿದ್ದರೂ ಸಹಿಸಿಕೊಂಡರು.

ಸಾಹಿತ್ಯ ಗೋಷ್ಠಿಗಳಲ್ಲಿ ಕೆಲ ಸವಕಲು ವಿಷಯಗಳೂ ಮಂಡನೆಯಾದವು. ಇದಕ್ಕೆ ಒಂದು ಉದಾಹರಣೆ ಗ್ರಾಮೀಣ ಜೀವನದ ತಲ್ಲಣಗಳ ಬಗ್ಗೆ. 40 ವರ್ಷಗಳ ಹಿಂದಿನ ಗ್ರಾಮೀಣ ಬದುಕನ್ನು ಇಂದಿನ ಜೀವನಕ್ಕೆ ಹೋಲಿಕೆ ಮಾಡಿ ಆಗಲೇ ಚೆನ್ನಾಗಿತ್ತು. ಈಗೆಲ್ಲ ಬದುಕು ಯಾಂತ್ರಿಕವಾಗಿದೆ' ಎಂದು ಹಲುಬಿದರೆ ಹೇಗೆ? ಬದಲಾವಣೆ ಜಗದ ನಿಯಮವಲ್ಲವೇ? ಈ ಬಗ್ಗೆ ಭಾಷಣ ಕೊರೆಯುತ್ತಿದ್ದ ಭಾಷಣಕಾರರೊಬ್ಬರು, ಈಚೆಗೆ ಗ್ರಾಮಗಳಲ್ಲಿ 20ರಿಂದ 40 ವಯಸ್ಸಿನ ಯುವಕರೇ ಕಾಣುತ್ತಿಲ್ಲ. ಅವರೆಲ್ಲ ಬೆಂಗಳೂರಿನತ್ತ ಮುಖ ಮಾಡಿದ್ದಾರೆ' ಎಂದು ಬೇಸರಿಸಿಕೊಂಡರಲ್ಲದೆ ಯುವಕರೇ ಮತ್ತೆ ಹಳ್ಳಿಗೆ ಮರಳಿ' ಎಂಬ ಫರ್ಮಾನನ್ನೂ ಹೊರಡಿಸಿದರು. ತಮಾಷೆಯೆಂದರೆ ಯುವಕರಿಗೆ ಅಪ್ಪಣೆ ಕೊಡಿಸಿದ ಈ ಮಹಾನುಭಾವ ಕಳೆದ 30 ವರ್ಷಗಳಿಂದ ಬೆಂಗಳೂರು ಬಿಟ್ಟು ಕದಲಿಲ್ಲ! ಗ್ರಾಮಗಳಲ್ಲಿ ಇಡೀ ದಿನ ದುಡಿದರೂ 50 ರೂಪಾಯಿ ಹುಟ್ಟುವುದಿಲ್ಲ. ಸ್ವಂತ ಜಮೀನಿದ್ದರೂ ಮನೆಗೆ ಬೇಕಾದ ಕಾಳು-ಕಡಿಗಳನ್ನು ಬೆಳೆಯಲಾರದ ಅಸಹಾಯಕತೆ ಇರುವಾಗ ಅನ್ನ ಅರಸುತ್ತ ಯುವಕರು ಪೇಟೆಗಳತ್ತ ಮುಖ ಮಾಡಿದರೇನು ತಪ್ಪು? ಸಾಹಿತ್ಯ ಗೋಷ್ಠಿಗಳಲ್ಲಿ ಭಾಷಣದ ಹೆಸರಲ್ಲಿ ಇಂಥ ಆವೈಜ್ಞಾನಿಕ ಹಾಗೂ ವಾಸ್ತವದ ನೆಲೆಗಟ್ಟಿನಿಂದ ದೂರವಿರುವ ವಿಷಯಗಳು ಬೇಕಾ ಎಂಬುದು ಪ್ರಶ್ನೆ.

ಬರೀ ಗೊಡ್ಡು ಉಪದೇಶ ನೀಡುವ ಭಾಷಣಗಳಿಗಿಂತ ಪ್ರಚಲಿತ ವಿದ್ಯಮಾನ, ಮಾಧ್ಯಮಗಳ ಸ್ಥಿತಿಗತಿ, ಸಾವಯವ ಕೃಷಿ ಕುರಿತು ಗೋಷ್ಠಿಗಳು ಆಸಕ್ತಿಕರವಾಗಿದ್ದವು. ಇವೆಲ್ಲವುಗಳಲ್ಲಿ ಹೈಲೈಟ್ ಎಂದರೆ ಪ್ರಾಣೇಶ, ಭುವನೇಶ್ವರಿ ಹೆಗಡೆ ತಂಡದ ಹಾಸ್ಯ ಗೋಷ್ಠಿ. ಕನ್ನಡೇತರರೂ ಕನ್ನಡ ಕಲಿಯಬೇಕು ಎಂಬುದು ಈ ಸಮ್ಮೇಳನದಲ್ಲಿ ಮಂಡನೆಯಾದ 10 ಸೂತ್ರಗಳ ಪೈಕಿ ಒಂದು. ಆದರೆ ಕನ್ನಡಿಗರೇ ಕನ್ನಡ ಬೆಳೆಸುವಲ್ಲಿ ಅನಾಸ್ಥೆ ತೋರಿದರೆ, ಬೇರೆಯವರ ಭಾಷೆಗೇ ನಾವು ಜೋತು ಬಿದ್ದರೆ ಅನ್ಯರು ನಮ್ಮ ನುಡಿಯನ್ನಾದರೂ ಕಲಿಯುವುದು ಹೇಗೆ?

ಈ ಎಲ್ಲ ಅಪಸವ್ಯಗಳ ನಡುವೆಯೂ ಬೆಂಗಳೂರಿನಲ್ಲಿ ವಾಸಿಸುತ್ತಿರುವ ಯುವ ಜನಾಂಗ ಅದರಲ್ಲೂ ವಿಶೇಷವಾಗಿ ಐಟಿ ಕಂಪನಿಗಳಲ್ಲಿ ಉದ್ಯೋಗದಲ್ಲಿರುವವರಲ್ಲಿ ಬೆಳೆಯುತ್ತಿರುವ ಭಾಷಾ ಪ್ರೇಮ ಮೆಚ್ಚುವಂಥದ್ದು. ಸಿಸ್ಕೊ, ಟಿಸಿಎಸ್, ಹನಿವೆಲ್, ವಿಪ್ರೊದಂಥ ಮುಂಚೂಣಿ ಐಟಿ ಸಂಸ್ಥೆಗಳಲ್ಲಿ ಕನ್ನಡದ ಕಾರ್‍ಯಕ್ರಮಗಳು ವರ್ಷಕ್ಕೊಮ್ಮೆಯಾದರೂ ನಡೆಯುತ್ತಿರುವುದು ಯುವಕರ ನುಡಿಪ್ರೀತಿಗೆ ಸಾಕ್ಷಿ. ಆದರೆ ಈ ಯುವ ಜನಾಂಗವನ್ನು ಕನ್ನಡದ ಚಟುವಟಿಕೆಗಳಲ್ಲಿ ಬಳಸಿಕೊಳ್ಳುವಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಯೋಚಿಸಿಲ್ಲವೆಂದು ಕಾಣುತ್ತದೆ. ಯೋಚಿಸಿದ್ದರೆ ಐಟಿ ವಲಯದ ಶೇಕಡಾ 10 ಕನ್ನಡಿಗರು ಸಮ್ಮೇಳನಕ್ಕೆ ಬಂದಿದ್ದರೂ ಅವರ ಸಂಖ್ಯೆ 8 ಸಾವಿರ ದಾಟುತ್ತಿತ್ತು. ಆದರೆ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಕಂಡಿದ್ದು ಬೆರಳೆಣಿಕೆ ಐಟಿ ಮಂದಿ. ಕಾಲದ ಓಘಕ್ಕೆ ತಕ್ಕಂತೆ ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಗೋಷ್ಠಿ ಏರ್ಪಡಿಸಿದರೆ ಚೆನ್ನಿತ್ತು.

ಸಾಹಿತ್ಯ ಸಮ್ಮೇಳನದ ಆಯೋಜನೆ ಬಗ್ಗೆ ಭಿನ್ನಾಭಿಪ್ರಾಯ ಏನೇ ಇದ್ದರೂ ಸಾಹಿತ್ಯಾಸಕ್ತರನ್ನು ಪ್ರತಿಬಾರಿ ಸೂಜಿಗಲ್ಲಿನಂತೆ ಆಕರ್ಷಿಸುವುದು ಪುಸ್ತಕ ಪ್ರದರ್ಶನ. ಈ ಬಾರಿ ರಾಜಧಾನಿಯಲ್ಲೇ ಸಮ್ಮೇಳನ ನಡೆದಿದ್ದರಿಂದ ಹೆಸರೇ ಕೇಳಿರದ ಪ್ರಕಾಶಕರ ಪುಸ್ತಕಗಳೂ ಓದುಗರ ಮನಸೂರೆಗೊಂಡವು.

ಇಂಥ ಸಮ್ಮೇಳನಗಳು (ಕ.ಸಾ.ಪ. ಬ್ಯಾನರಿನಡಿಯಲ್ಲೇ ನಡೆಯಬೇಕೆಂದೇನೂ ಇಲ್ಲ) ನಗರ-ಪಟ್ಟಣ ಪ್ರದೇಶದಲ್ಲಿ ಆಗಾಗ ನಡೆಯುತ್ತಿದ್ದರೆ ಕನ್ನಡ ಮನಸ್ಸುಗಳು ಒಂದೆಡೆ ಸೇರಿ ಮಾತು ಮಥಿಸಿ ವಿಚಾರವಾಗುವುದರಲ್ಲಿ ಸಂದೇಹವಿಲ್ಲ. ಹೀಗಾಗುವುದರಿಂದ ಜನರಲ್ಲಿ ಪುಸ್ತಕ ಪ್ರೀತಿ ಬೆಳೆಯುವುದಲ್ಲದೇ ಕನ್ನಡದ ಪ್ರಕಾಶಕ-ಲೇಖಕರ ಅನ್ನಕ್ಕೂ ಹಾದಿಯಾಗುವುದರಲ್ಲಿ ಅನುಮಾನವಿಲ್ಲ. ಈ ನಿಟ್ಟಿನಲ್ಲಿ ಕನ್ನಡದ ಪರಿಷೆ ಅನವರತವಾಗಿರಲಿ.

English summary
77th Kannada sahitya sammelana : In the view of Vishwanath Basavanalmath, techie from Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X