ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಮ್ಮೇಳನದಲ್ಲಿ ಊಟಕ್ಕಿಂತ ಉಪ್ಪಿನಕಾಯಿ ವಾಸಿ!

By * ಮಲೆನಾಡಿಗ
|
Google Oneindia Kannada News

Sahitya Sammelana food distribution chaos
ಕನ್ನಡ ಸಮ್ಮೇಳನಕ್ಕೆ ಬರುವ ಸುಮಾರು 3 ಲಕ್ಷ ಜನರ ಊಟೋಪಚಾರದ ಉಸ್ತುವಾರಿ ವಹಿಸಿಕೊಂಡ ಅಡಿಗಾಸ್ ಸಮೂಹದ ವಾಸುದೇವ ಅಡಿಗರು ಮೊದಲ ದಿನವೇ ಸುಸ್ತಾಗಿದ್ದು, ಸುಳ್ಳಲ್ಲ. ಜನ ಮರಳೋ, ಜಾತ್ರೆ ಮರಳೋ ಎಂಬಂತೆ ಹೊಟ್ಟೆ ಹಸಿದುಕೊಂಡು ಬಂದ ಜನಸಾಗರವನ್ನು ನಿಯಂತ್ರಿಸುವುದು ಕಷ್ಟಸಾಧ್ಯವಾಗಿತ್ತು. ಮೊದಲ ದಿನ ಮಧ್ಯಾಹ್ನ ಊಟವನ್ನು, ಸಂಜೆ ಕಾಫಿ, ಟೀ ಜೊತೆಗೆ ಸೇವಿಸಿದ್ದವರು ಇದ್ದಾರೆ. ಇಷ್ಟಕ್ಕೂ ಇದು ಸಂಪೂರ್ಣ ವ್ಯವಸ್ಥೆ ಲೋಪವೇ?

ಸುಮಾರು 20 ಸಾವಿರ ಜನಕ್ಕೆ ಉಪಹಾರ, 50 ಸಾವಿರ ಜನಕ್ಕೆ ಮಧ್ಯಾಹ್ನದ ಊಟ, ರಾತ್ರಿಗೆ 25 ಸಾವಿರ ಜನಕ್ಕೆ ಊಟೋಪಚಾರಕ್ಕೆ ವ್ಯವಸ್ಥೆ, ಒಟ್ಟು 3 ಲಕ್ಷ ಜನರಿಗೆ ಎಂದು ಆರ್ಡರ್ ಹಿಡಿದಿದ್ದ ಅಡಿಗಾಸ್ ಸಮೂಹದವರು, ನಿರೀಕ್ಷೆಗಿಂತ ಹೆಚ್ಚು ಜನ ಬಂದಿದ್ದು ಕಂಡು ಕೊಂಚ ವಿಚಲಿತರಾದರು. ಆದರೆ, ಊಟದ ವ್ಯವಸ್ಥೆಯಲ್ಲಿ ಶುಚಿತ್ವ ಕಾಯ್ದುಕೊಂಡು ಬಂದು, ತಡವಾಗಿಯಾದರೂ ಎಲ್ಲರಿಗೂ ಊಟ ಒದಗಿಸುವಲ್ಲಿ ಒಂದು ಹಂತಕ್ಕೆ ಸಫಲರಾದರು.

ವ್ಯವಸ್ಥೆ ಲೋಪ ಸರಿ.. ಆದರೆ: ಲಕ್ಷಾಂತರ ಜನ ಬಂದಾಗ ಚಿಕ್ಕಪುಟ್ಟ ಲೋಪ ಇರುತ್ತದೆ, ಅದನ್ನು ದೊಡ್ಡದು ಮಾಡಬಾರದು ಎಂದು ದೂರದೂರಿನಿಂದ ಬಂದಿದ್ದ ಹಲವು ಸಾಹಿತ್ಯಾಸಕ್ತರು ಅಭಿಪ್ರಾಯಪಟ್ಟರು. ನಮ್ಮ ಮನೆಗಳಲ್ಲಿ ಹಬ್ಬ ಹರಿದಿನಗಳ ಸಂದರ್ಭದಲ್ಲಿ ನಿರೀಕ್ಷೆಗಿಂತ ಹೆಚ್ಚು ಜನ ಬಂದರೆ ನಾವೇ ಕಂಗಾಲಾಗುವುದು ಸಹಜ. 60 ಸಾವಿರ ಜನರಿಗೆ ಅಡುಗೆ ಮಾಡಿದಿದ್ದಾಗ ಲಕ್ಷ ಜನ ಬಂದರೆ ಗತಿ ಏನು? ಇಲ್ಲಿ ಆಗಿದ್ದೂ ಅದೇ. ಹೀಗಾಗಿ ನಾವೇ ಅನುಸರಿಸಿಕೊಂಡು ಹೋಗಬೇಕು ಎಂದು ಎನ್ ಆರ್ ಕಾಲೋನಿಯ ರಾಮಸ್ವಾಮಿಗಳು ಅಭಿಪ್ರಾಯ ಹಂಚಿಕೊಂಡರು.

ಬೆಂಗಳೂರಿನಲ್ಲಿ ಬೇಕಾದಷ್ಟು ಹೋಟೆಲ್‌ಗಳಿವೆ. ಹೀಗಾಗಿ ಇದು ದೊಡ್ಡ ಸಮಸ್ಯೆಯೆ ಅಲ್ಲ. ಆದರೆ, 250 ರೂ. ನೀಡಿ ಪ್ರತಿನಿಧಿಗಳಾಗಿ ನೋಂದಾಯಿಸಿದವರು, ತಮಗೆ ಊಟ ಸಿಗದಿದ್ದಾಗ ತುಸು ಕೋಪಗೊಂಡಿದ್ದು ಸಹಜ. ಪ್ರತಿನಿಧಿಗಳಿಗಾಗಿ ಬಂದ ಕೆಲವರು, ಸೂಕ್ತ ಊಟ, ವಸತಿ ವ್ಯವಸ್ಥೆ ಮಾಡಿಲ್ಲ ಎಂದು ಸಿಟ್ಟು, ಸಿಡುಕು, ಆಕ್ರೋಶ ವ್ಯಕ್ತಪಡಿಸಿದರು. ಕೆಲವರು ಪ್ರತಿಭಟನೆಯನ್ನೂ ನಡೆಸಿದರು. ಅವರ ಹೋರಾಟ ಒಪ್ಪತಕ್ಕದ್ದೇ, ಆದರೆ, ಅವರ ಕೂಗು ಕೇಳಲು ಯಾರು ಇರಲಿಲ್ಲ. ಪೊಲೀಸಿನವರು, ಪಾಸ್ ವಿತರಣೆ ಕೌಂಟರ್ ನವರು ಯಾರು ಸಹಾಯ ಹಸ್ತ ಚಾಚಲು ಸಿದ್ಧರಾಗಿರಲಿಲ್ಲ. ಕಾರಣ ಅವರಿಗೆ ಏನು ಮಾಡಬೇಕು ಎಂದು ಮಾಹಿತಿ ಇರಲಿಲ್ಲ.

ಮೊದಲ ದಿನದ ಲೋಪದ ನಂತರ ಎರಡನೇ ದಿನ ಉದಯಭಾನು ಕಲಾಸಂಘ ಹಾಗೂ ಕೋಟೆ ಪ್ರೌಢಶಾಲೆ ಮೈದಾನದಲ್ಲಿ ಹಸಿದು ಬಂದವರೆಲ್ಲ ಸಾಲಿನಲ್ಲಿ ನಿಂತು, ನಿರಾತಂಕವಾಗಿ ಊಟ ಮಾಡಿದರು. ಬಿಸಿಬೇಳೆ ಬಾತ್, ಅನ್ನ ತಿಳಿಸಾರು ಹಾಗೂ ಸೋಂಪಾಪುಡಿ ನಾಲಿಗೆಗೆ ರುಚಿ ನೀಡಿತು. ಹಿಂದಿನ ದಿನ ಸಾರು, ಸಾಂಬಾರು ಸಿಗದೇ ಉಪ್ಪಿನಕಾಯಿ ಅನ್ನ ತಿಂದು ನೀರು ಕುಡಿದಿದ್ದ ಜನ ಒಂದಿಷ್ಟು ಒಳ್ಳೆ ಊಟ ಸವಿದರು.

ಸಾಹಿತ್ಯ ಹಾಗೂ ಊಟ: ಸಮ್ಮೇಳನಗಳಲ್ಲಿ ಸಾಹಿತ್ಯಕ್ಕಿಂತ ಊಟವೇ ಹೆಚ್ಚು ಸುದ್ದಿ, ಗದ್ದಲ ಮಾಡುವುದು ಸಾಮಾನ್ಯ. ಇದಕ್ಕೆ ಅಪವಾದವೆಂದರೆ ಉಡುಪಿ ಸಾಹಿತ್ಯ ಸಮ್ಮೇಳನದ ರಾಜಾಂಗಣದಲ್ಲಿ ಮಾಡಿದ್ದ ಭೋಜನ ವ್ಯವಸ್ಥೆ, ಮೂಡುಬಿದರೆಯ ಭೋಜನ ಶಾಲೆಯಲ್ಲಿ ಸ್ವಯಂಸೇವಕರು ಮಾಡಿದ ಅಚ್ಚುಕಟ್ಟಾದ ಊಟ ತಿಂಡಿ ವ್ಯವಸ್ಥೆ. ಕನಕಪುರದ ಸಮ್ಮೇಳನದಲ್ಲಿ, ತುಮಕೂರು ಸಮ್ಮೇಳನದಲ್ಲಿ ಉಂಟಾದ ಭೋಜನ ಕ್ರಾಂತಿ ಒಂದು ರೀತಿಯಲ್ಲಿ ಪ್ರತಿ ಸಮ್ಮೇಳನದಲ್ಲೂ ಒಂದಲ್ಲ ಒಂದು ದಿನ ಮರುಕಳಿಸುತ್ತಿದೆ. ಶಿವಮೊಗ್ಗ ಎಲ್ಲಾ ಸರಿಯಿದ್ದರೂ ವ್ಯವಸ್ಥೆ ಲೋಪದ ಆರೋಪ ಹೊತ್ತರೆ, ಚಿತ್ರದುರ್ಗದಲ್ಲಿ ಅನ್ನ ಹಸಿದವರ ಹೊಟ್ಟೆ ಸೇರದೆ ಪೋಲಾಗಿದ್ದು ದುರಂತ.

ಏನು ಮಾಡಬಹುದಿತ್ತು? : ಸರಳ ಸ್ವಚ್ಛ ಊಟ ಎಲ್ಲರ ಮೆಚ್ಚಿಗೆ ಪಡೆದರೂ, ವಿತರಣೆಯಲ್ಲಿ ವ್ಯತ್ಯಯ ಉಂಟಾಗಿದ್ದು ಏಕೆ? ಕಸಾಪ ಬಳಿ ಸ್ವಯಂ ಸೇವಕರಾಗಲು ಹೆಸರು ನೋಂದಾಯಿಸಿದ್ದು ಸುಮಾರು 150 ಮಂದಿ, ಆದರೆ, ಸಮ್ಮೇಳನ ದಿನ ಸ್ವಯಂಸೇವಕರಾಗಿ ಪಾಸ್ ಪಡೆದವರು 75 ಮಂದಿ ಮಾತ್ರ. ಬಸವನಗುಡಿ ಸುತ್ತ ಮುತ್ತಾ ಶಾಲಾ ಕಾಲೇಜಿಗೇನೂ ಕಮ್ಮಿಯಿಲ್ಲ. ಶಾಲಾ, ಕಾಲೇಜು ವಿದ್ಯಾರ್ಥಿಗಳನ್ನು, ಸ್ಕೌಟ್, ಎನ್ ಸಿಸಿ, ಸ್ವಯಂ ಸೇವಕರನ್ನಾಗಿ ಬಳಸಲು ಕಸಾಪ ಮರೆತ್ತಿದ್ದು ದೊಡ್ಡ ಲೋಪ.

ಶಿವಮೊಗ್ಗದಲ್ಲಿ ನಡೆದ ಸಮ್ಮೇಳನದಲ್ಲಿ ವ್ಯವಸ್ಥೆಯಲ್ಲಿ ಲೋಪ ಕಂಡು ಬಂದರೂ ಕಾಲೇಜು ವಿದ್ಯಾರ್ಥಿಗಳು ಸ್ವಯಂ ಸೇವಕರಾಗಿ ಮಿಂಚಿದ್ದು ಸುಳ್ಳಲ್ಲ. ಆದರೆ, ಬೆಂಗಳೂರಿನಲ್ಲಿ ಏಕೆ ಹೀಗಾಗಲಿಲ್ಲ ನಲ್ಲೂರು ಪ್ರಸಾದ್ ಅವರೇ ಉತ್ತರಿಸಬೇಕು.ಆರ್ ಎಸ್ ಎಸ್ ಹಿನ್ನೆಲೆಯಿಂದ ಬಂದ ಬಿಜೆಪಿ ಸಚಿವರುಗಳು ವೇದಿಕೆ ಹತ್ತಿ ಮೆರೆಯುವ ಬದಲು, ಸ್ವಲ್ಪ ಆರೆಸ್ಸೆಸ್ ಬುದ್ಧಿ ಉಪಯೋಗಿ ಸ್ವಯಂ ಸೇವಕರೆ ಇತ್ತ ಬನ್ನಿ ಎಂದಿದ್ದರೆ ಕಥೆಯೇ ಬೇರೆಯಾಗುತ್ತಿತ್ತು.

ಊಟದ ವ್ಯವಸ್ಥೆ ವ್ಯತ್ಯಯಕ್ಕೆ ಆಯೋಜಕರೇ ಹೊಣೆಯಾಗುತ್ತಾರೆ. ಒಂದು ಕಡೆ ಪಾಸ್ ಕಾಳಸಂತೆಯಲ್ಲಿ ಮಾರಾಟವಾಗುತ್ತಿದ್ದರೆ, ಇನ್ನೊಂದು ಕಡೆ ಪಾಸ್ ಇದ್ದರೂ ಊಟ ಸಿಗದೆ ಪರದಾಟ ಪಡುತ್ತಿದ್ದರು. ಎಲ್ಲಿಗೆ ಹೋಗಬೇಕು ಯಾರನ್ನು ವಿಚಾರಿಸಬೇಕು ಎಂದು ತಿಳಿಯದೆ, ನಾಲ್ಕು ಜನರ ಗುಂಪು ಸೇರಿದ ಕಡೆ ಇನ್ನಷ್ಟು ಜನ ಸೇರಿ ಗೊಂದಲ ಜಾಸ್ತಿಯಾಗುತ್ತಿತ್ತು. ಈ ಸಮಯಕ್ಕೆ ಸರಿಯಾಗಿ ಸುದ್ದಿ ವಾಹಿನಿಗಳು ಅಲ್ಲಿಗೆ ಧಾವಿಸಿ ಬಂದು ಪ್ರಸಾರ ಮಾಡಿದ್ದು ಕಹಳೆ ಬಾಯಿಯಲ್ಲಿ ಗುಟ್ಟು ಹೇಳಿದ್ದಂತಾಗಿತ್ತು.

English summary
77th Kannada Sahitya Sammelana Bengaluru will serve simple, clean and plenty of food items said Bengaluru hotel owners association president KN Vasudeva Adiga. But food distribution become chaos on day one made Adigas panic. But food distribution system improved on day 2 onwards.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X