ಸಮ್ಮೇಳನಾಧ್ಯಕ್ಷರ ಭಾಷಣದ ಪೂರ್ಣಪಾಠ (ಭಾಗ 4)
(ಮುಂದುವರಿದಿದೆ...)
ಕನ್ನಡದ ಎರಡು ಕಣ್ಣುಗಳು : ಬೆಂಗಳೂರಿನಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಧಾರವಾಡದಲ್ಲಿರುವ ಕರ್ನಾಟಕ ವಿದ್ಯಾವರ್ಧಕ ಸಂಘಗಳು ಆಧುನಿಕ ಕನ್ನಡ ನಾಡು-ನುಡಿ- ಸಾಹಿತ್ಯ ಪರಂಪರೆಯ ಎರಡು ಕಣ್ಣುಗಳು. ಇವುಗಳ ಮುಖ್ಯ ದೃಷ್ಟಿ ಕರ್ನಾಟಕದ ಏಕೀಕರಣವೆಂಬುದೂ ಅದು ಸಾಧಿತವಾಗಿರುವುದೂ ಈಗ ಇತಿಹಾಸ. ಆ ಕಾಲದ ಒತ್ತಾಸೆಯಿಂದ ನಾಡಿನ ಮಹನೀಯರು ಕಟ್ಟಿದ ಮಹತ್ವದ ಸಂಸ್ಥೆಗಳಿವು. ಶತಮಾನದ ಸಂಭ್ರಮದ ಅಂಚಿನಲ್ಲಿರುವ ಈ ಮಹಾನ್ ಸಂಸ್ಥೆಗಳು ಈ ವೇಳೆಗಾಗಲೇ ನಾಡಿನ ಸಾರ್ವಭೌಮ ಸಂಸ್ಥೆಗಳಾಗಿ ಬೆಳೆಯಬೇಕಾಗಿತ್ತು; ಆದರೆ ಜನತೆ ಮುಖ್ಯವಾಗಿ, ಸರಕಾರ ವ್ಯವಸ್ಥಿತವಾಗಿ ಅವನ್ನು ಬೆಳೆಸುವ ಬದಲು ಕಾಲಕ್ರಮೇಣ ಕಡೆಗಣಿಸುತ್ತ ಬಂದದ್ದು ಬಹಳ ಆಶ್ಚರ್ಯಕರವಾದ ಮತ್ತು ದುರದೃಷ್ಟಕರವಾದ ಸಂಗತಿ!
ಬದಲಾದ ಸನ್ನಿವೇಶಗಳಿಗನುಗುಣವಾಗಿ ಅವನ್ನು ಬಲಪಡಿಸುತ್ತ ಬಂದಿದ್ದರೆ ಇಂದು ಅವು ಮೂಲೆಗುಂಪಾಗುವ ಸ್ಥಿತಿಗೆ ಬರುತ್ತಿರಲಿಲ್ಲ. ಅಲ್ಲಿ ಕಾರ್ಯಗತಗೊಳಿಸಬಹುದಾಗಿದ್ದ ಯೋಜನೆಗಳನ್ನು ಸರಕಾರ ಒಂದೊಂದಾಗಿ ತನ್ನ ಕಡೆಗೆ ವರ್ಗಾಯಿಸಿಕೊಳ್ಳುತ್ತ ಬಂದಿದ್ದರಿಂದ ಹೊಸ ಹೊಸ ಹೆಸರಿನ ಸರಕಾರೀ ಸಂಸ್ಥೆಗಳು ಹುಟ್ಟಿಕೊಂಡಂತಾಯಿತೇ ಹೊರತು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕರ್ನಾಟಕ ವಿದ್ಯಾವರ್ಧಕ ಸಂಘಗಳ ವಿಕಾಸ ಸಾಧ್ಯವಾಗಲಿಲ್ಲ. ಅಂದರೆ , ಸರಕಾರ ಹೊಸದಾಗಿ ಹುಟ್ಟು ಹಾಕಿದ ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಪುಸ್ತಕ ಪ್ರಾಧಿಕಾರ ಮುಂತಾದ ಸಂಸ್ಥೆಗಳಲ್ಲಿ ಚಟುವಟಿಕೆಗಳು ಸರಕಾರೀಕರಣಗೊಂಡು ಜನದೂರವಾಗಿ ಕನ್ನಡ ಸಂಬಂಧವಾದ ಅಭಿವೃದ್ಧಿ ಕಾರ್ಯಗಳು ಸಮರ್ಪಕವಾಗಿ ನಡೆಯಲಾರದೆ ಹೋದವು.
ಕೆಲವೇ ಆಯ್ದ ಲೇಖಕರ ಕೃತಿಗಳ ಪ್ರಕಟಣೆ, ಕೆಲವೇ ಬಗೆಯ ವಿಚಾರ ಸಂಕಿರಣ, ಅಪೂರ್ಣ ಗಡಿವೀಕ್ಷಣೆ, ಕನ್ನಡ ಆಡಳಿತ ಭಾಷಾನೀತಿಯ ಅಸಮರ್ಪಕ ನಿರ್ವಹಣೆ, ಅನಿಯಂತ್ರಿತ ಪ್ರಶಸ್ತಿ ಪುರಸ್ಕಾರ ಪ್ರದಾನ, ಇವಿಷ್ಟೆ ತಾನೆ ಅಲ್ಲಿ ನಡೆಯುತ್ತಿರುವ ಕೆಲಸಗಳು? ಈ ಯೋಜನೆಗಳನ್ನು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕರ್ನಾಟಕ ವಿದ್ಯಾವರ್ಧಕ ಸಂಘಗಳಿಗೆ ಹಂಚಿಕೊಟ್ಟು ಕನ್ನಡ ಜನತೆಯ ಕೈಗಳನ್ನು ಬಲಪಡಿಸಬಹುದಾಗಿತ್ತು. ಆದರೆ ಹಾಗಾಗಲಿಲ್ಲ. ಈಗಲೂ ಕಾಲ ಮಿಂಚಿಲ್ಲ; ಕನ್ನಡದ ಪರಿಚಾರಿಕೆಯನ್ನು ಕೈಗೊಂಡಿರುವ ಸರಕಾರದ ಸಂಸ್ಥೆಗಳನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯವ್ಯಾಪ್ತಿಯಲ್ಲಿ ತಂದರೆ ಹೇಗೆ ಎಂಬುದು ಚರ್ಚಾಸ್ಪದವಾಗುವ ಪ್ರಮೇಯವೇ ಇರುವುದಿಲ್ಲ. ಈ ವಿಲೀನ ಪ್ರಕ್ರಿಯೆಯಿಂದ ಕನ್ನಡ ಸಾಹಿತ್ಯ ಪರಿಷತ್ತಿಗೆ ಮತ್ತು ಕರ್ನಾಟಕ ವಿದ್ಯಾವರ್ಧಕ ಸಂಘಗಳಿಗೆ ತನ್ನ ತಾನೇ ಹೊಸ ಶಕ್ತಿ ಬಂದಂತಾಗುತ್ತದೆ; ಯೋಜನೆಗಳ ನಿರ್ಬಲೀಕರಣವೂ ತಪ್ಪುತ್ತದೆ.
ಅಧಿಕೃತ ಸಂಸ್ಥೆಗಳು ಮಾಡಬಹುದಾದ ಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಸಂಬಂಧವಾದ ಸುಧಾರಣೆಯ ಕೆಲಸ ಕಾರ್ಯಗಳನ್ನು ಸಾರ್ವಜನಿಕ ಕ್ರಿಯಾಶಕ್ತಿಗೆ ಒಳಪಡಿಸದೆ, ಸರಕಾರೀಕರಣ ಮಾಡುವುದು ಪ್ರಜಾಪ್ರಭುತ್ವಕ್ಕೇ ವಿರುದ್ಧವಾದ ರೀತಿ ನೀತಿ. ಸಾಹಿತ್ಯ ಪರಿಷತ್ತು ಮತ್ತು ವಿದ್ಯಾವರ್ಧಕ ಸಂಘಗಳಂತಹ ಶುದ್ಧ ಜನಪರ ಸಂಸ್ಥೆಗಳು ತಮ್ಮ ಜಾಯಮಾನದಿಂದಲೇ ಈ ಕನ್ನಡಪರ ಕಾರ್ಯಗಳನ್ನು ಎಷ್ಟು ನವೋನವ ಉತ್ಸಾಹದಿಂದಲೂ ಜನಸಮ್ಮತಿಯಿಂದಲೂ ನಡೆಸಬಹುದಾಗಿತ್ತೋ ಅದಕ್ಕೆ ಬದಲಾಗಿ ಅನಿರೀಕ್ಷಿತ ಬದಲಾವಣೆ ತಾಳಿ ಜನದೂರ ಕಾರ್ಯವೈಖರಿಗಳಿಗೆ ಒಳಗಾಗುವ ಅಪಾಯದಿಂದ ಪಾರಾಗಬಹುದಾಗಿತ್ತು.
ಸಾಹಿತ್ಯವನ್ನು ಭಾಷೆಯನ್ನು ಕುರಿತಂತೆ, ಗಡಿನಾಡಿನ ಜನಗಳ ದಿಕ್ಕು ದೆಶೆ ಕುರಿತಂತೆ, ಇಡಿಯಾಗಿ ಅಕ್ಕಪಕ್ಕದ ಭಾಷೆ ಪ್ರಾಂತ್ಯ ಸಂಬಂಧವಾಗಿ ಮಾಡಬಹುದಾದ ಪರಸ್ಪರ ಕಾರ್ಯಗಳು ಕಾಲಕಾಲಕ್ಕೆ ನಿರೀಕ್ಷಿತ ರೀತಿಯಲ್ಲಿ, ಪ್ರಮಾಣದಲ್ಲಿ ನಡೆಯದೆ ಹೋಗಿವೆ. ಈ ಎಲ್ಲಾ ಕೊರತೆಗಳಿಗೆ, ಅಪಾಯಗಳಿಗೆ ಇನ್ನಾದರೂ ಆಸ್ಪದ ಕೊಡದೆ, ಮೇಲೆ ಹೇಳಿದ ಸಂಘ ಸಂಸ್ಥೆಗಳಿಗೆ ಈ ಕಾರ್ಯಭಾರವನ್ನು ಧಾರೆಯೆರೆದು ಕೊಡುವುದು ಶುಭಕಾರ್ಯವೆ ಆಗಿದೆ.
ವಾಸ್ತವವಾಗಿ ನಾವು ಈ ವಿಷಯಗಳ ಸಂಬಂಧವಾಗಿಯೇ ಖಾಸಗೀಕರಣ ಮತ್ತು ಉದಾರೀಕರಣ ತತ್ವಗಳನ್ನು ಅರ್ಥಮಾಡಿ ಕೊಳ್ಳಬೇಕಾಗಿದೆ. ಆಗ ಕನ್ನಡಿಗರು ಅಧಿಕೃತವಾಗಿ ತಮ್ಮ ಕನಸಿನ ಸಂಸ್ಥೆಗಳಾದ ಪರಿಷತ್ತು, ವಿದ್ಯಾವರ್ಧಕ ಸಂಘಗಳ ಮೂಲಕ ತಮ್ಮ ಕನ್ನಡ ನುಡಿ ಮತ್ತು ಕನ್ನಡ ಸಾಹಿತ್ಯದ ಜವಾಬ್ದಾರಿಗಳನ್ನು ತಾವೇ ನೇರವಾಗಿ ನಿರ್ವಹಿಸಿಕೊಳ್ಳಲು ಸಾಧ್ಯವಾಗುತ್ತದೆ. ಸರಕಾರ ವ್ಯವಸಾಯ, ಕಂದಾಯ, ಅಬಕಾರಿ, ಲೋಕೋಪಯೋಗಿ ಮತ್ತಿತರ ವ್ಯವಹಾರಿಕ -ಅವಶ್ಯಕ ಕರ್ತವ್ಯಗಳಲ್ಲಿ ತೊಡಗಿರಲಿ. ಹೀಗಾದರೆ ಜನರ ಆಶೋತ್ತರಗಳನ್ನು, ಆವೇಶಗಳನ್ನು, ಕನಸು ಮನಸುಗಳನ್ನು ನೋಯಿಸದೆ ನೆರವೇರಿಸಲು ಅನುವಾಗುತ್ತದೆ. ಸರಕಾರ ಪ್ರವೇಶ ಮಾಡಬಾರದಂತಹ, ದೂರನಿಂತು ಗೌರವದಿಂದ ಪ್ರೋತ್ಸಾಹ ನೀಡಬೇಕಾದಂತಹ ರೀತಿ ಇದಾಗುವುದಿಲ್ಲವೆ?
ಸಾಹಿತ್ಯವೆನ್ನುವುದು ಸರಕಾರದಿಂದ ನಿರ್ಣಯವಾಗುವಂಥದ್ದಲ್ಲ. ಅದು ತೀರ ಭಾವನಾತ್ಮಕವಾದ ವಿಚಾರ. ಇವನ್ನೆಲ್ಲ ನೇರವಾಗಿ ಜನತೆ ತನ್ನ ಸಂಘಸಂಸ್ಥೆಗಳ ಮೂಲಕ ತಾನೇ ನಿರ್ವಹಿಸಿಕೊಳ್ಳಬೇಕಾದ್ದು. ಹಲವು ಧಾರ್ಮಿಕ ವಿಚಾರಗಳಿಗೆ ಇಂದೂ ಕೂಡ ಸರಕಾರ ಪ್ರವೇಶ ಮಾಡುವುದು ಹೇಗೆ ಸಾಧ್ಯವಿಲ್ಲವೋ ಹಾಗೆ! ಆದ್ದರಿಂದ ಇಂತಹ ಭಾವನಾತ್ಮಕ, ಆವೇಶಭರಿತ ವಿಷಯಗಳ ಗೊಡವೆಗೆ ಹೋಗದಿರುವುದು ಜನಕ್ಕೂ; ಜನಪರ ಅಭಿವೃದ್ಧಿಗಾಗಿ ನಡೆಯುತ್ತಿರುವ ಸರಕಾರಗಳಿಗೂ ಶೋಭೆ ತರುವಂಥದ್ದು. ಈ ಕೆಲಸ ಅಂದರೆ , ಸಾಹಿತ್ಯ ಅಕಾಡೆಮಿ, ಕನ್ನಡ ಅಭಿವೃದ್ಧಿ ಪಾಧಿಕಾರ, ಪುಸ್ತಕ ಪ್ರಾಧಿಕಾರ ಮತ್ತು ಸಂಸ್ಕೃತಿ ಇಲಾಖೆ ಇವನ್ನೆಲ್ಲಾ ಸರಕಾರ ಸಾಹಿತ್ಯ ಪರಿಷತ್ತು ಮತ್ತು ವಿದ್ಯಾವರ್ಧಕ ಸಂಘಗಳಿಗೆ ವರ್ಗಾಯಿಸುವುದು ಅಗತ್ಯ. ಈ ಸಂಸ್ಥೆಗಳನ್ನು ಎರಡು ಸ್ವಾಯತ್ತ ವಿಶ್ವವಿದ್ಯಾನಿಲಯಗಳನ್ನಾಗಿ ಪರಿವರ್ತಿಸಲಿ. ಆಗ ಕನ್ನಡ ಭಾಷೆ ಸಾಹಿತ್ಯ ಸಂಸ್ಕೃತಿಗಳ ಅಭಿವೃದ್ಧಿ ಇತೋಪ್ಯತಿಶಯವಾಗಿ ನಡೆಯುತ್ತದೆ. ಕಾಲಕ್ರಮದಲ್ಲಿ ಅವು ಸ್ವತಂತ್ರ ಜನತಾ ಸಂಸ್ಥೆಗಳಾಗಿ ಬೆಳೆದು ದೇಶ ವಿದೇಶ; ಇಡಿಯಾಗಿ ವಿಶ್ವದಲ್ಲಿ ಕನ್ನಡ ಭಾಷೆ-ಸಾಹಿತ್ಯ-ಸಂಸ್ಕೃತಿ ಪ್ರಸಾರ ಕಾರ್ಯಗಳನ್ನು ಕೈಗೊಳ್ಳಲು ಸಮರ್ಥವಾಗುತ್ತವೆ.
ನಾನು ಈ ವೇದಿಕೆಯಿಂದ ನನಗೆ ಅತ್ಯಂತ ಗೌರವ ಪಾತ್ರರಾದ ಕನ್ನಡ ಜನತೆಯನ್ನು ಈ ಸಂಬಂಧವಾಗಿ ಪ್ರಚೋದಿಸುತ್ತಿದ್ದೇನೆ; ಇರುವ, ಬರುವ ಸರಕಾರಗಳನ್ನು ಪ್ರೀತಿಯಿಂದಲೇ ಎಚ್ಚರಿಸುತ್ತಲೂ ಇದ್ದೇನೆ. ಪ್ರೀತಿಯ ಮಕ್ಕಳು ತಮ್ಮ ಖಾಸಾ ಜವಾಬ್ದಾರಿಗಳನ್ನು ನಿರ್ವಹಿಸಿಕೊಳ್ಳಲು ಉತ್ಸುಕರೂ ಸಮರ್ಥರೂ ಆಗಿರುವರು ಎಂದಾಗ ಯಜಮಾನರಂತಹ ಸರಕಾರಗಳು ಮೆಚ್ಚಿ ಅದಕ್ಕೆ ಪ್ರೋತ್ಸಾಹ ಕೊಡದಿದ್ದರೆ ಹೇಗೆ?
| ಸಮ್ಮೇಳನಾಧ್ಯಕ್ಷರ ಭಾಷಣ (ಭಾಗ 3) | ಸಮ್ಮೇಳನಾಧ್ಯಕ್ಷರ ಭಾಷಣ (ಭಾಗ 5) |
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications