ಕೊಡಗಿನ ಗಾಜಿನ ಸೇತುವೆಯತ್ತ ಪ್ರವಾಸಿಗರು ಮುಗಿಬೀಳುತ್ತಿರುವುದೇಕೆ? ಇಲ್ಲಿನ ವಿಶೇಷತೆ ಏನು?

ಮಡಿಕೇರಿ, ಜನವರಿ 15: ಈ ಬಾರಿ ಪ್ರವಾಸಿಗರು ಕೊಡಗಿನತ್ತ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವುದು ವಿಶೇಷವಾಗಿದೆ. ತಮ್ಮ ಪ್ರವಾಸದ ಪಟ್ಟಿಯಲ್ಲಿ ಇಲ್ಲಿನ ಪ್ರವಾಸಿ ತಾಣಗಳಿಗೆ ಆದ್ಯತೆ ನೀಡುತ್ತಿರುವ ಪ್ರವಾಸಿಗರು ನಿಸರ್ಗ ಸೌಂದರ್ಯವನ್ನು ಕಣ್ತುಂಬಿಕೊಳ್ಳುವ ಸಲುವಾಗಿಯೇ ದಂಡು ದಂಡಾಗಿ ಆಗಮಿಸುತ್ತಿರುವುದಲ್ಲದೆ, ಇಲ್ಲಿರುವ ಗಾಜಿನ ಸೇತುವೆಯಲ್ಲಿ ಅಡ್ಡಾಡಿ ಹೊಸತೊಂದು ಅನುಭವದೊಂದಿಗೆ ತಮ್ಮೂರ ಹಾದಿ ಹಿಡಿಯುತ್ತಿದ್ದಾರೆ.

Recommended Video

      Bigg Boss 16 |Bigg Boss 16 Starting Date | Bigg Boss 16 Contestants |Salman Khan |Bigg Boss 16 Promo

      ಖಾಸಗಿಯಾಗಿ ನಿರ್ಮಿಸಿದ ಈ ಗಾಜಿನ ಸೇತುವೆ ಕೊಡಗಿನ ಪ್ರವಾಸಿ ತಾಣಗಳ ನಡುವೆ ತನ್ನದೇ ಆದ ಸ್ಥಾನವನ್ನು ಪಡೆದು ಎಲ್ಲರನ್ನು ಆಕರ್ಷಿಸುತ್ತಿದ್ದು, ಹೆಚ್ಚಿನವರು ಗಾಜಿನ ಸೇತುವೆಯಲ್ಲಿ ನಡೆದಾಡುತ್ತಾ ಪ್ರಕೃತಿಯ ಸೌಂದರ್ಯವನ್ನು ಸೆರೆ ಹಿಡಿದು ಸೋಷಿಯಲ್ ಮೀಡಿಯಾಗಳಲ್ಲಿ ತೇಲಿ ಬಿಡುವ ಸಲುವಾಗಿಯೇ ಬರುತ್ತಿರುವುದು ಗಮನಾರ್ಹವಾಗಿದೆ. ಕೊಡಗಿನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯಾದಂತೆಲ್ಲ ಪ್ರವಾಸಿಗರ ಸೆಳೆಯುವ ಸಲುವಾಗಿ ಖಾಸಗಿಯವರು ಹಲವು ರೀತಿಯ ಯೋಜನೆಗಳನ್ನು ತಯಾರಿಸುತ್ತಿದ್ದು ಅದರಲ್ಲಿ ಗಾಜಿನ ಸೇತುವೆಯೂ ಒಂದಾಗಿದೆ.

       Why Tourist Visiting Kodagu Glass Bridge..?

      ಕೊಡಗಿಗೊಂದು ಸುತ್ತು ಹೊಡೆದರೆ ಪ್ರವಾಸಿಗರನ್ನು ಸೆಳೆಯುವಂತಹ ನೂರಾರು ತಾಣಗಳಿವೆ. ಆದರೆ ಅವುಗಳನ್ನು ಅಭಿವೃದ್ಧಿ ಪಡಿಸದ ಕಾರಣದಿಂದಾಗಿ ಇವತ್ತಿಗೂ ಅವು ಎಲೆಯ ಮರೆಯ ಕಾಯಿಯಂತೆ ಉಳಿದು ಹೋಗಿವೆ. ಕೆಲವೊಂದು ಪ್ರವಾಸಿ ತಾಣಗಳು ಅಭಿವೃದ್ಧಿಯಾಗಿವೆಯಾದರೂ ಹೆಚ್ಚಿನವು ಇವತ್ತಿಗೂ ಪ್ರವಾಸಿಗರಿಂದ ದೂರವಾಗಿಯೇ ಉಳಿದು ಹೋಗಿವೆ ಎನ್ನುವುದನ್ನು ತಳ್ಳಿಹಾಕಲಾಗದು. ಕಳೆದೊಂದು ದಶಕದಿಂದ ಹೋಂಸ್ಟೇಗಳು ಹೆಚ್ಚಿನ ಸಂಖ್ಯೆಯಲ್ಲಿ ಹುಟ್ಟಿಕೊಂಡ ಪರಿಣಾಮ ಪ್ರವಾಸಿಗರನ್ನು ಆಕರ್ಷಿಸುವ ಸಲುವಾಗಿ ಕೆಲವು ಹೋಂಸ್ಟೇ ಮಾಲೀಕರು ತಮ್ಮ ಸುತ್ತಮುತ್ತಲ ಗ್ರಾಮಗಳಲ್ಲಿರುವ ದೇವಾಲಯ, ಬೆಟ್ಟಗುಡ್ಡ, ಜಲಪಾತಗಳನ್ನು ಪರಿಚಯಿಸುವ ಕೆಲಸವನ್ನು ಮಾಡುತ್ತಿದ್ದಾರೆ.

      ಪ್ರವಾಸಿಗರ ಸೆಳೆಯುತ್ತಿರುವ ಗಾಜಿನ ಸೇತುವೆ

      ಇನ್ನು ಹೋಂಸ್ಟೇ ಮಾಲೀಕರು ಕೂಡ ಪೈಪೋಟಿಗೆ ಬಿದ್ದಿದ್ದು, ಪ್ರವಾಸಿಗರನ್ನು ಸೆಳೆಯಲು ಹಲವು ಹೊಸತನಗಳನ್ನು ತರುತ್ತಿದ್ದಾರೆ. ಏರು ತಗ್ಗಿನ ಕಾಫಿ ತೋಟಗಳ ನಡುವೆ ಪ್ರವಾಸಿಗರು ಅಡ್ಡಾಡಲು ಅವಕಾಶ ಮಾಡಿಕೊಡುವುದರೊಂದಿಗೆ ಹಲವು ಅಡ್ವೆಂಚರ್ ಗಳಿಗೆ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಇದೆಲ್ಲವೂ ದೂರದಿಂದ ಬರುವ ಪ್ರವಾಸಿಗರಿಗೆ ಖುಷಿ ಕೊಡುತ್ತಿದೆ. ಮೊದಲೆಲ್ಲ ಪ್ರವಾಸಕ್ಕೆ ಬರುವವರು ಕೇವಲ ಪ್ರವಾಸಿ ತಾಣಗಳನ್ನಷ್ಟೆ ನೋಡಿ ಹೋಗುತ್ತಿದ್ದರು. ಈಗ ಹಾಗಿಲ್ಲ. ಆತಿಥ್ಯವೂ ನೀಡುತ್ತಿರುವುದರಿಂದ ಯಾರದೋ ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡಿದ್ದೇವೆ ಎಂಬ ಭಾವ ಸೃಷ್ಟಿಯಾಗುತ್ತಿದೆ.

       Why Tourist Visiting Kodagu Glass Bridge..?

      ಹೀಗಿರುವಾಗಲೇ ಇತ್ತೀಚೆಗೆ ಹೋಂಸ್ಟೇಗೆ ಬರುವ ಪ್ರವಾಸಿಗರಿಗೆ ಇನ್ನಷ್ಟು ಖುಷಿಕೊಡುವ ಸಲುವಾಗಿ ಮತ್ತು ಎತ್ತರದ ಪ್ರದೇಶದಲ್ಲಿ ನಿಂತು ಕಂದಕದಲ್ಲಿ ಬೆಳೆಯಲಾದ ಕಾಫಿ, ಕರಿಮೆಣಸು ತೋಟವನ್ನು ನೋಡಲು ದೂರದ ಬೆಟ್ಟಗುಡ್ಡಗಳನ್ನೆಲ್ಲ ಕಣ್ತುಂಬಿಸಿಕೊಳ್ಳುವ ಸಲುವಾಗಿ ನಿರ್ಮಾಣವಾಗಿರುವ ಗಾಜಿನ ಸೇತುವೆ ಕೊಡಗಿನ ಮಟ್ಟಿಗೆ ಈಗ ಹೆಚ್ಚು ಪ್ರವಾಸಿಗರನ್ನು ಸೆಳೆಯುವ ತಾಣವಾಗಿ ಗಮನಸೆಳೆಯುತ್ತಿದೆ. ಇದು ಎಷ್ಟರ ಮಟ್ಟಿಗೆ ಜನಪ್ರಿಯವಾಗಿದೆ ಎಂದರೆ ಕೊಡಗಿಗೆ ಹೋದರೆ ಗಾಜಿನ ಸೇತುವೆ ನೋಡಿಕೊಂಡು ಬರಬೇಕೆಂದು ಜನ ಮಾತನಾಡಿಕೊಳ್ಳುವ ಮಟ್ಟಿಗೆ ಬೆಳೆದಿದೆ.

      ಕೇರಳದ ತಂತ್ರಜ್ಞರಿಂದ ನಿರ್ಮಾಣ

      ಹಾಗೆನೋಡಿದರೆ ಪ್ರವಾಸೋದ್ಯಮವನ್ನು ಕೇರಳ ಚೆನ್ನಾಗಿ ಬಳಸಿಕೊಂಡಿದೆ. ಅಲ್ಲಿಗೆ ತೆರಳಿದವರಿಗೆ ಗಾಜಿನ ಸೇತುವೆ ಬಗ್ಗೆ ಗೊತ್ತೇ ಇರುತ್ತದೆ. ಅದರಲ್ಲೂ ನಿಸರ್ಗ ಸೌಂದರ್ಯವನ್ನು ಹೊಂದಿರುವ ಕೇರಳದ ವೈನಾಡಿನಲ್ಲಿ ಪ್ರವಾಸೋದ್ಯ ಅದ್ಭುತವಾಗಿ ಬೆಳೆದಿದೆ. ಅಲ್ಲಿಂದ ಸ್ಪೂರ್ತಿ ಪಡೆದು ಕೇರಳದ ತಂತ್ರಜ್ಞರಿಂದಲೇ ಕೊಡಗಿನಲ್ಲಿ ಗಾಜಿನ ಸೇತುವೆ ನಿರ್ಮಿಸಲಾಗಿದೆ. ಸೇತುವೆ ನಿರ್ಮಾಣಗೊಂಡು ಕೇವಲ ಆರು ತಿಂಗಳಲ್ಲೇ ಜನಪ್ರಿಯವಾಗಿರುವುದು ಖುಷಿಕೊಡುವ ವಿಚಾರವೇ.

       Why Tourist Visiting Kodagu Glass Bridge..?

      ಕೊಡಗಿನಲ್ಲಿ ನಿರ್ಮಾಣವಾಗಿರುವ ಗಾಜಿನ ಸೇತುವೆ ಪ್ರವಾಸಿಗರಿಗೆ ಏಕೆ ಇಷ್ಟವಾಗುತ್ತಿದೆ ಎಂದರೆ ಈ ಗಾಜಿನ ಸೇತುವೆ ಮೇಲೆ ಹೆಜ್ಜೆ ಹಾಕುತ್ತಾ ನಡೆಯುವುದೇ ಒಂದು ವಿಶಿಷ್ಟ ಅನುಭವ. ಜತೆಗೆ ಇಲ್ಲಿಂದ ಕಂಡು ಬರುವ ಪ್ರಕೃತಿಯ ನೋಟ ಮೈಮನವನ್ನು ಪುಳಕಗೊಳಿಸುತ್ತದೆ. ಹೀಗಾಗಿ ನಿಸರ್ಗದ ನಡುವಿನ ಸುಂದರತೆಯನ್ನು ಸವಿಯಲು ಗಾಜಿನ ಸೇತುವೆ ಸಹಕಾರಿಯಾಗಿದೆ.

      ಮಡಿಕೇರಿಗೆ ಸಮೀಪದಲ್ಲಿರುವ ತಾಣ

      ಇದರ ಬಗ್ಗೆ ಹೇಳಬೇಕೆಂದರೆ, ಮಡಿಕೇರಿಗೆ 10 ಕಿ.ಮೀ. ದೂರದ ಭಾಗಮಂಡಲ ರಸ್ತೆಯಲ್ಲಿರುವ ಉಡೋತ್ ಮೊಟ್ಟೆ ಎಂಬಲ್ಲಿ ಕಾಫಿ ಬೆಳೆಗಾರರಾದ ವಸಂತ್ ಎಂಬುವರು ತಮ್ಮ ಕಾಫಿ ತೋಟದಲ್ಲಿ ನಿರ್ಮಿಸಿದ್ದಾರೆ. ಇವರು ಕಾಫಿ ತೋಟ ಹೊಂದಿದ್ದು ಅದರೊಂದಿಗೆ ಹೋಂಸ್ಟೇ ಕೂಡ ನಡೆಸುತ್ತಿದ್ದಾರೆ. ಸದ್ಯ ತಮ್ಮ ತೋಟದಿಂದಲೇ ಕಂಡು ಬರುವ ನಿಸರ್ಗ ಸುಂದರ ದೃಶ್ಯಗಳನ್ನು ಗಾಜಿನ ಸೇತುವೆ ಮೂಲಕ ಉಣಬಡಿಸುತ್ತಿದ್ದಾರೆ.

       Why Tourist Visiting Kodagu Glass Bridge..?

      ಸೇತುವೆ ನಿರ್ಮಾಣ ಹೇಗೆ ನಡೆದಿದೆ ಎಂದರೆ ಕಾಫಿ ತೋಟದ ನಡುವೆ ಸುಮಾರು ಎಪ್ಪತ್ತೆಂಟು ಅಡಿ ಕಂದಕದ ಕೆಳಗಿನಿಂದ ಕಬ್ಬಿಣದ ಫಿಲ್ಲರ್ ನಿರ್ಮಿಸಿ ಅದ ಮೇಲೆ 33 ಎಂಎಂ ದಪ್ಪದ ಗಾಜನ್ನು ಬಳಸಿ ಸೇತುವೆ ನಿರ್ಮಿಸಲಾಗಿದೆ. ಹೀಗಾಗಿ ಸುಮಾರು 33 ಮೀಟರ್ ಉದ್ದದ ಈ ಸೇತುವೆಯ ಅಂಚಿನಲ್ಲಿ ಪ್ರವಾಸಿಗರು ನಿಂತು ಪ್ರಕೃತಿ ಚೆಲುವನ್ನು ಕಣ್ತುಂಬಿಸಿಕೊಳ್ಳಲು ಅನುಕೂಲವಾಗುವಂತೆ ವೃತ್ತಾಕಾರದ ಜಾಗವನ್ನು ಸೃಷ್ಟಿ ಮಾಡಲಾಗಿದೆ. ಇಲ್ಲಿ ತಡೆಗೋಡೆಯಿದ್ದು ಇಲ್ಲಿಂದ ನಿಂತು ಸುತ್ತಲ ದೃಶ್ಯಗಳನ್ನು ಕಣ್ಣಿನಲ್ಲೇ ಸೆರೆ ಹಿಡಿಯಬಹುದಾಗಿದೆ.

      ಪ್ರವಾಸಿಗರ ವೀಕ್ಷಣಾ ಪಟ್ಟಿಯಲ್ಲಿ ಸೇರ್ಪಡೆ

      ಸೇತುವೆ ಮೇಲೆ ಒಮ್ಮೆಗೆ 40 ಮಂದಿ ನಿಂತು ವೀಕ್ಷಣೆ ಮಾಡಬಹುದಾದರೂ ಸದ್ಯಕ್ಕೆ ಆರು ಮಂದಿಗೆ ಮಾತ್ರ ಅವಕಾಶ ಮಾಡಿಕೊಡಲಾಗುತ್ತಿದೆ. ಈ ಗಾಜಿನ ಸೇತುವೆ ಮೇಲೆ ನಡೆದಾಡಬೇಕಾದರೆ ಒಬ್ಬರಿಗೆ 200ರೂ.ನಂತೆ ಶುಲ್ಕವನ್ನು ನೀಡಬೇಕಾಗುತ್ತದೆ. ಗಾಜಿನ ಮೇಲೆ ಹೆಜ್ಜೆ ಹಾಕಿ ಹೊಸ ಅನುಭವ ಪಡೆಯುವ ಸಲುವಾಗಿ ಪ್ರವಾಸಿಗರು ಇತ್ತ ಧಾವಿಸುತ್ತಿದ್ದಾರೆ. ಸದ್ಯಕ್ಕೆ ಮಡಿಕೇರಿಯಿಂದ ಭಾಗಮಂಡಲ, ತಲಕಾವೇರಿಗೆ ಹೋಗುವ ರಸ್ತೆಯಲ್ಲಿ ಮಡಿಕೇರಿಗೆ ಸಮೀಪವಿರುವ ಕಾರಣದಿಂದ ಪ್ರವಾಸಿಗರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ.

      ಕುಶಾಲನಗರದಿಂದ ತಲಕಾವೇರಿವರೆಗೆ ಪ್ರವಾಸ ಹಮ್ಮಿಕೊಳ್ಳುವವರು ಮಾರ್ಗ ಮಧ್ಯೆ ಸಿಗುವ ಹಲವು ಪ್ರವಾಸಿ ತಾಣಗಳನ್ನು ನಡುವೆ ಈಗ ಉಡೋತ್ ಮೊಟ್ಟೆಯ ಗಾಜಿನ ಸೇತುವೆಯನ್ನು ವೀಕ್ಷಣಾ ಪಟ್ಟಿಯಲ್ಲಿ ಸೇರಿಸಿಕೊಳ್ಳುತ್ತಿರುವುದು ಕಾಣಿಸುತ್ತಿದೆ. ಹೀಗಾಗಿಯೇ ಅದು ಹೆಚ್ಚಿನ ಪ್ರವಾಸಿಗರನ್ನು ಸೆಳೆಯಲು ಸಾಧ್ಯವಾಗಿದೆ. ಅದು ಏನೇ ಇರಲಿ ಕೊರೊನಾ ಬಳಿಕ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಕುಸಿತ ಕಂಡಿತ್ತು. ಈಗ ಚೇತರಿಸಿಕೊಳ್ಳುತ್ತಿರುವುದು ಸಂತಸದ ವಿಚಾರವಾಗಿದೆ. ಜಿಲ್ಲಾಡಳಿತ ಕೂಡ ಪ್ರವಾಸಿಗರಿಗೆ ಅನುಕೂಲವಾಗುವಂತೆ ಅಗತ್ಯ ಸೌಲಭ್ಯ ಕಲ್ಪಿಸಿಕೊಟ್ಟರೆ ಪ್ರವಾಸಿ ಜಿಲ್ಲೆಯಾಗಿ ಖ್ಯಾತಿ ಪಡೆಯಲು ಸಾಧ್ಯವಾಗಲಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+