ಮುಂಗಾರು ಮಳೆಗೆ ಮಡಿಕೇರಿಯಲ್ಲಿ ಸುತ್ತಾಡುವುದೇ ಮಜಾ: ಮಂಜಿನ ನಗರಿಯಲ್ಲಿ ಅಂತಹದ್ದೇನಿದೆ ?
ಮಡಿಕೇರಿ, ಜೂನ್ 20: ಮುಂಗಾರು ಮಳೆಯ ಆಗಮನ ಮಲೆನಾಡಿನಲ್ಲಿ ಹೊಸದೊಂದು ಲೋಕದ ಸೃಷ್ಟಿಗೆ ಕಾರಣವಾಗಿದೆ. ಈ ದಿನಗಳಲ್ಲಿ ಮಳೆಮೋಡದ ನಡುವೆ ಆಗೊಮ್ಮೆ ಈಗೊಮ್ಮೆ ಸುರಿಯುವ ಭಾರಿ ಮಳೆಯ ನಡುವೆ ಸಣ್ಣಗೆ ತುಂತುರು ಹನಿಹಾಕುತ್ತಾ ನಡುಕ ಹುಟ್ಟಿಸುವ ವಾತಾವರಣದಲ್ಲಿ ಅಡ್ಡಾಡುವುದು ಒಂಥರಾ ಮಜಾ ಎನಿಸದಿರದು. ಬಗೆಬಗೆಯ ಛತ್ರಿಯ ಆಸರೆಯಲ್ಲಿ, ಕಾಲಿಗೆ ಗಂಬೂಟು, ಮೈಗೆ ರೈನ್ ಕೋಟ್ ಧರಿಸಿ ತಮ್ಮ ನಿತ್ಯದ ಕೆಲಸಗಳಲ್ಲಿ ನಿರತರಾದ ಜನ.. ಮಧ್ಯಾಹ್ನದ ಹೊತ್ತಲ್ಲೇ ಕತ್ತಲಾದ ಅನುಭವ.. ಇದೆಲ್ಲವೂ ಮಲೆನಾಡಿನಲ್ಲಿ ನಿತ್ಯವೂ ಕಾಣಸಿಗುವ ದೃಶ್ಯಗಳಾಗಿವೆ.
ಅದರಲ್ಲೂ ಮುಂಗಾರು ಆರಂಭದ ದಿನಗಳಲ್ಲಿ ಮಲೆನಾಡಿನಲ್ಲಿ ಅಡ್ಡಾಡುವುದು ಹೊಸ ಅನುಭವ ನೀಡುತ್ತದೆ. ಅದರಲ್ಲೂ ದಕ್ಷಿಣಭಾರತದ ಕಾಶ್ಮೀರ, ಭಾರತದ ಸ್ವಿಡ್ಜರ್ ಲ್ಯಾಂಡ್ ಎಂದೆಲ್ಲ ಕರೆಯುವ ಮಡಿಕೇರಿ ನಗರದಲ್ಲಿ ಈ ಸಮಯದಲ್ಲಿ ಸುತ್ತಾಡುವುದು ಒಂಥರಾ ಮಜಾ ಎನ್ನುವುದರಲ್ಲಿ ಎರಡು ಮಾತಿಲ್ಲ. ಅದರಲ್ಲೂ ಘಾಟಿ ರಸ್ತೆಯಲ್ಲಿ ಸಾಗಿ ಮಡಿಕೇರಿ ನಗರವನ್ನು ತಲುಪುವುದೇ ಒಂಥರಾ ವಿಶೇಷ ಅನುಭವ. ಬೆಟ್ಟ ಗುಡ್ಡಗಳ ನಡುವೆ ಸೃಷ್ಟಿಯಾದ ನಗರದಲ್ಲಿ ಹಲವು ಪ್ರೇಕ್ಷಣೀಯ ತಾಣಗಳಿವೆ.

ಮಂಜಿನ ನಗರಿ ಮಡಿಕೇರಿಗೊಂದು ಸುತ್ತು ಹೊಡೆದರೆ ಇಲ್ಲಿನ ಬೆಟ್ಟಗುಡ್ಡಗಳ ಮೇಲೆ ನೆಲೆನಿಂತ ಕಟ್ಟಡಗಳು, ಅದರ ನಡುವೆ ಹಾದು ಹೋದ ರಸ್ತೆಗಳು, ಕಾಂಕ್ರಿಟ್ ಮತ್ತು ಹಂಚಿನಿಂದ ನಿರ್ಮಾಣಗೊಂಡ ಮನೆಗಳು, ರಭಸದಿಂದ ಬೀಸಿ ಬರುವ ಗಾಳಿ ಬೆಟ್ಟ ಗುಡ್ಡಗಳ ಮೇಲೆ ಹಾದು ಹೋಗು ಬೆಳ್ಮೋಡಗಳು, ಕಾಫಿಯ ಘಮಲು ಆಕರ್ಷಿಸುತ್ತದೆ. ಮಳೆಗಾಲ ಆರಂಭವಾದ ಬಳಿಕ ಮಡಿಕೇರಿಯಲ್ಲಿ ಸದಾ ಜಿಟಿ ಜಿಟಿ ಮಳೆ ಸುರಿಯುತ್ತಲೇ ಇರುತ್ತದೆ. ಈ ಚಳಿಯಲ್ಲಿ ಬಿಸಿಬಿಸಿ ಕಾಫಿ ಹೀರುತ್ತಾ ಸಮಯ ಕಳೆಯುವುದು ಮರೆಯಲಾರದ ಅನುಭವವಾಗಿ ಉಳಿಯುತ್ತದೆ.
ಗಮನ ಸೆಳೆಯುವ ಪ್ರೇಕ್ಷಣೀಯ ತಾಣಗಳು
ಇನ್ನು ನಗರದಲ್ಲಿ ಅಡ್ಡಾಡಿದರೆ ಇತಿಹಾಸದ ಕಥೆ ಹೇಳುವ ಕೋಟೆ, ಅರಮನೆ, ಗದ್ದುಗೆ, ಭಕ್ತರ ಸೆಳೆಯುವ ಓಂಕಾರೇಶ್ವರ ದೇಗುಲ, ನಿಸರ್ಗ ಸೌಂದರ್ಯದ ರಾಜಾಸೀಟ್, ನೆಹರು ಮಂಟಪ, ಭೋರ್ಗರೆದು ಧುಮುಕುವ ಅಬ್ಬಿ ಜಲಪಾತ ಎಲ್ಲವೂ ಗಮನಸೆಳೆಯುತ್ತವೆ. ಇಲ್ಲಿರುವ ಪ್ರೇಕ್ಷಣೀಯ ತಾಣಗಳ ಬಗ್ಗೆ ಹೇಳಬೇಕೆಂದರೆ ನಗರದಲ್ಲಿ ಎದ್ದು ಕಾಣಿಸುವ ಕೋಟೆ ಮತ್ತು ಅರಮನೆ ಗಮನಾರ್ಹವಾಗಿದೆ.

ಸ್ವಲ್ಪ ಎತ್ತರ ಪ್ರದೇಶದಲ್ಲಿ ಕೋಟೆ ಹಾಗೂ ಅರಮನೆ ನಿರ್ಮಾಣಗೊಂಡಿದೆ ಎರಡು ಅಂತಸ್ತನ್ನು ಹೊಂದಿರುವ ಅರಮನೆಯು ಚೌರಸ್ ಸ್ಥಳ ವಿನ್ಯಾಸವನ್ನು ಹೊಂದಿದೆ. ವಿಶಾಲ ಹಜಾರಗಳನ್ನು ಸಭಾ ಭವನವನ್ನು ಹೊಂದಿರುವ ಅರಮನೆಯ ಭಿತ್ತಿಗಳಲ್ಲಿ ವಿವಿಧ ಚಿತ್ರಗಳು ಮೂಡಿವೆ. ವಾಸ್ತುಶಿಲ್ಪ ವಿನ್ಯಾಸದಲ್ಲಿ ಹೊಸತನವಿದ್ದು, ಆಕರ್ಷಣೀಯವಾಗಿದೆ.
ಅರಮನೆ ಸಮೀಪದಲ್ಲಿಯೇ ಲಿಂಗರಾಜೇಂದ್ರನು ಕಟ್ಟಿಸಿದ ಓಂಕಾರೇಶ್ವರ ದೇಗುಲವಿದ್ದು, ಇದು ಇಂಡೋಸಾರ್ಸನಿಕ್ ಶೈಲಿಯಲ್ಲಿರುವುದು ವಿಶೇಷ. ಇದು ನಾಲ್ಕೂ ಮೂಲೆಗಳಲ್ಲೂ ಉದ್ದನೆಯ ಗೋಪುರಗಳನ್ನು ಹೊಂದಿದ್ದು ನಡುವೆ ಬೃಹತ್ ಗುಮ್ಮಟವಿದ್ದು ಆಕರ್ಷಣೀಯವಾಗಿದೆ. ಲಿಂಗರಾಜೇಂದ್ರನು ಪರಮ ಪಾವನೆ ಗಂಗೆ ಹರಿಯುವ ಮಹಾಪುಣ್ಯ ಕ್ಷೇತ್ರವಾದ ಕಾಶಿವಿಶ್ವನಾಥನ ಪುಣ್ಯ ಸ್ಥಳದಿಂದ ಶಿವಲಿಂಗವನ್ನು ಸಕಲ ಸಂಪ್ರದಾಯ ಸಹಿತ ವಿಧಿ ವತ್ತಾಗಿ ಇಲ್ಲಿಗೆ ತಂದು ಶಾಸ್ತ್ರೋಕ್ತವಾಗಿ ವ್ರತಾದಿ ಪೂಜೆ ಪುನಸ್ಕಾರಗಳ ಪ್ರಕಾರ ಈ ದೇಗುಲದಲ್ಲಿ ಪ್ರತಿಷ್ಠಾಪಿಸಲಾಗಿದೆ.

ಗುಡ್ಡದ ಮೇಲೆ ನಿಸರ್ಗದ ಸುಂದರ ದೃಶ್ಯ
ಇಲ್ಲಿಗೆ ಸಮೀಪದಲ್ಲಿ ರಾಜಾಸೀಟ್ ಕಡೆಗೆ ತೆರಳಿದರೆ ಮೊದಲಿಗೆ ಗಾಂಧಿ ಮಂಟಪ ಸಿಗುತ್ತದೆ ಅದರಾಚೆಗೆ ಸುಂದರ ಉದ್ಯಾನವನ ರಾಜಾಸೀಟು ಕಾಣಿಸುತ್ತದೆ. ಇಲ್ಲಿಂದ ನಿಂತು ನೋಡಿದರೆ ನಿಸರ್ಗ ಸುಂದರ ನೋಟ ಕಣ್ಮುಂದೆ ಬರುತ್ತದೆ. ಬಳಿಯಲ್ಲಿಯೇ ಪುಟಾಣಿ ರೈಲು ಕೂಡ ಇದೆ. ರಾಜಾಸೀಟಿನ ಮೇಲ್ಭಾಗದ ಗುಡ್ಡದ ಮೇಲೆ ನಿಸರ್ಗದ ಸುಂದರ ದೃಶ್ಯವನ್ನು ಆಸ್ವಾದಿಸಲೆಂದು ನಿರ್ಮಿಸಿದ ಸುಂದರ ಮಂಟಪವೇ ನೆಹರು ಮಂಟಪವಾಗಿದೆ.
ಮಡಿಕೇರಿ ಪಟ್ಟಣದ ಎತ್ತರವಾದ ಗುಡ್ಡಪ್ರದೇಶದಲ್ಲಿ ನೆಲೆ ನಿಂತಿರುವ ಗದ್ದಿಗೆ ಒಂದು ಐತಿಹಾಸಿಕ ಸ್ಮಾರಕವಾಗಿದೆ. ಕೊಡಗನ್ನು ಆಳಿದ ಹಾಲೇರಿ ವಂಶದ ಅರಸರ ಪೈಕಿ ರಾಜ ವೀರರಾಜೇಂದ್ರ ಅವರ ಪತ್ನಿ ಮಹದೇವಮ್ಮ ಅವರ ಗದ್ದಿಗೆ ಮಧ್ಯದಲ್ಲಿದ್ದು, ಲಿಂಗರಾಜೇಂದ್ರ ಮತ್ತು ದೇವಮ್ಮಾಜಿ ದಂಪತಿಗಳ ಗದ್ದಿಗೆ ಬಲಭಾಗದಲ್ಲಿದೆ. ಇನ್ನು ಎಡಭಾಗದಲ್ಲಿ ರಾಜಪುರೋಹಿತಮುನಿಗಳ ಗದ್ದಿಗೆಯಿದೆ. ಇದಲ್ಲದೆ ಟಿಪ್ಪುಸುಲ್ತಾನ್ನೊಂದಿಗೆ ನಡೆದ ಯುದ್ದದಲ್ಲಿ ವೀರಮರಣವನ್ನಪ್ಪಿದ ಸೇನಾಪತಿ ಬಿದ್ದಂಡ ಬೋಪು ಹಾಗೂ ಅವರ ಪುತ್ರ ಬಿದ್ದಂಡ ಸೋಮಯ್ಯ ಅವರ ಸಮಾಧಿಯೂ ಇಲ್ಲಿದೆ.

ಅಬ್ಬಿ ಜಲಪಾತ ವೀಕ್ಷಿಸುವುದೇ ಕಣ್ಣಿಗೆ ಹಬ್ಬ
ನಗರದಿಂದ ಹತ್ತು ಕಿ.ಮೀ. ದೂರದಲ್ಲಿರುವ ನಿಶಾನೆಮೊಟ್ಟೆ ನಿಸರ್ಗ ನಿರ್ಮಿತ ತಾಣವಾಗಿದ್ದು,. ರಾಜರ ಕಾಲದಲ್ಲಿ ಶತ್ರುಗಳು ದಂಡೆತ್ತಿ ಬರುವುದನ್ನು ಅರಿಯಲು ಈ ಗುಡ್ಡದ ಮೇಲೆ ಸೈನಿಕರನ್ನಿರಿಸಲಾಗುತ್ತಿತ್ತಂತೆ ಈ ಸೈನಿಕರು ಇಲ್ಲಿ ಪಹರೆ ಕಾಯುತ್ತಿದ್ದರಂತೆ. ಇನ್ನು ನಗರದಿಂದ ಸುಮಾರು 8 ಕಿ.ಮೀ. ದೂರದಲ್ಲಿರುವ ಅಬ್ಬಿ ಜಲಪಾತ ನಿಜಕ್ಕೂ ಒಂದು ಮೋಹಕ ಜಲಪಾತವೇ... ವಿಶಾಲ ಬಂಡೆಗಳ ನಡುವೆ ಸುಮಾರು ಎಂಬತ್ತು ಅಡಿಯಷ್ಟು ಎತ್ತರದಿಂದ ಧುಮುಕುತ್ತಾ ತನ್ನ ವೈಭವವನ್ನು ಪ್ರದರ್ಶಿಸುವ ಜಲಪಾತವನ್ನು ನೋಡುವುದೇ ಕಣ್ಣಿಗೆ ಹಬ್ಬ.
ಇಲ್ಲಿಂದಾಚೆಗೆ ಮಾಂದಲಪಟ್ಟಿಯತ್ತ ತೆರಳಿದರೆ ಅಲ್ಲಿ ಎದುರಾಗುವ ನಿಸರ್ಗದ ನೋಟ ಮೈಮನವನ್ನು ಪುಳಕಗೊಳಿಸುತ್ತದೆ. ಒಟ್ಟಾರೆ ಮಳೆಗಾಲದಲ್ಲಿ ಮಡಿಕೇರಿಯಲ್ಲಿ ಅಡ್ಡಾಡುವುದು ಹೊಸ ಅನುಭವವಾಗಿರುತ್ತದೆ. ಮಲೆನಾಡಿನ ಆಚೆಗೆ, ನಗರದ ಜಂಜಾಟದಲ್ಲಿ ಕಳೆದು ಹೋದವರು ಮಲೆನಾಡಿನ ಅನುಭವ ಪಡೆಯುವುದರ ಜತೆಗೆ ಮಳೆಗಾಲದಲ್ಲಿ ಪ್ರೇಕ್ಷಣೀಯ ತಾಣಗಳನ್ನು ನೋಡುವುದು ಮರೆಯಲಾಗದ ಕ್ಷಣಗಳಾಗಿ ಉಳಿಯುವುದರಲ್ಲಿ ಎರಡು ಮಾತಿಲ್ಲ.












Click it and Unblock the Notifications