ವೀಕೆಂಡ್ ಪ್ರವಾಸ: ಚಾಮರಾಜನಗರ ಜಿಲ್ಲೆಯಲ್ಲಿ ಪ್ರವಾಸಿಗರಿಂದ ತುಂಬಿ ತುಳುಕುತ್ತಿರುವ ರೆಸಾರ್ಟ್ಗಳು
ಚಾಮರಾಜನಗರ, ಡಿಸೆಂಬರ್, 26: ವಾರಾಂತ್ಯ ಹಾಗೂ ಕ್ರಿಸ್‌ಮಸ್ ಹಬ್ಬದ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರವಾಸಿ ತಾಣಗಳು ಜನರಿಂದ ಗಿಜಿಗುಡುತ್ತಿದ್ದವು. ಬಹುತೇಕ ಎಲ್ಲಾ ರೆಸಾರ್ಟ್‌ಗಳು ಪ್ರವಾಸಿಗರಿಂದ ಕಿಕ್ಕಿರುದು ತುಂಬಿದ್ದು, ಹೊಸ ವರ್ಷಾಚರಣೆವರೆಗೂ ಇದೇ ಪರಿಸ್ಥಿತಿ ಇರಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಚಾಮರಾಜನಗರ ತಾಲೂಕಿನ ಕೆ.ಗುಡಿ, ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟ, ಗುಂಡ್ಲುಪೇಟೆ ತಾಲೂಕಿನ ಬಂಡೀಪುರ, ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಪ್ರವಾಸಿಗರ ದಂಡೇ ಹರಿದು ಬಂದಿದ್ದು, ವ್ಯಾಪಾರ-ವಹಿವಾಟು ಜೋರಾಗಿಯೇ ನಡೆದಿದೆ. ಸಫಾರಿ ಮೂಲಕ ಹಣ ಕೂಡ ಹರಿದು ಬಂದಿದೆ. ಕೇರಳ, ತಮಿಳುನಾಡು, ಬೆಂಗಳೂರು, ಮೈಸೂರು ಸೇರಿದಂತೆ ಇತರೆಡೆಯಿಂದ ಸಾವಿರಾರು ಮಂದಿ ಪ್ರವಾಸಿಗರು ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ತೆರಳಿ ಪೂಜೆ ಸಲ್ಲಿಸುತ್ತಿದ್ದಾರೆ.
ಪ್ರಕೃತಿ ಸೌಂದರ್ಯಕ್ಕೆ ಮನಸೋತ ಪ್ರವಾಸಿಗರು
ಜೊತೆಗೆ ಪ್ರವಾಸಿಗರು ಇಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಮನಸೋತು ಫೋಟೋ ಕ್ಲಿಕ್ಕಿಸಿಕೊಳ್ಳುತ್ತಲೇ ಇದ್ದಾರೆ. ಎರಡು ದಿನ ರಜೆ ಇದ್ದ ಕಾರಣ ಬಂಡೀಪುರ ಸಫಾರಿಯಲ್ಲಿ 8 ಬಸ್, 5 ಕಾರು, ಮತ್ತು ಒಂದು ಕ್ಯಾಂಟರ್ ವಾಹನಗಳು ಸಂಚರಿಸಿದವು. ಕಾಡಾನೆ, ಕೋಣ, ಜಿಂಕೆ, ನವಿಲು, ಕರಡಿ ಸೇರಿದಂತೆ ಇನ್ನಿತರ ಹಲವು ಕಾಡು ಪ್ರಾಣಿಗಳು ಸಹ ಸಫಾರಿ ವೇಳೆ ಕಾಣಸಿಕ್ಕಿವೆ ಎಂದು ಸಫಾರಿಗೆ ತೆರಳಿದ್ದ ಪ್ರವಾಸಿಗರೊಬ್ಬರು ತಿಳಿಸಿದರು. ಜೊತೆಗೆ, ಸಫಾರಿಗೆ ತೆರಳಲು ಟಿಕೆಟ್ ಸಿಗದೆಯೂ ಕೂಡ ಹಲವರು ವಾಪಸ್ಸಾಗಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.

ತುಂಬಿ ತುಳುಕುತ್ತಿರುವ ರೆಸಾರ್ಟ್ಗಳು
ಚಾಮರಾಜನಗರ, ಗುಂಡ್ಲುಪೇಟೆ ವ್ಯಾಪ್ತಿಯ ಜಂಗಲ್ ಲಾಡ್ಜ್, ಸರಾಯಿ, ಕಂಟ್ರಿ ಕ್ಲಬ್ ಸೇರಿದಂತೆ ಹಲವು ಖಾಸಗಿ ರೆಸಾರ್ಟ್‍ಗಳು ತುಂಬಿ ತುಳಿಕುತ್ತಿವೆ. ಜೊತೆಗೆ ಗುಂಡ್ಲುಪೇಟೆ ಪಟ್ಟಣದ ಬಹುತೇಕ ಹೋಟೆಲ್, ಲಾಡ್ಜ್‌ಗಳಲ್ಲೂ ಜನರು ವಾಸ್ತವ್ಯ ಹೂಡಿದ್ದು, ರಜೆಯ ದಿನಗಳನ್ನು ಕಳೆಯುತ್ತಿದ್ದಾರೆ. ಇನ್ನೆನು 2023 ಹೊಸವರ್ಷ ಸಮೀಪವಿದ್ದು, ಸಂಭ್ರಮಾಚರಣೆಗೆ ಜನರು ಕಾತರದಿಂದ ಕಾಯುತ್ತಿದ್ದಾರೆ. ಈಗಿನಿಂದಲೇ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರು ನೆಲೆಯೂರಲು ಪ್ರಾರಂಭಿಸಿದ್ದಾರೆ. ಆದ್ದರಿಂದ ಜಿಲ್ಲೆಯ ಬಹುತೇಕ ಹೋಟೆಲ್, ಲಾಡ್ಜ್‌ಗಳು ತುಂಬಿ ತುಳುಕುತ್ತಿವೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಜಿಲ್ಲೆಯ ಪ್ರವಾಸಿ ತಾಣಗಳ ವಿವರ
2022ರ ಕಾಲಘಟ್ಟ ಮುಗಿಯುವ ಹಂತದಲ್ಲಿದ್ದು, 2023ರ ಸ್ವಾಗತಕ್ಕೆ ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ. ಹೊಸ ವರ್ಷವನ್ನು ಕಿರು ಪ್ರವಾಸ ಹಮ್ಮಿಕೊಳ್ಳಲು ಈಗಿನಿಂದಲೇ ಪ್ರವಾಸಿಗರು ಸಿದ್ಧತೆಯನ್ನು ನಡೆಸಿದ್ದಾರೆ. ಹಾಗೆಯೇ ದೇಶದ ಜನಪ್ರಿಯ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಒಂದಾದ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬೆಳಗ್ಗೆ ಮತ್ತು ಸಂಜೆ ಸಫಾರಿ ನಡೆಸಬಹುದಾಗಿದೆ. ಹೊಸವರ್ಷದ ಆರಂಭವನ್ನು ಹಸಿರು ನೋಡಿ ಕಳೆಯುವುದು ಒಂದು ಒಳ್ಳೆಯ ಯೋಚನೆ ಕೂಡ ಆಗಿದೆ. ಅಂದಹಾಗೆ, ಮೈಸೂರಿನಿಂದ 75 ಕಿಲೋ ಮೀಟರ್ ದೂರದಲ್ಲಿರುವ ಬಂಡೀಪುರಕ್ಕೆ ಸ್ವಂತ ವಾಹನದಲ್ಲಿ ಬರುವುದು ಹೆಚ್ಚು ಸೂಕ್ತವಾಗಿದೆ. ಆದರೂ ಇಲ್ಲಿಗೆ ಸಾರಿಗೆ ಸಂಸ್ಥೆಯ ಬಸ್‌ಗಳ ವ್ಯವಸ್ಥೆಯೂ ಕೂಡ ಇದೆ.

ಬಂಡೀಪುರದ ಸಮೀಪ ಹಿಮವದ್ ಗೋಪಾಲಸ್ವಾಮಿ ಬೆಟ್ಟವಿದ್ದು, ಇಲ್ಲಿ ಮಧ್ಯಾಹ್ನ ಆದರೂ ಮಂಜು ಮುಸುಕಿದ ವಾತಾವರಣ ಇರುತ್ತದೆ. ಆದ್ದರಿಂದ ಇಲ್ಲಿಗೆ ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿ, ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಸವಿಯುತ್ತಲೇ ಇರುತ್ತಾರೆ. ಈ ಮೂಲಕ ಹೊಸ ವರ್ಷವನ್ನು ಇಲ್ಲಿಯೇ ಆಚರಣೆ ಮಾಡುವುದು ಇನ್ನು ಸೂಕ್ತವಾಗಿದೆ. ಆದ್ದರಿಂದ ಇಲ್ಲಿಗೆ ಪ್ರವಾಸಿಗರ ದಂಡೇ ಹರಿದುಬರುವ ಸಾಧ್ಯತೆಗಳು ಎದ್ದು ಕಾಣುತ್ತಿವೆ.












Click it and Unblock the Notifications