Weekend travel: ಮೈಸೂರಿನಲ್ಲಿ ಮಲೆನಾಡಿನ ಅನುಭವ ನೀಡುವ ಚಾಮುಂಡೇಶ್ವರಿ ದೇವಿ ವನ
ಮೈಸೂರು, ಜುಲೈ 13: ಇದು ನಗರದೊಳಗಿನ ಮಲೆನಾಡು.. ಇಲ್ಲಿನ ಹಸಿರ ವೃಕ್ಷ ಸಂಪತ್ತಿನ ನಡುವೆ ಹೆಜ್ಜೆ ಹಾಕುತ್ತಿದ್ದರೆ, ಬೀಸುವ ತಂಗಾಳಿ, ಹಕ್ಕಿಗಳ ಚಿಲಿಪಿಲಿ ನಿನಾದ ಮೈಮನಕ್ಕೆ ಮುದ ನೀಡುತ್ತದೆ. ಜೊತೆಗೆ ದೈಹಿಕ ಶಕ್ತಿಯನ್ನು ವೃದ್ಧಿಸುತ್ತದೆ.
ಪ್ರತಿದಿನವೂ ಮುಂಜಾನೆ ಈ ಸುಂದರ ನಿಸರ್ಗದೊಳಗೆ ಹೆಜ್ಜೆ ಹಾಕುವುದನ್ನು ಅಭ್ಯಾಸ ಮಾಡಿಕೊಂಡರೆ ದೇಹಕ್ಕೆ ವ್ಯಾಯಾಮ ಸಿಗುವುದಲ್ಲದೆ, ಮಾನಸಿಕವಾಗಿಯೂ ನೆಮ್ಮದಿ ದೊರೆತು ಜೀವನೋತ್ಸಾಹ ಇಮ್ಮಡಿಯಾಗುತ್ತದೆ. ನಾವೆಲ್ಲರೂ ಸದಾ ದುಡಿಮೆಯಲ್ಲಿಯೇ ಕಾಲ ಕಳೆಯುವವರು, ಒತ್ತಡದ ಬದುಕು, ಕುಳಿತಲ್ಲೇ ಕೆಲಸ ಮಾಡುತ್ತಾ ಕೈ ಮತ್ತು ತಲೆಗಷ್ಟೆ ಶ್ರಮ ಕೊಡುತ್ತೇವೆ. ಇದರಿಂದ ಎಲ್ಲೋ ಒಂದು ಕಡೆ ನಮಗೆ ಗೊತ್ತಿಲ್ಲದಂತೆ ಆರೋಗ್ಯದ ಸಮಸ್ಯೆಗಳು ನಮ್ಮನ್ನು ಅಡರಿಕೊಳ್ಳುತ್ತಿವೆ.

ನಾವು ಆರೋಗ್ಯವಾಗಿರಬೇಕಾದರೆ ನಮ್ಮ ದೇಹಕ್ಕೆ ವ್ಯಾಯಾಮ ಬೇಕು. ಅದು ಸಾಧ್ಯವಾಗಬೇಕಾದರೆ ನಾವು ಕೊನೆ ಪಕ್ಷ ವಾಕಿಂಗ್ ಆದರೂ ಮಾಡಬೇಕು. ಅಷ್ಟು ಮಾಡದೆ ಆರೋಗ್ಯ ಕಾಪಾಡುಕೊಳ್ಳುತ್ತೇನೆ ಎನ್ನುವುದು ಸುಲಭದ ಮಾತಲ್ಲ. ನಮಗೆ ಆರೋಗ್ಯ ಎಷ್ಟು ಮುಖ್ಯ ಎನ್ನುವುದು ಕಾಯಿಲೆ ಬಂದು ಹಾಸಿಗೆ ಹಿಡಿದಾಗಲೇ ಗೊತ್ತಾಗುವುದು. ಹೀಗಾಗಿ ಇದೆಲ್ಲದರಿಂದ ಮುಕ್ತವಾಗಬೇಕಾದರೆ ನಾವು ಪ್ರಕೃತಿಯ ನಡುವಿನ ಹಸಿರ ಲೋಕದಲ್ಲಿ ವಿಹರಿಸಲೇಬೇಕು.
ಹಸಿರು ಸೀರೆಯುಟ್ಟು ನಿಂತ ಷೋಡಷಿ
ಕಾನನದ ನಡುವೆ ವಿಹರಿಸುವ ಸೌಭಾಗ್ಯ ನಗರದಲ್ಲಿರುವ ಎಲ್ಲರಿಗೂ ದೊರೆಯದು. ಆದರೆ ಅದು ಮೈಸೂರಿನ ಜನಕ್ಕೆ ತಾಯಿ ಚಾಮುಂಡೇಶ್ವರಿಯ ಕೃಪೆಯಿಂದ ದೊರೆತಿದೆ ಎನ್ನುವುದೇ ಖುಷಿಯ ವಿಚಾರ. ಇವತ್ತು ಚಾಮುಂಡಿಬೆಟ್ಟಕ್ಕೆ ಆಗಮಿಸಿ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದು ತೆರಳುವವರು ಒಂದೆಡೆ ಕಂಡು ಬಂದರೆ ಪ್ರತಿನಿತ್ಯ ಮುಂಜಾನೆ ಸಾವಿರ ಮೆಟ್ಟಿಲೇರಿ ತಾಯಿ ಚಾಮುಂಡೇಶ್ವರಿಯ ನಮಿಸುವುದರೊಂದಿಗೆ ತಮ್ಮ ಆರೋಗ್ಯ ಕಾಪಾಡಿಕೊಳ್ಳುವವರು ಮತ್ತೊಂದೆಡೆ ಇದ್ದಾರೆ.
ಈಗ ಆಷಾಢ ಮಾಸದ ದಿನಗಳಾಗಿರುವುದರಿಂದ ಮೈಸೂರಿನಿಂದ ನಿಂತು ಹಾಗೆಸುಮ್ಮನೆ ಕಣ್ಣು ಹಾಯಿಸಿದರೆ ಆಷಾಢದ ಮಳೆಯಲ್ಲಿ ಮಿಂದೆದ್ದ ಚಾಮುಂಡಿಬೆಟ್ಟ ಹಸಿರು ಸೀರೆಯುಟ್ಟು ನಿಂತ ಷೋಡಷಿಯಂತೆ ಕಂಗೊಳಿಸುತ್ತದೆ. ಇಲ್ಲಿಗೆ ಹೆಜ್ಜೆ ಹಾಕಿದರೆ ತಣ್ಣಗೆ ಬೀಸುವ ತಂಗಾಳಿ, ಮುತ್ತಿಕ್ಕುವ ಮಂಜು, ಚಿಲಿಪಿಲಿ ಗುಟ್ಟುವ ಹಕ್ಕಿಗಳು. ಕಣ್ಣು ಹಾಯಿಸಿದುದ್ದಕ್ಕೂ ಹಸಿರ ನೋಟ ಮೈಮನವನ್ನು ಪುಳಕಗೊಳಿಸುತ್ತಿದೆ.

ಹಚ್ಚಹಸಿರು ಹೊದ್ದು ಮಲಗಿದ ಬೆಟ್ಟ
ಅದರಲ್ಲೂ ಮುಂಜಾನೆಯಂತು ಮಂಜಿನಿಂದ ಆವರಿಸುವ ಬೆಟ್ಟದ ಹಾದಿಯಲ್ಲಿ ನಡೆಯುವುದೇ ಒಂದು ರೀತಿಯ ಮಜಾ. ಬೆಟ್ಟದ ಮೇಲಿನ ವೀಕ್ಷಣಾ ತಾಣ(ವ್ಯೂ ಪಾಯಿಂಟ್) ನಿಂದ ನಿಂತು ಒಮ್ಮೆ ಕಣ್ಣು ಹಾಯಿಸಿದರೆ ಕಾಣಸಿಗುವ ಮೈಸೂರು ನಗರದ ನೋಟ ಮುದನೀಡುತ್ತದೆ. ನಿಸರ್ಗದ ನಡುವೆ ಪ್ರಶಾಂತ ವಾತಾವರಣದಲ್ಲಿ ಒಂದಷ್ಟು ಹೊತ್ತು ಕಳೆದು ಹೋದರೆ ನಿತ್ಯದ ಜಂಜಾಟಗಳ ನಡುವೆಯೂ ಮನಸ್ಸು ಹಗುರವಾಗುತ್ತದೆ. ಗಾಳಿ ಬೆಳಕಿಗೆ ಮೈಯೊಡ್ಡುವುದರಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯವೂ ವೃದ್ಧಿಸುತ್ತದೆ.
ಮೇಲ್ನೋಟಕ್ಕೆ ಹಚ್ಚಹಸಿರು ಹೊದ್ದು ಮಲಗಿದಂತೆ ಕಾಣುವ ಚಾಮುಂಡಿ ಬೆಟ್ಟದ ವಿಹಂಗಮ ನೋಟ ಅದರ ಮೇಲೆ ಮಂಜಿನ ತೆರೆಯ ನಾಗಾಲೋಟ ಅದ್ಭುತ. ಸಮುದ್ರ ಮಟ್ಟಕ್ಕಿಂತ 3489 ಅಡಿ ಎತ್ತರದಲ್ಲಿರುವ ಬೆಟ್ಟದಲ್ಲಿ ಕೆಳಗಿರುವ ಪಾದದಿಂದ ದೇವಾಲಯಕ್ಕೆ ಹತ್ತಿಕೊಂಡು ಹೋಗಲು ದೊಡ್ಡದೇವರಾಜ ಒಡೆಯರ್ ಒಂದು ಸಾವಿರ ಮೆಟ್ಟಿಲುಗಳನ್ನು ನಿರ್ಮಿಸಿಕೊಟ್ಟಿದ್ದಾರೆ.
ಕೈಬೀಸಿ ಕರೆಯುವ ಚಾಮುಂಡೇಶ್ವರಿ ದೇವಿ ವನ
ಸುಮಾರು ನಾನೂರೈವತ್ತು ಮೆಟ್ಟಿಲೇರಿದರೆ ಇಲ್ಲೊಂದು ಪುಟ್ಟ ಕಲ್ಯಾಣಿ ಕಾಣಸಿಗುತ್ತದೆ. ಇದನ್ನು ಕೆಲವು ವರ್ಷಗಳ ಹಿಂದೆ ಸಂಶೋಧಿಸಿ ಅಭಿವೃದ್ಧಿಪಡಿಸಿದ್ದು, ಇದರಲ್ಲಿ ಬೇಸಿಗೆಯಲ್ಲಿಯೂ ನೀರಿರುವುದು ವಿಶೇಷ. ಮುಂದೆ ಸುಮಾರು 700 ಮೆಟ್ಟಿಲುಗಳನ್ನೇರಿದಾಗ ಸಮತಟ್ಟಾದ ಸ್ಥಳ ಸಿಗುತ್ತದೆ. ಇಲ್ಲಿ ನಂದಿಯಿದ್ದು, ಈ ಜಾಗ ಮೆಟ್ಟಿಲೇರಿ ಬಂದವರಿಗೆ ವಿಶ್ರಾಂತಿ ಒದಗಿಸುತ್ತದೆ. ಅಲ್ಲಿಂದ ಮುಂದೆ ಮೆಟ್ಟಿಲೇರುತ್ತಾ ಹೋದರೆ 900 ಮೆಟ್ಟಿಲ ಬಳಿ ಹಾಸುಬಂಡೆಯ ಒಂದಷ್ಟು ವಿಶಾಲ ಜಾಗ ಕಾಣಿಸುತ್ತದೆ. ಇದೊಂದು ವೀಕ್ಷಣ ತಾಣವಾಗಿದ್ದು, ಇಲ್ಲಿಂದ ನಿಂತು ನೋಡಿದರೆ ಮೈಸೂರು ನಗರದ ಸುಂದರ ನೋಟ ಲಭ್ಯವಾಗುತ್ತದೆ.

ಇಷ್ಟೆಲ್ಲವನ್ನು ನೋಡಬೇಕಾದರೆ ಮೆಟ್ಟಿಲೇರಲೇ ಬೇಕಾಗುತ್ತದೆ. ಆದರೆ ಎಲ್ಲರಿಗೂ ಮೆಟ್ಟಿಲೇರುವುದು ಕಷ್ಟವಾಗುತ್ತದೆ. ಹಾಗಾಗಿ ಅರಣ್ಯದೊಳಗೆ ವಾಕಿಂಗ್ ಮಾಡುತ್ತೇನೆ ಎನ್ನುವವರಿಗೂ ಇಲ್ಲಿ ಅವಕಾಶವಿದೆ. ಚಾಮುಂಡಿ ಬೆಟ್ಟದ ಕಡೆಗೆ ಹೋಗುವ ರಸ್ತೆಯಲ್ಲಿ ಸಾಗಿ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ನಂದಿ ಕಡೆಗಿನ ರಸ್ತೆಯಲ್ಲಿ ಹೋದರೆ, ಅಲ್ಲಿ ಚಾಮುಂಡೇಶ್ವರಿ ದೇವಿ ವನ ಎಂಬ ಪ್ರವೇಶ ದ್ವಾರ ಕಾಣಿಸುತ್ತದೆ. ಅದರೊಳಗೆ ಹೆಜ್ಜೆ ಹಾಕಿದರೆ ಮಲೆನಾಡಿನೊಳಗೆ ಹೆಜ್ಜೆಯಿಟ್ಟ ಅನುಭವವಾಗುತ್ತದೆ. ಜೊತೆಗೆ ಪ್ರಕೃತಿಯ ಚೆಲುವಿನ ನೋಟ ತೆರೆದುಕೊಳ್ಳುತ್ತಾ ಹೋಗುತ್ತದೆ.
ನಿಸರ್ಗದ ಸ್ವರ್ಗದಲ್ಲಿ ತೇಲಿದ ಅನುಭವ
ಇಲ್ಲಿ ವಾಯುವಿಹಾರಿಗಳು ನೆಮ್ಮದಿಯಾಗಿ ವಿಹರಿಸಬಹುದಾಗಿದೆ. ಸುಸ್ತಾದರೆ ಅಲ್ಲಲ್ಲಿ ಕುಳಿತು ವಿಶ್ರಾಂತಿಪಡೆಯಲು ಕಲ್ಲು ಬೆಂಚಿನ ವ್ಯವಸ್ಥೆ ಮಾಡಲಾಗಿದೆ. ಅರಣ್ಯದ ಮಹತ್ವವನ್ನು ಸಾರುವ ಫಲಕಗಳು ಗಿಡಮರಗಳ ಬಗ್ಗೆ ಪ್ರೀತಿ ಹುಟ್ಟಿಸುತ್ತವೆ. ಹಲವಾರು ಬಗೆಯ ಮರ ಗಿಡಗಳಿದ್ದು ಅವುಗಳನ್ನು ಪರಿಚಯವನ್ನು ಮಾಡಿಕೊಡುವ ಕೆಲಸ ಮಾಡಲಾಗಿದೆ.
ಬೃಹತ್ ಬಂಡೆಗಳ ರಾಶಿಗಳು ಅಲ್ಲಲ್ಲಿ ಇದ್ದು ಅಚ್ಚರಿ ಹುಟ್ಟಿಸುತ್ತವೆ. ಹಾಗೆ ಹೆಜ್ಜೆ ಹಾಕುತ್ತಾ ಮುನ್ನಡೆದರೆ ದಟ್ಟ ಅರಣ್ಯ, ಬಿದಿರು ಮೆಳೆಗಳು ಕೈಬೀಸಿ ಕರೆದಂತೆ ಭಾಸವಾಗುತ್ತದೆ. ಅಷ್ಟೇ ಅಲ್ಲದೆ ನಿಸರ್ಗದ ಸ್ವರ್ಗದಲ್ಲಿ ತೇಲಿದ ಅನುಭವವಾಗುತ್ತದೆ. ಈ ಸುಂದರ ಕ್ಷಣಗಳಿಗೆ ಸಾಕ್ಷಿಯಾಗಬೇಕಾದರೆ ಇಲ್ಲಿಗೆ ಹೆಜ್ಜೆ ಹಾಕಲೇ ಬೇಕಾಗುತ್ತದೆ. ಸದಾ ಜಂಜಾಟದಲ್ಲಿದ್ದವರು ಮುಂಜಾನೆ ಇಲ್ಲಿಗೆ ಬಂದು ಪ್ರಕೃತಿ ನಡುವೆ ಒಂದಷ್ಟು ದೂರ ಹೆಜ್ಜೆ ಹಾಕಿದರೆ ಮನದೊಳಗಿನ ತುಮುಲ ದೂರವಾಗಿ ಮನಸ್ಸು ಉಲ್ಲಾಸದಿಂದ ತೇಲಾಡುವುದರಲ್ಲಿ ಎರಡು ಮಾತಿಲ್ಲ.












Click it and Unblock the Notifications