Get Updates
Get notified of breaking news, exclusive insights, and must-see stories!

Weekend Travel: ಹೇಮಾವತಿ ನದಿ ತಟದ ಸುಂದರ ತಾಣ ಅಕ್ಕಿಹೆಬ್ಬಾಳು, ಹೊಸ ಊರು ನಿರ್ಮಾಣ ಆಗಿದ್ದೇಗೆ?

ಮಂಡ್ಯ, ಫೆಬ್ರವರಿ 02 : ಜಿಲ್ಲೆಯಲ್ಲಿ ಹರಿದು ಕಾವೇರಿ ಮತ್ತು ಲಕ್ಷ್ಮಣ ತೀರ್ಥದೊಂದಿಗೆ ಸಂಗಮವಾಗುವ ಹೇಮಾವತಿ ನದಿಯು ತನ್ನ ತಟದಲ್ಲಿ ಹಲವು ಪವಿತ್ರ ಕ್ಷೇತ್ರಗಳನ್ನು ಹೊಂದಿದ್ದು ಅದರಲ್ಲಿ ಅಕ್ಕಿಹೆಬ್ಬಾಳು ಕೂಡ ಒಂದಾಗಿದೆ. ಈ ಗ್ರಾಮವು ಕೃಷ್ಣರಾಜಪೇಟೆ ತಾಲ್ಲೂಕಿನ ಹೋಬಳಿ ಕೇಂದ್ರವಾಗಿದ್ದು, ಹಸಿರ ಸಿರಿ ಸಂಪತ್ತಿನೊಂದಿಗೆ ಭತ್ತದ ಕಣಜವಾಗಿ, ನರಸಿಂಹಸ್ವಾಮಿ ಲಕ್ಷ್ಮೀ ಸಮೇತವಾಗಿ ನೆಲೆಸಿದ ಪುಣ್ಯಭೂಮಿಯಾಗಿದೆ.

ವಿಶಾಲವಾಗಿ ಹರಿಯುವ ಹೇಮಾವತಿ ನದಿ ಮತ್ತು ಶ್ರೀಲಕ್ಷ್ಮೀನರಸಿಂಹಸ್ವಾಮಿ, ಶ್ರೀ ಕೊಂಕಣೇಶ್ವರ ದೇವಾಲಯ ಸೇರಿದಂತೆ ಹಲವು ವಿಶೇಷತೆಗಳನ್ನು ಹೊಂದಿ ನಿಸರ್ಗ ಸುಂದರ ಗ್ರಾಮವಾಗಿ ಗಮನಸೆಳೆಯುತ್ತದೆ. ಹೀಗಾಗಿಯೇ ಈ ಗ್ರಾಮದತ್ತ ಭಕ್ತರು, ಪ್ರವಾಸಿಗರು ಹೀಗೆ ಎಲ್ಲರೂ ಆಗಮಿಸಿ ಒಂದಷ್ಟು ಸಮಯ ಕಳೆದು ಹೋಗುತ್ತಾರೆ. ಬಹಳಷ್ಟು ಜನಕ್ಕೆ ಇದು ವಾರಾಂತ್ಯದ ಪ್ರವಾಸಿ ತಾಣವಾಗಿಯೂ ಇಷ್ಟವಾಗುತ್ತಿದೆ.

Weekend Travel: Best Weekend Getaways To Mandya District Akkihebbalu

ಇಷ್ಟಕ್ಕೂ ಅಕ್ಕಿಹೆಬ್ಬಾಳು ಎಂದಾಕ್ಷಣವೇ ನಮಗೆಲ್ಲರಿಗೂ ಊಟ ಮಾಡುವ ಅಕ್ಕಿಯ ನೆನಪು ಬರುವುದು ಸಹಜ. ಈ ಗ್ರಾಮದಲ್ಲಿ ಹೆಚ್ಚಾಗಿ ಭತ್ತ ಬೆಳೆಯುವುದರಿಂದ ಆ ಹೆಸರು ಬಂದಿದ್ದರೂ ಅಚ್ಚರಿಪಡಬೇಕಾಗಿಲ್ಲ. ಆದರೆ ಇತಿಹಾಸದಲ್ಲಿ ಸಿಗುವ ಕೆಲವೊಂದು ಮಾಹಿತಿಗಳ ಪ್ರಕಾರ ಇದನ್ನು ಹಿಂದೆ ಕೊಂಕಣೇಶ್ವರ ಎಂದು ಕರೆಯಲಾಗುತ್ತಿತ್ತು ಎನ್ನಲಾಗುತ್ತಿದೆ. ಬಹುಶಃ ಇಲ್ಲಿ ಕೊಂಕಣೇಶ್ವರ ಶಿವದೇಗುಲ ಇರುವುದರಿಂದ ಆ ಹೆಸರು ಬಂದಿರ ಬಹುದೆಂದು ಅಭಿಪ್ರಾಯಪಡಲಾಗುತ್ತಿದೆ.

ಹೊಯ್ಸಳ ಕಾಲದ ಶಾಸನ ಹೇಳುವುದೇನು?

ಇನ್ನು ಇಲ್ಲಿ ದೊರೆತ ಹೊಯ್ಸಳರ ಕಾಲದ ಎರಡು ಶಾಸನಗಳಲ್ಲಿ ಒಂದಷ್ಟು ಮಾಹಿತಿ ಸಿಕ್ಕಿದೆ ಎಂದು ಹೇಳಲಾಗುತ್ತಿದೆ. ಅವರ ಕಾಲದಲ್ಲಿ ಹೇಮಾವತಿ ನದಿಯನ್ನು ಹೆಬ್ಬಹಳ್ಳ ಎಂದು ಕರೆಯುತ್ತಿದ್ದರು. ಕಾಲ ಕ್ರಮೇಣ ಅಕ್ಕಿ ಮತ್ತು ಹೆಬ್ಬಹಳ್ಳ ಒಟ್ಟಾಗಿ ಅಕ್ಕಿಹೆಬ್ಬಾಳು ಆಗಿರಬಹುದು ಎಂಬುದು ಹಿರಿಯರ ಅಭಿಪ್ರಾಯವಾಗಿದೆ. ಇದೇ ಗ್ರಾಮವನ್ನು ತಂಡಲಪುರ ಎಂದು ಕೂಡ ಕರೆಯಲಾಗುತ್ತಿತ್ತಂತೆ. ಆಯಾಯ ಕಾಲಘಟ್ಟದಲ್ಲಿ ಹೆಸರುಗಳು ಬದಲಾಗುತ್ತಾ ಹೋಗಿ ಇವತ್ತು ಅಕ್ಕಿಹೆಬ್ಬಾಳು ಆಗಿ ಉಳಿದುಕೊಂಡಿದೆ.

Weekend Travel: Best Weekend Getaways To Mandya District Akkihebbalu

ಅಕ್ಕಿಹೆಬ್ಬಾಳು ಹೆಸರುವಾಸಿಯಾಗಲು ಕಾರಣವಿದೆ. ಅದು ಏನೆಂದರೆ ಶ್ರೀಮನ್ನಾರಾಯಣನು ಶ್ರೀಲಕ್ಷ್ಮೀ ನರಸಿಂಹಸ್ವಾಮಿ ಅವತಾರದಲ್ಲಿ ಇಲ್ಲಿ ನೆಲೆಸಿರುವ ಕಾರಣ ಆತನ ಬಳಿಗೆ ತೆರಳಿ ಬೇಡಿಕೊಂಡರೆ ಇಷ್ಟಾರ್ಥಗಳು ಈಡೇರುತ್ತವೆ ಎಂಬ ನಂಬಿಕೆ ಜನರಲ್ಲಿದೆ. ಇದಕ್ಕೆ ಪೂರಕ ಎನ್ನುವಂತೆ ಪೌರಾಣಿಕ ಕಥೆಗಳು ಕೂಡ ಪ್ರಚಲಿತದಲ್ಲಿರುವುದನ್ನು ಕಾಣಬಹುದಾಗಿದೆ.

ಗೌತಮ ಮರ್ಷಿಗಳ ತಪಸ್ಸಿನ ಫಲ

ಪೌರಾಣಿಕ ಕಥೆಯ ಪ್ರಕಾರ ಕೃತಯುಗದಲ್ಲಿ ದಿವ್ಯದೃಷ್ಠಿ ಹೊಂದಿದ್ದ ಗೌತಮ ಮಹರ್ಷಿಗಳಿಗೆ ಮುಂದೆ ಕಲಿಯುಗದಲ್ಲಿ ಮನುಷ್ಯರು ಅನುಭವಿಸುವ ಕಷ್ಟಗಳ ಬಗ್ಗೆ ಮೊದಲೇ ಗೊತ್ತಾಗಿತ್ತಂತೆ ಹೀಗಾಗಿ ಅವರು ಮುಂದಿನ ಮನುಷ್ಯ ಜನ್ಮದಲ್ಲಿರುವವರ ಸಂಕಷ್ಟಗಳನ್ನು ಪರಿಹರಿಸಲು ದೇವರಿಗೆ ಮೊರೆ ಹೋಗಿ ನಿವೇದನೆ ಮಾಡುವ ಸಲುವಾಗಿ ಶ್ರೀಮನ್ನಾರಾಯಣನ ಕುರಿತು ಅಕ್ಕಿಹೆಬ್ಬಾಳಿನ ಬದರಿಕಾವೃಕ್ಷದ ಕೆಳಗೆ ತಪಸ್ಸು ಮಾಡಿದ್ದರಿಂತೆ. ಹಲವು ವರ್ಷಗಳ ಕಾಲ ಮಾಡಿದ ತಪಸ್ಸಿಗೆ ಮೆಚ್ಚಿದ ನಾರಾಯಣ ಗೌತಮ ಮರ್ಷಿಗಳ ಎದುರು ಪ್ರತ್ಯಕ್ಷನಾದಂತೆ.

Weekend Travel: Best Weekend Getaways To Mandya District Akkihebbalu

ಈ ವೇಳೆ ಗೌತಮಮಹರ್ಷಿಗಳು ಶ್ರೀಮನ್ನಾರಾಯಣನಿಗೆ ಭೂಮಿ ಮೇಲೆ ಬಂದು ನೆಲೆಸುವಂತೆ ಕೋರಿಕೊಂಡರಂತೆ ಅದರಂತೆ ನಾರಾಯಣ ದೇವರು ಶ್ರೀಲಕ್ಷ್ಮೀನರಸಿಂಹಸ್ವಾಮಿ ಅವತಾರದಲ್ಲಿ ಬಂದು ಅಕ್ಕಿಹೆಬ್ಬಾಳಿನಲ್ಲಿ ನೆಲೆನಿಂತರು ಎಂಬುದು ಐಹಿತ್ಯವಾಗಿದೆ. ಈ ಕಥೆಯ ಪ್ರಕಾರ ಇದೇ ಊರನ್ನು ದಕ್ಷಿಣಬದಾರೀಕಾಶ್ರಮ ಎಂದು ಕೂಡ ಕರೆಯಲಾಗುತ್ತಿತ್ತು ಎಂಬ ಮಾಹಿತಿಗಳು ಲಭ್ಯವಾಗುತ್ತವೆ. ಗೌತಮ ಮಹರ್ಷಿಗಳ ಅಪೇಕ್ಷೆಯಂತೆ ಲೋಕ ಕಲ್ಯಾಣಕ್ಕಾಗಿ ಲಕ್ಷ್ಮಿಯೊಂದಿಗೆ ನರಸಿಂಹನ ಅವತಾರದಲ್ಲಿ ನೆಲೆ ನಿಂತಿದ್ದರಿಂದ ಈ ಸ್ಥಳ ಪವಿತ್ರವಾಗಿದೆ. ಜತೆಗೆ ಗೌತಮ ಕ್ಷೇತ್ರವಾಗಿಯೂ ಗಮನಸೆಳೆಯುತ್ತಿದೆ.

ಹೊಸ ಊರಿನ ನಿರ್ಮಾಣ ಆಗಿದ್ದೇಗೆ?

ಅಕ್ಕಿಹೆಬ್ಬಾಳು ಗ್ರಾಮದಲ್ಲಿ ಹಿಂದೆ ಹಳೆ ಹಾಗೂ ಹೊಸ ಊರು ಎಂಬ ಹಳ್ಳಿ ಇತ್ತೆಂದೂ ಹೇಳಲಾಗುತ್ತಿದೆ. ಇವತ್ತಿನ ಹಳೇ ಊರಿಗೆ ಶ್ರೀಲಕ್ಷ್ಮೀನರಸಿಂಹಸ್ವಾಮಿ ದೇವಾಲಯ, ಶ್ರೀ ಕೊಂಕಣೇಶ್ವರ ದೇವಾಲಯ ಮತ್ತು ಯಾತ್ರಿನಿವಾಸ, ಸಮುದಾಯ ಭವನ ಹಾಗೂ ಮತ್ತು ಹೇಮಾವತಿ ನದಿ ಹರಿಯುವ ಪ್ರದೇಶ ಸೇರುತ್ತದೆ. ಇಲ್ಲಿ ಜನರ ವಾಸ ಕಡಿಮೆಯಿದೆ ಜತೆಗೆ ಗದ್ದೆ ತೋಟಗಳೇ ಹೆಚ್ಚಾಗಿವೆ. ಈ ಹಳೆ ಮತ್ತು ಹೊಸ ಊರಿನ ಸೃಷ್ಟಿಯ ಹಿಂದೆಯೂ ಒಂದು ಕಥೆಯಿದೆ.

Weekend Travel: Best Weekend Getaways To Mandya District Akkihebbalu

ಹಿಂದಿನ ಕಾಲದಲ್ಲಿ ಹಳೆ ಹೊಸ ಎಂಬ ಊರು ಇರಲಿಲ್ಲ. ಎಲ್ಲರೂ ಒಟ್ಟಾಗಿ ವಾಸಿಸುತ್ತಿದ್ದರು. ಹೀಗಿರುವಾಗ ಒಮ್ಮೆ ಊರಿನಲ್ಲಿ ಮಲೇರಿಯಾ ರೋಗ ಕಾಣಿಸಿಕೊಂಡಿತಂತೆ. ಈ ವೇಳೆ ಹೆದರಿದ ಜನ ತಮ್ಮ ವಾಸಸ್ಥಾನವನ್ನು ಬದಲಿಸಿ ಅಲ್ಲಿಂದ ಸುಮಾರು ಮೂರು ಕಿ.ಮೀ. ದೂರದ ಹೊಸ ಊರಿಗೆ ಬಂದು ನೆಲೆಸಿದರಂತೆ. ಹೀಗಾಗಿ ಹೊಸ ಊರೊಂದು ಸೃಷ್ಟಿಯಾಯಿತಂತೆ. ಇವತ್ತಿಗೂ ಗ್ರಾಮದಲ್ಲಿ ಹಳೆ ಮತ್ತು ಹೊಸ ಊರಿನ ಬಳಕೆ ಚಾಲ್ತಿಯಲ್ಲಿದೆ. ಈಗ ಅಕ್ಕಿಹೆಬ್ಬಾಳಿನ ಹೊಸ ಊರಿನಲ್ಲಿ ಜನರು ವಾಸ ಮಾಡುತ್ತಿದ್ದಾರೆ. ಅವತ್ತಿನ ಕಾಲದಲ್ಲಿ ಹಳೇ ಊರಿನಲ್ಲಿದ್ದ ಕೆಲವು ದೇವರ ವಿಗ್ರಹಗಳನ್ನು ಕೊಂಡೊಯ್ದು ತಮ್ಮ ಹೊಸ ಊರಿನಲ್ಲಿ ಅದಕ್ಕೆ ದೇವಾಲಯಗಳನ್ನು ನಿರ್ಮಿಸಿ ಪೂಜಿಸುತ್ತಾ ಬರುತ್ತಿದ್ದಾರೆ.

12ನೇ ಶತಮಾನದಲ್ಲಿ ನಿರ್ಮಿಸಲ್ಪಟ್ಟ ದೇಗುಲ

ಇಲ್ಲಿ ದೊರೆತ ಶಾಸನವೊಂದರ ಪ್ರಕಾರ ಈಶ್ವರ ದೇವರನ್ನು ಕೋಗಳೇಶ್ವರ ಎಂದು ಕರೆಯಲಾಗಿದೆ. ದೇವಾಲಯದ ಹೆಸರು ಅಳತೆಯ ಒಂದು ಪರಂಪರಾಗತ ಸಾಧನವಾದ ಕೊಳಗದ ಹೆಸರಿನಿಂದ ಬಂದಿರಬಹುದು. ಕೊಳಗದಲ್ಲಿ ಅಳತೆ ಮಾಡಿ ಸುಂಕವನ್ನು ಪಡೆಯಿತ್ತಿದ್ದ ಪ್ರದೇಶದಲ್ಲಿ ಇದ್ದುದರಿಂದ ಈ ದೇವಾಲಯವನ್ನು ಕೊಂಕಣೇಶ್ವರ ಎಂದು ಕರೆದಿರಬಹುದು. ಅಲ್ಲದೆ ಈ ಗ್ರಾಮದಲ್ಲಿ ಸಿಕ್ಕಿರುವ ಆಧಾರದ ಮೇಲೆ ಈ ದೇವಾಲಯಗಳು 12ನೇ ಶತಮಾನದಲ್ಲಿ ನಿರ್ಮಿಸಲ್ಪಟ್ಟಿರಬಹುದು ಎಂದು ಹೇಳಲಾಗುತ್ತಿದೆ.

ಆದು ಏನೇ ಇರಲಿ ಈ ಕ್ಷೇತ್ರ ಆಸ್ತಿಕ ನಾಸ್ತಿಕರೆನ್ನದೆ ಎಲ್ಲರಿಗೂ ಇಷ್ಟವಾಗುವುದರಿಂದ ಇತ್ತ ಆಗಮಿಸಿ ದೇವರ ದರ್ಶನ ಪಡೆಯುವುದರೊಂದಿಗೆ ಪ್ರಶಾಂತತೆಯ ಮಡಿಲಲ್ಲಿ ಸಮಯ ಕಳೆದು ಮೈಮನವನ್ನು ಹಗುರ ಮಾಡಿ ಕೊಳ್ಳಬಹುದಾಗಿದೆ. ಅಕ್ಕಿಹೆಬ್ಬಾಳು ತಾಣವು ಮಂಡ್ಯದ ತಾಲೂಕು ಕೇಂದ್ರಗಳಲ್ಲೊಂದಾದ ಕೆ.ಆರ್.ಪೇಟೆಯಿಂದ ಸುಮಾರು 15ಕಿ.ಮೀ ದೂರದಲ್ಲಿದ್ದರೆ, ಅತ್ತ ಮೈಸೂರಿನ ಕೆ.ಆರ್.ನಗರ ಬಳಿಯ ಭೇರ್ಯಕ್ಕೂ ಸಮೀಪವಾಗುತ್ತದೆ. ಬಸ್ ಅಥವಾ ಇನ್ನಿತರ ವಾಹನಗಳಲ್ಲಿ ಇಲ್ಲಿಗೆ ತೆರಳಬಹುದಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+