Harangi Dam: ಹಾರಂಗಿಯಿಂದ ಶ್ವೇತಧಾರೆಯಾಗಿ ಧುಮ್ಮಿಕ್ಕಿದ ಜಲಧಾರೆ
ಮಡಿಕೇರಿ, ಜುಲೈ 10: ಕೊಡಗಿನಲ್ಲಿ ಮುಂಗಾರು ಆರಂಭವಾದಲ್ಲಿಂದ ಇಲ್ಲಿವರೆಗೆ ಸಾಧಾರಣವಾಗಿ ಮಳೆ ಸುರಿಯುತ್ತಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಉತ್ತಮವಾಗಿ ಮಳೆಯಾದಂತೆ ಗೋಚರಿಸುತ್ತಿದೆ.
ಮುಂದಿನ ದಿನಗಳಲ್ಲಿ ಮುಂಗಾರು ಬಿರುಸುಗೊಂಡರೆ ಧಾರಾಕಾರವಾಗಿ ಮಳೆ ಸುರಿಯುವ ಸಾಧ್ಯತೆಯಿದೆ ಎಂಬುದು ಹವಾಮಾನ ಇಲಾಖೆಯ ಮುನ್ಸೂಚನೆಯಾಗಿದೆ. ಇದೆಲ್ಲದರ ನಡುವೆ ಹಾರಂಗಿ ಜಲಾಶಯ ಭರ್ತಿಯಾಗುವ ಮುನ್ನವೇ ಸೋಮವಾರ ಸಂಜೆ ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗಿದೆ.

ಸೋಮವಾರ ಸಂಜೆ ವೇಳೆ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂಥರ್ ಗೌಡ ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳು ಜಲಾಶಯ ಮತ್ತು ಜಲಾಶಯದ ಬಳಿಯಿರುವ ಕಾವೇರಿ ಮಾತೆಗೆ ಪೂಜೆ ಸಲ್ಲಿಸಿದರು ಆ ನಂತರ ಜಲಾಶಯದಿಂದ ನೀರು ಹರಿಸುವ ಮುನ್ನ ತಗ್ಗುಪ್ರದೇಶದ ಜನರಿಗೆ ಮೀನುಗಾರರಿಗೆ, ನದಿಯ ಅಸುಪಾಸಿನಲ್ಲಿ ವಾಸಿಸುವ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಲು ಮೂರು ಭಾರಿ ಸೈರನ್ ಮೊಳಗಿಸಲಾಯಿತು.
ಜಲಾಶಯದಿಂದ ನೀರು ಬಿಟ್ಟ ವಿಷಯ ತಿಳಿಯುತ್ತಿದ್ದಂತೆಯೇ ಜಲಾಶಯದ ಬಳಿಗೆ ಆಗಮಿಸಿದ ಸುತ್ತಮುತ್ತಲಿನ ಜನರು ಹಾಗೂ ಪ್ರವಾಸಿಗರು ನೀರು ಜಲಾಶಯದಿಂದ ನಾಲ್ಕು ಕ್ರಸ್ಟ್ ಗೇಟ್ ಗಳ ಮೂಲಕ ನೀರು ಶ್ವೇತಧಾರೆಯಾಗಿ ಧುಮ್ಮಿಕ್ಕುವ ದೃಶ್ಯ ನೋಡಿ ಸಂಭ್ರಮಿಸಿದರು. ನೀರು ನದಿಗೆ ಬಿಡುವ ಮೊದಲೇ ಜಲಾಶಯದ ತಳಭಾಗದಲ್ಲಿನ ರೈತರಿಗೆ ಮತ್ತು ಜನರಿಗೆ ಯಾವಾಗ ಬೇಕಾದರೂ ನೀರು ಹರಿಸುವ ಸಾಧ್ಯತೆ ಇರುವುದರಿಂದ ಎಚ್ಚರಿಕೆಯಿಂದ ಇರುವಂತೆ ಮಾಹಿತಿ ನೀಡಲಾಗಿತ್ತು.

ಭರ್ತಿಯಾಗುವ ಮುನ್ನವೇ ನೀರು ಬಿಡುಗಡೆ
ಸದ್ಯ 2859 ಅಡಿಯ ಹಾರಂಗಿ ಜಲಾಶಯದಲ್ಲಿ ನೀರು ನದಿಗೆ ಹರಿಸುವ ಮುನ್ನ 2849.08 ಅಡಿಗಳಷ್ಟು ನೀರಿತ್ತು. ಜಲಾಶಯಕ್ಕೆ ಒಳ ಹರಿವು 3290 ಕ್ಯೂಸೆಕ್ ಇದ್ದು, ಜಲಾಶಯದಲ್ಲಿ 4.9 ಟಿಎಂಸಿ ನೀರು ಸಂಗ್ರಹಗೊಂಡಿದೆ. ಆದರೆ ಹತ್ತು ಅಡಿ ಬಾಕಿಯಿರುವಾಗಲೇ ನೀರು ಹರಿಸಲಾಗುತ್ತಿರುವುದರಿಂದ ಕೆಆರ್ ಎಸ್ ಜಲಾಶಯದ ಒಳಹರಿವಿನ ಪ್ರಮಾಣವೂ ಹೆಚ್ಚಾಗುವ ಸಾಧ್ಯತೆಯಿದೆ. ಆದರೆ ಹಾರಂಗಿ ಜಲಾಶಯ ಭರ್ತಿಯಾಗಲು ಇನ್ನೂ ಹತ್ತು ಅಡಿಯಷ್ಟು ಬಾಕಿಯಿದ್ದು, ಜಲಾಶಯ ಭರ್ತಿಯಾಗುವ ಮುನ್ನವೇ ನೀರು ಹರಿಯುತ್ತಿದೆ.
ಜಲಾಶಯದಿಂದ ನದಿಗೆ ನೀರು ಹರಿಸುತ್ತಿರುವ ಬಗ್ಗೆ ಮಾತನಾಡಿದ ಶಾಸಕ ಡಾ.ಮಂಥರಗೌಡ ಅವರು ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಜಲಾನಯನ ಪ್ರದೇಶಗಳಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗುವ ಸಂಭವವಿದ್ದು, ಒಳಹರಿವಿನ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.
ಜಲಾಶಯವು ಶೀಘ್ರವೇ ಗರಿಷ್ಠ ಮಟ್ಟ ತಲುಪುವುದರಿಂದ ನದಿಗೆ ಹೆಚ್ಚುವರಿ ನೀರನ್ನು ಹರಿಸಲಾಗುತ್ತಿದೆ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ ಅಲ್ಲದೆ, ಹಾರಂಗಿ ಮತ್ತು ಕಾವೇರಿ ನದಿಯ ಪಾತ್ರದಲ್ಲಿರುವ ಮತ್ತು ನದಿಯ ಎರಡು ದಂಡೆಯಲ್ಲಿ ವಾಸಿಸುತ್ತಿರುವ ಜನರು ತಮ್ಮ ಆಸ್ತಿ ಪಾಸ್ತಿ ಹಾಗೂ ಜನಜಾನುವಾರು ರಕ್ಷಣೆಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸಿ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಿದ್ದಾರೆ.
ಕಾವೇರಿಯೊಂದಿಗೆ ಕೆಆರ್ಎಸ್ ಸೇರಲಿರುವ ನೀರು
ನೀರಾವರಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಐ.ಕೆ.ಪುಟ್ಟಸ್ವಾಮಿ ಮಾತನಾಡಿ, ಮುಂದಿನ ದಿನಗಳಲ್ಲಿ ಜಲಾಶಯಕ್ಕೆ ಒಳ ಹರಿವಿನ ಪ್ರಮಾಣದಲ್ಲಿ ಏರಿಕೆಯಾಗುವ ಮುನ್ಸೂಚನೆ ಇದೆ. ಆದ್ದರಿಂದ ನದಿಯಂಚಿನ ಜನರು ಸುರಕ್ಷಿತ ಸ್ಥಳಕ್ಕೆ ತೆರಳಬೇಕಲ್ಲದೆ, ಮೀನುಗಾರರು ನದಿಗೆ ಇಳಿಯಬಾರದು ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.
ಹಾರಂಗಿ ಜಲಾಶಯವು ಕೊಡಗು ಸೇರಿದಂತೆ ನೆರೆಯ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ, ಹುಣಸೂರು ಮತ್ತು ಕೆ.ಆರ್.ನಗರ ಹಾಗೂ ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕು ಸೇರಿದಂತೆ 1.5 ಲಕ್ಷ ಹೆಕ್ಟರ್ ಪ್ರದೇಶಕ್ಕೆ ನೀರನ್ನು ಒದಗಿಸುತ್ತಿದೆ. ಇದೀಗ ಜಲಾಶಯದಿಂದ ಹರಿಯುತ್ತಿರುವ ನೀರು ಕೂಡಿಗೆ ಬಳಿ ಹಾರಂಗಿ ನದಿ ಮೂಲಕ ಕಾವೇರಿ ನದಿಯನ್ನು ಸೇರಲಿದೆ.












Click it and Unblock the Notifications