Vande Bharat Express: ಕೆಲವೇ ಕ್ಷಣಗಳಲ್ಲಿ ಬೆಂಗಳೂರು-ಧಾರವಾಡ ವಂದೇ ಭಾರತ್ ರೈಲಿಗೆ ಚಾಲನೆ, ಇಲ್ಲಿದೆ ಮಾರ್ಗಗಳ ವಿವರ
ಧಾರವಾಡ, ಜೂನ್, 27: ಉತ್ತರ ಕರ್ನಾಟಕದ ಬಹುನಿರೀಕ್ಷಿತ ವಂದೇ ಭಾರತ ಎಕ್ಸ್‌ಪ್ರೆಸ್ ರೈಲಿಗೆ ಹಸಿರು ನಿಶಾನೆ ತೋರಲು ಕ್ಷಣಗಣನೆ ಆರಂಭವಾಗಿದೆ. ಬೆಂಗಳೂರು ಹಾಗೂ ಧಾರವಾಡ ಮಧ್ಯೆ ದಿನಕ್ಕೆ ಎರಡು ಬಾರಿ ಈ ರೈಲು ಸಂಚಾರ ಮಾಡಲಿದೆ. ಇಂದಿನಿಂದ ಅಧಿಕೃತವಾಗಿ ಈ ರೈಲು ಸಂಚಾರ ಮಾಡಲಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಈ ರೈಲಿಗೆ ವರ್ಚುವಲ್ ಮೂಲಕ ಹಸಿರು ನಿಶಾನೆ ತೋರಿಸಲಿದ್ದಾರೆ.
ಕರ್ನಾಟಕ, ಭೋಪಾಲ್, ಗೋವಾ ಹಾಗೂ ಜಾರ್ಖಂಡ್ ಸೇರಿ ಕರ್ನಾಟಕದ ಈ ವಂದೇ ಭಾರತ ರೈಲಿಗೆ ಏಕಕಾಲಕ್ಕೆ ಚಾಲನೆ ದೊರೆಯಲಿದೆ. ಈ ಸಂಬಂಧ ಧಾರವಾಡದ ರೈಲು ನಿಲ್ದಾಣದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹಸಿರು ನಿಶಾನೆ ತೋರಿಸಲಿದ್ದಾರೆ ಎಂದು ತಿಳಿದುಬಂದಿದೆ.

ಉತ್ತರ ಕರ್ನಾಟಕ ಭಾಗದ ಅದರಲ್ಲೂ ಹುಬ್ಬಳ್ಳಿ, ಧಾರವಾಡ ಅವಳಿನಗರದ ಜನತೆಯ ಬಹು ನಿರೀಕ್ಷಿತ ವಂದೇ ಭಾರತ ರೈಲು ಇಂದಿನಿಂದ ಅಧಿಕೃತವಾಗಿ ಸಂಚಾರ ಮಾಡಲಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಈ ರೈಲು ಸಂಚಾರಕ್ಕೆ ವರ್ಚುವಲ್ ಮೂಲಕ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಲಿದ್ದಾರೆ.
ಧಾರವಾಡದ ಪರಿಸರ ಸ್ನೇಹಿ ಕಲಾವಿದ ಮಂಜುನಾಥ ಹಿರೇಮಠ ಅವರು, ವೇಸ್ಟ್ ಆದ ಥರ್ಮಕೋಲ್ ಹಾಗೂ ಫ್ಲೈವುಡ್ ಪೀಸ್‌ಗಳಿಂದ 3X2 ಅಳತೆಯ ವಂದೇ ಭಾರತ ರೈಲು ನಿರ್ಮಿಸಿದ್ದಾರೆ. ಅಲ್ಲದೇ ಅದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಹಸಿರು ನಿಶಾನೆ ತೋರುವ ಕಲಾಕೃತಿಯನ್ನೂ ರಚಿಸಿದ್ದಾರೆ. ಅಲ್ಲದೆ ಧಾರವಾಡ-ಬೆಂಗಳೂರು ಜಂಕ್ಷನ್ ಎಂದು ಬೋರ್ಡ್ ಹಾಕುವ ಮೂಲಕ ಗಮನಸೆಳೆದಿದ್ದಾರೆ.
ಈ ರೀತಿಯ ಕಲಾಕೃತಿ ರಚಿಸುವ ಮೂಲಕ ಕಲಾವಿದ ಮಂಜುನಾಥ ಹಿರೇಮಠ ಇಂದಿನಿಂದ ಆರಂಭವಾಗುವ ವಂದೇ ಭಾರತ್ ರೈಲಿಗೆ ಶುಭಾಶಯ ಕೋರಿದ್ದಾರೆ.
ಇನ್ನು ಧಾರವಾಡ-ಬೆಂಗಳೂರು ಮಧ್ಯೆ ಸಂಚರಿಸಲಿರುವ ವಂದೇ ಭಾರತ ರೈಲು ಉದ್ಘಾಟಿಸಲು ಸ್ವತಃ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರೇ ಧಾರವಾಡದ ರೈಲು ನಿಲ್ದಾಣಕ್ಕೆ ಆಗಮಿಸಿದ್ದಾರೆ. ಧಾರವಾಡದಲ್ಲಿ ನಡೆದ ವಂದೇ ಭಾರತ ರೈಲು ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಶಾಸಕರಾದ ಅರವಿಂದ ಬೆಲ್ಲದ್, ಎಸ್.ವಿ.ಸಂಕನೂರ, ಮೇಯರ್ ವೀಣಾ ಭರದ್ವಾಡ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.











Click it and Unblock the Notifications