Char Dham Yatra: ಚಾರ್ ಧಾಮ್ ಯಾತ್ರೆಗೆ ತೆರಳುವ ಭಕ್ತರಿಗೆ ಸರ್ಕಾರದ ಸೂಚನೆಗಳು
ಡೆಹ್ರಾಡೂನ್, ಮೇ. 17: ಚಾರ್ ಧಾಮ್ ಯಾತ್ರೆ ಆರಂಭವಾಗಿದೆ. ಚಾರ್ ಧಾಮ್ ದೇವಾಲಯಗಳಲ್ಲಿ ಭಕ್ತ ಸಂಖ್ಯೆ ದಿನ ದಿನಕ್ಕೂ ಹೆಚ್ಚುತ್ತಿದೆ. ಇದೆ ಕಾರಣಕ್ಕೆ ವಿಐಪಿ ದರ್ಶನಕ್ಕೆ ಅವಕಾಶ ನೀಡದಿರಲು ಉತ್ತರಾಖಂಡ ಸರ್ಕಾರ ಗುರುವಾರ ನಿರ್ಧರಿಸಿ, ಪ್ರಮುಖ ಸೂಚನೆಗಳನ್ನು ಹೊರಡಿಸಿದೆ.
ಯಾತ್ರೆಗೆ ಬರುವ ಯಾತ್ರಾರ್ಥಿಗಳ ಸಂಖ್ಯೆ ಹೆಚ್ಚುತ್ತಿರುವ ಕಾರಣ ದೇವಾಲಯಗಳ 50 ಮೀಟರ್ ವ್ಯಾಪ್ತಿಯಲ್ಲಿ ವೀಡಿಯೊ ಮಾಡುವುದು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ಲೋಡ್ ಮಾಡಲು ರೀಲ್‌ಗಳನ್ನು ಮಾಡುವುದನ್ನು ನಿಷೇಧಿಸಿಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಉತ್ತರಾಖಂಡ ಸರ್ಕಾರ ಪತ್ರ ಬರೆದಿದೆ. ಈ ಪತ್ರದಲ್ಲಿ ಮುಖ್ಯ ಕಾರ್ಯದರ್ಶಿ ರಾಧಾ ರಾತುರಿ, "ಈ ವರ್ಷ ಉತ್ತರಾಖಂಡದ ಪವಿತ್ರ ಚಾರ್ ಧಾಮ್‌ಗೆ ಭೇಟಿ ನೀಡುವ ಯಾತ್ರಾರ್ಥಿಗಳ ಸಂಖ್ಯೆಯಲ್ಲಿ ನಿರಂತರ ಏರಿಕೆ ಇದೆ ಎಂದು ನಾನು ತಿಳಿಸಲು ಬಯಸುತ್ತೇನೆ. ಭಕ್ತಾದಿಗಳ ಉತ್ತಮ ನಿರ್ವಹಣೆಗಾಗಿ, ನಾವು 31 ಮೇ, 2024 ರವರೆಗೆ ಯಾವುದೇ 'ವಿಐಪಿ ದರ್ಶನ' ನೀಡದಿರಲು ನಿರ್ಧರಿಸಿದ್ದೇವೆ" ಎಂದಿದ್ದಾರೆ.
ಮುಂದುವರಿದು, "ಚಾರ್ ಧಾಮ್ ಯಾತ್ರೆಯನ್ನು ಸುಗಮವಾಗಿ ನಡೆಸಲಾಗುತ್ತಿದೆ. ಯಾತ್ರಾರ್ಥಿಗಳು ವ್ಯವಸ್ಥಿತ ದರ್ಶನ ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ. ಆದರೆ ಪ್ರಸ್ತುತ ದೇವಾಲಯದ ಆವರಣದಲ್ಲಿ ಸಾಮಾಜಿಕ ಮಾಧ್ಯಮಕ್ಕಾಗಿ ವೀಡಿಯೊಗ್ರಫಿ/ರೀಲ್‌ಳನ್ನು ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಇದರಿಂದ ಒಂದೇ ಕಡೆ ಜನ ಜಮಾಯಿಸುತ್ತಿದ್ದು, ಭಕ್ತರು ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ, ಭಕ್ತರ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು, ಚಾರ್ ಧಾಮ್‌ನಲ್ಲಿರುವ ದೇವಾಲಯದ ಆವರಣದ 50 ಮೀಟರ್ ವ್ಯಾಪ್ತಿಯೊಳಗೆ ಸಾಮಾಜಿಕ ಮಾಧ್ಯಮಗಳಿಗೆ ವೀಡಿಯೊಗ್ರಫಿ / ರೀಲ್‌ಗಳನ್ನು ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ" ಎಂದು ಪತ್ರದಲ್ಲಿ ತಿಳಿಸಲಾಗಿದೆ.

ವೀಡಿಯೊ, ರೀಲ್‌ಗಳ ಚಿತ್ರೀಕರಣ ನಿಷೇಧ
ಚಾರ್ ಧಾಮ್ ದೇಗುಲಗಳ 200 ಮೀಟರ್ ವ್ಯಾಪ್ತಿಯಲ್ಲಿ ಮೊಬೈಲ್ ಫೋನ್ ಬಳಕೆಯನ್ನು ನಿಷೇಧಿಸಲಾಗುವುದು ಎಂದು ರಾಧಾ ರಾತುರಿ ಈ ಹಿಂದೆಯೇ ಸೂಚನೆ ನೀಡಿದ್ದರು. ಚಾರ್ ಧಾಮ್ ಯಾತ್ರೆಯ ಬಗ್ಗೆ ರೀಲ್ ತಯಾರಿಸಿ ತಪ್ಪು ಮಾಹಿತಿ ಹರಡುವವರ ವಿರುದ್ಧ ಆಡಳಿತವು ಪ್ರಕರಣಗಳನ್ನು ದಾಖಲಿಸುತ್ತದೆ. ತಪ್ಪು ಮಾಹಿತಿಯೊಂದಿಗೆ ರೀಲ್‌ಗಳನ್ನು ತಯಾರಿಸುವುದು ಅಪರಾಧ. ನೀವು ನಂಬಿಕೆಯಿಂದ ಯಾತ್ರೆಗೆ ಹೋಗುತ್ತಿದ್ದರೆ, ದೇವಸ್ಥಾನಗಳ ಬಳಿ ರೀಲ್ ಮಾಡುವುದು ತಪ್ಪು ಎಂದು ಎಚ್ಚರಿಕೆ ನೀಡಿದ್ದಾರೆ.
ಚಾರ್ ಧಾಮ್ ಯಾತ್ರೆಯು ಮೇ 10 ರಂದು ಪ್ರಾರಂಭವಾಗಿದೆ. ಯಾತ್ರೆಯ ಮೊದಲ ಆರು ದಿನಗಳಲ್ಲಿ, ಬುಧವಾರದವರೆಗೆ, ಭಾರತ ಮತ್ತು ವಿದೇಶಗಳಿಂದ 3,34,732 ಜನರು ಪ್ರಾರ್ಥನೆ ಸಲ್ಲಿಸಲು ದೇಗುಲಗಳಿಗೆ ಭೇಟಿ ನೀಡಿದ್ದಾರೆ. ಯಾತ್ರೆಯ ನೋಂದಣಿ ಏಪ್ರಿಲ್ 25 ರಂದು ಪ್ರಾರಂಭವಾಗಿತ್ತು. ಗುರುವಾರ ಸಂಜೆಯವರೆಗೆ 2,70,000 ಕ್ಕೂ ಹೆಚ್ಚು ಭಕ್ತರು ನೋಂದಾಯಿಸಿದ್ದಾರೆ.












Click it and Unblock the Notifications