Get Updates
Get notified of breaking news, exclusive insights, and must-see stories!

Weekend Travel: ಚಾರಣ ಹೊರಡುತ್ತೀರಾ..? ಮಿಸ್‌ ಮಾಡದೇ ಕೊಡಗಿನ ನಿಶಾನೆ ಮೊಟ್ಟೆಗೆ ಭೇಟಿ ನೀಡಿ

ಮಡಿಕೇರಿ, ಜನವರಿ 19: ಹೆಚ್ಚು ಪ್ರಖರತೆಯಿಲ್ಲದ ಬಿಸಿಲು, ಸದಾ ಬೀಸಿ ಬರುವ ತಂಗಾಳಿ, ಹಕ್ಕಿಗಳ ಚಿಲಿಪಿಲಿ ಇಂಚರ, ಗಿಡಮರ ಕಾಡು ಮೇಡು, ಬೆಟ್ಟ ಗುಡ್ಡಗಳ ಹಾದಿಯಲ್ಲಿ ಹೆಜ್ಜೆ ಹಾಕುತ್ತಾ ಪೇಟೆ ಪಟ್ಟಣಗಳಲ್ಲಿ ಒತ್ತೊತ್ತಾಗಿ ನೆಲೆಗೊಂಡ ವಸತಿ ಪ್ರದೇಶಗಳನ್ನು ನೋಡುತ್ತಾ, ಅದರಾಚೆಗೆ ಮುಗಿಲಿಗೆ ಚುಂಬಿಸುವಂತಿರುವ ಪರ್ವತ ಶ್ರೇಣಿಗಳನ್ನು ನೋಡುತ್ತಾ ಚಾರಣ ಆರಂಭಿಸಬೇಕೆನ್ನುವ ನಿಸರ್ಗ ಪ್ರೇಮಿಗಳಿಗೆ ಅಪಾಯಕಾರಿಯಲ್ಲದ ಸುಂದರ ತಾಣ ನಿಶಾನೆ ಮೊಟ್ಟೆ ಹೇಳಿಮಾಡಿಸಿದ ತಾಣವಾಗಿದೆ.

ಕೊಡಗಿನಲ್ಲಿರುವ ಪರ್ವತಗಳ ನಡುವೆ ಪುಟ್ಟದಾದ ಮತ್ತು ಐತಿಹಾಸಿಕ ಐಹಿತ್ಯ ಹೊಂದಿರುವ ನಿಶಾನೆ ಮೊಟ್ಟೆ ಪಾಕೃತಿಕ ಚೆಲುವು ಆಸ್ವಾದಿಸುತ್ತಾ ಬೆಟ್ಟಗುಡ್ಡವನ್ನೇರಲು ಬಯಸುವವರಿಗೆ ಸೂಕ್ತ ತಾಣ ಎನ್ನುವುದರಲ್ಲಿ ಎರಡು ಮಾತಿಲ್ಲ. ಮಡಿಕೇರಿಗೆ ಸಮೀಪದಲ್ಲಿರುವ ಕಾರಣ ಈ ತಾಣವನ್ನು ಚಾರಣಕ್ಕೆ ಹೊರಡುವವರು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಇತ್ತೀಚೆಗಿನ ದಿನಗಳಲ್ಲಿ ಚಾರಣ ಹೋಗುವುದು ಬಹಳಷ್ಟು ಮಂದಿಗೆ ಹವ್ಯಾಸವಾಗಿದೆ.

Travel News: You Know The Specialty Of Kodagu Nishani Motte

ಚಾರಣ ಹೊರಡುವ ಮುನ್ನ ಯಾವುದೇ ಅಪಾಯಕಾರಿಯಲ್ಲದ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಬಯಸುವವರು ನಿಶಾನೆಮೊಟ್ಟೆಯತ್ತ ಮುಖ ಮಾಡುವುದು ಒಳ್ಳೆಯದು. ಅಷ್ಟೇ ಅಲ್ಲದೆ ಪೇಟೆಯ ಗೌಜು ಗದ್ದಲಗಳಲ್ಲಿ ದಿನಕಳೆಯುವವರು ಒಂದಷ್ಟು ಸಮಯವನ್ನಾದರೂ ಪ್ರಕೃತಿಯ ಮಡಿಲಿನಲ್ಲಿ ಕಳೆಯಬೇಕೆಂಬ ಹಂಬಲಿಗರು ಇಲ್ಲಿಗೆ ಬರಲು ಅಡ್ಡಿಯಿಲ್ಲ. ಇಲ್ಲಿಗೆ ಬಂದದ್ದೇ ಆದರೆ ಇಲ್ಲಿ ನಿಸರ್ಗದ ಸುಂದರ ನೋಟ ಮೈಮನಕ್ಕೆ ಉಲ್ಲಾಸ ತುಂಬುವುದರಲ್ಲಿ ಎರಡು ಮಾತಿಲ್ಲ.

ಕಣ್ಮನ ಸೆಳೆಯುವ ಸುಂದರ ನೋಟ

ನಿಶಾನೆ ಮೊಟ್ಟೆಯ ಸೌಂದರ್ಯ ಹೇಗಿದೆ ಎಂದರೆ ಕಣ್ಣು ಹಾಯಿಸಿದುದ್ದಕೂ ಬೆಟ್ಟಸಾಲುಗಳು..ದೂರದ ಕಾಫಿ, ಏಲಕ್ಕಿ ತೋಟಗಳು..ಗದ್ದೆ ಬಯಲುಗಳು..ಅಂಕು ಡೊಂಕಾದ ರಸ್ತೆಗಳಲ್ಲಿ ಸರ್ಕಸ್ ಮಾಡುತ್ತಾ ಸಾಗುವ ವಾಹನಗಳು..ಮೇಲಿನ ಗುಡ್ಡದಲ್ಲಿ, ಕೆಳಗಿನ ಹಳ್ಳದಲ್ಲಿ ಅಲ್ಲಲ್ಲಿ ಕಾಣುವ ಹೆಂಚಿನ ಮನೆಗಳು..ದೂರದ ಅರಣ್ಯದ ನಡುವೆ ಮಲೆಕುಡಿಯರ ಜೋಪಡಿಗಳಿಂದ ಗಾಳಿಯಾಡುತ್ತಾ ಮೇಲೇಳುವ ಹೊಗೆ..ಒಂದೇ ಎರಡೇ ಹತ್ತಾರು ಸುಂದರ, ವಿಸ್ಮಯ ನೋಟಗಳು ಬೆಟ್ಟದ ತುದಿಗೆ ಕರೆದೊಯ್ದು ಬಿಡುತ್ತದೆ.

Travel News: You Know The Specialty Of Kodagu Nishani Motte

ಮಡಿಕೇರಿಯಿಂದ ಸುಮಾರು ಹತ್ತು ಕಿ.ಮೀ. ದೂರದಲ್ಲಿ, 300 ಅಡಿ ಎತ್ತರದರದಲ್ಲಿರುವ ನಿಶಾನೆ ಮೊಟ್ಟೆಯು ದಕ್ಷಿಣ ಕನ್ನಡದ ಕಡೆಗಿನ ನೋಟವನ್ನು ತೋರಿಸುತ್ತದೆ. ಇಲ್ಲಿಂದ ನಿಂತರೆ ಮಡಿಕೇರಿ ಕಡೆಗೆ ಬರುವ ಬೆಟ್ಟದ ಬುಡಭಾಗದವರೆಗೂ ಕಾಣಿಸುತ್ತದೆ. ಹೀಗಾಗಿ ಹಿಂದಿನ ಕಾಲದಲ್ಲಿ ಮಲಬಾರಿನಿಂದ ಶತ್ರುಗಳ ಸೈನ್ಯ ಘಟ್ಟದತ್ತ ದಂಡೆತ್ತಿ ಬರುವುದನ್ನು ಸೈನಿಕರು ಇಲ್ಲಿಂದಲೇ ನೋಡಿ ತಿಳಿದುಕೊಳ್ಳುತ್ತಿದ್ದರು ಎಂಬ ಮಾತಿದೆ. ಈಗ ಈ ತಾಣ ಪ್ರವಾಸಿ ತಾಣವಾಗಿ ಬದಲಾಗಿದೆ.

ನಿಶಾನೆ ಮೊಟ್ಟೆಗೆ ತೆರಳುವುದು ಹೇಗೆ?

ನಿಶಾನೆಮೊಟ್ಟೆಯತ್ತ ತೆರಳಬೇಕಾದರೆ ಮಡಿಕೇರಿಯಿಂದ ಸ್ಟೀವರ್ಟ್ಹಿಲ್ ಮಾರ್ಗವಾಗಿ ಸುಮಾರು ನಾಲ್ಕು ಕಿ.ಮೀ. ದೂರವನ್ನು ಆಯಾಸವಿಲ್ಲದೆ ಕ್ರಮಿಸಬಹುದಾದರೂ ನಂತರದ ಹಾದಿ ಮಾತ್ರ ಸವಾಲ್ ವೊಡ್ಡುವಂತದ್ದಾಗಿದೆ. ಹಳ್ಳ,ದಿಣ್ಣೆಗಳಿಂದ ಕೂಡಿದ ರಸ್ತೆಯಲ್ಲಿ ಜೀಪು ಹೊರತು ಪಡಿಸಿ ಇನ್ಯಾವುದೇ ವಾಹನಗಳಲ್ಲಿ ಹೋಗುವುದು ಕಷ್ಟಸಾಧ್ಯ. ಹಾಗಾಗಿ ಹೆಚ್ಚಿನವರು ವಾಹನವನ್ನು ತಳ್ಳುವ ಕಷ್ಟವೇ ಬೇಡವೆಂದು ನಡೆದುಕೊಂಡೇ ಹೋಗುತ್ತಾರೆ.

Travel News: You Know The Specialty Of Kodagu Nishani Motte

ನಿಜ ಹೇಳಬೇಕೆಂದರೆ ಸುತ್ತಮುತ್ತಲಿನ ನಿಸರ್ಗ ಸೌಂದರ್ಯದತ್ತ ಕಣ್ಣು ಹಾಯಿಸುತ್ತಾ ಹೆಜ್ಜೆ ಹಾಕುವುದು ಮನಸ್ಸಿಗೆ ಮುದನೀಡುತ್ತದೆ. ಸುಮಾರು ಏಳು ಕಿ.ಮೀ. ಸಾಗುತ್ತಿದಂತೆಯೇ ಇಕ್ಕೆಲಗಳಲ್ಲಿ ಹಸಿರನ್ನೊದ್ದು ಕುಳಿತ ನಿಸರ್ಗದ ವಿಹಂಗಮ ನೋಟ ಕಣ್ಮುಂದೆ ಹಾದು ಬರುತ್ತದೆ. ಮಡಿಕೇರಿಯಿಂದ ಹೊರಟು ನಿಶಾನೆಮೊಟ್ಟೆಯ ತಪ್ಪಲು ತಲುಪಬೇಕಾದರೆ ಕನಿಷ್ಠ ಒಂದು ಗಂಟೆಯಾದರು ಬೇಕಾಗುತ್ತದೆ. ಅಲ್ಲಿಂದ ಸುಮಾರು ಮುನ್ನೂರು ಹೆಜ್ಜೆ ಹಾಕಿದರೆ ಸಾಕು ನಿಶಾನೆಮೊಟ್ಟೆಯ ತುತ್ತತುದಿ ತಲುಪಬಹುದಾಗಿದೆ.

ರೋಮಾಂಚನವನ್ನುಂಟು ಮಾಡುವ ಬೆಟ್ಟಶ್ರೇಣಿ

ನಿಶಾನೆಮೊಟ್ಟೆಯ ಮೇಲ್ಭಾಗದಲ್ಲಿ ವಿಶಾಲ ಸಮತಟ್ಟಾದ ಜಾಗವಿರುವುದರಿಂದ ಆಡಿ ಕುಣಿದು ಕುಪ್ಪಳಿಸಬಹುದು ಅಷ್ಟೇ ಅಲ್ಲ ಟೆಂಟ್ ಹಾಕಿ ಅಲ್ಲಿ ರಾತ್ರಿ ಕೂಡ ಕಳೆಯಬಹುದು. ಇಲ್ಲಿಂದ ನಿಂತು ನೋಡಿದರೆ ಒಂದನ್ನೊಂದು ಜೋಡಿಸಿಟ್ಟಂತೆ ಕಣ್ಣು ಹಾಯಿಸಿದುದ್ದಕ್ಕೂ ಕಂಗೊಳಿಸುವ ಬೆಟ್ಟಗುಡ್ಡಗಳು ರೋಮಾಂಚನವನ್ನುಂಟು ಮಾಡುತ್ತವೆ. ಮಡಿಕೇರಿಗೆ ನೀರು ಒದಗಿಸುವ ಜಲಗಾರ ಕೂಟುಹೊಳೆ ಹಾಗೂ ಮಡಿಕೇರಿ ಪಟ್ಟಣದ ವಿಹಂಗಮ ನೋಟವೂ ಇಲ್ಲಿಂದ ಲಭ್ಯವಾಗುತ್ತದೆ.

ನಿಶಾನೆಮೊಟ್ಟೆಗೆ ಪಿಕ್ನಿಕ್ ಹೋಗುವವರು ತಮ್ಮೊಂದಿಗೆ ತಿಂಡಿ ತಿನಿಸುಗಳನ್ನು ಒಯ್ದರೆ ಒಂದಷ್ಟು ಹೊತ್ತು ಅಲ್ಲಿದ್ದು ಬರಬಹುದು. ಮಡಿಕೇರಿಯಿಂದ ನಿಶಾನೆಮೊಟ್ಟೆಯತ್ತ ಹೆಜ್ಜೆ ಹಾಕುವಾಗ ಸಿಗುವ ಸ್ಟೋನ್ ಹಿಲ್ ಕೂಡ ಒಂದು ಸುಂದರ ವೀಕ್ಷಣಾ ತಾಣ(ವ್ಯೂ ಪಾಯಿಂಟ್) ಇಲ್ಲಿ ನಿಂತು ನೋಡಿದರೆ ಮಡಿಕೇರಿ ಪಟ್ಟಣದ ಸುಂದರನೋಟ ಮನಸ್ಸೆಳೆಯುತ್ತದೆ. ಸ್ಟೋನ್ ಹಿಲ್ನಲ್ಲಿ ಮಡಿಕೇರಿಗೆ ನೀರು ಒದಗಿಸುವ ಶುದ್ದೀಕರಣ ಘಟಕವಿದೆ. ಕೂಟುಹೊಳೆಯಿಂದ ಇಲ್ಲಿಗೆ ನೀರು ಹಾಯಿಸಿ, ಶುದ್ದೀಕರಣದ ಬಳಿಕ ನಗರಕ್ಕೆ ನೀರನ್ನು ಒದಗಿಸಲಾಗುತ್ತದೆ.

ನಿಶಾನೆ ಮೊಟ್ಟೆ ಹಿಂದಿದೆ ಇತಿಹಾಸ

ಮಡಿಕೇರಿಯನ್ನು ಆಳುತ್ತಿದ್ದ ರಾಜರಿಗೂ ಮತ್ತು ನಿಶಾನೆ ಮೊಟ್ಟೆಗೂ ಸಂಬಂಧವಿದೆ. ಅಷ್ಟೇ ಅಲ್ಲದೆ ರಾಜರಿಗೆ ಹೊರಗಿನ ಶತ್ರುಗಳ ಮೇಲೆ ನಿಗಾ ಇಡಲು ನಿಶಾನೆಮೊಟ್ಟೆ ಪ್ರಸಕ್ತ ಸ್ಥಳವಾಗಿತ್ತು. ಅತ್ಯಾಧುನಿಕ ಸಾಧನಗಳಿಲ್ಲದ ಕಾಲದಲ್ಲಿ ಶತ್ರುಗಳು ತಮ್ಮತ್ತ ದಂಡೆತ್ತಿ ಬರುವುದನ್ನು ದೂರದಿಂದಲೇ ಅರಿಯಲು ಈ ಸ್ಥಳ ಸಹಕಾರಿಯಾಗಿತ್ತು. ಇಲ್ಲಿ ನಿಂತು ಪಹರೆ ಕಾಯುತ್ತಿದ್ದ ಸೈನಿಕರು ಶತ್ರುಗಳು ಚಲನವಲನ ಅರಿತು ನಿಶಾನೆ ತೋರಿಸುವ ಮೂಲಕ ಅರಮನೆಗೆ ಸುದ್ದಿ ಮುಟ್ಟಿಸುತ್ತಿದ್ದರು. ಕೂಡಲೇ ಸೈನ್ಯ ಸಜ್ಜಾಗಿ ಶತ್ರುಗಳತ್ತ ಮುಗಿ ಬೀಳುತ್ತಿದ್ದರು ಎಂದು ಹೇಳಲಾಗುತ್ತಿದೆ.

ಅವತ್ತು ಘಟ್ಟವನ್ನೇರಿ ಬರುವ ಶತ್ರು ಸೈನಿಕರ ಮೇಲೆ 'ನಿಶಾನೆ' ಇಡಲು ಈ ಗುಡ್ಡ ಯೋಗ್ಯವಾಗಿದ್ದರಿಂದ 'ನಿಶಾನೆ ಮೊಟ್ಟೆ' ಎಂಬ ಹೆಸರು ಬಂದಿರಬಹುದೆಂದು ಹೇಳಲಾಗುತ್ತಿದೆ. ಸಾಮಾನ್ಯವಾಗಿ ಕೊಡಗಿನಲ್ಲಿ ಎತ್ತರದ ಜಾಗವನ್ನು ಮೊಟ್ಟೆ ಎಂದು ಕರೆಯುವುದು ರೂಢಿ. ಮಡಿಕೇರಿ ಬಳಿಯ ಎತ್ತರದ ಈ ನಿಶಾನೆ ಬೆಟ್ಟ ಜನರ ಆಡು ಮಾತಿನಲ್ಲಿ ನಿಶಾನೆಮೊಟ್ಟೆ ಎಂದೇ ಕರೆಯಲ್ಪಡುತ್ತಿದೆ. ಅದು ಏನೇ ಇರಲಿ ಚಾರಣಿಗರಿಗೆ ಇದೊಂದು ಸೂಕ್ತ ತಾಣ ಎನ್ನುವುದಂತು ಸತ್ಯ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+