Mysuru: ಮೈಸೂರಿನ ಬೊಂಬೆ ಮನೆಗೆ ರಾಮ್ ಸನ್ಸ್ ಕಲಾಪ್ರತಿಷ್ಠಾನದ ಮೆರಗು
ಮೈಸೂರು, ಆಗಸ್ಟ್ 23: ಐತಿಹಾಸಿಕ ಮೈಸೂರು ದಸರಾ ಸಂಸ್ಕೃತಿಯ ಸಂಭ್ರಮವಾಗಿದ್ದು ಇಲ್ಲಿ ಏನಿದೆ? ಏನಿಲ್ಲ ಎಂಬುದನ್ನು ಅನುಭವಿಸಿದವರಿಗಷ್ಟೇ ಗೊತ್ತಾಗುತ್ತದೆ. ಗತ ಇತಿಹಾಸವನ್ನು ಮೆಲುಕು ಹಾಕಿದ್ದೇ ಆದರೆ ಮೈಸೂರು ದಸರಾದಲ್ಲಿ ಬೊಂಬೆಮನೆಯ ವೈಭವ ಹೇಗಿತ್ತು ಎಂಬುದು ಗೊತ್ತಾಗುತ್ತದೆ. ತದನಂತರದಲ್ಲಿ ಮಂಕಾದಂತೆ ಗೋಚರಿಸಿದರೂ ಇತ್ತೀಚೆಗೆ ಬೊಂಬೆಗಳು ಮನೆಮನೆಗಳಲ್ಲಿ ಮೇಳೈಸುತ್ತಿದ್ದು ಇದಕ್ಕೆ ಮೈಸೂರು ನಗರದ ನಜರ್ ಬಾದ್ ನಲ್ಲಿರುವ ರಾಮ್ ಸನ್ಸ್ ಕಲಾಪ್ರತಿಷ್ಠಾನ ಕಾರಣವಾಗಿದೆ.
ಪ್ರತಿ ವರ್ಷದಂತೆ ಈ ಬಾರಿಯೂ ರಾಮ್ ಸನ್ಸ್ ಕಲಾಪ್ರತಿಷ್ಠಾನ ಬೊಂಬೆ ಪ್ರದರ್ಶನ ಏರ್ಪಡಿಸಿದ್ದು, ಹತ್ತು ಹಲವು ವಿಶೇಷತೆಗಳನ್ನು ಈ ಪ್ರದರ್ಶನದಲ್ಲಿ ಅಳವಡಿಸಿದೆ. ಇನ್ನು ನಾವು ಇತಿಹಾಸದ ಪುಟಗಳನ್ನು ಮೆಲುಕು ಹಾಕಿದ್ದೇ ಆದರೆ ಮಹಾರಾಜರ ಕಾಲದಲ್ಲಿ ಮೈಸೂರು ನಗರ ಬೊಂಬೆಗೆ ಮತ್ತು ಬೊಂಬೆ ತಯಾರಿಸುತ್ತಿದ್ದ ಕಲಾಕಾರರಿಗೆ ಪ್ರಸಿದ್ದಿಯಾಗಿತ್ತು. ಮರದ ಬೊಂಬೆ ಮಾಡಿ ಅದರ ಮೇಲೆ ಚಿನ್ನದರೇಕನ್ನು ಅಂಟಿಸಿ ಮಾಡುತ್ತಿದ್ದ ಪೂತು ಕಲೆಯ ಬೊಂಬೆಗಳು ಅವತ್ತಿನ ಕಾಲದಲ್ಲಿ ಹೆಸರುವಾಸಿಯಾಗಿತ್ತು.

ಮೈಸೂರಿನ ಅರಸರ ಕಾಲದಲ್ಲಿ ಕಲೆಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿತ್ತು. ರಾಜರ ಆಡಳಿತ ಕೊನೆಗೊಂಡ ನಂತರದ ಕಾಲಘಟ್ಟದಲ್ಲಿ ಬೊಂಬೆ ಕಲಾವಿದರ ಸಂಖ್ಯೆ ಕಡಿಮೆಯಾಯಿತು. ಬಹಳಷ್ಟು ಮಂದಿ ಕಲಾವಿದರು ಅವಕಾಶ ಅರಸಿ ಹೊರ ಊರುಗಳತ್ತ ಮುಖ ಮಾಡಿದರು. ಪರಿಣಾಮ ಮೈಸೂರಿನ ಮಂದಿ ಬೊಂಬೆಗಾಗಿ ತಮಿಳುನಾಡಿನ ಮಧುರೈ, ಕುಂಭಕೋಣ, ತಂಜಾವೂರನ್ನು ಆಶ್ರಯಿಸಬೇಕಾಯಿತು.
ಇದೆಲ್ಲವನ್ನು ಮನಗಂಡ ರಾಮ್ ಸನ್ಸ್ ಕಲಾ ಪ್ರತಿಷ್ಠಾನವು 2005ರಲ್ಲಿ ಮೊದಲ ಬಾರಿಗೆ ಬೊಂಬೆ ಪ್ರದರ್ಶನವನ್ನು ಏರ್ಪಡಿಸುವ ಮೂಲಕ ಮೈಸೂರಿನ ಜನತೆಗೆ ಅವರ ಅಭಿರುಚಿಗೆ ತಕ್ಕಂತಹ ಬೊಂಬೆಗಳನ್ನು ನೀಡುವ ಪ್ರಯತ್ನ ಮಾಡಿತ್ತಲ್ಲದೆ, ಬೊಂಬೆ ಪ್ರದರ್ಶನದ ಮೂಲಕ ಸಾಂಸ್ಕೃತಿಕ ವೈಭವವನ್ನು ಮರಳಿ ತರುವ ಪ್ರಯತ್ನ ಮಾಡಲಾಯಿತು.
ಬೊಂಬೆ ಪ್ರದರ್ಶನಕ್ಕೆ ಹೆಚ್ಚಿನ ಪ್ರೋತ್ಸಾಹ
ಸದ್ಯ ರಾಮ್ ಸನ್ಸ್ ಕಲಾ ಪ್ರತಿಷ್ಠಾನದ ಬೊಂಬೆ ಪ್ರದರ್ಶನಕ್ಕೆ ಇಪ್ಪತ್ತರ ಸಂಭ್ರಮವಾಗಿದೆ. ಈ ಬೊಂಬೆ ಪ್ರದರ್ಶನ ಆರಂಭಗೊಂಡ ಬಳಿಕ ಮೈಸೂರು ನಗರದಲ್ಲಿ ನವರಾತ್ರಿ ವೇಳೆ ಬೊಂಬೆ ಕೂರಿಸುವವರ ಸಂಖ್ಯೆ ಹೆಚ್ಚಾಗಿದ್ದು ಇದರೊಂದಿಗೆ ಮೈಸೂರಿಗೆ ಬೊಂಬೆಯ ವೈಭವ ಮರಳಿ ಬಂದಂತಾಗಿದೆ. ಇಲ್ಲಿ ಮಣ್ಣು ಕಾಗದ, ಕಾಷ್ಠ, ಬಟ್ಟೆ, ಗಾಜು, ಪಿಂಗಾಣಿ ಹೀಗೆ ವಿವಿಧ ಪದಾರ್ಥಗಳಿಂದ ತಯಾರು ಮಾಡಿದ ಚಿತ್ರ ವಿಚಿತ್ರ ಬೊಂಬೆಗಳಿದ್ದು ಆಕರ್ಷಣೀಯವಾಗಿದೆ. ಜತೆಗೆ ಬೇರೆ ಬೇರೆ ಊರುಗಳ ಬೊಂಬೆಗಳು ಒಂದೇ ಸೂರಿನಲ್ಲಿ ಸಿಗುವಂತಾಗಿದೆ.

ಇಲ್ಲಿ ಕರ್ನಾಟಕದ ಕಿನ್ನಾಳ, ಚನ್ನಪಟ್ಟಣ, ಗೋಕಾಕ, ತಮಿಳುನಾಡಿನ ಮಧುರೈ, ಕುಂಭಕೋಣಂ, ತಂಜಾಪುರ, ಕಾಂಚೀಪುರಂ, ಕೃಷ್ಣಗಿರಿ, ತೆಲಂಗಾಣದ ಚೆರಿಯಾಲ್, ನಿರ್ಮಲ್, ಆಂಧ್ರಪ್ರದೇಶದ ತಿರುಪತಿ, ಕಾಳಹಸ್ತಿ, ಎಟ್ಟಿಕೊಪ್ಪ, ಕೊಂಡಪಲ್ಲಿ, ಬೊಬ್ಬಿಲಿ, ಮಹಾರಾಷ್ಟ್ರದ ಕೊಲ್ಲಾಪುರ, ಪೇಣ್, ರಾಜಸ್ತಾನದ ಜೈಪುರ್, ಜೋಧಪುರ್, ಬೀಕಾನೇರ್, ಉತ್ತರಪ್ರದೇಶದ ಕಾಶಿ, ಲಕ್ನೋ, ಸಾರನಾಥ, ಪಶ್ಚಿಮಬಂಗಾಳದ ಕೊಲ್ಕತ್ತಾ, ಕೃಷ್ಣಾನಗರ್, ಬಾಂಕೂಡಾ ಒಡಿಶಾದ ಭುವನೇಶ್ವರ್ ಪುರಿ, ರಘುರಾಜಪುರ ಹೀಗೆ ದೇಶದ ಎಲ್ಲ ಸ್ಥಳಗಳ ಬೊಂಬೆಗಳು ಇಲ್ಲಿಯೇ ದೊರೆಯುತ್ತಿರುವುದು ರಾಮ್ ಸನ್ಸ್ ನ ವಿಶೇಷವಾಗಿದೆ.
ಈ ಬಾರಿಯ ಬೊಂಬೆ ಪ್ರದರ್ಶನದ ವಿಶೇಷತೆ
ಇನ್ನು ಈ ವರ್ಷದ ರಾಮ್ ಸನ್ಸ್ ಬೊಂಬೆ ಪ್ರದರ್ಶನದ ವಿಶೇಷತೆ ಏನು ಎಂಬುದನ್ನು ನೋಡಿದ್ದೇ ಆದರೆ ತುಳಸೀ ವಿವಾಹ, ತುಳಸೀ ದೇವಿಯ ಆರಾಧನೆ, ಆಯೋಧ್ಯೆಯ ರಾಮಲಲ್ಲಾ ಮೊದಲಾದವುಗಳಿದ್ದು, ಯದುಕುಲಶ್ರೇಷ್ಟನ ದಿಬ್ಬಣವಾಗಿ ಯಾದವರಸರ ಜಂಬೂಸವಾರಿ ಮಂಗಳ ಮೆರವಣಿಗೆ, ತುಳಸೀ ಆರಾಧನೆಯನ್ನು ಪ್ರತಿಬಿಂಬಿಸುವ ವೃಂದವಿಹಾರ, ತುಳಸಿಯ ಮಹತ್ವಸಾರುವ ಬೊಂಬೆ ಮತ್ತು ಚಿತ್ರಗಳು. ಸ್ವಂತ ಸಾಮ್ರಾಜ್ಯ ಅಂಕಣದಲ್ಲಿ ಸನಾತನ ಧರ್ಮವನ್ನು ಉಳಿಸಿ ಬೆಳೆಸಿದ ಸಾಧು ಸಂತರ ಬೊಂಬೆಗಳು.
ಪುರಾಣದಲ್ಲಿನ ಚಿತ್ರ ವಿಚಿತ್ರ ಪ್ರಾಣಿಪಕ್ಷಿಗಳ ಬೊಂಬೆಗಳು, ಮಾಯಾ ಪಕ್ಷಿ, ಪ್ರಾಣಿಗಳು, ಕಿನ್ನರಲೋಕ ಮೈಸೂರಿನ ಕರಗ, ಕರಗದಲ್ಲಿ ಕರಗಹೊತ್ತ ಯುವಕರು, ಬೆಂಗಾವಲಾಗಿ ನಿಂತ ವೀರಕುಮಾರರು, ಹಾಡುಗಾರರು, ಚಂಡೆ ಮದ್ದಳೆ, ನಾದಸ್ವರ ಊದುವವರು, ಇದರ ಜತೆಗೆ ಅಯೋಧ್ಯೆಯ ರಾಮಲಲ್ಲಾ ಬೊಂಬೆಯೊಂದಿಗೆ ಯಕ್ಷಗಾನದ ಬೊಂಬೆಗಳು ಹೀಗೆ ಹತ್ತು ಹಲವು ವಿಶೇಷತೆಗಳ ಬೊಂಬೆಗಳು ಈ ಬಾರಿ ಬೊಂಬೆ ಪ್ರದರ್ಶನದಲ್ಲಿ ನೋಡುಗರ ಗಮನಸೆಳೆಯುತ್ತಿದೆ.

ಮೈಸೂರಿನ ಮನೆಮನೆಗಳಲ್ಲಿ ಬೊಂಬೆ ಪ್ರದರ್ಶನ
ಒಟ್ಟಾರೆ ಬೊಂಬೆಗಳಿಂದ ಮನೆಯನ್ನು ಅಲಂಕರಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದ್ದು, ಬಹಳಷ್ಟು ಮನೆಗಳ ಕಪಾಟುಗಳಲ್ಲಿ, ದೇವರ ಮನೆಗಳಲ್ಲಿ ಸ್ಥಾನಪಡೆದಿವೆ. ಜತೆಗೆ ಮಕ್ಕಳ ಆಟಿಕೆಯಾಗಿಯೂ ಬಳಕೆಯಾಗುತ್ತಿವೆ. ಈ ಬಾರಿ ದಸರಾ ಪ್ರಯುಕ್ತ ರಾಮ್ ಸನ್ಸ್ ಕಲಾ ಪ್ರತಿಷ್ಠಾನ ವಿವಿಧ ಬಗೆಯ ಬೊಂಬೆಗಳನ್ನು ಪ್ರದರ್ಶನಕ್ಕಿಟ್ಟಿದ್ದು, ದಸರಾ ತನಕ ನಡೆಯಲಿರುವ ಪ್ರದರ್ಶನದಲ್ಲಿ ತಮ್ಮ ಮನ, ಮನೆಗೆ ಒಪ್ಪಿಗೆಯಾಗುವಂತಹ ಬೊಂಬೆಗಳು ಇಲ್ಲಿರುವುದಂತು ನಿಜ.
ನವರಾತ್ರಿಯಲ್ಲಿ ಬೊಂಬೆ ಪ್ರದರ್ಶನ ಮಾಡುವುದು ಎಲ್ಲೆಡೆ ನಡೆದುಕೊಂಡು ಬರುತ್ತಿದ್ದು ಮೈಸೂರಿನಲ್ಲಿ ಅದಕ್ಕೊಂದು ವಿಶೇಷ ಸ್ಥಾನಮಾನವಿದೆ. ಇದನ್ನು ನೀಡಿದವರು ಮೈಸೂರು ಮಹಾರಾಜರಾಗಿದ್ದ ರಾಜಒಡೆಯರು. ಅವರು ತಮ್ಮ ಆರಾಧನೆಯಲ್ಲಿ ಗೊಂಬೆಗೂ ಒಂದು ಮಹತ್ವದ ಸ್ಥಾನ ನೀಡಿ ನಾಡಹಬ್ಬ ನವರಾತ್ರಿಯಲ್ಲಿ ದಸರಾ ಮೆರವಣಿಗೆಯಂತೆಯೇ ಬೊಂಬೆಗೂ ವಿಶೇಷ ಸ್ಥಾನ ಕಲ್ಪಿಸಿದರು. ಅದರಂತೆ ಇಂದಿಗೂ ನವರಾತ್ರಿಯ ಒಂಬತ್ತು ದಿನವೂ ಅರಮನೆಯಲ್ಲಿ ವಿವಿಧ ಬೊಂಬೆಗಳನ್ನು ಸಾಲಾಂಕೃತವಾಗಿ ಜೋಡಿಸಿ, ಪೂಜಿಸಿ ಪ್ರದರ್ಶಿಸುವುದು ಕಂಡು ಬರುತ್ತಿದೆ. ಇನ್ನು ಪ್ರತಿ ಮನೆಯಲ್ಲಿಯೂ ಬೊಂಬೆಗಳ ಪ್ರದರ್ಶನ ನಡೆಯುತ್ತದೆ.












Click it and Unblock the Notifications