ಚಾಮುಂಡಿಬೆಟ್ಟವೆಂಬ ಆಕ್ಸಿಜನ್ ಕಣಜ: ತಾಯಿ ಬೆಟ್ಟ ಹತ್ತಿ ಇಳಿದರೆ ಏನೇನು ಲಾಭವಿದೆ?
ಮೈಸೂರು, ಆಗಸ್ಟ್ 28: ವಾರಪೂರ್ತಿ ದುಡಿಮೆಯಲ್ಲಿಯೇ ತಮ್ಮನ್ನು ತೊಡಗಿಸಿಕೊಂಡವರು ವಾರಾಂತ್ಯದಲ್ಲಿ ಚಾಮುಂಡಿಬೆಟ್ಟದ ಮೆಟ್ಟಿಲನ್ನೇರಿ ತಾಯಿ ಚಾಮುಂಡೇಶ್ವರಿಯನ್ನು ದರ್ಶನ ಮಾಡಿಕೊಂಡು ಬರುವುದನ್ನು ರೂಢಿಸಿಕೊಂಡಿರುವ ಕಾರಣದಿಂದಾಗಿ ಜನಸಾಗರವೇ ಹರಿದು ಬರುವುದು ಸಾಮಾನ್ಯವಾಗಿರುತ್ತದೆ. ಮುಂಜಾನೆಯೇ ಒಂದೊಂದೇ ಮೆಟ್ಟಿಲನ್ನೇರುತ್ತಾ ನಿಸರ್ಗದ ಚೆಲುವನ್ನು ಆಸ್ವಾದಿಸುತ್ತಾ ಸಾಗುವುದು ಎದ್ದು ಕಾಣಿಸುತ್ತದೆ.
ಮುಂಜಾನೆ ಚಾಮುಂಡಿಬೆಟ್ಟಕ್ಕೆ ಪಾದದ ಮೂಲಕ ಮೆಟ್ಟಿಲೇರಿ ಹಿಂತಿರುಗುವುದನ್ನು ಬಹುತೇಕ ಜನರು ರೂಢಿಸಿಕೊಂಡಿದ್ದಾರೆ. ಇದು ವ್ಯಾಯಾಮವೂ ಹೌದು. ಇಲ್ಲಿಗೆ ಬಂದು ಹೋಗುವುದು ಬರೀ ವ್ಯಾಯಾಮವೊಂದೇ ಅಲ್ಲ ಮನಸ್ಸಿಗೂ ನೆಮ್ಮದಿ, ದೈಹಿಕ ಆರೋಗ್ಯವೂ ದೊರೆಯುತ್ತದೆ ಎಂಬುದು ಇಲ್ಲಿಗೆ ಹಲವು ದಶಕಗಳಿಂದ ಬರುವವರ ಅಭಿಪ್ರಾಯವಾಗಿದೆ.

ಪ್ರತಿದಿನವೂ ಬೆಟ್ಟ ಹತ್ತುವವರಿಗೆ ಮಾಮೂಲಿಯಾಗಿರುತ್ತದೆ. ಆದರೆ ಯಾವತ್ತಾದರೊಮ್ಮೆ ಬರುವವರಿಗೆ ತುಸು ಕಠಿಣ ಎನಿಸುತ್ತದೆ. ಮೆಟ್ಟಿಲೇರುವಾಗ ಆಯಾಸವಾಗುತ್ತದೆ. ಸಾಕಪ್ಪಾ ವಾಪಾಸ್ಸು ಹೋಗಿ ಬಿಡೋಣ ಎನಿಸುತ್ತದೆ. ಆದರೆ ನಿಧಾನವಾಗಿ ಒಂದೊಂದೇ ಮೆಟ್ಟಿಲೇರುತ್ತಾ ಸಾಗಬೇಕು. ಕೇವಲ ಮೆಟ್ಟಿಲನ್ನು ಏರುವುದು ಮಾತ್ರವಲ್ಲ. ಸುತ್ತಲಿನ ನಿಸರ್ಗ ಸುಂದರವನ್ನು ಆಸ್ವಾದಿಸುತ್ತಾ ಸಾಗಬೇಕು. ಹೀಗೆ ಸಾಗಿದರೆ ಮೆಟ್ಟಿಲೇರುವ ಕಷ್ಟಗಳು ಗೊತ್ತೇ ಆಗುವುದಿಲ್ಲ.
ಮೈಸೂರಿಗೆ ಚಾಮುಂಡಿಬೆಟ್ಟ ದೇವರ ವರದಾನ
ವಾರಾಂತ್ಯದಲ್ಲಿ ಮುಂಜಾನೆಯ ಚುಮು ಚುಮು ಬೆಳಕಿನಲ್ಲಿ ಬೀಸುವ ತಂಗಾಳಿ ನಡುವೆ ಒಂದೊಂದೇ ಮೆಟ್ಟಿಲೇರುತ್ತಾ ಹಸಿರ ಸಿರಿಯ ಸೊಬಗು ಸವಿಯುತ್ತಾ ನಿರಾಳರಾಗುವುದು ಖುಷಿಕೊಡುವುದರಿಂದ ಜನ ಗುಂಪು ಗುಂಪಾಗಿ ಬರುತ್ತಾರೆ. ಮಕ್ಕಳಿಂದ ಆರಂಭವಾಗಿ ವೃದ್ಧರವರೆಗೂ ಮೆಟ್ಟಿಲೇರುವುದು ಕಂಡು ಬರುತ್ತದೆ. ಇದು ಬಹಳಷ್ಟು ಮಂದಿಗೆ ಅಭ್ಯಾಸವಾಗಿ ಹೋಗಿರುತ್ತದೆ. ಹೀಗಾಗಿ ಅವರು ಚಾಮುಂಡಿಬೆಟ್ಟಕ್ಕೆ ಬರುವುದನ್ನು ತಪ್ಪಿಸುವುದಿಲ್ಲ.

ಹಾಗೆನೋಡಿದರೆ ಮೈಸೂರಿಗರಿಗೆ ಚಾಮುಂಡಿಬೆಟ್ಟ ದೇವರು ನೀಡಿದ ವರದಾನವಾಗಿದೆ ಎಂದರೆ ತಪ್ಪಾಗಲಾರದು. ಮೈದಾನದಲ್ಲಿ ಹತ್ತಾರು ಕಿ.ಮೀ. ಓಡುವಾಗ ಸಿಗುವಷ್ಟೇ ವ್ಯಾಯಾಮದ ಫಲ ಚಾಮುಂಡಿಬೆಟ್ಟದ ಮೆಟ್ಟಿಲು ಹತ್ತಿ ಇಳಿದರೆ ಆಗುತ್ತದೆ. ಚಾಮುಂಡಿಬೆಟ್ಟ ಈಗಂತೂ ಹಸಿರಿನಿಂದ ಕಂಗೊಳಿಸುವುದರಿಂದ ಶುದ್ಧಗಾಳಿ ದೊರೆಯುತ್ತದೆ. ಮೆಟ್ಟಿಲೇರುವಾಗ ಮೈಬೆವರುತ್ತದೆ. ದೈಹಿಕವಾಗಿ ಆಯಾಸವಾಗುತ್ತದೆ. ಆದರೆ ಮೆಟ್ಟಿಲೇರುತ್ತಾ ಹೋದಂತೆ ಸುಮಾರು 700 ಮೆಟ್ಟಿಲು ತಲುಪಿದಾಗ ನಂದಿ ಸಿಗುತ್ತದೆ.
ಬೆಟ್ಟವೇರಿದರೆ ಮನಸ್ಸು ಪ್ರಪುಲ್ಲವಾಗುತ್ತದೆ
ಈ ಸ್ಥಳ ತಲುಪುತ್ತಿದ್ದಂತೆಯೇ ಸುತ್ತಲಿನಿಂದಲೂ ತಂಗಾಳಿ ಬೀಸುತ್ತದೆ. ಆಗ ದೈಹಿಕ ಆಯಾಸವೆಲ್ಲ ಮಾಯವಾಗಿ ದೇಹದಲ್ಲಿ ಉಲ್ಲಾಸದ ಅಲೆಯಾಡುತ್ತದೆ. ಹಾಗೆಯೇ ಮುಂದಿನ ಮೆಟ್ಟಿಲನ್ನು ಹತ್ತಲು ಹುರುಪು ತುಂಬುತ್ತದೆ. ಹೀಗೆ ಮುನ್ನಡೆದರೆ ಚಾಮುಂಡಿಬೆಟ್ಟದ ಮೇಲಕ್ಕೆ ತಲುಪಿದರೆ ಆ ವೇಳೆಗೆಲ್ಲ ದೇಹ ತಂಪಾಗಿ ಬಿಡುತ್ತದೆ. ಮನಸ್ಸು ಪ್ರಪುಲ್ಲವಾಗುತ್ತದೆ. ಅಲ್ಲಿ ತನಕದ ಆಯಾಸವೆಲ್ಲ ಮಾಯವಾಗಿ ಬಿಡುತ್ತದೆ. ನಿಜಹೇಳಬೇಕೆಂದರೆ ಮುಂಜಾನೆ ವಾಯುವಿಹಾರಕ್ಕೆ ಬರುವ ಮೈಸೂರು ನಗರದ ವಾಸಿಗಳಿಗೆ ಚಾಮುಂಡಿಬೆಟ್ಟ ಆಕ್ಸಿಜನ್ ಕಣಜ ಇದ್ದಂತೆ.

ಚಾಮುಂಡಿಬೆಟ್ಟಕ್ಕೆ ಬರುವವರಿಗೆ ಒಂದೊಳ್ಳೆಯ ಗಾಳಿ, ಮಾನಸಿಕ ನೆಮ್ಮದಿ, ಶರೀರಕ್ಕೆ ವ್ಯಾಯಾಮ, ಕಣ್ಣಿಗೆ ಹಸಿರಿನ ತಂಪು ದಕ್ಕುತ್ತದೆ. ನಿತ್ಯ ಸಾವಿರ ಮೆಟ್ಟಿಲೇರಿ ಚಾಮುಂಡಿತಾಯಿಯ ದರ್ಶನ ಮಾಡುವವರ ಸಂಖ್ಯೆ ನೂರಾರಿದೆ. ಕಳೆದ ಮೂವತೈದು ವರ್ಷಗಳಿಂದಲೂ ಬೆಟ್ಟವೇರುವವರಿದ್ದಾರೆ. ಅವರೆಲ್ಲರೂ ಪ್ರತಿದಿನವೂ ಮೆಟ್ಟಿಲೇರಿ ಚಾಮುಂಡಿದೇವಸ್ಥಾನಕ್ಕೆ ತೆರಳಿ ದೇವರಿಗೆ ನಮಿಸಿ ಹಿಂತಿರುಗುವ ಪರಿಪಾಠವನ್ನಿಟ್ಟುಕೊಂಡಿದ್ದಾರೆ. ಇವರಲ್ಲಿ ಯುವಕ, ಯುವತಿಯರು, ಪುರುಷರು, ವೃದ್ಧರು, ಮಹಿಳೆಯರು ಹೀಗೆ ಎಲ್ಲ ವರ್ಗದವರಿದ್ದಾರೆ.
ಪ್ರತಿದಿನ ಮೆಟ್ಟಿಲೇರುವವರು ಹೇಳುವುದೇನು?
ಬಹಳಷ್ಟು ಮಂದಿ ತಮ್ಮ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಲು ಮೆಟ್ಟಿಲೇರುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. ಇವರು ಹೇಳುವ ಪ್ರಕಾರ ಪ್ರತಿದಿನ ಚಾಮುಂಡಿಬೆಟ್ಟ ಹತ್ತುವುದರಿಂದ ಬಿಪಿ, ಶುಗರ್, ನೆಗಡಿ ದೂರವಾಗುತ್ತದೆಯಂತೆ, ಮಾನಸಿಕ ನೆಮ್ಮದಿ, ದೈಹಿಕ ಆರೋಗ್ಯ ವೃದ್ಧಿಸುತ್ತದೆಯಂತೆ. ಇನ್ನು ದಿನಾಲೂ ಮೆಟ್ಟಿಲೇರಿದರೆ ಮಂಡಿಚಿಪ್ಪು ಸವೆಯುತ್ತದೆ ಎಂಬ ಮಾತನ್ನು ಇವರಾರು ಒಪ್ಪುವುದಿಲ್ಲ.
ವಯಸ್ಸಾದ ಮೇಲೆ ಇದು ಸಹಜ. ಬೆಟ್ಟವೇರಿದಾಕ್ಷಣ ಮಂಡಿ ಚಿಪ್ಪು ಸವೆಯುತ್ತದೆ ಎನ್ನುವುದು ಸುಳ್ಳು ನಾವು ಹತ್ತಾರು ವರ್ಷಗಳಿಂದ ಹತ್ತುತ್ತಿದ್ದು ಅಂತಹ ಸಮಸ್ಯೆ ಎದುರಾಗಿಲ್ಲ ಎಂಬ ಅಭಿಪ್ರಾಯವನ್ನು ಮುಂದಿಡುತ್ತಾರೆ. ವಾರಪೂರ್ತಿ ತಮ್ಮದೇ ಕೆಲಸ ಕಾರ್ಯಗಳ ಜಂಜಾಟದಲ್ಲಿದ್ದವರು ಭಾನುವಾರ ತಮ್ಮ ಕುಟುಂಬ ಅಥವಾ ಸಹದ್ಯೋಗಿಗಳೊಂದಿಗೆ ಇಲ್ಲಿದೆ ಬನ್ನಿ.
ನಿಧಾನವಾಗಿ ಒಂದೊಂದೇ ಮೆಟ್ಟಿಲೇರಿ, ಇಲ್ಲಿನ ನಂದಿ ಹಾಗೂ ವ್ಯೂ ಪಾಯಿಂಟ್ ಗಳಲ್ಲಿ ಮೈಸೂರು ನಗರ ಸೇರಿದಂತೆ ದೂರದ ಬೆಟ್ಟಗುಡ್ಡಗಳ ಸುಂದರ ವಿಹಂಗಮ ನೋಟಗಳನ್ನು ನೋಡಿ ಬಳಿಕ ಚಾಮುಂಡೇಶ್ವರಿಯ ದರ್ಶನ ಮಾಡಿ ಮನೆಯ ಹಾದಿ ಹಿಡಿಯುತ್ತಾರೆ. ಈಗಂತೂ ವರುಣನ ಕೃಪೆಯಿಂದಾಗಿ ಇಡೀ ಬೆಟ್ಟ ಹಸಿರಿನ ಸೀರೆಯುಟ್ಟು ಮುಡಿಗೆ ಬಗೆ, ಬಗೆಯ ಹೂ ಮುಡಿದು ನಿಂತ ಚೆಲುವೆ ಬೀಸುವ ತಂಗಾಳಿಗೆ, ಹಕ್ಕಿಗಳ ಚಿಲಿಪಿಲಿ ನಾದಕ್ಕೆ ತಲೆತೂಗುತ್ತಿರುವಂತೆ ಭಾಸವಾಗುತ್ತಿದೆ.
ಕಿರಿಕಿರಿ ತಪ್ಪಿಸಲು ಸಂಬಂಧಿಸಿವರು ಪ್ರಯತ್ನಿಸಿ
ಇಡೀ ಬೆಟ್ಟವನ್ನು ತನ್ನ ಮುಷ್ಠಿಯೊಳಗಿಟ್ಟು ಹೊಯ್ದಾಡುವ ಮಂಜು ರವಿಯ ಕಿರಣಗಳ ಸ್ಪರ್ಶಕ್ಕೆ ನೆಗೆದು ಓಡುವುದನ್ನು ನೋಡಿ ತಲೆಬಾಗಿ ನಗುವ ಗಿಡ ಮರಗಳು... ಹೀಗೆ ಕಲ್ಪನೆಗೆ ನಿಲುಕದ ಹತ್ತಾರು ನೋಟಗಳು ಲಭ್ಯವಾಗುತ್ತವೆ. ಇನ್ನು ಚಾಮುಂಡೇಶ್ವರಿಯನ್ನು ಭಕ್ತಿಯಿಂದ ನೆನೆಯುತ್ತಾ ಅರಸಿನ, ಕುಂಕುಮ, ಹೂ, ಕರ್ಪೂರ ಹಚ್ಚುವವರು, ಬರಿಗಾಲಲ್ಲಿ ನಡೆಯುವವರು, ಮಂಡಿಯೂರಿ ಬೆಟ್ಟ ಹತ್ತುವವರು ಹೀಗೆ ವಿವಿಧ ಬಗೆಯ ಜನರು ಕಂಡು ಬರುತ್ತಾರೆ.
ಸದಾ ಜಂಜಾಟದಲ್ಲಿ ತೊಡಗಿರುವವರು ನಿಸರ್ಗದ ಮಡಿಲಲ್ಲಿ ನೆಮ್ಮದಿಯಾಗಿ ವಿಹರಿಸಲು ಬರುತ್ತಾರೆ. ಹೀಗೆ ಬರುವವರು ಕೆಲವು ಕಿರಿಕಿರಿಗಳನ್ನು ಅನುಭವಿಸಬೇಕಾಗುತ್ತದೆ. ಕೆಲವರು ಮೊಬೈಲ್ ಗಳಲ್ಲಿ ಜೋರಾಗಿ ಹಾಡುಗಳನ್ನು ಹಾಕಿಕೊಂಡು ತೆರಳುವುದು, ನಾಯಿಗಳನ್ನು ಹಿಡಿದುಕೊಂಡು ಬರುವುದು ಹೀಗೆ ನಡೆಯುತ್ತದೆ. ಆದರೆ ಇದೆಲ್ಲದಕ್ಕೆ ಕಡಿವಾಣ ಹಾಕಿ ಎಲ್ಲರೂ ನೆಮ್ಮದಿಯಾಗಿ ತೆರಳಲು ಅನುವು ಮಾಡಿಕೊಡಲು ಸಂಬಂಧಿಸಿದವರು ಮುಂದಾಗಬೇಕಾಗಿದೆ.












Click it and Unblock the Notifications