Weekend Travel: ಪ್ರವಾಸಿಗರ ಮೆಚ್ಚಿನ ಶಿವನಸಮುದ್ರಕ್ಕೆ ಹೋಗುವ ಮುನ್ನ ತಿಳಿದುಕೊಳ್ಳಲೇ ಬೇಕಾದ ಸಂಗತಿ

ಮೈಸೂರು, ಡಿಸೆಂಬರ್‌ 22: ಕಣ್ಣುಹಾಯಿಸಿದುದ್ದಕ್ಕೂ ಹಸಿರ ಹೊದಿಕೆಯನ್ನು ಹೊದ್ದು ಕುಳಿತ ಬೆಟ್ಟಶ್ರೇಣಿಗಳ ನಡುವಿನ ಕರ್ರಗಿನ ಹೆಬ್ಬಂಡೆಗಳ ನಡುವೆ ನಾಟ್ಯವಾಡುತ್ತಾ ಶ್ವೇತ ಸುಂದರಿಯಂತೆ ಧುಮುಕುವ ಝರಿ, ಬೀಸುವ ತಂಗಾಳಿ ಇದೆಲ್ಲವೂ ಶಿವನಸಮುದ್ರಕ್ಕೆ ಹೋದವರನ್ನು ಆಕರ್ಷಿಸುತ್ತದೆ. ಹೀಗಾಗಿಯೇ ವೀಕೆಂಡ್ ಟ್ರಿಪ್‌ಗಾಗಿ ನಿಸರ್ಗ ಪ್ರೇಮಿಗಳು ಇತ್ತ ದೌಡಾಯಿಸುತ್ತಾರೆ.

ಸಾಮಾನ್ಯವಾಗಿ ಮಳೆಗಾಲದಲ್ಲಿ ಕಾವೇರಿ ನದಿ ಉಕ್ಕಿ ಹರಿದಾಗ ಇಲ್ಲಿ ಜಲನರ್ತನ ಶುರುವಾಗಿ ಬಿಡುತ್ತದೆ. ಆಗ ಇಲ್ಲಿನ ದೃಶ್ಯಗಳನ್ನು ನೋಡಲು ಎರಡು ಕಣ್ಣುಗಳೇ ಸಾಲದಾಗುತ್ತದೆ. ಉಳಿದಂತೆ ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದ್ದಂತೆಯೇ ಭೋರ್ಗರೆತ ಕಡಿಮೆಯಾಗಿ ಹೆಬ್ಬಂಡೆಗಳ ಮೇಲಿನ ಮಿಂಚಿನಂತೆ ಭಾಸವಾಗುತ್ತದೆ. ಆದರೂ ಇಲ್ಲಿನ ನಿಸರ್ಗ ಸೌಂದರ್ಯವನ್ನು ಸವಿಯಲೆಂದೇ ಹೆಚ್ಚಿನವರು ಬರುತ್ತಾರೆ.

Travel News: Things To Know Before Going To Mysuru Shivanasamudra

ಶಿವನಸಮುದ್ರದಲ್ಲಿ ಐತಿಹಾಸಿಕ ದರ್ಗಾ ಮತ್ತು ಮಾರಮ್ಮನ ದೇಗುಲವಿದ್ದು, ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ಹೀಗೆ ಬರುವ ಭಕ್ತರು ಇಲ್ಲಿನ ನಿಸರ್ಗ ಸೌಂದರ್ಯವನ್ನು ಸವಿದುಕೊಂಡು ಹಿಂತಿರುಗುತ್ತಾರೆ. ಇನ್ನು ಶಿವನಸಮುದ್ರಕ್ಕೆ ಪ್ರವಾಸಿಗರು ಬರುವುದೇ ಇಲ್ಲಿರುವ ಗಗನಚುಕ್ಕಿ ಮತ್ತು ಭರಚುಕ್ಕಿ ಜಲಧಾರೆಗಳನ್ನು ನೋಡಲು. ಇದರಾಚೆಗೂ ಇಲ್ಲಿನ ಪ್ರಾಕೃತಿಕ ಚೆಲುವಿನ ನಡುವೆ ಸಮಯ ಕಳೆಯುವುದು ಕೂಡ ಇನ್ನಷ್ಟು ಮಜಾ ಕೊಡುತ್ತದೆ.

ಬ್ಲಫ್ ಎಂದು ಕರೆಯುತ್ತಿದ್ದ ಬ್ರಿಟೀಷರು

ಶಿವನಸಮುದ್ರದಲ್ಲಿರುವ ಗಗನಚುಕ್ಕಿ ಮತ್ತು ಭರಚುಕ್ಕಿ ಎರಡು ಜಲಧಾರೆಗಳು ಕೆಲವೇ ಕೆಲವು ಕಿಲೋಮೀಟರ್ ದೂರದ ಅಂತರದಲ್ಲಿದ್ದರೂ ಇವು ಬೇರೆ, ಬೇರೆ ಜಿಲ್ಲೆಗಳಿಗೆ ಸೇರಿರುವುದು ವಿಶೇಷ. ಭರಚುಕ್ಕಿ ಚಾಮರಾಜನಗರಕ್ಕೆ ಸೇರಿದರೆ, ಗಗನಚುಕ್ಕಿ ಮಂಡ್ಯ ಜಿಲ್ಲೆಗೆ ಸೇರಿದೆ. ಈ ಜಲಧಾರೆಗಳು ನಯನಮನೋಹರವಾಗಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಹೀಗೆ ಬರುವ ಪ್ರವಾಸಿಗರು ವಿದ್ಯುತ್ ಉತ್ಪಾದನಾ ಘಟಕವನ್ನು ನೋಡಲು ಮುಗಿ ಬೀಳುತ್ತಾರೆ. ಹೀಗಾಗಿ ಈ ವಿದ್ಯುತ್ ಉತ್ಪಾದನಾ ಘಟಕಗಳನ್ನು ವೀಕ್ಷಿಸಲೆಂದೇ ಟ್ರಾಲಿಗಳನ್ನು ನಿರ್ಮಿಸಲಾಗಿದೆ.

ಬಿಟೀಷರು ಶಿವನಸಮುದ್ರ ವಿದ್ಯುತ್ ಉತ್ಪಾದನಾ ಘಟಕವನ್ನು ಬ್ಲಫ್ ಎಂಬ ಹೆಸರಿನಿಂದ ಕರೆಯುತ್ತಿದ್ದರು. ಹೀಗಾಗಿ ಈಗಲೂ ಬ್ಲಫ್ ಎಂಬ ಹೆಸರು ಚಾಲ್ತಿಯಲ್ಲಿದೆ. ಶಿವನಸಮುದ್ರದಲ್ಲಿ ಕಾವೇರಿ ನದಿ ಸುಮಾರು ನಾನೂರ ಹತ್ತೊಂಬತ್ತು ಅಡಿ ಎತ್ತರದಿಂದ ಕಂದಕಕ್ಕೆ ಧುಮುಕುವುದು ಅಂದಿನ ಮೈಸೂರು ರಾಜ್ಯದ ಉಪ ಮುಖ್ಯ ಇಂಜಿನಿಯರ್ ಎ.ಜೆ.ಡಿ. ಲಾಬಿನೀರ್ ಅವರಿಗೆ ಇದು ವಿದ್ಯುತ್ ತಯಾರಿಸಲು ಪ್ರೇರಣೆಯಾಯಿತಲ್ಲದೆ, ವಿದ್ಯುತ್ ಘಟಕ ಸ್ಥಾಪಿಸಲು ಕಾರಣವಾಯಿತು.

Travel News: Things To Know Before Going To Mysuru Shivanasamudra

ವಿದ್ಯುತ್ ಉತ್ಪಾದನೆಗೆ ಹಸಿರು ನಿಶಾನೆ

ಅದು 1896-99ರ ದಿನಗಳು. ಅಂದಿನ ಮೈಸೂರು ರಾಜ್ಯದ ಉಪ ಮುಖ್ಯ ಇಂಜಿನಿಯರ್ ಎ.ಜೆ.ಡಿ.ಲಾಬಿನೀರ್ ಶಿವನಸಮುದ್ರಕ್ಕೆ ಭೇಟಿ ನೀಡಿದ್ದರು. ಅವರಿಗೆ ಇಲ್ಲಿ ಧುಮ್ಮಿಕ್ಕಿ ಹರಿಯುವ ಜಲಪಾತಗಳು ಮುದ ನೀಡಿದರೂ, ಕಾವೇರಿ ನದಿ ರೌದ್ರಾವತಾರ ತಾಳಿ ಕಂದಕಕ್ಕೆ ಧುಮುಕುತ್ತಿರುವ ದೃಶ್ಯ ನೋಡಿದ ಅವರಿಗೆ ಮನದಲ್ಲಿಯೇ ಬೆಳಕೊಂದು ಹಾದು ಹೋಗಿತ್ತು. ಆಗಲೇ ಅವರಿಗೆ ಕಂದಕಕ್ಕೆ ಧುಮುಕುತ್ತಿರುವ ನೀರಿನಿಂದ ವಿದ್ಯುತ್ ತಯಾರಿಸುವ ಆಲೋಚನೆ ತಲೆಯಲ್ಲಿ ಹೊಳೆದಿತ್ತು.

ಆ ನಂತರ ಮೈಸೂರಿಗೆ ಹೋದವರೇ ಅಂದಿನ ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ಭೇಟಿಯಾಗಿ ತಮ್ಮ ಇಂಗಿತವನ್ನು ವ್ಯಕ್ತಪಡಿಸಿದರು. ಇದನ್ನು ಕೇಳಿದ ಒಡೆಯರ್‌ಗೆ ಉತ್ಸಾಹ ಮೂಡಿತ್ತು. ನಮ್ಮ ರಾಜ್ಯದಲ್ಲಿ ನೀರಿನಿಂದ ವಿದ್ಯುತ್ ತಯಾರಿಸಿ ಬೆಳಕು ಪಡೆಯುವುದೆಂದರೆ ಅದಕ್ಕಿಂತ ಸಂತೋಷ ಮತ್ತೇನಿದೆ ಎಂದ ಅವರು ಕೂಡಲೇ ಅದಕ್ಕೆ ಹಸಿರು ನಿಶಾನೆ ತೋರಿದರು.

1902ರ ಜೂನ್ 30ರಂದು ಉದ್ಘಾಟನೆ

ಇದೇ ವೇಳೆ ಇಂಜಿನಿಯರ್ ಲಾಬಿನೀರ್‌ಗೆ ಅಂದಿನ ದಿವಾನರಾಗಿದ್ದ ಸರ್.ಕೆ.ಶೇಷಾದ್ರಿ ಅಯ್ಯರ್ ಮಾರ್ಗದರ್ಶನ ನೀಡಿ ಏನು ಬೇಕೋ ಅದನ್ನೆಲ್ಲಾ ಒದಗಿಸುವ ಮೂಲಕ ಪ್ರೋತ್ಸಾಹಿಸಿದರು. ವಿದ್ಯುತ್ ಯೋಜನೆ ಸ್ಥಾಪನೆಯ ಕಾಮಗಾರಿ ಆರಂಭಗೊಂಡು ಭರದಿಂದ ಸಾಗತೊಡಗಿತು. ವಿದ್ಯುತ್ ಘಟಕ ಸ್ಥಾಪನೆಗೆ ಅಗತ್ಯವಿರುವಂತಹ ಯಂತ್ರೋಪಕರಣಗಳು ದೂರದ ಬ್ರಿಟನ್ ಹಾಗೂ ಅಮೆರಿಕಾದಿಂದ ತರಿಸಿಕೊಳ್ಳಲಾಯಿತು.

Travel News: Things To Know Before Going To Mysuru Shivanasamudra

ಬಳಿಕ ಅವುಗಳನ್ನು ಆನೆ, ಕುದುರೆ, ಎತ್ತಿನಬಂಡಿ ಮೂಲಕ ಆಳವಾದ ಕಂದಕಕ್ಕೆ ಇಳಿಜಾರು ಮಾರ್ಗದಲ್ಲಿ ಕೊಂಡೊಯ್ದು ಜೋಡಿಸುವ ಮೂಲಕ ಸುಮಾರು ಏಳುನೂರು ಕಿಲೋವ್ಯಾಟ್ ಸಾಮರ್ಥ್ಯದ ವಿದ್ಯುತ್ ಘಟಕವನ್ನು ನಿರ್ಮಿಸಲಾಯಿತಲ್ಲದೆ, ಏಷ್ಯಾದಲ್ಲಿಯೇ ಪ್ರಪ್ರಥಮ ಜಲವಿದ್ಯುತ್ ಘಟಕ ಎಂಬ ಹೆಗ್ಗಳಿಕೆಯನ್ನು ಪಡೆಯಿತು.

ಹೀಗೆ ಸ್ಥಾಪನೆಯಾದ ಜಲವಿದ್ಯುತ್ ಘಟಕಕ್ಕೆ 1902ರ ಜೂನ್ 30ರಂದು ಅಂದಿನ ಮೈಸೂರು ರೆಸಿಡೆಂಟ್ ಜನರಲ್ ಡೋನಾಲ್ಡ್ ರಾಬರ್ಟ್‌ಸನ್‌ರವರು ಚಾಲನೆ ನೀಡಿದರು. ಇಲ್ಲಿಂದ ಕೋಲಾರದ ಚಿನ್ನದ ಗಣಿಗೆ ಸುಮಾರು 35 ಕಿಲೋ ವೋಲ್ಟ್ ಸಾಮರ್ಥ್ಯದ 148 ಕಿ.ಮೀ. ಉದ್ದದ ಮಾರ್ಗಕ್ಕೆ ರಾಬರ್ಟ್‌ಸನ್‌ರವರ ಪತ್ನಿ ಶ್ರೀಮತಿ ರಾಬರ್ಟ್‌ಸನ್‌ರವರು ಚಾಲನೆ ನೀಡಿದರು.

ಈ ಸಂಪರ್ಕ ಅಂದು ಜಗತ್ತಿನಲ್ಲಿಯೇ ಅತಿ ಉದ್ದದ ಪ್ರಸರಣ ಮಾರ್ಗ ಎಂಬ ಖ್ಯಾತಿ ಪಡೆಯಿತು. ಆ ನಂತರದ ವರ್ಷಗಳಲ್ಲಿ ಈ ವಿದ್ಯುತ್ ಘಟಕ ಆಧುನೀಕರಣಗೊಂಡು ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುತ್ತಾ ಸಾಗಿತು. 1905ರಲ್ಲಿ ಬೆಂಗಳೂರಿಗೂ ಹಾಗೂ 1908ರಲ್ಲಿ ಮೈಸೂರಿಗೂ ಈ ಕೇಂದ್ರದಿಂದ ವಿದ್ಯುತ್ ಸಂಪರ್ಕವನ್ನು ಒದಗಿಸಲಾಯಿತು. ಇತ್ತೀಚೆಗೆ ಇಲ್ಲಿ ಹಲವು ಘಟಕಗಳು ವಿದ್ಯುತ್ ಉತ್ಪಾದನೆಯಲ್ಲಿ ತೊಡಗಿಸಿಕೊಂಡಿವೆ.

ಶಿವನಸಮುದ್ರಕ್ಕೆ ತೆರಳುವುದು ಹೇಗೆ?

ಶಿವನಸಮುದ್ರಕ್ಕೆ ಬೆಂಗಳೂರಿನಿಂದ ಬರುವುದಾದರೆ ರಾಮನಗರ, ಚನ್ನಪಟ್ಟಣ, ಮದ್ದೂರು, ಮಳವಳ್ಳಿ ಮೂಲಕ ಹಾಗೂ ಮೈಸೂರಿನಿಂದ ಬನ್ನೂರು, ಮಳವಳ್ಳಿ ಅಥವಾ ಚಾಮರಾಜನಗರ, ಕೊಳ್ಳೆಗಾಲ ಮೂಲಕವೂ ಬರಬಹುದು. ಶಿವನಸಮುದ್ರಕ್ಕೆ ತೆರಳಿದರೆ ಸುತ್ತಮುತ್ತಲಿರುವ ತಲಕಾಡು, ಸೋಮನಾಥಪುರ ಮುಂತಾದ ಪ್ರವಾಸಿ ತಾಣಗಳಿಗೂ ಭೇಟಿ ನೀಡಿ ಬರಬಹುದಾಗಿದೆ. ಇಲ್ಲಿಗೆ ತೆರಳಲು ಹೆಚ್ಚಿನ ಬಸ್ ಸಂಪರ್ಕ ಇಲ್ಲದಿರುವುದರಿಂದ ಬಾಡಿಗೆ ಅಥವಾ ಸ್ವಂತ ವಾಹನಗಳಲ್ಲಿ ತೆರಳಬೇಕಾಗುತ್ತದೆ.

ಶಿವನಸಮುದ್ರಕ್ಕೆ ತೆರಳುವ ಪ್ರವಾಸಿಗರು ಇಲ್ಲಿರುವ ಗಗನಚುಕ್ಕಿ ಮತ್ತು ಭರಚುಕ್ಕಿ ಜಲಧಾರೆಗಳನ್ನು ದೂರದಿಂದ ನೋಡಿ ಹಿಂತಿರುಗಿದರೆ ಕ್ಷೇಮ. ಅದು ಬಿಟ್ಟು ಜಲಧಾರೆಯ ಸೌಂದರ್ಯಕ್ಕೆ ಮನಸೋತು ಜಲಧಾರೆಯಲ್ಲಿ ಈಜುವ, ಸ್ನಾನ ಮಾಡುವ ಪ್ರಯತ್ನ ಮಾಡುವುದು ಒಳ್ಳೆಯದಲ್ಲ. ಏಕೆಂದರೆ ಇಲ್ಲಿ ಪ್ರಾಣಕಳೆದುಕೊಂಡವರ ದೊಡ್ಡಪಟ್ಟಿಯೇ ಇದೆ. ದೂರದಿಂದ ಬರುವ ಪ್ರವಾಸಿಗರಿಗೆ ಇಲ್ಲಿ ಉಳಿದುಕೊಳ್ಳಲು ಯಾವುದೇ ಸೌಲಭ್ಯವಿಲ್ಲ ಹಾಗಾಗಿ ಸಮೀಪದ ಪಟ್ಟಣಗಳಾದ ಕೊಳ್ಳೆಗಾಲ ಅಥವಾ ಮಳವಳ್ಳಿಗೆ ಹೋಗಬೇಕಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+