ಚಿಕ್ಕಮಗಳೂರು: ನವೆಂಬರ್‌ನಲ್ಲಿ ವೀಕೆಂಡ್ ಈ ಪ್ರವಾಸಿ ತಾಣಗಳು ಬಂದ್..!
ಚಿಕ್ಕಮಗಳೂರು, ಅಕ್ಟೋಬರ್ 27: ಸಂಬಳವಾದ ಮೊದಲ ವಾರವೆಂದು ಮುಂದಿನ ವಾರಂತ್ಯಕ್ಕೆ ಕಾಫಿನಾಡು ಚಿಕ್ಕಮಗಳೂರಿಗೆ ಟ್ರಿಪ್ ಪ್ಲಾನ್ ಮಾಡಿದ್ದೀರಾ..? ಟ್ರಕ್ಕಿಂಗ್, ದೇವಸ್ಥಾನ ಹೀಗೆ ಪ್ರವಾಸಿ ತಾಣಗಳ ಪಟ್ಟಿ ಮಾಡಿಕೊಂಡಿದ್ದೀರಾ..? ಹಾಗಾದರೆ ಇಲ್ಲಿ ಗಮನಿಸಿ. ನಿಮ್ಮ ಪ್ರವಾಸಿ ತಾಣಗಳ ಪಟ್ಟಿಯಿಂದ ಈ ಸ್ಥಳಗಳನ್ನು ಕೈಬಿಟ್ಟು, ಬೇರೆ ಪ್ಲಾನ್ ಮಾಡಿ.
ರಾಜ್ಯದ ಅತ್ಯಂತ ಜನಪ್ರಿಯ ಪ್ರವಾಸಿ ತಾಣ ಮತ್ತು ಚಾರಣ ಸ್ಥಳಗಳಲ್ಲೊಂದೆನಿಸಿಕೊಂಡಿರುವ ಮುಳ್ಳಯ್ಯನಗಿರಿ ಬೆಟ್ಟಕ್ಕೆ ಪ್ರವಾಸಿಗರಿಗೆ ನಿಷೇಧ ಹೇರಲಾಗಿದೆ. ನವೆಂಬರ್ 4 ಬೆಳಗ್ಗೆ 6ರಿಂದ ನವೆಂಬರ್ 6ರ ಬೆಳಗ್ಗೆ 10ರವರೆಗೆ ಮೂರು ದಿನಗಳ ಕಾಲ ಮುಳ್ಳಯ್ಯನಗಿರಿ ಹಾಗೂ ದತ್ತಪೀಠ ಭಾಗಕ್ಕೆ ಪ್ರವಾಸಿಗರಿಗೆ ನಿಷೇಧ ಹೇರಲಾಗಿದೆ.

ಚಿಕ್ಕಮಗಳೂರು ತಾಲೂಕಿನ ಇನಾಂ ದತ್ತಾತ್ರೇಯ ಬಾಬಾಬುಡನ್ ಗಿರಿಯಲ್ಲಿ ದತ್ತಮಾಲಾ ಅಭಿಯಾನ ಹಿನ್ನೆಲೆಯಲ್ಲಿ , ಸೀತಾಳಯ್ಯನಗಿರಿ, ಮುಳ್ಳಯ್ಯನಗಿರಿ, ಹೊನ್ನಮ್ಮನಹಳ್ಳ, ಮಾಣಿಕ್ಯಾಧಾರ, ಗಾಳಿಕೆರೆಗೆ ಪ್ರವಾಸಿಗರ ಪ್ರವೇಶ ನಿರ್ಬಂಸಲಾಗಿದೆ. ಅಕ್ಟೋಬರ್ 30 ರಿಂದ ನವೆಂಬರ್ 5ರವರೆಗೆ ಮುಳ್ಳಯ್ಯನಗಿರಿ ಭಾಗದಲ್ಲಿ ದತ್ತಮಾಲಾ ಅಭಿಯಾನ ನಡೆಯಲಿದೆ.
ಮುಂಜಾಗೃತ ಕ್ರಮವಾಗಿ ಜಿಲ್ಲಾಡಳಿತ ನವೆಂಬರ್ 4 ಬೆಳಗ್ಗೆಯಿಂದ ನವೆಂಬರ್ 6ರ ಬೆಳಗ್ಗೆ 10ರವರೆಗೆ ಮುಳ್ಳಯ್ಯನಗಿರಿಗೆ ಪ್ರವಾಸಿಗರ ಪ್ರವೇಶ ನಿರ್ಬಂಧಿಸಿದ್ದು, ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿದ್ದಾರೆ. ಇನ್ನು ದತ್ತಪೀಠಕ್ಕೆ ಚಿಕ್ಕಮಗಳೂರು ಜಿಲ್ಲಾಧಿಕಾರಿ ಹಾಗೂ ಎಸ್‌ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಅಕ್ಟೋಬರ್ 30 ರಿಂದ ನವೆಂಬರ್ 05 ರವರೆಗೆ ದತ್ತ ಮಾಲಾ ಅಭಿಯಾನ
ಅಕ್ಟೋಬರ್ 30 ರಿಂದ ನವೆಂಬರ್ 05 ರವರೆಗೆ ಆಚರಿಸಲಾಗುವ ದತ್ತ ಮಾಲಾ ಅಭಿಯಾನವನ್ನು ಶಾಂತಿಯುತವಾಗಿ ನಡೆಸುವಂತೆ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಿ.ಎನ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ದತ್ತ ಪೀಠಕ್ಕೆ ದರ್ಶನಕ್ಕೆ ಹೋಗುವ ಸಮಯ ಹಾಗೂ ಬರುವ ಸಮಯವನ್ನು ತಿಳಿಸಲಾಗುವುದು. ಗಿರಿಯಲ್ಲಿ ಸ್ವಚ್ಛತೆಯನ್ನು ಕಾಪಾಡಬೇಕು. ಈಗಾಗಲೇ ಮೂಲಭೂತ ಸೌಲಭ್ಯಗಳನ್ನು ತಲುಪಿಸುವ ಕುರಿತು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಗಿರಿಯಲ್ಲಿ ವಾಹನಗಳ ದಟ್ಟಣೆ ಉಂಟಾಗುವುದರಿಂದ ಲಾಂಗ್ ಚಾರ್ಸಿ ವಾಹನಗಳನ್ನು ಬಳಸದಂತೆ ತಿಳಿಸಿದ್ದಾರೆ.
ಇನ್ನು ಈ ಬಗ್ಗೆ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ್ ಅಮಟೆ ಕೂಡ ಮಾಹಿತಿ ನೀಡಿದ್ದು, ಅಕ್ಟೋಬರ್ 30 ರಂದು ದತ್ತ ಮಾಲಾಧಾರಣೆ, ನವೆಂಬರ್ 2 ರಂದು ದೀಪೋತ್ಸವವನ್ನು ಯಾವ ದೇವಾಲಯಗಳಲ್ಲಿ ಆಯೋಜಿಸಲಾಗುತ್ತದೆ ಎಂಬ ಮಾಹಿತಿಯನ್ನು, ಹಾಗೂ ಎಷ್ಟು ಜನರು ಭಾಗವಹಿಸುತ್ತಾರೆ, ಬೇರೆ ಜಿಲ್ಲೆಗಳಿಂದ ದತ್ತ ಮಾಲಾಧಾರಿಗಳು ಯಾರ ನೇತೃತ್ವದಲ್ಲಿ ಬರುತ್ತಾರೆ, ಭಕ್ತಾಧಿಗಳು ಉಳಿಯುವ ಸ್ಥಳ, ಹೊರ ರಾಜ್ಯಗಳಿಂದ ಬರುವವರ ಮಾಹಿತಿಯನ್ನು ಮೊದಲೇ ಪೊಲೀಸ್ ಇಲಾಖೆಗೆ ತಿಳಿಸಬೇಕು.
ಅನ್ಯ ಕೋಮಿನ ಭಾವನೆಗಳಿಗೆ ಧಕ್ಕೆಯಾಗದಂತಹ ಹೇಳಿಕೆಗಳನ್ನು ಯಾರು ಕೊಡಬಾರದು, ಪೀಠದೊಳಗೆ ಯಾರು ಕೂಡ ಮೊಬೈಲ್ ತೆಗೆದುಕೊಂಡು ಹೋಗುವಂತಿಲ್ಲ ಹಾಗೂ ಪೋಟೋ ತೆಗೆಯುವಂತಿಲ್ಲ. ಪೊಲೀಸ್ ಇಲಾಖೆಯಿಂದ ಸುರಕ್ಷತಾ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.












Click it and Unblock the Notifications