ಮೈಸೂರಿಗೆ ಹರಿದು ಬಂದ ಪ್ರವಾಸಿಗರು: ಎಲ್ಲೆಂದರಲ್ಲಿ ಜನವೋ ಜನ!
ಮೈಸೂರು, ಡಿಸೆಂಬರ್ 30: ಕಳೆದ ಮೂರು ದಿನಗಳ ಕಾಲ ಸಾಲು ಸಾಲು ರಜೆಯಿದ್ದ ಕಾರಣ ಪ್ರವಾಸಿಗರ ದಂಡೇ ಮೈಸೂರಿನತ್ತ ಹರಿದು ಬಂದಿತ್ತು. ಈಗಾಗಲೇ ಕೆಲವು ಪ್ರವಾಸಿಗರು ವಾರಾಂತ್ಯದ ರಜೆ ಮುಗಿಸಿಕೊಂಡು ತಮ್ಮ ಊರಿನ ಹಾದಿ ಹಿಡಿದಿದ್ದರೆ, ಉಳಿದಂತೆ ಕೆಲವು ಪ್ರವಾಸಿಗರು ಮೈಸೂರು ನಗರದಲ್ಲಿಯೇ ವಾಸ್ತವ್ಯ ಹೂಡಿ ಸುತ್ತಮುತ್ತಲಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಖುಷಿ ಪಡುತ್ತಿದ್ದಾರೆ. ಹೀಗಾಗಿ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ದಂಡು ಕಾಣಿಸುತ್ತಿದೆ.
ವರ್ಷಾಂತ್ಯಕ್ಕೆ ಪ್ರವಾಸಿಗರ ದಂಡು ಹರಿದು ಬರುವುದು ಹೊಸದೇನಲ್ಲ. ಪ್ರತಿವರ್ಷವೂ ಪ್ರವಾಸಿಗರು ಇಲ್ಲಿಗೆ ಆಗಮಿಸುವುದು ನಡೆಯುತ್ತಲೇ ಇರುತ್ತದೆ. ಆದರೆ ಈ ಬಾರಿಯ ಆಹ್ಲಾದಕರ ವಾತಾವರಣ ಪ್ರವಾಸಿಗರಿಗೆ ಖುಷಿಕೊಡುತ್ತಿದೆ. ಮುಂಜಾನೆ ಮಂಜಿನ ಪರದೆಯೊಳಗೆ ತಣ್ಣಗೆ ನಡುಕದ ಚಳಿ ಖುಷಿ ಕೊಡುತ್ತಿದೆ. ಹಾಗೆಯೇ ತಿಳಿಮೋಡದ ನಡುವಿನ ಎಳೆಬಿಸಿಲು ಮೈಯೊಡ್ಡುವಂತೆ ಮಾಡುತ್ತಿದೆ. ಹೀಗಾಗಿ ಈ ಸುಂದರ ಪರಿಸರದಲ್ಲಿ ನಗರದಲ್ಲಿ ಅಡ್ಡಾಡುವುದು ಹೊರಗಿನಿಂದ ಬರುವ ಪ್ರವಾಸಿಗರಿಗೆ ಸಂತಸ ತರುತ್ತಿದೆ.

ಇನ್ನು ಸಂಜೆಯಾಗುತ್ತಿದ್ದಂತೆಯೇ ಅರಮನೆಯಲ್ಲಿನ ಫಲಪುಷ್ಪ ಪ್ರದರ್ಶನ, ದಸರಾ ವಸ್ತುಪ್ರದರ್ಶನಕ್ಕೆ ಭೇಟಿ ನೀಡಿ ಅಲ್ಲಿನ ಚೆಲುವನ್ನು ಸವಿಯುತ್ತಿದ್ದಾರೆ. ಇನ್ನು ವಸ್ತುಪ್ರದರ್ಶನ ಜ.1ಕ್ಕೆ ಅಂತ್ಯಗೊಳ್ಳುತ್ತಿರುವುದರಿಂದ ಕೊನೆಯ ಭೇಟಿ ಎಂಬಂತೆ ನಗರವಾಸಿಗರು ಮತ್ತು ದೂರದ ಪ್ರವಾಸಿಗರು ಭೇಟಿ ನೀಡಿ ತಮಗೆ ಬೇಕಾದನ್ನು ಖರೀದಿಸಿ, ಇಷ್ಟವಾದ ತಿಂಡಿತಿನಿಸಿನ ರುಚಿ ನೋಡಿ, ಬಗೆ ಬಗೆಯ ಆಟಗಳನ್ನು ಆಡಿಕೊಂಡು ಹಿಂತಿರುಗುತ್ತಿದ್ದಾರೆ. ಹೀಗಾಗಿ ಅರಮನೆ, ದಸರಾವಸ್ತುಪ್ರದರ್ಶನ ಸೇರಿದಂತೆ ಈ ವ್ಯಾಪ್ತಿಯಲ್ಲಿ ಜನಜಾತ್ರೆಯೇ ನೆರೆಯುತ್ತಿದೆ.
ಪ್ರವಾಸಿ ತಾಣಗಳಿಗೆ ಪ್ರವಾಸಿಗರ ಲಗ್ಗೆ
ಕ್ರಿಸ್ ಮಸ್ ರಜೆ ಹಿನ್ನೆಲೆಯಲ್ಲಿ ಕಳೆದ ವಾರ ಮೈಸೂರಿಗೆ ಹರಿದು ಬಂದಿದ್ದ ಪ್ರವಾಸಿಗರು ಈ ವಾರವೂ ತಮ್ಮ ಪ್ರವಾಸ ಮುಂದುವರೆಸಿದ್ದು, ಶುಕ್ರವಾರ ಮನಮೋಹನ ಸಿಂಗ್ ನಿಧನ, 4ನೇ ಶನಿವಾರ ಹಾಗೂ ಭಾನುವಾರ ಸಾಲು ಸಾಲು ರಜೆ ಇದ್ದ ಹಿನ್ನೆಲೆಯಲ್ಲಿ ಮೈಸೂರು ಪ್ರವಾಸಿಗರಿಂದ ತುಂಬಿತುಳುಕುತ್ತಿತ್ತು. ರಸ್ತೆಗಳಲ್ಲಿ ವಾಹನ ದಟ್ಟಣೆ ಒಂದೆಯಾದರೆ, ನಗರದಲ್ಲಿರುವ ಎಲ್ಲಾ ಪ್ರವಾಸಿ ತಾಣಗಳು, ಹೋಟೆಲ್‌ಗಳು ಪ್ರವಾಸಿಗರಿಂದ ಗಿಜಿಗುಡುತ್ತಿದ್ದವು. ಈಗಲೂ ಪ್ರವಾಸಿಗರಿಗೆ ಕೊರತೆಯಿಲ್ಲ. ಇವತ್ತು ನಾಳೆ ಇನ್ನಷ್ಟು ಪ್ರವಾಸಿಗರು ಮೈಸೂರು ನಗರಕ್ಕೆ ಬರುವವರಿದ್ದಾರೆ.
ಇಷ್ಟರಲ್ಲಿಯೇ ಹೋಟೆಲ್, ರೆಸಾರ್ಟ್ ಗಳಲ್ಲಿ ಕೊಠಡಿಗಳನ್ನು ಕಾಯ್ದಿರಿಸಿದ್ದು ಎಲ್ಲವೂ ಭರ್ತಿಯಾಗಿದ್ದು, ಬೇಡಿಕೆಯೂ ಹೆಚ್ಚಿದೆ. ರಾಜ್ಯದ ಪ್ರವಾಸಿಗರಿಗಿಂತ ಹೊರರಾಜ್ಯಗಳ, ವಿದೇಶಿ ಪ್ರವಾಸಿಗರು ಹೆಚ್ಚಾಗಿ ಆಗಮಿಸಿರುವುದು ಗೋಚರಿಸುತ್ತಿದೆ. ಸದ್ಯ ಮೈಸೂರು ನಗರ ಸೇರಿದಂತೆ ಹೊರ ವಲಯವನ್ನು ಗಮನದಲ್ಲಿಟ್ಟುಕೊಂಡು ಪ್ರವಾಸಿಗರು ತಮ್ಮ ಪ್ರವಾಸವನ್ನು ಮುಂದುವರೆಸಿದ್ದಾರೆ.

ಹೀಗಾಗಿ ಚಾಮುಂಡಿ ಬೆಟ್ಟ, ಸೋಮನಾಥ ದೇವಾಲಯ, ಟಿಬೇಟಿಯನ್ ಕ್ಯಾಂಪ್, ತಲಕಾಡು, ನಂಜನಗೂಡು ಶ್ರೀಕಂಠೇಶ್ವರ ದೇಗುಲ, ಮೈಸೂರು ಅರಮನೆ, ನಾಗರಹೊಳೆ ಅಭಯಾರಣ್ಯ, ಕೆಆರ್‌ಎಸ್, ಚಾಮರಾಜೇಂದ್ರ ಮೃಗಾಲಯ, ದಸರಾ ವಸ್ತುಪ್ರದರ್ಶನ ಸೇರಿದಂತೆ ವಿವಿಧ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರು ಕಾಣಿಸುತ್ತಿದ್ದಾರೆ.
ಪ್ರವಾಸೋದ್ಯಮ ನಂಬಿದವರಿಗೆ ಖುಷಿಯೋ ಖುಷಿ
ನಗರದಲ್ಲಿ ಪ್ರವಾಸಿಗರು ಹೆಚ್ಚಿರುವ ಕಾರಣದಿಂದ ಪ್ರವಾಸೋದ್ಯಮ ಚಟುವಟಿಕೆ ಗರಿಗೆದರಿದ್ದು, ಆಟೋ, ಟ್ಯಾಕ್ಸಿ ಸೇರಿದಂತೆ ಟ್ರಾವೆಲ್ಸ್ ಉದ್ಯಮ, ರಸ್ತೆಬದಿ ವ್ಯಾಪಾರದಿಂದ ಆರಂಭವಾಗಿ ಹೋಟೆಲ್ ತನಕ ಎಲ್ಲವೂ ಚೇತರಿಸಿಕೊಂಡಿದೆ. ಮಾಲ್, ಚಿತ್ರಮಂದಿರಗಳಲ್ಲಿಯೂ ಜನಜಂಗುಳಿ ಕಾಣಿಸುತ್ತಿದೆ. ಅರಮನೆ ಸುತ್ತಮುತ್ತ ಪ್ರವಾಸಿಗರನ್ನೇ ನಂಬಿರುವ ಟಾಂಗಾವಾಲಗಳು ಇದೀಗ ಖುಷಿಯಾಗಿದ್ದಾರೆ. ಸದ್ಯಕ್ಕೆ ಎಲ್ಲ ರೀತಿಯ ವ್ಯಾಪಾರ ವಹಿವಾಟುಗಳು ಗರಿಗೆದರಿದ್ದು, ದಸರಾ ಬಳಿಕ ಹೆಚ್ಚಿನ ಸಂಖ್ಯೆಯಲ್ಲಿ ವರ್ಷಾಂತ್ಯದ ದಿನಗಳಲ್ಲಿ ಪ್ರವಾಸಿಗರು ಮೈಸೂರಿನಲ್ಲಿ ಕಾಣಿಸಿಕೊಂಡಿರುವುದು ಪ್ರವಾಸೋದ್ಯಮವನ್ನು ನಂಬಿ ಬದುಕು ಕಟ್ಟಿಕೊಂಡವರಿಗೆ ನೆಮ್ಮದಿ ತಂದಿದೆ.

ಇದೆಲ್ಲದರ ನಡುವೆ ಪ್ರವಾಸಿಗರ ಸಂಖ್ಯೆ ಹೆಚ್ಚಳ ಹಿನ್ನೆಲೆ ಮೈಸೂರು- ಬೆಂಗಳೂರು ರಸ್ತೆ, ಮೈಸೂರು-ಕೊಡಗು ರಸ್ತೆ ಸೇರಿದಂತೆ ನಗರದ ಪ್ರಮುಖ ರಸ್ತೆಗಳು ಹಾಗೂ ಅರಮನೆ ಸುತ್ತಲಿನ ರಾಜಮಾರ್ಗ ವಾಹನ ದಟ್ಟಣೆಯಿಂದ ಕೂಡಿರುವುದು ಕಂಡು ಬರುತ್ತಿದೆ. ಹೀಗಾಗಿ ವಾಹನಗಳ ಸುಗಮ ಸಂಚಾರಕ್ಕೆ ತೊಡಕಾಗಿ ನಿಧಾನವಾಗಿ ಚಲಿಸುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಅರಮನೆ ಸುತ್ತಮುತ್ತಲ ರಸ್ತೆಗಳಲ್ಲಿ ಚಲಿಸಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಅದು ಏನೇ ಇರಲಿ ವರ್ಷಾಂತ್ಯಕ್ಕೆ ಮೈಸೂರು ಪ್ರವಾಸಿಗರಿಂದ ತುಂಬಿ ತುಳುಕುತ್ತಿರುವುದಂತು ಸತ್ಯ.












Click it and Unblock the Notifications