ಕೊಡಗು: ಗುಡಿ ಗೋಪುರವಿಲ್ಲದ ಈ ವಿಶಿಷ್ಟ ದೇಗುಲದಲ್ಲಿ ನಡೆಯುತ್ತೆ ಮಣ್ಣಿನ ನಾಯಿಗಳ ಹರಕೆ
ಮಡಿಕೇರಿ, ನವೆಂಬರ್ 30: ವಿಶಿಷ್ಟ ಮತ್ತು ವಿಭಿನ್ನವಾದ ಗುಡಿಗೋಪುರವಿಲ್ಲದ ದೇಗುಲವೊಂದು ಕೊಡಗಿನ ನಾಪೋಕ್ಲುನ ಬೇತು ಬಳಿಯಿದೆ. ಇದನ್ನು ಮಕ್ಕಿಶಾಸ್ತಾವು ದೇವಾಲಯ ಎಂದೇ ಕರೆಯಲಾಗುತ್ತದೆ. ದೂರದ ಬೆಟ್ಟಗುಡ್ಡ, ಸುತ್ತಲಿನ ಕಾಫಿ ತೋಟಗಳ ನಿಸರ್ಗ ಸುಂದರ ಸ್ಥಳದಲ್ಲಿ ನಿರ್ಮಿತವಾಗಿರುವ ಈ ದೇಗುಲ ತನ್ನದೇ ಆದ ಮಹತ್ವವನ್ನು ಹೊಂದಿದೆ.
ಸಾಮಾನ್ಯವಾಗಿ ದೇವಾಲಯ ಎಂದಾಕ್ಷಣ ಗುಡಿಗೋಪುರ ಕಣ್ಮುಂದೆ ಹಾದು ಹೋಗುತ್ತದೆ. ಆದರೆ ಮಕ್ಕಿ ಶಾಸ್ತಾವು ದೇವಾಲಯಕ್ಕೆ ಆಗಮಿಸಿದವರಿಗೆ ಅಚ್ಚರಿಯಾಗುತ್ತದೆ ಕಾರಣ ಈ ದೇಗುಲವು ಯಾವುದೇ ಗುಡಿಗೋಪುರವನ್ನು ಹೊಂದದೆ ದಿಬ್ಬದ ಮೇಲೆ ನಿರ್ಮಾಣವಾಗಿದೆ. ರಸ್ತೆಯಿಂದಲೇ ಸಿಗುವ ಮೆಟ್ಟಿಲುಗಳನ್ನೇರಿ ಮೇಲ್ಭಾಗಕ್ಕೆ ಬಂದರೆ ಸಮತಟ್ಟಾದ ಜಾಗದಲ್ಲಿ ಸುಮಾರು ಐದು ಅಡಿ ಎತ್ತರದ ವೃತ್ತಾಕಾರದ ಕಟ್ಟೆಯೊಂದು ಕಾಣಸಿಗುತ್ತದೆ. ಈ ಕಟ್ಟೆಯ ನಡುವೆ ಆಳೆತ್ತರದ ತ್ರಿಶೂಲಗಳನ್ನೇ ಧರಿಸಿದ ಶಾಸ್ತಾವು ದೇವರ ಮೂರ್ತಿಯಿದೆ.

ಇನ್ನು ಈ ಕಟ್ಟೆ ಬಳಿಯೇ ದೇವರಿಗೆ ಆಶ್ರಯವಾಗಿ ಒಂದು ಹಲಸಿನ ಮರವಿದ್ದು, ಸುತ್ತಲೂ ಹರಕೆಯಾಗಿ ಅರ್ಪಿಸಿದ ಮಣ್ಣಿನ ನಾಯಿಗಳಿವೆ. ಜತೆಗೆ ಹಲಸಿನ ಮರದಲ್ಲೊಂದು ಕಬ್ಬಿಣದ ಸರಪಳಿ ಸಿಕ್ಕಿಹಾಕಿಕೊಂಡಿರುವುದು ಕಂಡು ಬರುತ್ತದೆ. ಇಲ್ಲಿನ ಪುಟ್ಟ ಕೊಳ ವಿಶೇಷತೆ ಹೊಂದಿದೆ. ಸದಾ ನೀರವ ಮೌನವು ಈ ತಾಣದಲ್ಲಿ ಆವರಿಸುತ್ತದೆ. ಪ್ರತಿ ದಿನವೂ ಇಲ್ಲಿ ಪೂಜಾ ಕೈಂಕರ್ಯಗಳು ನಡೆಯುತ್ತವೆ ಆದರೂ ಮೇ ಮತ್ತು ಡಿಸೆಂಬರ್ ನಲ್ಲಿ ಊರಿನವರು ಸೇರಿ ಹಬ್ಬವನ್ನು ಆಚರಿಸುತ್ತಾರೆ.
ಮಣ್ಣಿನ ನಾಯಿಗಳ ಹರಕೆ
ಡಿಸೆಂಬರ್‌ನಲ್ಲಿ ನಡೆಯುವ ಹಬ್ಬವನ್ನು ಇಲ್ಲಿನವರು ಚಿಕ್ಕ ಹಬ್ಬ ಎಂದು ಕರೆಯುತ್ತಾರೆ. ಎರಡು ದಿನಗಳ ಕಾಲದ ಹಬ್ಬದ ಆಚರಣೆಯಲ್ಲಿ ಎತ್ತುಹೇರಾಟ, ದೀಪಾರಾಧನೆ, ಅಜ್ಜಪ್ಪ ಹಾಗೂ ವಿಷ್ಣುಮೂರ್ತಿ ಕೋಲಗಳು, ಮೇಲೇರಿ ಮುಂತಾದ ಸಾಂಪ್ರದಾಯಿಕ ಪೂಜೆಗಳು ನಡೆಯುತ್ತವೆ. ದೇಗುಲದಲ್ಲಿ ಮಣ್ಣಿನ ನಾಯಿಗಳನ್ನು ಹರಕೆಯಾಗಿ ಒಪ್ಪಿಸಿರುವುದು ಕಂಡು ಬರುತ್ತದೆ.
ಕೊಡಗಿನವರು ಪ್ರಕೃತಿಯೊಂದಿಗೆ ನಿಕಟ ಸಂಬಂಧ ಹೊಂದಿದ್ದು, ಕಾಡಿನ ನಡುವೆಯಿದ್ದು ಕೃಷಿ ಮಾಡುತ್ತಾ ಬದುಕು ಕಟ್ಟಿಕೊಂಡವರಾಗಿದ್ದಾರೆ. ಪ್ರಕೃತಿಯ ಶಕ್ತಿಯನ್ನು ಅರಿತು ಪ್ರಾಕೃತಿಕ ದೇವರನ್ನು ಪೂಜಿಸುತ್ತಾ ಬಂದಿರುವುದಕ್ಕೆ ಇಲ್ಲಿರುವ ದೇಗುಲಗಳು ಸಾಕ್ಷಿಯಾಗಿವೆ. ಇದಕ್ಕೆ ಶಾಸ್ತಾವು ದೇಗುಲ ನಿದರ್ಶನವಾಗಿದೆ.
ನಾಯಿಗಳ ಆಯೋಗ್ಯಕ್ಕೆ ವಿಶೇಷ ಹರಕೆ..?
ಕಾಡಿನ ನಡುವೆ ಒಂಟಿ ಮನೆಗಳನ್ನು ನಿರ್ಮಿಸಿ ಕೃಷಿ ಮಾಡಿಕೊಂಡು ಬದುಕುತ್ತಿದ್ದ ವೇಳೆಯಲ್ಲಿ ತಮ್ಮ ರಕ್ಷಣೆಗಾಗಿ ನಾಯಿಗಳನ್ನು ಸಾಕುತ್ತಿದ್ದರು. ಈ ನಾಯಿಗಳು ಆರೋಗ್ಯವಾಗಿ ಬದುಕಲು ದೇವರಲ್ಲಿ ಹರಕೆ ಮಾಡಿಕೊಳ್ಳುತ್ತಿದ್ದರು. ಅದರಂತೆ ಪ್ರತಿ ವರ್ಷವೂ ಹಬ್ಬದಂದು ಮಣ್ಣಿನಿಂದ ನಾಯಿಗಳ ಮೂರ್ತಿ ಮಾಡಿ ತಂದು ಹರಕೆ ಒಪ್ಪಿಸುತ್ತಿದ್ದರು. ಇದು ಈಗಲೂ ನಡೆದುಕೊಂಡು ಬಂದಿದೆ. ಇಲ್ಲಿ ಹರಸಿಕೊಂಡರೆ ಇಷ್ಟಾರ್ಥಗಳು ನೆರವೇರುತ್ತವೆ ಎಂಬುವುದಕ್ಕೆ ಇಲ್ಲಿ ರಾಶಿ ಬಿದ್ದಿರುವ ಮಣ್ಣಿನ ನಾಯಿಗಳೇ ಸಾಕ್ಷಿಯಾಗಿವೆ.

ಇಲ್ಲಿ ಹಬ್ಬಗಳು ಹೇಗೆ ನಡೆಯುತ್ತವೆ ಎಂಬುದನ್ನು ನೋಡುತ್ತಾ ಹೋದರೆ, ಎತ್ತುಹೇರಾಟದ ಮೂಲಕ ಮೊದಲ ದಿನದ ಹಬ್ಬವು ಆರಂಭವಾಗುತ್ತದೆ. ಅಂದು ನಡು ಮಧ್ಯಾಹ್ನ ಗ್ರಾಮಸ್ಥರು ಎತ್ತುಗಳನ್ನು ಸಿಂಗರಿಸಿ ಅವುಗಳ ಬೆನ್ನಮೇಲೆ ಶ್ವೇತವಸ್ತ್ರದಲ್ಲಿ ಹರಕೆಯ ಅಕ್ಕಿಯನ್ನು ಕಟ್ಟಿ ದೇವಾಲಯಕ್ಕೆ ಕರೆತರುತ್ತಾರೆ. ಬಳಿಕ ಚಂಡೆ ವಾದ್ಯದೊಂದಿಗೆ ಅವುಗಳನ್ನು ದೇವಾಲಯದ ಕಟ್ಟೆಯ ಸುತ್ತ ಓಡಿಸಲಾಗುತ್ತದೆ. ಮಾರನೆಯ ದಿನ ಬೆಳಿಗ್ಗೆಯಿಂದಲೇ ದೇವಾಲಯದ ನಿರ್ದಿಷ್ಟ ಸ್ಥಳದಲ್ಲಿ ಅಜ್ಜಪ್ಪ ಹಾಗೂ ವಿಷ್ಣುಮೂರ್ತಿ ಕೋಲಗಳು ನಡೆಯುತ್ತವೆ.
ರೋಮಾಂಚನಕಾರಿ ಭೂತದ ಕೋಲ
ತಿರುವಳನಿಗೆ ತೆಂಗಿನಗರಿಗಳಿಂದ ಮಾಡಿದ ಅಲಂಕೃತ ಪೋಷಾಕನ್ನು ಧರಿಸಲಾಗುತ್ತದೆ. ಬಳಿಕ ಚಂಡೆ ವಾದ್ಯ ಮೊಳಗುತ್ತಿದ್ದಂತೆಯೇ ತಿರುವಳನ ಮೇಲೆ ದೇವರು ಅವಾಹನೆಗೊಂಡು ನರ್ತಿಸುತ್ತಾ ಸಾಗುತ್ತವೆ. ಈ ಸಂದರ್ಭದ ದೃಶ್ಯ ನೆರೆದವರಲ್ಲಿ ರೋಮಾಂಚನವನ್ನುಂಟು ಮಾಡುತ್ತದೆ. ಮಧ್ಯಾಹ್ನ ಕೆಂಡದ ರಾಶಿಯ ಮೇಲೆ ಕೋಲಗಳು ಬೀಳುವ ಮೇಲೇರಿ ಕಾರ್ಯಕ್ರಮಗಳು ನಡೆಯುತ್ತವೆ.
ಆ ನಂತರ ಬೆಳ್ಳಿಯ ಮುಖವಾಡ ಧರಿಸಿ ದೇವಾಲಯದ ಪ್ರಾಂಗಣಕ್ಕೆ ಬಂದು ಭಕ್ತರ ಇಷ್ಟಾರ್ಥಗಳು ನೆರವೇರಲಿ ಎಂದು ಹರಸುತ್ತದೆ. ಈ ಸಂದರ್ಭ ಭಕ್ತರು ತಮ್ಮ ಕಷ್ಟ ಸುಖಗಳನ್ನು ಹೇಳಿಕೊಂಡು ದೇವರಿಂದ ಪರಿಹಾರ ಪಡೆಯುತ್ತಾರೆ. ರಾತ್ರಿ ಸುಮಾರು ಎರಡು ಗಂಟೆಗಳ ಕಾಲ ನಡೆಯುವ ದೀಪಾರಾಧನೆ ಮನಸ್ಸೆಳೆಯುತ್ತದೆ. ಸಾಮಾನ್ಯವಾಗಿ ವರ್ಷದಲ್ಲಿ ಹಬ್ಬದ ಸಂದರ್ಭ ಮಾತ್ರ ಜನ ಸೇರುತ್ತಾರೆ. ಉಳಿದಂತೆ ದಿನನಿತ್ಯ ಪೂಜಾ ಕಾರ್ಯಕ್ರಮಗಳು ನಡೆಯುತ್ತವೆಯಾದರೂ ಸದಾ ನೀರವ ಮೌನ ಇಲ್ಲಿ ನೆಲೆಸಿರುತ್ತದೆ.
ಮರಕ್ಕೆ ಸರಪಳಿ ಸಿಲುಕಿದ್ದೇಗೆ..?
ಇನ್ನು ದೇಗುಲದ ಬಳಿಯ ಹಲಸಿನ ಮರದಲ್ಲಿ ಸಿಕ್ಕಿಕೊಂಡಿರುವ ಕಬ್ಬಿಣ ಸರಪಳಿ ಇಲ್ಲಿಗೆ ತೆರಳಿದವರ ಗಮನಸೆಳೆಯುತ್ತದೆ. ಸರಪಳಿ ಮರದಲ್ಲಿ ಹೇಗೆ ಸಿಕ್ಕಿ ಹಾಕಿಕೊಂಡಿತು ಎಂಬ ಪ್ರಶ್ನೆಯೇನಾದರೂ ನಮ್ಮಲ್ಲಿ ಹುಟ್ಟಿಕೊಂಡರೆ ಆ ಪ್ರಶ್ನೆಗೆ ಉತ್ತರವಾಗಿ ಇಲ್ಲಿನವರು ಕಥೆಯೊಂದನ್ನು ಹೇಳುತ್ತಾರೆ.

ಅದು ಏನೆಂದರೆ ಹಿಂದೆ ಹಬ್ಬದ ವೇಳೆ ತಿರುವಳ ಬರುತ್ತಿದ್ದ ವ್ಯಕ್ತಿಯೊಬ್ಬನನ್ನು ಯಾವುದೋ ಕಾರಣಕ್ಕೆ ಬಂಧಿಸಲಾಗಿತ್ತಂತೆ. ಆದರೆ ಹಬ್ಬದ ಸಂದರ್ಭ ಮಂತ್ರಘೋಷ ಮೇಳೈಸುತ್ತಿದ್ದಂತೆಯೇ ತಿರುವಳನ ಮೇಲೆ ದೇವರು ಅವಾಹನೆಯಾಗಿ ಬಂಧನದಿಂದ ತಪ್ಪಿಸಿಕೊಂಡು ಬಂದು ದೇವರ ಸನ್ನಿಧಿಯಲ್ಲಿ ಕೈ ಕೊಡವಿದಾಗ ಕೈಗೆ ತೊಡಿಸಿದ್ದ ಸರಪಳಿ ತುಂಡಾಗಿ ಹಲಸಿನ ಮರದಲ್ಲಿ ಸಿಲುಕಿತಂತೆ.
ಮನಸ್ಸಿಗೆ ನೆಮ್ಮದಿ ನೀಡುವ ತಾಣ
ಅದು ಏನೇ ಇರಲಿ ಹಬ್ಬದ ದಿನಗಳಲ್ಲಿ ಜನಜಂಗುಳಿ ಇಲ್ಲಿ ನೆರೆಯುತ್ತದೆಯಾದರೂ ಉಳಿದ ದಿನಗಳಲ್ಲಿ ಪ್ರಶಾಂತವಾಗಿರುತ್ತದೆ. ಹೀಗಾಗಿ ಗೌಜು, ಗದ್ದಲ, ಕೆಲಸದ ಒತ್ತಡ ಹೀಗೆ ಸದಾ ಒತ್ತಡದಲ್ಲಿಯೇ ಜೀವನ ಸಾಗಿಸುವವರು ಮಕ್ಕಿ ಶಾಸ್ತಾವು ದೇವಾಲಯಕ್ಕೆ ಭೇಟಿ ನೀಡಿ ಒಂದಷ್ಟು ಹೊತ್ತು ದೇವರ ಮುಂದೆ ಕುಳಿತು ಪ್ರಾರ್ಥನೆ ಸಲ್ಲಿಸಿ ಹೋದರೆ ಮನಸ್ಸು ಹಗುರವಾಗುವುದರಲ್ಲಿ ಎರಡು ಮಾತಿಲ್ಲ.
ಮಡಿಕೇರಿ ಅಥವಾ ವೀರಾಜಪೇಟೆಗೆ ಬಂದರೆ ಅಲ್ಲಿಂದ ನಾಪೋಕ್ಲುಗೆ ತೆರಳಿದರೆ ಅಲ್ಲಿನ ಬೇತು ರಸ್ತೆಯಲ್ಲಿ ಸುಮಾರು ಎರಡು ಕಿ.ಮೀ ಸಾಗಿದರೆ ಮಕ್ಕಿ ಶಾಸ್ತಾವು ದೇಗುಲವನ್ನು ತಲುಪಬಹುದಾಗಿದೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications