ಕಾರ್ತಿಕ ಮಾಸದಲ್ಲಿ ಭೇಟಿ ನೀಡಬಹುದಾದ ಕರಾವಳಿಯ ಪ್ರಮುಖ ಶಿವನ ದೇವಾಲಯಗಳು
ಕಾರ್ತಿಕ ಮಾಸವು ಶಿವನಿಗೆ ಪ್ರಿಯವಾದ ಮಾಸವಾಗಿದೆ. ಕಾರ್ತಿಕ ಮಾಸದಲ್ಲಿ ಶಿವನನ್ನು ಆರಾಧಿಸುವುದು ಅಂತ್ಯಂತ ಮಂಗಳಕರ. ಹೀಗಾಗಿ ಈ ಮಾಸದಲ್ಲಿ ಜಪ-ತಪ ಪೂಜೆಗಳನ್ನು ಮಾಡುವುದರಿಂದ ಪೂರ್ವ ಜನ್ಮದ ಪಾಪಗಳು ನಿವಾರಣೆಯಾಗಿ ಕೋಟಿ ಪುಣ್ಯ ಪ್ರಾಪ್ತಿಯಾಗುತ್ತದೆ ಎನ್ನುವುದು ಹಲವರ ನಂಬಿಕೆ.
2023ರಲ್ಲಿ ಕಾರ್ತಿಕ ಮಾಸವು ನವೆಂಬರ್ 14 ರಿಂದ ಪ್ರಾರಂಭವಾಗಿ ಡಿಸೆಂಬರ್ 12ರಂದು ಕೊನೆಗೊಳ್ಳುತ್ತದೆ. ಹೀಗಾಗಿ ಈ ಅವಧಿಯಲ್ಲಿಯೇ ಹಲವು ಶಿವನ ದೇವಾಲಯಗಳಲ್ಲಿ ದೀಪೋತ್ಸವ ನಡೆಸಲಾಗುತ್ತದೆ. ದೀಪಾರಾಧನೆ, ದೀಪಾರ್ಪಣೆ, ದೀಪೋತ್ಸವ ಹಾಗೂ ಸಾಲಗ್ರಾಮ ಪೂಜೆ ಸೇರಿದಂತೆ ಇತರ ವಿಶೇಷ ಪೂಜೆಗಳಿಗೆ ಕಾರ್ತಿಕ ಮಾಸ ಸೂಕ್ತವಾದ ಮಾಸ.
ಕಾರ್ತಿಕ ಮಾಸದಲ್ಲಿ ಮಾಡುವ ತೀರ್ಥ ಸ್ನಾನ ಮಾಡಿ ಪೂಜೆ ಸಲ್ಲಿಸಿ ದೀಪ ದಾನ ಮಾಡುವುದಿಂದ ಶಿವನಿಂದ ವಿಶೇಷ ಫಲ ಸಿಗುತ್ತದೆ ಎನ್ನುವ ಬಲವಾದ ನಂಬಿಕೆ ಇದೆ. ಇನ್ನು ಈ ವೇಳೆ ಆಚರಿಸುವ ವೃತಗಳು ಶಿವನ ದೇವಾಲಯಕ್ಕೆ ತೆರಳದೇ ಪೂರ್ಣಗೊಳ್ಳುವುದಿಲ್ಲ. ಹೀಗಾಗಿ ಕಾರ್ತಿಕ ಮಾಸದಲ್ಲಿ ಕರಾವಳಿಯಲ್ಲಿ ತೆರಳ ಬಹುದಾದ ಶಿವನ ದೇವಾಲಯಗಳ ಬಗ್ಗೆ ಮಾಹಿತಿ ಇಲ್ಲಿದೆ.

ಧರ್ಮಸ್ಥಳ
ಧರ್ಮಸ್ಥಳ ದೇಗುಲವು ದಕ್ಷಿಣ ಕನ್ನಡ ಜಿಲ್ಲೆಯಲ್ಲಿದೆ. ಕರ್ನಾಟಕದಲ್ಲಿ ಅತಿ ಹೆಚ್ಚು ಶಿವ ಭಕ್ತರು ಭೇಟಿ ನೀಡುವ ದೇಗುಲ ಎಂದರೆ ಅದು ಧರ್ಮಸ್ಥಳ. ಈ ಕ್ಷೇತ್ರಕ್ಕೆ ಸುಮಾರು ಏಳರಿಂದ ಎಂಟುನೂರು ವರುಷಗಳ ಇತಿಹಾಸವಿದೆ. ಧರ್ಮಸ್ಥಳದ ಹಿಂದಿನ ಹೆಸರು ಕುಡುಮ ಎಂದಿತ್ತು. ಈ ದೇವಾಲಯವು ದಾನ ಧರ್ಮಕ್ಕೆ ಪ್ರಸಿದ್ಧವಾಗಿ ಮತ್ತು ಭಕ್ತರಿಗೆ ನೈತಿಕ, ಸಾಂಸ್ಕೃತಿಕ, ಧಾರ್ಮಿಕ ಕೇಂದ್ರವಾಗಿದೆ.
ನೇತ್ರಾವತಿ ನದಿಯಲ್ಲಿ ತೀರ್ಥ ಸ್ನಾನ ಮಾಡಿ ಧರ್ಮಸ್ಥಳ ಮಂಜುನಾಥನ ದರ್ಶನ ಪಡೆದರೆ ಜೀವನದಲ್ಲಿನ ತೊಂದರೆಗಳು ನಿವಾರಣೆಯಾಗಿ ಮುಂದಿನ ಜೀವನದಲ್ಲಿ ಸಕಾರಾತ್ಮಕ ಅಂಶಗಳು ಇರುತ್ತದೆ ಎನ್ನುವುದು ಭಕ್ತರ ನಂಬಿಕೆ. ಹೀಗಾಗಿ ಕಾರ್ತಿಕ ಮಾಸದಲ್ಲಿ ಧರ್ಮಸ್ಥಳದ ಮಂಜುನಾಥೇಶ್ವರನ ದರ್ಶನ ಪಡೆದರೆ ಧರ್ಮ ಹಾಗೂ ಸತ್ಯದ ದಾರಿಯಲ್ಲಿ ನಡೆಯಲು ಅನುಗ್ರಹಿಸುತ್ತಾನೆ. ಜೀವನದಲ್ಲಿ ಸತತ ಸೋಲುಕಂಡು ಮಾನಸಿಕ ನೆಮ್ಮದಿ ಬೇಕು ಎನ್ನುವವರು ಕಾರ್ತಿಕ ಮಾಸದಲ್ಲಿ ಧರ್ಮಸ್ಥಳದ ಮಂಜುನಾಥೇಶ್ವರನ ದರ್ಶನ ಪಡೆಯಿರಿ.
ಬೆಂಗಳೂರಿನಿಂದ ಸುಮಾರು 296 ಕಿಲೋ ಮೀಟರ್ ದೂರದಲ್ಲಿರುವ ಧರ್ಮಸ್ಥಳವನ್ನು ಸರಿಸುಮಾರು ಏಳು ಗಂಟೆ ಅವಧಿಯಲ್ಲಿ ತಲುಪಬಹುದು. ಧರ್ಮಸ್ಥಳ ಉಡುಪಿಯಿಂದ 105 ಕಿಲೋ ಮೀಟರ್ ದೂರವಿದ್ದು, ಎರಡರಿಂದ ಮೂರು ಗಂಟೆ ಅವಧಿಯಲ್ಲಿ ತಲುಪಬಹುದಾಗಿದೆ.

ಕುದ್ರೋಳಿ
ಕುದ್ರೋಳಿ ಗೋಕರ್ಣನಾಥೇಶ್ವರ ದೇವಾಲಯವು ಕರಾವಳಿಯ ಪ್ರಮುಖ ಶಿವನ ದೇವಾಲಯಗಳಲ್ಲಿ ಒಂದಾಗಿದೆ. ಮುಖ್ಯ ಗರ್ಭಗುಡಿಯು ಶಿವಲಿಂಗವನ್ನು ಹೊಂದಿರುವ ಈ ದೇವಾಲಯದ ಆವರಣದೊಳಗೆ ಹಿಂದೂ ಪಂಥಾಹ್ವಾನದ ಇತರ ದೇವರು ಮತ್ತು ದೇವತೆಗಳಿಗೆ ಚಿಕ್ಕ - ಪುಟ್ಟ ದೇವಾಲಯಗಳಿವೆ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಂತೆಯೇ ವಿಜೃಂಭಣೆಯಂತೆಯೇ ಕುದ್ರೋಳಿ ಕ್ಷೇತ್ರದಲ್ಲಿಯೂ ದಸರಾ ನಡೆಯುತ್ತದೆ. ಕಾರ್ತಿಕ ಮಾಸದಲ್ಲಿಯೂ ವಿಶೇಷ ಪೂಜೆ ಸಹ ನಡೆಯುತ್ತದೆ.
ನಾರಾಯಣ ಗುರುಗಳ ಸಮ್ಮುಖದಲ್ಲಿ ಅವರ ಕಲ್ಪನೆಯಂತೆಯೇ ಈ ದೇವಾಲಯ ಸ್ಥಾಪನೆಗೊಂಡಿದೆ. ಈ ದೇವಾಲಯದ ಮುಂಭಾಗದಲ್ಲಿ ಭವ್ಯವಾದ ರಾಜಗೋಪುರವಿದೆ. ಎತ್ತರವಾದ ಆನೆಯ ಪ್ರತಿಮೆಗಳು ಭಕ್ತರನ್ನು ಸ್ವಾಗತಿಸುತ್ತವೆ. ದೇವಾಲಯದ ಗೋಪುರಗಳಲ್ಲಿ ಈಶ್ವರ, ಶಿವಗಣಗಳು ಸೇರಿದಂತೆ ದೇವಾನು ದೇವತೆಗಳ ಶಿಲ್ಪಗಳಿವೆ. ಶಿರದ ಮೇಲೆ ಗಂಗೆಯ ಧರಿಸಿದ ಶಿವನ ವಿಗ್ರಹವು ಸಹ ಇಲ್ಲಿ ಕಾಣಬಹುದು. ಕಾರ್ತಿಕ ಮಾಸದಲ್ಲಿ ಈ ಕ್ಷೇತ್ರಕ್ಕೆ ಭೇಟಿ ನೀಡಿ ಗೋಕರ್ಣನಾಥೇಶ್ವರನ ದರ್ಶನ ಪಡೆಯುವುದರಿಂದ ಸುಖ ಸಮೃದ್ಧಿ ನೆಲೆಸುತ್ತದೆ ಎನ್ನುವ ನಂಬಿಕೆಯಿದೆ.
ಬೆಂಗಳೂರಿನಿಂದ ಸುಮಾರು 350 ಕಿಲೋ ಮೀಟರ್ ದೂರದಲ್ಲಿರುವ ಕುದ್ರೋಳಿಯನ್ನು ಸರಿಸುಮಾರು ಎಂಟರಿಂದ ಒಂಬತ್ತು ಗಂಟೆ ಅವಧಿಯಲ್ಲಿ ತಲುಪಬಹುದು. ಕುದ್ರೋಳಿ ಉಡುಪಿಯಿಂದ 56 ಕಿಲೋ ಮೀಟರ್ ದೂರವಿದ್ದು, ಒಂದು ಗಂಟೆ ಅವಧಿಯಲ್ಲಿ ತಲುಪಬಹುದಾಗಿದೆ.

ಕದ್ರಿ
ಕದ್ರಿ ಮಂಜುನಾಥ ದೇವಾಲಯವು ಕರಾವಳಿಯಲ್ಲಿರುವ ಐತಿಹಾಸಿಕ ಶಿವನ ದೇವಾಲಯವಾಗಿದೆ. ಹತ್ತರಿಂದ ಹನ್ನೊಂದನೇ ಶತಮಾನದಲ್ಲಿ ಈ ದೇವಾಲಯ ನಿರ್ಮಿಸಲಾಗಿದೆ ಎಂಬ ಪ್ರತೀತಿಯಿದೆ. ಕದ್ರಿ ದೇವಸ್ಥಾನದ ಆಸುಪಾಸಿನಲ್ಲಿ ಜೋಗಿ ಮಠ, ಹನುಮಂತನ ಮೂರ್ತಿ, ದುರ್ಗಾದೇವಿ ಮಂದಿರ, ರಾಮ-ಲಕ್ಷ್ಮಣನ ತೀರ್ಥ ಹೀಗೆ ಪುರಾಣದ ಕಥೆಗಳನ್ನು ಹೇಳುವ ಹಲವು ಸ್ಥಳಗಳು ಕಂಡು ಬರುತ್ತವೆ. ದೇವಸ್ಥಾನದ ಹಿಂಭಾಗದಲ್ಲಿ ಮೆಟ್ಟಿಲುಗಳನ್ನು ಏರಿ ಹೋದರೆ ಅಕ್ಷಯ ಪುಷ್ಕರಣಿಗಳಿವೆ. ಈ ದೇವಾಲಯದಲ್ಲಿ ಒಂಬತ್ತು ಕೆರೆಗಳಿವೆ. ಇಲ್ಲಿ ಸ್ನಾನ ಮಾಡಿದರೆ ಚರ್ಮ ರೋಗಗಳು ನಿವಾರಣೆಯಾಗುತ್ತದೆ ಎನ್ನುವ ನಂಬಿಕೆ ಇದೆ. ಕಾರ್ತಿಕ ಮಾಸದಲ್ಲಿ ಈ ದೇವಾಲಯಕ್ಕೆ ಭೇಟಿ ನೀಡಿ.
ಬೆಂಗಳೂರಿನಿಂದ ಸುಮಾರು 346 ಕಿಲೋ ಮೀಟರ್ ದೂರದಲ್ಲಿರುವ ಕದ್ರಿಯನ್ನು ಸರಿಸುಮಾರು ಎಂಟರಿಂದ ಒಂಬತ್ತು ಗಂಟೆ ಅವಧಿಯಲ್ಲಿ ತಲುಪಬಹುದು. ಕದ್ರಿ ಉಡುಪಿಯಿಂದ 57 ಕಿಲೋ ಮೀಟರ್ ದೂರವಿದ್ದು, ಒಂದು ಗಂಟೆ ಅವಧಿಯಲ್ಲಿ ತಲುಪಬಹುದಾಗಿದೆ.
ಕೋಟೇಶ್ವರ
ಸಪ್ತಕ್ಷೇತ್ರಗಳಲ್ಲಿ ವಿಶಿಷ್ಟ ಸ್ಥಾನ ಹೊಂದಿದ ಕೋಟೇಶ್ವರ ಪ್ರಸಿದ್ಧ ಶಿವನ ಪುಣ್ಯಕ್ಷೇತ್ರವಾಗಿದೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಲ್ಲೇ ಪ್ರಸಿದ್ಧ ಪುಣ್ಯ ಕ್ಷೇತ್ರವಾಗಿರುವ ಈ ದೇವಾಲಯವು ಧ್ವಜಪುರವೆಂದೂ ಈಗ ಕೋಟೇಶ್ವರವೆಂದು ಪ್ರಸಿದ್ಧವಾಗಿದೆ. ಕೋಟೇಶ್ವರದ ಕೋಟಿಲಿಂಗೇಶ್ವರ ದೇವಸ್ಥಾನ ಪ್ರಾಚೀನ ದೇವಾಲಯ.ಇಲ್ಲಿನ ಕೋಟಿ ತೀರ್ಥ ಕರಾವಳಿ ಕರ್ನಾಟಕದ ಅತ್ಯಂತ ದೊಡ್ಡ ಪುಷ್ಕರಣಿ ಇದೆ.ಇಲ್ಲಿ ನಡೆಯುವ ಕೊಡಿ ಹಬ್ಬ ಕರಾವಳಿಯ ವಿಶೇಷ ಹಾಗೂ ವಿಶಿಷ್ಟ ಹಬ್ಬ. ಕಾರ್ತಿಕ ಮಾಸದಲ್ಲಿಯೇ ಈ ಹಬ್ಬ ನಡೆಲಿದ್ದು, ಭಕ್ತರು ಈ ಸಮಯದಲ್ಲಿ ಭೇಟಿ ನೀಡಿದರೆ ಕೋಟಿಲಿಂಗೇಶ್ವರನ ದರ್ಶನದ ಜೊತೆಗೆ ಜಾತ್ರೆಯನ್ನು ಸಹ ಕಣ್ತುಂಬಿಕೊಳ್ಳಬಹುದಾಗಿದೆ.
ಬೆಂಗಳೂರಿನಿಂದ ಸುಮಾರು 403 ಕಿಲೋ ಮೀಟರ್ ದೂರದಲ್ಲಿರುವ ಕೋಟೇಶ್ವರವನ್ನು ಸರಿಸುಮಾರು ಎಂಟರಿಂದ ಒಂಬತ್ತು ಗಂಟೆ ಅವಧಿಯಲ್ಲಿ ತಲುಪಬಹುದು. ಕೋಟೇಶ್ವರ ಉಡುಪಿಯಿಂದ 33 ಕಿಲೋ ಮೀಟರ್ ದೂರವಿದ್ದು, ಒಂದು ಗಂಟೆಯ ಅವಧಿಯಲ್ಲಿ ತಲುಪಬಹುದಾಗಿದೆ.

ಮುರುಡೇಶ್ವರ
ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಮುರುಡೇಶ್ವರ ದೇವಸ್ಥಾನವು ಹಿಂದೂಗಳ ಪ್ರಮುಖ ಶಿವನ ದೇವಾಲಯಗಳಲ್ಲಿ ಒಂದು ಈ ದೇವಾಲಯವು ಮೂರು ಕಡೆಗಳಿಂದಲೂ ಅರೆಬಿಯನ್ ಸಮುದ್ರದಿಂದ ಸುತ್ತುವರೆದಿದೆ. ಮುರುಡೇಶ್ವರ ದೇವಾಲಯ ಮತ್ತು ರಾಜಗೋಪುರ ಹಾಗೂ 123 ಅಡಿ ಉದ್ದದ ಶಿವನ ಪ್ರತಿಮೆ ಹಾಗೂ ಶಿವಲಿಂಗ ಇಲ್ಲಿನ ಪ್ರಮುಖ ಆಕರ್ಷಣೆಯಾಗಿದೆ. ಪೌರಾಣಿಕ ನಂಬಿಕೆಗಳ ಪ್ರಕಾರ, ಇಲ್ಲಿ ಗಣೇಶನು ಬ್ರಾಹ್ಮಣ ಹುಡುಗನ ಅವತಾರದಲ್ಲಿದ್ದಾಗ ರಾವಣನ ಬೇಡಿಕೆಯಂತೆ ಹಿಡಿದುಕೊಂಡಿದ್ದ ಆತ್ಮಲಿಂಗವನ್ನು ಕೆಳಗಿಟ್ಟ ಸ್ಥಳವಿದು ಎಂದು ನಂಬಲಾಗಿದೆ. ಕಾರ್ತಿಕ ಮಾಸದಲ್ಲಿ ಇಲ್ಲಿ ವಿಶೇಷ ಪೂಜೆಗಳು ನಡೆಯುತ್ತದೆ.
ಬೆಂಗಳೂರಿನಿಂದ ಸುಮಾರು 501 ಕಿಲೋ ಮೀಟರ್ ದೂರದಲ್ಲಿರುವ ಮುರುಡೇಶ್ವರವನ್ನು ಸರಿಸುಮಾರು ಒಂಬತ್ತು ಗಂಟೆ ಅವಧಿಯಲ್ಲಿ ತಲುಪಬಹುದು. ಮುರುಡೇಶ್ವರ ಉಡುಪಿಯಿಂದ 101 ಕಿಲೋ ಮೀಟರ್ ದೂರವಿದ್ದು, ಎರಡು ಗಂಟೆಯ ಅವಧಿಯಲ್ಲಿ ತಲುಪಬಹುದಾಗಿದೆ.












Click it and Unblock the Notifications