Travel Guide: 117 ವರ್ಷ ಇತಿಹಾಸವಿರುವ ಡ್ಯಾಂಗೆ ಭೇಟಿ ನೀಡಬೇಕೇ? ತಲುಪುವ ಮಾರ್ಗಗಳ ವಿವರ ತಿಳಿಯಿರಿ
Travel Guide: ಕೋಟೆನಾಡು ಚಿತ್ರದುರ್ಗ ಜಿಲ್ಲೆ, ಹಿರಿಯೂರು ತಾಲ್ಲೂಕಿನ ವಾಣಿ ವಿಲಾಸ ಸಗಾರ ಜಲಾಶಯ ಐತಿಹಾಸಿಕ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಡ್ಯಾಂ ಮೂರನೇ ಬಾರಿ ತುಂಬಿ ದಾಖಲೆ ಸೃಷ್ಟಿಸಲು ಸಜ್ಜಾಗಿದೆ. ಇನ್ನು ಈ ತಾಣಕ್ಕೆ ಪ್ರತಿದಿನವೂ ಕೂಡ ಪ್ರವಾಸಿಗರ ದಂಡೇ ಹರಿದುಬರುತ್ತಿದೆ. ನೀವು ಭೇಟಿ ನೀಡಬೇಕೇ.? ಮಾರ್ಗಗಳ ವಿವರ ಇಲ್ಲಿ ನೀಡಲಾಗಿದೆ ಗಮನಿಸಿ.
ಮಧ್ಯ ಕರ್ನಾಟಕದ ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಮಾರಿಕಣಿವೆ ಡ್ಯಾಂ ಭರ್ತಿಗೆ ಕ್ಷಣಗಣನೆ ಆರಂಭವಾಗಿದ್ದು, ಕೋಡಿ ಬೀಳುವುದು ಬಹುತೇಕ ಖಚಿತವಾಗಿದೆ. ಇದನ್ನು ಈ ವೇಳೆ ಕಣ್ತುಂಬಿಕೊಳ್ಳಲು ಉತ್ತಮ ಸಮಯವಾಗಿದೆ. ಅಣೆಕಟ್ಟಿನ ಎಡ ಮತ್ತು ಬಲ ಭಾಗದಲ್ಲಿ ಕಪ್ಪುಶಿಲೆಯ ಅಪರೂಪದ ಸುಂದರ ಮಂಟಪಗಳಿಗೆ.

ಕಮಾನು ದ್ವಾರದಿಂದ ಹಸಿರುಟ್ಟ ಬೆಟ್ಟಗಳ ಸೌಂದರ್ಯವನ್ನು ಕ್ಲಿಕ್ಕಿಸುವ ಸೊಬಗೇ ಅದ್ಭುತವಾಗಿರುತ್ತದೆ. ಗುಡ್ಡಗಳ ಸಂಕೀರ್ಣವನ್ನು ಜಲಾಶಯದ ಸುತ್ತ ಒಮ್ಮೆ ಕಣ್ಣಾಡಿಸಿದರೆ, ಅಚ್ಚಹಸಿರಿನಿಂದ ಕಂಗೊಳಿಸುವ ದೃಶ್ಯವನ್ನು ಕಾಣಬಹುದಾಗಿದೆ. ಜಲಾಶಯದ ಮೇಲೆ ನಿಂತು ಮತ್ತೊಮ್ಮೆ ಕಣ್ಣಾಡಿಸಿದರೆ ಅಡಿಕೆ, ತೆಂಗು, ತೋಟಗಳ ಸೌಂದರ್ಯವನ್ನು ಸವಿಯಬಹುದಾಗಿದೆ.
ಜಲಾಶಯದ ಮತ್ತೊಂದು ತುದಿಯಲ್ಲಿ ನಿಂತರೆ, ಭಾರತ ಭೂಪಟದ ಆಕಾರ ಹೊಂದುವ ದೃಶ್ಯವನ್ನು ಕಾಣಬಹುದಾಗಿದೆ. ಸೂರ್ಯಾಸ್ತ ಇಲ್ಲಿನ ಮತ್ತೊಂದು ವಿಶೇಷವಾಗಿದೆ. ಜಲಾಶಯದ ಎಡ ಭಾಗದ ಉತ್ತೆರಿಗುಡ್ಡ ಹಾಗೂ ಬಲ ಭಾಗದ ಛತ್ರಿಗುಡ್ಡಗಳ ನಡುವೆ ಮರೆಯಾಗುವ ಸೂರ್ಯನನ್ನು ಕಣ್ತುಂಬಿಸಿಕೊಳ್ಳಬಹುದಾಗಿದೆ. ಸಂಜೆ 4 ಯಿಂದ 5ರೊಳಗೆ ಇಲ್ಲಿದ್ದರೆ, ಸೂರ್ಯಾಸ್ತವನ್ನು ಸೆರೆ ಹಿಡಿಯಬಹುದು.
ವಾಣಿ ವಿಲಾಸ ಸಾಗರ ನಿರ್ಮಿಸಿದ್ದು ಯಾರು? ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವಾಣಿವಿಲಾಸಪುರ ಬಳಿ ವೇದಾವತಿ ನದಿಗೆ ಅಡ್ಡಲಾಗಿ 1907ರಲ್ಲಿ ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಅಣೆಕಟ್ಟು ಕಟ್ಟಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಬಾಬು ಬುಡನ್ ಗಿರಿ ಕಂದಕಗಳಲ್ಲಿ ಜನಿಸುವ "ವೇದಾ" ನದಿ ಕಡೂರಿನ ಬಳಿ "ಅವತಿ" ಎಂಬ ನದಿಯನ್ನು ಸೇರಿ ಮುಂದೆ 'ವೇದಾವತಿ' ನದಿಯಾಗಿ ಹರಿಯುತ್ತದೆ. ಈ ನದಿ ಮೂಲಕ ಚಳ್ಳಕೆರೆ, ಮೊಳಕಾಲ್ಮೂರು ಪ್ರವೇಶಿಸಿ ಮುಂದೆ ಬಳ್ಳಾರಿ ಜಿಲ್ಲೆ ಪ್ರವೇಶಿಸಿ ತುಂಗಭದ್ರಾ ಜಲಾಶಯ ಸೇರುತ್ತದೆ.
ವಿವಿ ಸಾಗರಕ್ಕೆ ತಲುಪುವುದೇಗೆ?: ವಾಣಿ ವಿಲಾಸ ಜಲಾಶಯವನ್ನು ನೋಡಲು ಬಯಸುವ ಪ್ರವಾಸಿಗರು ಹಿರಿಯೂರು ನಗರದಿಂದ ಹೊಸದುರ್ಗ ರಸ್ತೆ ಮಾರ್ಗವಾಗಿ 18 ಕಿಲೋ ಮೀಟರ್ ದೂರದ ಎಡಭಾಗಕ್ಕೆ ಜಲಾಶಯ ತಲುಪಬಹುದು. ಬೆಂಗಳೂರು, ತುಮಕೂರಿನಿಂದ ಹಿರಿಯೂರು ನಗರದ ಮೂಲಕ ಡ್ಯಾಂ ಪ್ರವೇಶಿಸಬಹುದು.
ಒಂದು ವೇಳೆ ಹುಬ್ಬಳ್ಳಿ, ದಾವಣಗೆರೆಯಿಂದ ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿ ನಾಲ್ಕರ ಬಲಭಾಗದ ವಿವಿ ಪುರ ಕ್ರಾಸ್ ಮೂಲಕ ಜಲಾಶಯಕ್ಕೆ ತೆರಳಬಹುದು. ಚಿಕ್ಕಮಗಳೂರು, ಶಿವಮೊಗ್ಗ ಭಾಗದ ಪ್ರವಾಸಿಗರು ಹೊಸದುರ್ಗದಿಂದ ಹಿರಿಯೂರು ಮಾರ್ಗವಾಗಿ ಬಲಭಾಗದ ಮೂಲಕ ತೆರಳಿ ಡ್ಯಾಂ ವೀಕ್ಷಿಸಬಹುದಾಗಿದೆ.
ನೀರಿನ ಮಟ್ಟದ ವಿವರ: ವಾಣಿವಿಲಾಸಪುರ ಬಳಿಯಿರುವ ವಾಣಿವಿಲಾಸ ಜಲಾಶಯ ಇತಿಹಾಸದಲ್ಲಿಯೇ ಮೂರನೇ ಬಾರಿಗೆ ಭರ್ತಿಯಾಗಿ ಕೋಡಿ ಬೀಳಲು ಸಜ್ಜಾಗಿ ನಿಂತಿದೆ. ಇದೀಗ ಜಲಾಶಯಕ್ಕೆ 577 ಕ್ಯೂಸೆಕ್ ಒಳಹರಿವು ನೀರು ಹರಿದು ಬರುತ್ತಿದ್ದು, ಇದರಿಂದ ಪ್ರಸ್ತುತ ಜಲಾಶಯದ ನೀರಿನ ಮಟ್ಟ 128.25 ಅಡಿ ತಲುಪಿದೆ. ಜಲಾಶಯ ಕೋಡಿ ಬೀಳಲು ಕೇವಲ 1.75 ಅಡಿಯಷ್ಟು ನೀರು ಬರಬೇಕಿದೆ. ಈ ಜಲಾಶಯ 30 ಟಿಎಂಸಿ ನೀರಿನ ಸಾಮರ್ಥ್ಯ ಹೊಂದಿದೆ.
2022ರಲ್ಲಿ ಕೋಡಿ ಬಿದ್ದಿತ್ತು. ಇದೀಗ ಮಾರಿಕಣಿವೆ ಡ್ಯಾಂ ಎರಡು ವರ್ಷಗಳ ನಂತರ ಮತ್ತೆ ಭರ್ತಿಯಾಗಿ ಕೋಡಿ ಬೀಳುವ ಹಂತದಲ್ಲಿದೆ. ಜಲಾಶಯದಲ್ಲಿ ಹೆಚ್ಚು ನೀರು ಇರುವುದರಿಂದ ಸುತ್ತ ಮುತ್ತಲಿನ ಪರಿಸರ ನೋಡುಗರನ್ನು ಕೈ ಬಿಸಿ ಕರೆಯುತ್ತಿದೆ.
ಜಲಾಶಯ ಬಹುತೇಕ ಭರ್ತಿಯಾಗಿದ್ದು ದಿನನಿತ್ಯ ರಾಜ್ಯದ ಮೂಲೆ ಮೂಲೆಗಳಿಂದ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಜಲಾಶಯ ನೋಡಲು ಬಂದಿರುವ ಪ್ರವಾಸಿಗರು ಕೋಡಿ ಜಾಗದಲ್ಲಿ ಹಾಗೂ ಹಿನ್ನೀರಿಗೆ ಧುಮುಕಿ ಅಥವಾ ಇಳಿಯುವ ದುಸ್ಸಾಹಸಕ್ಕೆ ಇಳಿಯಬಾರದು ಎಂದು ಅಧಿಕಾರಿಗಳು ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದಾರೆ.
ಇದೀಗ ಜಲಾಶಯಕ್ಕೆ 117ವರ್ಷ ಇತಿಹಾಸವಿದೆ. 1935ರಲ್ಲಿ ಮೊದಲ ಬಾರಿಗೆ 135 ಅಡಿ ನೀರು ತುಂಬಿ ಡ್ಯಾಂ ಮೈದುಂಬಿ ಹರಿದಿತ್ತು. ಇದಾದ ನಂತರ 2022ರಲ್ಲಿ ಎರಡನೇ ಬಾರಿಗೆ ಡ್ಯಾಂ ಕೋಡಿ ಬಿದ್ದಿತ್ತು. ಸುಮಾರು ಎರಡು ತಿಂಗಳ ಕಾಲ ವೇದಾವತಿ ನದಿಯಲ್ಲಿ ನೀರು ನಿರಾತಂಕವಾಗಿ ಹರಿದಿತ್ತು. ಇದೀಗ ಮೂರನೇ ಬಾರಿಗೆ ಕೋಡಿ ಬೀಳಲು ಕ್ಷಣಗಣನೆ ಆರಂಭವಾಗಿದೆ.












Click it and Unblock the Notifications