ಫೆಬ್ರವರಿ ಅಂತ್ಯದಲ್ಲಿ ಕುಷ್ಟಗಿಗೆ ಬರಲಿದೆ ರೈಲು
ಕೊಪ್ಪಳ, ಫೆಬ್ರವರಿ 12: ಗದಗ-ವಾಡಿ ನಡುವಿನ 257 ಕಿ. ಮೀ. ರೈಲು ಮಾರ್ಗದ ಕಾಮಗಾರಿ ಚುರುಕಿನಿಂದ ಸಾಗುತ್ತಿದೆ. 2026ರ ಮಾರ್ಚ್‌ನಲ್ಲಿ ಈ ಮಾರ್ಗವನ್ನು ಉದ್ಘಾಟಿಸುವ ಗುರಿ ಹೊಂದಲಾಗಿದೆ.
ನಿರೀಕ್ಷೆಯಂತೆ ಕಾಮಗಾರಿಗಳು ನಡೆದರೆ ಫೆಬ್ರವರಿ ಅಂತ್ಯದಲ್ಲಿ ಕೊಪ್ಪಳದ ಕುಷ್ಟಗಿ ತನಕ ರೈಲು ಸಂಚಾರ ನಡೆಸುವ ನಿರೀಕ್ಷೆ ಇದೆ. ಲೋಕಸಭೆ ಚುನಾವಣೆ ದಿನಾಂಕ ಘೋಷಣೆಗೂ ಮೊದಲು ರೈಲು ಸಂಚಾರ ನಡೆಸಬೇಕು ಎಂಬ ಗುರಿಯೊಂದಿಗೆ ಕಾಮಗಾರಿಗೆ ವೇಗ ನೀಡಲಾಗಿದೆ.

ಲೋಕಸಭೆ ಚುನಾವಣೆ ದಿನಾಂಕ ಘೋಷಣೆಗೂ ಮೊದಲು ಕುಷ್ಟಗಿ ತನಕ ರೈಲು ಓಡಿಸಲು ಕಾಮಗಾರಿಯನ್ನು ಎರಡು ಶಿಫ್ಟ್‌ಗಳಲ್ಲಿ ಕೈಗೊಳ್ಳಲಾಗಿದೆ. ಬೃಹತ್ ಯಂತ್ರಗಳನ್ನು ಬಳಕೆ ಮಾಡಿಕೊಂಡು ಕಾಮಗಾರಿ ಪೂರ್ಣಗೊಳಿಸಲು ಶ್ರಮಿಸಲಾಗುತ್ತಿದೆ.
ಸಿಗ್ನಲ್ ಹಾಕುವುದು, ಅಂತಿಮ ಹಂತದ ಪರಿಶೀಲನೆ ಸೇರಿದಂತೆ ವಿವಿಧ ಕಾಮಗಾರಿಗಳು ಬಾಕಿ ಇದೆ. ಫೆಬ್ರವರಿ ಅಂತ್ಯದಲ್ಲಿ ಕುಷ್ಟಗಿ ತನಕ ರೈಲು ಸಂಚಾರ ನಡೆಸಲಿದೆ ಎಂಬ ನಿರೀಕ್ಷೆಯಲ್ಲಿ ನೈಋತ್ಯ ರೈಲ್ವೆಯ ಅಧಿಕಾರಿಗಳು ಇದ್ದಾರೆ.
ಹುಬ್ಬಳ್ಳಿ, ಬೆಂಗಳೂರಿಗೆ ರೈಲು: ಈ ಕಾಮಗಾರಿಗಳು ಪೂರ್ಣಗೊಂಡು ಪ್ರಾಯೋಗಿಕ ಸಂಚಾರ ಪೂರ್ಣಗೊಂಡರೆ ಹುಬ್ಬಳ್ಳಿ ಮತ್ತು ಬೆಂಗಳೂರಿಗೆ ಕುಷ್ಟಗಿಯಿಂದ ರೈಲು ಸಂಪರ್ಕ ಸಿಗಲಿದೆ. ರೈಲ್ವೆ ಅಧಿಕಾರಿಗಳ ಮಾಹಿತಿ ಪ್ರಕಾರ ಸುಮಾರು ಎರಡೂವರೆ ಗಂಟೆಗಳಲ್ಲಿ ಹುಬ್ಭಳ್ಳಿಯನ್ನು ತಲುಪಬಹುದಾಗಿದೆ.
ಲೋಕಸಭೆ ಚುನಾವಣೆ ಮಾತ್ರವಲ್ಲ ರೈಲ್ವೆ ಬೋರ್ಡ್ ಸಹ ಕಾಮಗಾರಿ ಪೂರ್ಣಗೊಳಿಸಲು 20023ರಲ್ಲಿಯೇ ಗಡುವು ನೀಡಿತ್ತು. ಭೂ ಸ್ವಾಧೀನ ವಿಚಾರದಲ್ಲಿನ ಸಮಸ್ಯೆಗಳಿಂದಾಗಿ ಕಾಮಗಾರಿ ವಿಳಂಬವಾಗಿದೆ. ಇಲ್ಲವಾದಲ್ಲಿ ಇಷ್ಟರೊಳಗೆ ಕಾಮಗಾರಿ ಪೂರ್ಣಗೊಂಡಿರುತ್ತಿತ್ತು ಎನ್ನುತ್ತಾರೆ ಅಧಿಕಾರಿಗಳು.
ಕುಷ್ಟಗಿ-ಕೊಪ್ಪಳ ರಾಜ್ಯ ಹೆದ್ದಾರಿಯಲ್ಲಿ ಫ್ಲೈ ಓವರ್ ನಿರ್ಮಾಣ ಮಾಡಲು ಯೋಜನಾ ವರದಿ ತಯಾರು ಮಾಡಲಾಗಿತ್ತು. ಟೆಂಡರ್ ಸಹ ಮುಗಿದಿತ್ತು. ಆದರೆ ಕಾಮಗಾರಿ ವಿಳಂಬವಾಗಲಿದೆ ಎಂಬ ಕಾರಣಕ್ಕೆ ಈಗ ತಾತ್ಕಾಲಿಕವಾಗಿ ರೈಲ್ವೆ ಕ್ರಾಸಿಂಗ್ ನಿರ್ಮಾಣ ಮಾಡಲಾಗಿದೆ. ಬಳಿಕ ಫ್ಲೈ ಓವರ್ ಕಾಮಗಾರಿ ಆರಂಭವಾಗಲಿದೆ.
ಉತ್ತರ ಕರ್ನಾಟಕ ಭಾಗದ ಪ್ರಮುಖ ರೈಲು ಯೋಜನೆಗಳಲ್ಲಿ ಗದಗ-ವಾಡಿ ರೈಲು ಮಾರ್ಗ ಒಂದಾಗಿದೆ. ಗದಗ-ತಳಕಲ್ ತನಕ ಈಗಾಗಲೇ ರೈಲ್ವೆ ಹಳಿ ಇದೆ. ತಳಕಲ್-ಕುಷ್ಟಗಿ 57 ಕಿ. ಮೀ. ಮಾರ್ಗದ ಕಾಮಗಾರಿ ನಡೆಯುತ್ತಿದೆ. ನಂತರ ಪ್ರಾಯೋಗಿಕವಾಗಿ ರೈಲು ಸಂಚಾರ ಪ್ರಾರಂಭವಾಗಲಿದೆ.
ಗದಗ-ವಾಡಿ ರೈಲು ಯೋಜನೆಯನ್ನು 2026ರಲ್ಲಿ ಪೂರ್ಣಗೊಳಿಸುತ್ತೇವೆ ಎಂದು ಕರ್ನಾಟಕ ಸರ್ಕಾರ ಹೇಳಿದೆ. ಈ ಯೋಜನೆಯ ವೆಚ್ಚ 1,922 ಕೋಟಿ ರೂ.ಗಳು. ರಾಜ್ಯ ಸರ್ಕಾರ ಮತ್ತು ರೈಲ್ವೆ ಇಲಾಖೆ ತಲಾ ಶೇ 50ರಷ್ಟು ವೆಚ್ಚ ಹಂಚಿಕೆ ಮಾಡಿಕೊಂಡು ಕಾಮಗಾರಿ ಕೈಗೊಂಡಿವೆ.
ಕರ್ನಾಟಕದ ಮೂಲ ಸೌಕರ್ಯ ಅಭಿವೃದ್ಧಿ ಸಚಿವ ಎಂ. ಬಿ. ಪಾಟೀಲ ಈಗಾಗಲೇ ಗದಗ-ವಾಡಿ ಮತ್ತು ಬಾಗಲಕೋಟೆ-ಕುಡಚಿ ರೈಲು ಮಾರ್ಗದ ಕಾಮಗಾರಿಯ ಪ್ರಗತಿಯ ಬಗ್ಗೆ ಪರಿಶೀಲನಾ ಸಭೆಯನ್ನು ನಡೆಸಿದ್ದಾರೆ. ಗದಗ-ವಾಡಿ ರೈಲು ಮಾರ್ಗವನ್ನು 2026ರ ಮಾರ್ಚ್ ಮತ್ತು ಬಾಗಲಕೋಟೆ-ಕುಡಚಿ ಮಾರ್ಗವನ್ನು 2025ರ ಡಿಸೆಂಬರ್ ಒಳಗೆ ಪೂರ್ಣಗೊಳಿಸುತ್ತೇವೆ ಎಂದು ಹೇಳಿದ್ದಾರೆ.
2012-13ರಲ್ಲಿ ಮಂಜೂರಾದ ಯೋಜನೆಯ ಕಾಮಗಾರಿ 2019ರಲ್ಲಿ ಆರಂಭವಾಯಿತು. ನಾಲ್ಕು ವರ್ಷಗಳಲ್ಲೇ ರೈಲು ಸಂಚಾರ ಆರಂಭವಾಗುವಂತೆ ಕಾಮಗಾರಿ ಪೂರ್ಣಗೊಳಿಸಲಾಗುತ್ತಿದೆ. 2024ರ ಜನವರಿಗೆ ಕುಷ್ಟಗಿಗೆ ರೈಲು ಓಡಿಸುವ ಗುರಿ ಇತ್ತು. ಅಂತಿಮವಾಗಿ ಫೆಬ್ರವರಿಯಲ್ಲಿ ರೈಲು ಸಂಚಾರ ಆರಂಭವಾಗುವ ನಿರೀಕ್ಷೆ ಇದೆ.
ಬಾಗಲಕೋಟೆ-ಕುಡಚಿ ರೈಲು ಮಾರ್ಗ ಸಹ ಪ್ರಮುಖ ಯೋಜನೆಯಾಗಿದೆ. 142 ಕಿ. ಮೀ. ಉದ್ದದ ಈ ಮಾರ್ಗದ ಯೋಜನಾ ವೆಚ್ಚ 1,350 ಕೋಟಿ ರೂ.ಗಳು. ಬಾಗಲಕೋಟೆ-ಖಚ್ಚಿದೋಣಿ-ಲೋಕಾಪುರ ವರೆಗಿನ 60 ಕಿ. ಮೀ. ಕಾಮಗಾರಿ 2024ರ ಮಾರ್ಚ್‌ನಲ್ಲಿ ಪೂರ್ಣಗೊಳ್ಳಲಿದೆ. ಬಳಿಕ ರೈಲು ಸಂಚಾರ ಆರಂಭಿಸಲಾಗುತ್ತದೆ.












Click it and Unblock the Notifications