ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ತೊಡಿಕಾನ'... ಇದು ಕಾನನದ ನಡುವಿನ ಸುಂದರ ತಾಣ!; ತೆರಳುವುದು ಹೇಗೆ?

By ಬಿಎಂ ಲವಕುಮಾರ್
|
Google Oneindia Kannada News

ಸುತ್ತಲೂ ಹರಡಿ ನಿಂತಿರುವ ಬೆಟ್ಟಗುಡ್ಡಗಳು, ಅವುಗಳ ನಡುವಿನ ಕಾನನದಲ್ಲಿ ಅಡಿಕೆ, ತೆಂಗು, ಬಾಳೆಯ ಕಂಪು... ಜುಳುಜುಳು ಸದ್ದು ಮಾಡುತ್ತಾ ಹರಿಯುವ ಪಯಶ್ವಿನಿ ನದಿ... ಅದರಾಚೆಗೆ ಧುಮ್ಮಿಕ್ಕುವ ಜಲಪಾತ... ಪಕ್ಕದಲ್ಲಿಯೇ ಮತ್ಸ್ಯ ರಾಶಿ.. ನಿಸರ್ಗದ ನಿಶಬ್ದತೆಯನ್ನು ಸೀಳಿ ಬರುವ ಗಂಟೆಯ ನಿನಾದ... ಇಂತಹದೊಂದು ಸುಂದರ ಪರಿಸರದಲ್ಲಿ ಒಂದಷ್ಟು ಸಮಯ ಕಳೆಯ ಬೇಕೆಂದು ಬಯಸಿದರೆ ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗಕ್ಕೆ ಹೊಂದಿಕೊಂಡಿರುವ ನಿಸರ್ಗ ಸುಂದರ ತಾಣವಾಗಿರುವ ತೊಡಿಕಾನಕ್ಕೆ ತೆರಳಬಹುದು.

ಬೆಟ್ಟಗುಡ್ಡ, ತೋಟಗಳ ನಡುವಿನ ಈ ಕ್ಷೇತ್ರ ಸುಂದರ ಮಲ್ಲಿಕಾರ್ಜುನ ದೇಗುಲ, ಮತ್ಸ್ಯ ತಟಾಕ, ದೇವರಗುಂಡಿ ಜಲಪಾತದಂತಹ ವಿಶೇಷತೆಗಳನ್ನು ಹೊಂದಿದೆ. ಬೆಟ್ಟಗುಡ್ಡಗಳ ಬುಡದಲ್ಲಿದ್ದು, ದಟ್ಟವಾದ ಕಾಡಿನಿಂದ ಕೂಡಿದ ಕಾರಣ ಇದು "ತಡಿ" ಅಂದರೆ ತಪ್ಪಲು "ಕಾನ" ಅಂದರೆ ಕಾಡು. ಒಟ್ಟಾಗಿ 'ತಡಿಕಾನ'ವಾಗಿದ್ದು, ಕ್ರಮೇಣ ಬಾಯಿಯಿಂದ ಬಾಯಿಗೆ ಉಚ್ಛಾರಣೆ ಮಾಡುವಲ್ಲಿ ತೊಡಿಕಾನವಾಗಿರಬಹುದೆಂದು ಹೇಳಲಾಗುತ್ತಿದೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿವೆ ಅಪರೂಪದ ಪ್ರವಾಸಿ ತಾಣಗಳು, ಇಲ್ಲಿದೆ ಮಾಹಿತಿಚಿಕ್ಕಮಗಳೂರು ಜಿಲ್ಲೆಯಲ್ಲಿವೆ ಅಪರೂಪದ ಪ್ರವಾಸಿ ತಾಣಗಳು, ಇಲ್ಲಿದೆ ಮಾಹಿತಿ

ತೊಡಿಕಾನ ನಿಸರ್ಗ ಸೌಂದರ್ಯದ ರಾಶಿಯನ್ನು ಸುತ್ತಲೂ ಹೊದ್ದುಕೊಂಡು ನಿಂತಿದ್ದರೂ ಕೂಡ ಪೌರಾಣಿಕವಾಗಿ ಹತ್ತು ಹಲವು ವೈಶಿಷ್ಟ್ಯಗಳನ್ನು ಹೊಂದಿರುವುದು ಇಲ್ಲಿಗೆ ತೆರಳಿದವರಿಗೆ ಮತ್ತು ಸ್ಥಳದ ಮಹಿಮೆಯನ್ನು ತಿಳಿದುಕೊಂಡವರಿಗೆ ಗೊತ್ತಾಗುತ್ತದೆ. ಈ ಕ್ಷೇತ್ರದ ಬಗೆಗೆ ಇರುವ ಕಥೆಗಳು ಸ್ಥಳದ ಮಹಿಮೆಯನ್ನು ಸಾರಿ ಹೇಳುತ್ತದೆ. ಇಲ್ಲಿ ಕಣ್ವ ಮುನಿಗಳು ತಪಸ್ಸು ಮಾಡಿದ್ದರು ಮತ್ತು ಶಿವ ಮತ್ತು ಅರ್ಜುನನಿಗೆ ಯುದ್ಧ ಇಲ್ಲಿಯೇ ನಡೆದಿತ್ತು ಎಂಬ ನಂಬಿಕೆಯಿದೆ. ಜತೆಗೆ ಇಲ್ಲಿನ ಮಲ್ಲಿಕಾರ್ಜುನ ದೇಗುಲದ ಶಿವಲಿಂಗಕ್ಕೂ ಪೌರಾಣಿಕ ಹಿನ್ನಲೆಯಿದೆ.

 ದ್ರೌಪದಿ ಸತ್ಯ ಬಿಚ್ಚಿಟ್ಟ ಸತ್ಯಪಾಲ

ದ್ರೌಪದಿ ಸತ್ಯ ಬಿಚ್ಚಿಟ್ಟ ಸತ್ಯಪಾಲ

ತೊಡಿಕಾನದ ಕುರಿತಂತೆ ಹಲವು ಪೌರಾಣಿಕ ಕಥೆಗಳಿವೆ. ಅದರಂತೆ ಒಮ್ಮೆ ವನವಾಸದಲ್ಲಿದ್ದ ಪಾಂಡವರು ಕಣ್ವ ಋಷಿಗಳಿದ್ದ ಸಹ್ಯಾದ್ರಿಯ ತಪ್ಪಲಿಗೆ ಬರುತ್ತಾರೆ. ಅಲ್ಲದೆ ಕಣ್ವ ಋಷಿಯ ಆಶ್ರಮದಲ್ಲಿ ಆಹಾರವಾಗಿದ್ದ ಜಂಭು ವೃಕ್ಷದಿಂದ ಫಲವನ್ನು ಕೊಯ್ಯುವುದರ ಮೂಲಕ ತೊಂದರೆಗೆ ಸಿಲುಕುತ್ತಾರೆ. ಈ ಸಂದರ್ಭದಲ್ಲಿ ಕೃಷ್ಣನಿಗೆ ಮೊರೆಯಿಡುವುದರ ಮೂಲಕ ಆತನ ಸಹಾಯ ಬೇಡುತ್ತಾರೆ. ಕೃಷ್ಣನು ಜಂಭುಫಲವನ್ನು ಮರಳಿ ವೃಕ್ಷದಲ್ಲಿಡುವಂತೆ ಹೇಳುತ್ತಾನೆ. ಆದರೆ ಫಲವನ್ನು ವೃಕ್ಷದಲ್ಲಿಡುವುದಾದರೂ ಹೇಗೆ? ಇದಕ್ಕೆ ಉಪಾಯವೆಂಬಂತೆ ಎಲ್ಲರೂ ತಮ್ಮ ತಮ್ಮ ಮನದಲ್ಲಿರುವ ಬಯಕೆಯನ್ನು ಮುಚ್ಚುಮರೆಯಿಲ್ಲದೆ ಹೇಳಿದರೆ ಫಲವು ವೃಕ್ಷವನ್ನು ಸೇರಿಕೊಳ್ಳುವುದಾಗಿ ಕೃಷ್ಣನು ತಿಳಿಸುತ್ತಾನೆ. ಅದರಂತೆ ಪಾಂಡವರು ತಮ್ಮ, ತಮ್ಮ, ಬಯಕೆಗಳನ್ನು ಹೇಳುತ್ತಾರೆ. ಆಗ ಫಲವು ಮೇಲೇರತೊಡಗುತ್ತದೆ. ಆದರೆ ದ್ರೌಪದಿಯ ಸರದಿ ಬಂದಾಗ ಅರ್ಧದಲ್ಲಿಯೇ ನಿಂತುಬಿಡುತ್ತದೆ.

ತನ್ನ ಮನದಲ್ಲಿರುವ ಬಯಕೆಯನ್ನು ದ್ರೌಪದಿ ಮುಚ್ಚಿಟ್ಟಿದ್ದಾಳೆ ಎಂಬುವುದು ಪಾಂಡವರಿಗೆ ಸ್ಪಷ್ಟವಾಗಿ ನೈಜ ಬಯಕೆಯನ್ನು ಹೇಳುವಂತೆ ಹಠ ಮಾಡಿದಾಗ ದ್ರೌಪದಿಯು ತನಗೆ ಒದಗಿ ಬಂದ ಸಂಕಟವನ್ನು ಪರಿಹರಿಸಲು ಐದು ಜನ ಪತಿಗಳಿದ್ದರೂ ಸಾಧ್ಯವಾಗುತ್ತಿಲ್ಲ. ಇನ್ನೊಬ್ಬ ಪತಿಯಿದ್ದಿದ್ದರೆ ಸಾಧ್ಯವಾಗುತ್ತಿತ್ತೇನೋ ಎಂಬ ಬಯಕೆ ಇದೆ ಎಂದಾಗ ಫಲ ನೇರವಾಗಿ ವೃಕ್ಷವನ್ನೇರಿತಂತೆ. ಈ ಘಟನೆ ನಡೆದ ಸ್ಥಳವನ್ನು "ಸತ್ಯಪಾಲ" ಎಂದೇ ಕರೆಯುತ್ತಾರೆ. ದೇವಾಲಯದ ಸಮೀಪವೇ ಈ ಸ್ಥಳ ಕಂಡುಬರುತ್ತದೆ.

 ಶಿವಾರ್ಜುನರ ನಡುವೆ ಘೋರ ಯುದ್ಧ

ಶಿವಾರ್ಜುನರ ನಡುವೆ ಘೋರ ಯುದ್ಧ

ಇನ್ನು ಇದೇ ಸ್ಥಳದಲ್ಲಿ ಅರ್ಜು‍ನ ಮತ್ತು ಶಿವನಿಗೆ ಘೋರ ಯುದ್ದ ನಡೆದಿತ್ತು ಎಂಬ ಕಥೆಯೂ ಪ್ರಚಲಿತದಲ್ಲಿದೆ ಅದು ಏನೆಂದರೆ? ಅರ್ಜುನ ತಪಸ್ಸು ಮಾಡಲೆಂದು ದ್ವೈತ ಎಂಬ ವನವನ್ನು ಸೇರುತ್ತಾನೆ. ಅಲ್ಲಿ ಶಿವನನ್ನು ಕುರಿತು ಕಠಿಣ ತಪಸ್ಸು ಮಾಡುತ್ತಾನೆ. ಈ ಸಂದರ್ಭದಲ್ಲಿ ಅರ್ಜುನ ಮಾಡುವ ತಪಸ್ಸನ್ನು ಪರೀಕ್ಷಿಸಲೆಂದು ಶಿವನು ಪತ್ನಿ ಪಾರ್ವತಿ ಹಾಗೂ ಗಣಗಳೊಂದಿಗೆ ಕಿರಾತಕನ ರೂಪದಲ್ಲಿ ದ್ವೈತ ವನಕ್ಕೆ ಬಂದು ಅಲ್ಲಿನ ಗುಹೆಯೊಂದರಲ್ಲಿದ್ದುಕೊಂಡು ಮುನಿಗಳಿಗೆ ತೊಂದರೆ ನೀಡಲೆಂದೇ ಹಂದಿಯ ರೂಪದಲ್ಲಿದ್ದ ಮೂಕಾಸುರನನ್ನು ಕೊಲ್ಲಲು ಬಾಣ ಬಿಡುತ್ತಾನೆ.

ಬಾಣ ನಾಟಿಸಿಕೊಂಡ ಹಂದಿ ರೂಪದ ಮೂಕಾಸುರ ಅರ್ಜುನ ತಪಸ್ಸು ಮಾಡುತ್ತಿದ್ದ ಸ್ಥಳಕ್ಕೆ ಬರುತ್ತಾನೆ. ಈ ವೇಳೆ ಆ ಹಂದಿ ರೂಪದ ಮುಕಾಸುರನ ಮೇಲೆ ಅರ್ಜುನ ಬಾಣ ಬಿಡುವುದರ ಮೂಲಕ ಕೊಲ್ಲುತ್ತಾನೆ. ಆಗ ಹಂದಿ ರೂಪದಲ್ಲಿ ಮೂಕಾಸುರನನ್ನು ನಾನೇ ಕೊಂದಿದ್ದಾಗಿ ಕಿರಾತಕ ರೂಪದಲ್ಲಿದ್ದ ಶಿವ ಹೇಳಿದರೆ ಅದನ್ನು ಒಪ್ಪದ ಅರ್ಜುನ ನಾನೇ ಕೊಂದಿದ್ದಾಗಿ ಹೇಳುತ್ತಾನೆ. ಹೀಗೆ ಸತ್ತ ಹಂದಿಗಾಗಿ ಕಿರಾತಕ ರೂಪದಲ್ಲಿದ್ದ ಶಿವನಿಗೂ ಅರ್ಜುನನಿಗೂ ಘೋರ ಯುದ್ಧ ನಡೆಯುತ್ತದೆ.

 ಅರ್ಜುನನಿಗೆ ಪಾಶುಪತಾಸ್ತ್ರ ನೀಡಿದ ಶಿವ

ಅರ್ಜುನನಿಗೆ ಪಾಶುಪತಾಸ್ತ್ರ ನೀಡಿದ ಶಿವ

ಈ ಸಂದರ್ಭ ಅರ್ಜುನ ಕಿರಾತಕ ರೂಪದಲ್ಲಿದ್ದ ಶಿವನ ಮೇಲೆ ಎಲ್ಲಾ ಬಾಣಗಳನ್ನು ಬಿಡುತ್ತಾನೆ. ಕೊನೆಗೆ ತನ್ನ ಗಾಂಢೀವದಿಂದಲೇ ಹೊಡೆಯುತ್ತಾನೆ. ಈ ಹೊಡೆತ ಕಿರಾತಕನ ಮಡದಿಯ ವೇಷದಲ್ಲಿದ್ದ ಪಾರ್ವತಿಗೆ ತಗಲುತ್ತದೆ ಆಗ ಶಿವ(ಕಿರಾತಕ)ನು ಹೆಂಡತಿಯ ಅಂದರೆ ಪಾರ್ವತಿಯ ಶುಶ್ರೂಷೆಯಲ್ಲಿ ತೊಡಗುತ್ತಾನೆ. ಆಗ ಅರ್ಜುನನು ಮರಳಿನಿಂದ ಲಿಂಗವೊಂದನ್ನು ಮಾಡಿ ಅದರ ಮೇಲೆ ಪುಷ್ಪಗಳನ್ನಿಟ್ಟು ಪೂಜೆ ಮಾಡುತ್ತಾನೆ. ಲಿಂಗದ ಮೇಲಿಟ್ಟ ಹೂ ಕಿರಾತಕನ ಹೆಂಡತಿ(ಪಾರ್ವತಿ)ಯ ತಲೆಯ ಮೇಲೆ ಕಂಡು ಬರುತ್ತದೆ. ಇದನ್ನು ನೋಡಿ ಅರ್ಜುನನಿಗೆ ಆಶ್ಚರ್ಯವಾಗುತ್ತದೆ. ಅಲ್ಲದೆ ನಾನು ಇಷ್ಟು ಹೊತ್ತು ಯುದ್ಧ ಮಾಡಿದ್ದು ಶಿವನೊಂದಿಗೆ ಎಂದು ತಿಳಿದಾಗ ಆತನ ಕಾಲಿಗೆ ಅಡ್ಡ ಬಿದ್ದು ಮನ್ನಿಸುವಂತೆ ಬೇಡಿಕೊಳ್ಳುತ್ತಾನೆ. ಆಗ ಶಿವನು ಅರ್ಜುನನ್ನು ಕೊಂಡಾಡಿ ಆತನಿಗೆ ಪಾಶುಪತಾಸ್ತ್ರವನ್ನೂ, ಪಾರ್ವತಿಯು ಅಂಜನಾಸ್ತ್ರವನ್ನೂ ನೀಡಿ ಹರಸುತ್ತಾರೆ.

 ಮಲ್ಲಿಕಾರ್ಜುನ ಹೆಸರಿಗೆ ವಿಭಿನ್ನ ಕಥೆ

ಮಲ್ಲಿಕಾರ್ಜುನ ಹೆಸರಿಗೆ ವಿಭಿನ್ನ ಕಥೆ

ತೊಡಕಾನದಲ್ಲಿ ಭವ್ಯ ಮಲ್ಲಿಕಾರ್ಜು‍ನ ದೇಗುಲವಿದೆ. ಹಿಂದೆ ಇದ್ದ ದೇಗುಲವನ್ನು ಜೀರ್ಣೋದ್ಧಾರ ಮಾಡಲಾಗಿದ್ದು, ಇತ್ತೀಚೆಗಿನ ವರ್ಷಗಳಲ್ಲಿ ದೇವಾಲಯ ಕಟ್ಟಲಾಗಿದೆ. ಈ ದೇಗುಲಕ್ಕೆ ಮಲ್ಲಿಕಾರ್ಜುನ ಎಂಬ ಹೆಸರು ಹೇಗೆ ಬಂತು? ಶಿವಲಿಂಗ ಪ್ರತಿಷ್ಠಾಪನೆ ಹೇಗಾಯಿತು? ಎಂಬುದರ ಬಗ್ಗೆಯೂ ಪೌರಾಣಿಕ ಕಥೆಯಿದೆ. ಅದೇನೆಂದರೆ ಶಿವಲಿಂಗವು ಕಾಲಾಂತರದಲ್ಲಿ ಭೂಮಿಯನ್ನು ಸೇರಿಹೋಗಿತ್ತಂತೆ. ಒಮ್ಮೆ ಮಲ್ಲಿ ಎಂಬ ಗಿರಿಜನ ಹುಡುಗಿ ಗೆಡ್ಡೆಗಳನ್ನು ಅಗೆಯುತ್ತಿದ್ದಾಗ ಲಿಂಗಕ್ಕೆ ತಗುಲಿ ರಕ್ತ ಚಿಮ್ಮಿತೆಂದೂ, ಇದರಲ್ಲಿ ಏನೋ ಶಕ್ತಿ ಯಿದೆ ಎಂದರಿತ ಆಕೆ ಅದನ್ನು ತಂದು ಪ್ರತಿಷ್ಠಾಪಿಸಿದಳೆಂದೂ, ಮಲ್ಲಿ ಎಂಬುವಳಿಗೆ ಶಿವಲಿಂಗವು ದೊರೆತ ಕಾರಣ ಮಲ್ಲಿಕಾರ್ಜುನ ಎಂಬ ಹೆಸರು ಬಂದಿತೆಂದೂ ಹೇಳಲಾಗುತ್ತಿದೆ. ಇನ್ನೊಂದೆಡೆ ಅರ್ಜುನನು ಮರಳಿನಿಂದ ಮಾಡಿದ ಶಿವಲಿಂಗವನ್ನು ಮಲ್ಲಿಕಾ ಎಂಬುವಳು ಪುಷ್ಪಗಳಿಂದ ಪೂಜಿಸಿದ ಕಾರಣ ಮಲ್ಲಿಕಾರ್ಜುನ ಎಂಬ ಹೆಸರು ಬಂತೆಂದು ಹೇಳುತ್ತಾರೆ.

 ಮೂವತ್ತು ಅಡಿಯಿಂದ ದುಮ್ಮಿಕ್ಕುವ ದೇವರಗುಂಡಿ ಜಲಪಾತ

ಮೂವತ್ತು ಅಡಿಯಿಂದ ದುಮ್ಮಿಕ್ಕುವ ದೇವರಗುಂಡಿ ಜಲಪಾತ

ಮಲ್ಲಿಕಾರ್ಜುನ ದೇವಾಲಯದ ಬಳಿಯಲ್ಲಿಯೇ ನದಿ ಹರಿಯುತ್ತದೆ. ಇಲ್ಲಿರುವ ಮತ್ಸ್ಯತಟಾಕವು ಆಕರ್ಷಕವಾಗಿದೆ. ಏಕರೂಪದ ಸಹಸ್ರಾರು ಮೀನುಗಳು ಇಲ್ಲಿದ್ದು ನೋಡುಗರ ಗಮನಸೆಳೆಯುತ್ತದೆ. ಇಲ್ಲಿಂದ ಸುಮಾರು ಎರಡು ಕಿ.ಮೀ. ದೂರದಲ್ಲಿ ಆಕರ್ಷಕ ಜಲಪಾತವಿದೆ. ಪಟ್ಟಿಮಲೆ ಎಂಬಲ್ಲಿಂದ ಹರಿದು ಬರುವ ಮತ್ಸ್ಯತೀರ್ಥ ಎಂಬ ನದಿಯು ದೇವರಗುಂಡಿ ಎಂಬಲ್ಲಿ ಸುಮಾರು ಮೂವತ್ತು ಅಡಿಯಷ್ಟು ಎತ್ತರದಿಂದ ಧುಮುಕಿ ಜಲಪಾತವನ್ನು ಸೃಷ್ಟಿಸಿದೆ. ಇದನ್ನು "ದೇವರಗುಂಡಿ ಜಲಪಾತ" ಎಂದೇ ಕರೆಯುತ್ತಾರೆ. ಜಲಧಾರೆಯು ಧುಮುಕಿ ಬೀಳುವಲ್ಲಿ ಬೃಹತ್ ಗುಂಡಿಯಿದ್ದು ಇಲ್ಲಿಂದ ಶಿವನು ವಿಷ್ಣುವನ್ನು ಮತ್ಸ್ಯ ವಾಹನವನ್ನಾಗಿ ಮಾಡಿಕೊಂಡು ಅಂತರ ಮಾರ್ಗದಿಂದ ತೊಡಿಕಾನದವರೆಗೆ ಬಂದಿದ್ದನು ಎಂದು ಹೇಳಲಾಗುತ್ತಿದೆ. ಆದುದರಿಂದ ಇಲ್ಲಿನ ಜಲವನ್ನು ತೀರ್ಥವೆಂದು ಜನ ಸ್ವೀಕರಿಸುತ್ತಾರೆ.

 ತಲಕಾವೇರಿಗೆ ತೀರ್ಥದಿಂದ ಮಲ್ಲಿಕಾರ್ಜುನನಿಗೆ ಅಭಿಷೇಕ

ತಲಕಾವೇರಿಗೆ ತೀರ್ಥದಿಂದ ಮಲ್ಲಿಕಾರ್ಜುನನಿಗೆ ಅಭಿಷೇಕ

ಇದೆಲ್ಲದರ ನಡುವೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನಕ್ಕೂ ಕೊಡಗಿನ ತಲಕಾವೇರಿಗೂ ನೇರ ಸಂಬಂಧಗಳಿವೆ. ತಲಕಾವೇರಿ ತೀರ್ಥೋದ್ಭವ ಸಂದರ್ಭದಲ್ಲಿ ಕಾವೇರಿ ತೀರ್ಥವನ್ನು ತೊಡಿಕಾನ ದೇವಸ್ಥಾನಕ್ಕೆ ಮೊದಲು ತೆಗೆದಿಡುತ್ತಾರೆ. ದೇಗುಲದಿಂದ ಅರ್ಚಕರು ತಲಕಾವೇರಿಗೆ ತೆರಳಿ, ತೀರ್ಥ ತಂದು, ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರಿಗೆ ಅಭಿಷೇಕ ಮಾಡುತ್ತಾರೆ. ಹಿಂದಿನ ಕಾಲದಲ್ಲಿ ಅಕ್ಟೋಬರ್ ತಿಂಗಳ ತುಲಾಸಂಕ್ರಮಣದಂದು ಘಟಿಸುವ ತಲಕಾವೇರಿಯಲ್ಲಿನ ತೀರ್ಥೋದ್ಭವಕ್ಕೆ ದಕ್ಷಿಣ ಕನ್ನಡ ಭಾಗದ ಭಕ್ತರು ಕಾಲ್ನಡಿಗೆಯಲ್ಲಿ ತೆರಳುತ್ತಿದ್ದರು. ಹೀಗೆ ತೆರಳುವವರು ತೊಡಿಕಾನದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ರಾತ್ರಿ ಕಳೆದು, ದೇವರ ದರ್ಶನ ಹಾಗೂ ವಿಶ್ರಾಂತಿ ಪಡೆದು, ತೊಡಿಕಾನ-ಪಟ್ಟಿ-ಭಾಗಮಂಡಲ ರಸ್ತೆಯಲ್ಲಿ ತಲಕಾವೇರಿಯನ್ನು ತಲಪುತ್ತಿದ್ದರು. ಅದರಂತೆ ಕಾವೇರಿ ಜಾತ್ರೆಯ ಮುನ್ನಾ ದಿನ ತೊಡಿಕಾನ ದೇವಸ್ಥಾನದಲ್ಲಿ ಕೊಪ್ಪರಿಗೆ ಏರಿಸುವ ಸಂಪ್ರದಾಯವಿದೆ ಇಂದಿಗೂ ಇದೆ.

 ತೊಡಿಕಾನಕ್ಕೆ ತೆರಳುವುದೇಗೆ?

ತೊಡಿಕಾನಕ್ಕೆ ತೆರಳುವುದೇಗೆ?

ಅದು ಏನೇ ಇರಲಿ.. ತೊಡಿಕಾನಕ್ಕೆ ತೆರಳಿದವರು ಸುತ್ತಮುತ್ತಲಿನ ಪ್ರಕೃತಿ ಮಡಿಲಿನಲ್ಲಿ ನಿಂತು ಸುತ್ತಮುತ್ತ ಕಣ್ಣು ಹಾಯಿಸಿದಾಗ ತಕ್ಷಣಕ್ಕೆ ತಮ್ಮ ದಿನನಿತ್ಯದ ಜಂಜಾಟವನ್ನು ಮರೆತು ಹಗುರವಾಗಿ ಬಿಡುತ್ತಾರೆ. ಮಡಿಕೇರಿಯಿಂದ ಸುಳ್ಯದತ್ತ ಹೊರಟರೆ ಸಂಪಾಜೆ ಬಳಿಕ ಸಿಗುವ ಅರಂತೋಡು ಎಂಬಲ್ಲಿಂದ ಎಡಕ್ಕೆ ಸುಮಾರು ಆರು ಕಿ.ಮೀ. ದೂರ ತೆರಳಿದರೆ ತೊಡಿಕಾನ ಕ್ಷೇತ್ರವನ್ನು ತಲುಪಬಹುದಾಗಿದೆ. ಬಸ್ ನಲ್ಲಿ ತೆರಳುವವರು ಅರಂತೋಡಿನಲ್ಲಿ ಇಳಿದುಕೊಂಡರೆ ಅಲ್ಲಿಂದ ದೇಗುಲಕ್ಕೆ ತೆರಳಲು ಖಾಸಗಿ ಬಸ್ ಮತ್ತು ವಾಹನಗಳ ವ್ಯವಸ್ಥೆಯಿದೆ.

English summary
Thodikana Travel Guide : Thodikana is in the Sullia taluk of Dakshina Kannada district, about 100 km from Mangalore city, broder of Kodagu district. Know best places to visit, attractions and how to reach.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X