ಬೆಳಗಾವಿ-ಕಲಬುರಗಿ ನಡುವೆ ವಿಮಾನ ಸಂಚಾರ, ವೇಳಾಪಟ್ಟಿ
ಬೆಳಗಾವಿ, ಮೇ 18: ಗಡಿನಾಡು ಬೆಳಗಾವಿಯಿಂದ ಹೈದರಾಬಾದ್ ಕರ್ನಾಟಕದ ಪ್ರಮುಖ ನಗರ ಕಲಬುರಗಿಗೆ ಸಂಚಾರ ನಡೆಸುವ ಜನರಿಗೆ ಸಿಹಿಸುದ್ದಿ. ವಾರದಲ್ಲಿ 4 ದಿನಗಳ ಕಾಲ ಬೆಳಗಾವಿ-ಕಲಬುರಗಿ ನಡುವೆ ವಿಮಾನ ಸಂಚಾರ ನಡೆಸಲಿದೆ.
ಸ್ಟಾರ್ ಏರ್ ವಿಮಾನಯಾನ ಸಂಸ್ಥೆ ಬೆಳಗಾವಿ-ಕಲಬುರಗಿ ನಡುವೆ ವಿಮಾನ ಸಂಚಾರ ಘೋಷಣೆ ಮಾಡಿದೆ. ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಿಂದ ಸುಮಾರು 3 ಗಂಟೆಯಲ್ಲಿ ಜನರು ಸೇಡಂ ರಸ್ತೆಯಲ್ಲಿರುವ ಕಲಬುರಗಿ ವಿಮಾನ ನಿಲ್ದಾಣ ತಲುಪಬಹುದು.

ಪ್ರತಿದಿನ ಬೆಳಗಾವಿ-ಕಲಬುರಗಿ ನಡುವೆ ಸಂಚಾರ ನಡೆಸುವ ಪ್ರಯಾಣಿಕರನ್ನು ಗಮನದಲ್ಲಿಟ್ಟುಕೊಂಡು ಸ್ಟಾರ್ ಏರ್ ಈ ವಿಮಾನ ಸೇವೆ ಆರಂಭಿಸಿದೆ. ವಾರದಲ್ಲಿ 4 ದಿನ ವಿಮಾನ ಸೇವೆ ಇರಲಿದೆ.
ವಿಮಾನದ ವೇಳಾಪಟ್ಟಿ: ಮಾಹಿತಿಗಳ ಪ್ರಕಾರ ಸೋಮವಾರ, ಗುರುವಾರ, ಶುಕ್ರವಾರ ಮತ್ತು ಶನಿವಾರ ಬೆಳಗಾವಿ-ಕಲಬುರಗಿ ನಡುವೆ ವಿಮಾನ ಹಾರಾಟ ನಡೆಸಲಿದೆ. ಈ ಮಾರ್ಗದಲ್ಲಿ ಎಸ್5-153 ಮತ್ತು ಎಸ್5-127 ಮಾದರಿಯ ವಿಮಾನ ಹಾರಾಡಲಿದೆ. ಬೆಳಗಾವಿಯಿಂದ ಹೊರಡುವ ವಿಮಾನ ತಿರುಪತಿ ಮೂಲಕ ಕಲಬುರಗಿಗೆ ಪ್ರಯಾಣಿಸಲಿದೆ.
ಬೆಳಗಾವಿ-ಕಲಬುರಗಿ ನಡುವೆ ಎಸ್5-153 ವಿಮಾನ ಸಂಚಾರ ನಡೆಸಲಿದೆ. ಈ ವಿಮಾನ ಬೆಳಗಾವಿಯಿಂದ ಮಧ್ಯಾಹ್ನ 2.55ಕ್ಕೆ ಹೊರಟು, 4.05ಕ್ಕೆ ತಿರುಪತಿಯಲ್ಲಿ ಲ್ಯಾಂಡ್ ಆಗಲಿದೆ. ತಿರುಪತಿಯಿಂದ 4.30ಕ್ಕೆ ಹೊರಟು, 5.04ಕ್ಕೆ ಕಲಬುರಗಿ ವಿಮಾನ ನಿಲ್ದಾಣ ತಲುಪಲಿದೆ.
ಕಲಬುರಗಿ-ಬೆಳಗಾವಿ ನಡುವೆ ಎಸ್5-127 ವಿಮಾನ ಹಾರಾಟ ನಡೆಸಲಿದೆ. ಕಲಬುರಗಿಯಿಂದ ಸಂಜೆ 6.35ಕ್ಕೆ ಹೊರಡುವ ವಿಮಾನ 7.40ಕ್ಕೆ ತಿರುಪತಿಗೆ ತಲುಪಲಿದೆ. ತಿರುಪತಿಯಿಂದ 8.05ಕ್ಕೆ ಹೊರಡುವ ವಿಮಾನ ಬೆಳಗಾವಿಯನ್ನು 8.50ಕ್ಕೆ ತಲುಪಲಿದೆ.
ಬೆಳಗಾವಿ-ಕಲಬುರಗಿ ನಡುವಿನ ಪ್ರಯಾಣ ದರ ಪ್ರಾಥಮಿಕವಾಗಿ 6000 ಎಂದು ನಿಗದಿ ಮಾಡಲಾಗಿದೆ. ಸ್ಟಾರ್ ಏರ್ ಈಗಾಗಲೇ ಬೆಂಗಳೂರು-ಬೆಳಗಾವಿ ನಡುವೆ ಎರಡು ವಿಮಾನಗಳನ್ನು ಓಡಿಸುತ್ತಿದೆ. ಕಡಿಮೆ ಬೆಲೆಯಲ್ಲಿ ವಿಮಾನ ಪ್ರಯಾಣದ ಅವಕಾಶ ನೀಡುವುದು ಸ್ಟಾರ್ ಏರ್ ಗುರಿಯಾಗಿದೆ.
2008ರಲ್ಲಿ ಕಲಬುರಗಿ ವಿಮಾನ ನಿಲ್ದಾಣದ ಕಾಮಗಾರಿ ಆರಂಭಗೊಂಡಿದ್ದು, ಆರಂಭಿಕ ಹಂತದಲ್ಲಿ ಪಿಪಿಪಿ ಯೋಜನೆಯಡಿ ಹೈದ್ರಾಬಾದ್‌ನ ಸತ್ಯಂ ಕಂಪನಿಯ ಅಂಗ ಸಂಸ್ಥೆಯಾದ ಮೇಟಾಸ್ ಸಂಸ್ಥೆಗೆ ವಿಮಾನ ನಿಲ್ದಾಣ ಕಾಮಗಾರಿಯ ಗುತ್ತಿಗೆ ನೀಡಲಾಗಿತ್ತು. ಸತ್ಯಂ ಹಗರಣ ಬಯಲಿಗೆ ಬಂದ ನಂತರ ಸದರಿ ಕಂಪನಿಯೊಂದಿಗೆ ಮಾಡಿಕೊಂಡ ಒಪ್ಪಂದ ರದ್ದುಪಡಿಸಲಾಯಿತು.
2010ರಲ್ಲಿ ರಾಹಿ ಸಂಸ್ಥೆಗೆ ಜವಾಬ್ದಾರಿ ನೀಡಲಾಗಿತ್ತು. ರಾಹಿ ಸಂಸ್ಥೆಯ ನಿಧಾನಗತಿ ಕಾಮಗಾರಿಯಿಂದ ರಾಜ್ಯ ಸರ್ಕಾರ ಸದರಿ ಸಂಸ್ಥೆಯಿಂದ ಯೋಜನೆಯನ್ನು ಹಿಂಪಡೆದು ನಾಗರಿಕ ವಿಮಾನಯಾನ ಪ್ರಾಧಿಕಾರದಿಂದ ತಾಂತ್ರಿಕವಾಗಿ ಅನುಮೋದನೆ ಪಡೆದು ಉಳಿದ ಕಾಮಗಾರಿಯನ್ನು ಪೂರ್ಣಗೊಳಿಸಲು 2015ರಲ್ಲಿ ಲೋಕೋಪಯೋಗಿ ಇಲಾಖೆಗೆ ವಹಿಸಲಾಯಿತು.
742 ಎಕರೆ ಬೃಹತ್ ಪ್ರದೇಶದಲ್ಲಿ ಕಲಬುರಗಿ ವಿಮಾನ ನಿಲ್ದಾಣದಲ್ಲಿ ಲಘು ವಿಮಾನಗಳು ಸೇರಿದಂತೆ ಏರ್‌ಬಸ್-320 ಸಹ ಲ್ಯಾಂಡ್ ಆಗಲು ಅನುಕೂಲವಾಗುವಂತೆ 3.725 ಕಿ. ಮೀ. ಉದ್ದದ ರನ್‍ವೇ ನಿರ್ಮಾಣ ಮಾಡಲಾಗಿದೆ. 2022ರ ನವೆಂಬರ್‌ನಲ್ಲಿ ವಿಮಾನ ನಿಲ್ದಾಣ ಲೋಕಾರ್ಪಣೆ ಮಾಡಲಾಯಿತು.
ವಿಮಾನ ನಿಲ್ದಾಣ ಉದ್ಘಾಟಿಸಿ ಮಾತನಾಡಿದ್ದ ಅಂದಿನ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, "ಕಲ್ಯಾಣ ಕರ್ನಾಟಕದ ಅಭಿವೃದ್ಧಿಯಲ್ಲಿ ಕಲಬುರಗಿ ವಿಮಾನ ನಿಲ್ದಾಣ ಹೊಸ ಅಯಾಮ ನೀಡಲಿದೆ. ರಾಜ್ಯದ ಈಶಾನ್ಯ ಭಾಗಕ್ಕೆ ವಿಮಾನಯಾನ ಸಂಪರ್ಕ ಹೊಂದಿರುವುದರಿಂದ ದೇಶ, ವಿದೇಶದಿಂದ ಉದ್ಯಮಿಗಳು ಇಲ್ಲಿ ಹಣ ಹೂಡಿಕೆ ಮಾಡಲಿದ್ದಾರೆ" ಎಂದು ಹೇಳಿದ್ದರು.
ಕಲಬುರಗಿ ವಿಮಾನ ನಿಲ್ದಾಣ ರಾಜ್ಯದ 2ನೇ ಹಾಗೂ ದೇಶದ 10ನೇ ಅತಿ ಉದ್ದದ ರನ್ ವೇ ಹೊಂದಿರುವ ವಿಮಾನ ನಿಲ್ದಾಣವಾಗಿದೆ. ದೇಶಕ್ಕೆ ಶೇ.30 ರಷ್ಟು ತೊಗರಿ ಉತ್ಪಾದಿಸುವ ಮತ್ತು ಸಿಮೆಂಟ್ ರಫ್ತುಮೂಲಕ ಕಲಬುರಗಿ ಜಿಲ್ಲೆ ವಿಶ್ವದಾದ್ಯಂತ ಗಮನ ಸೆಳೆದಿದೆ. ಇಲ್ಲಿನ ವಿಮಾನ ನಿಲ್ದಾಣ ಸರಕು ಸಾಗಣೆಗೂ ಜೊತೆಗೆ ಪ್ರಯಾಣಿಕರಿಗೂ ಸಹಕಾರಿಯಾಗಿದೆ.












Click it and Unblock the Notifications