ಮೈಸೂರು: ಪಿರಿಯಾಪಟ್ಟಣದ ಟಿಬೆಟ್ ಕ್ಯಾಂಪ್‌ನ ಈ ಚಕ್ರ ತಿರುಗಿಸಿದರೆ ಜೀವನ ಪಾವನ!
ಮೈಸೂರು, ಸೆಪ್ಟೆಂಬರ್ 12: ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೈಲುಕುಪ್ಪೆಯ ಟಿಬೆಟ್ ಕ್ಯಾಂಪ್ ಮತ್ತು ಅಲ್ಲಿರುವ ಗೋಲ್ಡನ್ ಟೆಂಪಲ್ ಪ್ರವಾಸಿಗರ ಆಕರ್ಷಣೀಯ ಕೇಂದ್ರವಾಗಿ ಗಮನಸೆಳೆಯುತ್ತದೆ. ಜೊತೆ ಜತೆಗೆ ಇಲ್ಲಿಗೆ ಭೇಟಿ ನೀಡಿ ಶುದ್ಧ ಮನಸ್ಸಿನಿಂದ ಅದೊಂದು ಪ್ರಾರ್ಥನೆ ಮಾಡಿದರೆ ರೋಗರುಜಿನಗಳಿಂದ ಮುಕ್ತವಾಗಿ ನೆಮ್ಮದಿಯ ಜೀವನ ಸಾಧ್ಯ ಎಂಬ ನಂಬಿಕೆಯೂ ಇಲ್ಲಿದೆ.
ಒಂದು ವೇಳೆ ಮೊದಲ ಬಾರಿಗೆ ಬೈಲುಕುಪ್ಪೆಯ ಟಿಬೆಟ್ ಕ್ಯಾಂಪ್‌ಗೆ ಹೋಗಿದ್ದೇ ಆದರೆ ಅಲ್ಲಿನ ವಾತಾವರಣ ಟಿಬೆಟ್ ದೇಶವನ್ನು ನೆನಪಿಸುತ್ತದೆ. ಜೊತೆಗೆ ನಾವೇನಾದರೂ ಟಿಬೆಟ್‌ನಲ್ಲಿದ್ದೇವಾ ಎಂಬ ಭಾವ ಮೂಡಿಸುತ್ತದೆ. ಏಕೆ ಹೀಗೆ? ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಹೋದರೆ ಚೈನಾ ದಾಳಿಯಿಂದ ನಿರಾಶ್ರಿತರಾಗಿ ಭಾರತಕ್ಕೆ ಬಂದ ಟಿಬೆಟಿಯನ್ನರ ದುರಂತದ ಕಥೆ ನೆನಪಾಗುತ್ತದೆ. ಜೊತೆಯಲ್ಲಿಯೇ ಬೆಂಗಾಡಾಗಿದ್ದ ಊರಿನಲ್ಲಿ ಬದುಕು ಕಟ್ಟಿದ ಅವರ ಶ್ರಮಕ್ಕೆ ಭೇಷ್ ಎನ್ನಲೇ ಬೇಕಾಗುತ್ತದೆ.

ಅವತ್ತು ಮೈಸೂರು-ಕೊಡಗು ಗಡಿಭಾಗದಲ್ಲಿದ್ದ ಕಲ್ಲುಗುಡ್ಡದ ಬಯಲು ಪ್ರದೇಶವನ್ನು ನಿರಾಶ್ರಿತರಾಗಿ ಬಂದಿದ್ದ ಟಿಬೆಟಿಯನ್ನರಿಗೆ ಬಿಟ್ಟುಕೊಡಲಾಗಿತ್ತು. ಆದರೆ ಇವತ್ತು ಅದೊಂದು ಮಿನಿ ಟಿಬೆಟ್ ದೇಶದಂತೆ ರೂಪುಗೊಂಡಿದೆ. ಜೊತೆಗೆ ಒಂದು ಪ್ರವಾಸಿ ತಾಣವಾಗಿ ಕರ್ನಾಟಕದ ಭೂಪಟದಲ್ಲಿ ಗುರುತಿಸಿಕೊಂಡಿದೆ. ಇಷ್ಟೆಲ್ಲ ಆಗಿದೆ ಎಂದರೆ ಅಚ್ಚರಿಯಾಗುತ್ತದೆ. ಆದರೆ ಅದರ ಹಿಂದೆ ಟಿಬೆಟಿಯನ್ನರ ಶ್ರಮವೂ ಇದೆ ಎನ್ನುವುದನ್ನು ತಳ್ಳಿಹಾಕಲಾಗದು.
ಬೈಲುಕುಪ್ಪೆ ಟಿಬೆಟ್ ಕ್ಯಾಂಪ್ ವಿಶೇಷತೆ
ಇಷ್ಟಕ್ಕೂ ಪ್ರವಾಸಿಗರು ಬೈಲುಕುಪ್ಪೆಯ ಟಿಬೆಟ್ ಕ್ಯಾಂಪ್‌ಗೆ ಏಕೆ ಬರುತ್ತಾರೆ? ಅಲ್ಲಿರುವ ನಂಬಿಕೆಯೊಂದು ಜನರನ್ನು ಅತ್ತ ಬರುವಂತೆ ಮಾಡುತ್ತಿದೆಯಾ? ಎಂಬ ಪ್ರಶ್ನೆಗಳು ನಮ್ಮನ್ನು ಕಾಡದಿರದು. ಅದೇನು ನಂಬಿಕೆ ಎಂಬುದನ್ನು ಹೇಳುವ ಮುನ್ನ ಇಲ್ಲಿರುವ ದೇವಾಲಯಗಳ ಪರಿಚಯವನ್ನು ಮಾಡಿಕೊಳ್ಳಲೇ ಬೇಕಾಗಿದೆ. ಅದರಲ್ಲೂ ಗೋಲ್ಡನ್ ಟೆಂಪಲ್ ಬಗ್ಗೆ ಹೇಳಲೇ ಬೇಕಾಗುತ್ತದೆ.
ಬೈಲುಕುಪ್ಪೆ ಮೈಸೂರಿನಿಂದ ಸುಮಾರು 88ಕಿ.ಮೀ. ದೂರದಲ್ಲಿದೆ. ಈ ಸ್ಥಳ ಪ್ರವಾಸಿಗರನ್ನು ಸೆಳೆಯಲು ಬಹುಮುಖ್ಯವಾಗಿ ಇಲ್ಲಿ ನಿರ್ಮಿಸಲ್ಪಟ್ಟಿರುವ ಸ್ವರ್ಣದೇಗುಲ(ಗೋಲ್ಡನ್ ಟೆಂಪಲ್)ವೇ ಮುಖ್ಯ ಕಾರಣವಾಗಿದೆ. ಸ್ವರ್ಣ ದೇಗುಲದೊಂದಿಗೆ ಸುಮಾರು ಹದಿನಾರಕ್ಕೂ ಹೆಚ್ಚು ವಿವಿಧ ದೇಗುಲಗಳು ಸೇರಿದಂತೆ ಧ್ಯಾನಕೇಂದ್ರ, ಸನ್ಯಾಸಿನಿಯರ ಬೌದ್ಧವಿಹಾರ, ಬೌದ್ಧ ಭಿಕ್ಷುಗಳ ಮಹಾವಿದ್ಯಾಲಯ, ಆಸ್ಪತ್ರೆ, ಬೌದ್ಧವಿಹಾರದ ಸುತ್ತ 1300 ಪ್ರಾರ್ಥನಾ ಚಕ್ರಗಳು, ಎಂಟು ಸ್ಥೂಪಗಳು ಇಲ್ಲಿನ ವಿಶೇಷತೆಗಳಾಗಿವೆ.

ಗೋಲ್ಡನ್ ಟೆಂಪಲ್ ಆಕರ್ಷಣೆಯ ತಾಣ
ಇನ್ನು ಟೆಬೆಟ್ ಕ್ಯಾಂಪ್ ನ ಪ್ರಮುಖ ಆಕರ್ಷಣೆಯಾಗಿರುವ ಸ್ವರ್ಣ ದೇಗುಲ ಅರ್ಥಾತ್ ಗೋಲ್ಡನ್ ಟೆಂಪಲ್ ಬಗ್ಗೆ ಹೇಳುವುದಾದರೆ ಇದು ಟಿಬೆಟ್ ದೇಶದ ಸಂಪ್ರದಾಯಗಳಿಗೆ ತಕ್ಕಂತೆ ನಿರ್ಮಾಣ ಮಾಡಲಾಗಿದೆ. ಇದನ್ನು ಪರಮ ಪೂಜ್ಯ ಪನೋರ್ ರಿನ್ ಪೋಚೆಯವರು 1995-99ರಲ್ಲಿ ಅವಧಿಯಲ್ಲಿ ನಿರ್ಮಸಿದ್ದಾರೆ. ನಾಲ್ಕು ವರ್ಷಗಳ ಸತತ ಪರಿಶ್ರಮದಿಂದ ನಿರ್ಮಾಣ ಕಾರ್ಯ ನಡೆದಿದ್ದು, ಈ ಸಂದರ್ಭ ದೇಗುಲವನ್ನು ಆಕರ್ಷಕವಾಗಿಯೂ, ವೈಶಿಷ್ಟ್ಯಪೂರ್ಣವಾಗಿ ನಿರ್ಮಿಸಿದ್ದರಿಂದಲೇ ಇದು ಪ್ರವಾಸಿಗರ ಆಕರ್ಷಣೀಯ ಕ್ಷೇತ್ರವಾಗಿ ಆಸ್ತಿಕರು, ನಾಸ್ತಿಕರು ಎನ್ನದೆ ಎಲ್ಲರನ್ನು ಸೆಳೆಯುವಂತಾಗಿದೆ.
ಬೌದ್ಧ ದೇಗುಲ ಎಂದ ಮೇಲೆ ಅಲ್ಲಿ ಶಾಂತಿ ನೆಮ್ಮದಿ ಇರಲೇ ಬೇಕು. ಅದರಂತೆ ಈ ದೇಗುಲಕ್ಕೆ ಹೋಗುವ ಪ್ರತಿಯೊಬ್ಬರ ಮನಸ್ಸು ಹಗುರವಾಗುತ್ತದೆ. ಅಲ್ಲಿದ್ದಷ್ಟು ಹೊತ್ತು ಮನದಲ್ಲಿದ್ದ ದುಃಖ, ದುಗುಡ, ದುಮ್ಮಾನಗಳು ಮಾಯವಾಗಿ ಉಲ್ಲಾಸ ಮನೆಮಾಡುತ್ತದೆ. ದೇವಾಲಯದತ್ತ ನೋಟ ಹರಿಸಿದರೆ ಉತ್ಕೃಷ್ಟ ಶಿಲ್ಪಕಲೆಯಿಂದ ಕೂಡಿದ ಮಂದಿರ ಎನ್ನುವುದರಲ್ಲಿ ಎರಡು ಮಾತಿಲ್ಲ. ಜತೆಗೆ ಇಲ್ಲಿನ ಕಲೆಗೆ ಚಿನ್ನದ ಲೇಪನದ ಮೆರುಗು ಎದ್ದು ಕಾಣಿಸುತ್ತದೆ.
ದೇಗುಲದಲ್ಲಿ ಮನಸ್ಸು ಹಗುರವಾದ ಭಾವ
ದೇವಾಲಯ ವಿಶಾಲ ಹಜಾರವನ್ನು ಹೊಂದಿದ್ದು, ದೇವಾಲಯದ ಪೀಠದಿಂದಲೇ ಅರವತ್ತು ಅಡಿ ಎತ್ತರದ ಭಗವಾನ್ ಬುದ್ದನ ಮೂರ್ತಿ, ಐವತ್ತೆಂಟು ಅಡಿ ಎತ್ತರದ ಗುರು ಪದ್ಮಸಂಭವ ಹಾಗೂ ಬುದ್ದ ಅಮಿತಾಯುಸ್‌ನ ಮೂರು ಬೃಹತ್ ಪ್ರಧಾನ ಮೂರ್ತಿಗಳಿದ್ದು, ಇವುಗಳನ್ನು ಚಿನ್ನಲೇಪಿತ ತಾಮ್ರದ ಲೋಹದಿಂದ ನಿರ್ಮಿಸಿರುವುದು ವಿಶೇಷವಾಗಿದೆ.

ಈ ಮೂರ್ತಿಗಳ ಒಳಗೆ ಧರ್ಮಗ್ರಂಥಗಳು, ಮಹಾತ್ಮರ ಭಗ್ನಾವಶೇಷಗಳು, ಜೇಡಿಮಣ್ಣಿನ ಸ್ಥೂಪಗಳು, ಎರಕದ ಅಚ್ಚುಗಳು ಮತ್ತು ಸಣ್ಣ ಮೂರ್ತಿಗಳಿವೆ. ಇವು ಭಗವಾನ್ ಬುದ್ದನ ದೇಹ ನುಡಿ ಮತ್ತು ಮನಸ್ಸಿನ ಸಂಕೇತಗಳಾಗಿವೆ. ಇವುಗಳನ್ನು ಪೂಜಿಸಿದ್ದೇ ಆದಲ್ಲಿ ಮನಸ್ಸಿನಲ್ಲಿ ನಂಬಿಕೆ, ಶಾಂತಿ, ವಿವೇಕ, ಪ್ರೀತಿ, ದಯೆ ಮತ್ತು ಅನುಕಂಪಗಳು ಮೂಡಿ ನಮ್ಮ ಕಲ್ಮಶ ಮನಸ್ಸು ಶುದ್ಧಗೊಳ್ಳುತ್ತದೆ ಎಂಬ ನಂಬಿಕೆ ಇಲ್ಲಿದೆ.
ಇನ್ನು ದೇಗುಲದ ಗೋಡೆಗಳಲ್ಲಿ ಪ್ರಧಾನ ಮೂರ್ತಿಗಳ ಇಕ್ಕೆಲಗಳಲ್ಲಿ ಜೋಗ್ ಚಿನ್ ರವರ ಬೋಧನೆಗಳನ್ನು ಆಚರಿಸಿ ಮಹಾಸಿದ್ದಿ ಪಡೆದ ಗುರುಪದ್ಮ ಸಂಭವರವರ 25 ಶಿಷ್ಯಂದಿಯರನ್ನು ಅಲ್ಲದೆ, ಬೃಹತ್ ಮೂರ್ತಿಗಳ ಹಿಂದೆ ಕಾಣಿಕೆಯ ದೇವತೆಯನ್ನು ಕಾಣಬಹುದಾಗಿದೆ. ಮೂರನೆಯ ಅಂತಸ್ತಿನ ಎರಡು ಕಡೆ ಜೋಗ್ ಚಿನ್ ಅವರ 12 ಮಹಾ ಮಹಿಮ ಗುರುಗಳನ್ನು ಪ್ರತಿನಿಧಿಸಿದರೆ, ಎರಡನೆಯ ಅಂತಸ್ತಿನ ಚಿತ್ರಗಳು ಪಾಲ್ಯುಲ್ ಸಂಪ್ರದಾಯದ ಸಿಂಹಾಸನಾಧೀಶರನ್ನು ಮತ್ತು ಜ್ಞಂಗ್ ಮ ಸಂಪ್ರದಾಯದ ಮಹಾಮಹಿಮ ವಿದ್ವಾಂಸರನ್ನು ಮತ್ತು ಶ್ರೇಷ್ಠ ಬೋಧಕರನ್ನು ಪ್ರತಿನಿಧಿಸುತ್ತದೆ.
ಮನುಷ್ಯನ ಮಾನಸಿಕ ಸ್ತರ ತೋರಿಸುತ್ತದೆ
ಮೊದಲನೆ ಅಂತಸ್ತಿನ ಗೋಡೆಯಲ್ಲಿ ತಾಂತ್ರಿಕ ಬೌದ್ದ ಧರ್ಮದ ಪ್ರಭಾವದ ಚಿತ್ರಗಳಾದ ಲಾಮ, ಏಡಂ ಮತ್ತು ಡಾಕಿನಿ ಎಂಬ ಮೂರು ದೇವತೆಗಳನ್ನು ಕಾಣಬಹುದಾಗಿದೆ. ಅಲ್ಲದೆ ಇಲ್ಲಿ ದೇವತೆಗಳನ್ನು ಉಗ್ರ ರೂಪದಲ್ಲಿಯೂ ಹಾಗೂ ಸಂಗಮ ರೂಪದಲ್ಲಿಯೂ ಚಿತ್ರಿಸಲಾಗಿದ್ದು, ಶಾಂತದೇವತೆಗಳು ರೇಷ್ಮೆ ವಸ್ತುಗಳನ್ನು ಮತ್ತು ಅಮೂಲ್ಯ ಲೋಹ, ಹರಳುಗಳನ್ನು ಧರಿಸಿದ್ದರೆ, ಉಗ್ರ ಸ್ವರೂಪದ ದೇವತೆಗಳು ಚರ್ಮ ಮತ್ತು ಮೂಳೆಯ ಆಭರಣಗಳನ್ನು ಧರಿಸಿರುವುದು ಕಂಡು ಬರುತ್ತದೆ. ಇಲ್ಲಿರುವ ದೇವತೆಗಳನ್ನು ರೂಪಿಸಿರುವ ರೀತಿಗಳು ಮನುಷ್ಯನ ಮಾನಸಿಕ ಸ್ತರಗಳನ್ನು ತೋರಿಸುತ್ತದೆ.

ಪ್ರವೇಶದ್ವಾರದಿಂದ ಆರಂಭವಾಗಿ ದೇವಾಲಯಕ್ಕೆ ಸುತ್ತುವರಿದುಕೊಂಡು ಸುಮಾರು ಸಾವಿರದ ಮುನ್ನೂರಕ್ಕೂ ಹೆಚ್ಚಿನ ಪ್ರಾರ್ಥನಾ ಚಕ್ರಗಳಿದ್ದು, ಈ ಪ್ರಾರ್ಥನಾ ಚಕ್ರಗಳನ್ನು ಭಕ್ತಿಯಿಂದ ಪ್ರದಕ್ಷಿಣೆ ಮಾಡಿ ಅವುಗಳನ್ನು ಬಲಭಾಗದಿಂದ ತಿರುಗಿಸಿದರೆ ನಾವು ರೋಗ-ರುಜಿನಗಳಿಂದ ಮುಕ್ತಗೊಂಡು ಜೀವನ ಪಾವನವಾಗುತ್ತದೆ ಎಂಬ ನಂಬಿಕೆಯಿದೆ. ಈ ನಂಬಿಕೆಯಿಂದಲೇ ಹೆಚ್ಚಿನ ಜನ ಇಲ್ಲಿಗೆ ಬಂದು ಆರೋಗ್ಯಯುತ ನೆಮ್ಮದಿಯ ಬದುಕಿಗಾಗಿ ಪ್ರಾರ್ಥಿಸುತ್ತಾರೆ.
ಇಲ್ಲಿದೆ ಹತ್ತು ಹಲವು ವಿಶೇಷತೆಗಳು
ಇಲ್ಲಿ ನೋಡಲು ಹಲವು ವಿಶೇಷ ಸ‍್ಥಳಗಳಿವೆ ಅವುಗಳು ಯಾವುದೆಂದರೆ ಗೋಲ್ಡನ್ ಟೆಂಪಲ್ ಹೊರಭಾಗದಲ್ಲಿ ಎಂಟು ಸ್ಥೂಪಗಳನ್ನು ನಿರ್ಮಿಸಲಾಗಿದ್ದು, ಅವುಗಳಲ್ಲಿ ಭಗವಾನ್ ಬುದ್ದನ ಜನ್ಮಸ್ಥಳ ಲುಂಬಿನಿ, ಜ್ಞಾನೋದಯವಾದ ಸ್ಥಳ ಬುದ್ದಗಯ, ನಾಲ್ಕು ಮಹತ್ತರ ಸತ್ಯಗಳನ್ನು ಬೋಧಿಸಿದ ಸ್ಥಳ (ಧರ್ಮಚಕ್ರ ಸ್ಥೂಪ) ವಾರಣಾಸಿ, ಪವಾಡಗಳನ್ನು ಪ್ರದರ್ಶಿಸಿದ ಸ್ಥಳ(ಅದ್ಭುತ ಪವಾಡ ಸ್ಥೂಪ) ಶ್ರಾವಸ್ಥಿ, ಬುದ್ದನು ಸ್ವರ್ಗದಲ್ಲಿರುವ ತಮ್ಮ ಮಾತೃಶ್ರೀ ಯವರಿಗೆ ಜ್ಞಾನ ಪ್ರದಾನ ಮಾಡಿ ಸ್ವರ್ಗದಿಂದ ಹಿಂತಿರುಗಿದ ಸ್ಥಳ ವೈಶಾಲಿಯಾಗಿದೆ.
ಬುದ್ದನು ಸಂಘದಲ್ಲಿ ದೇವದತ್ತ ಮತ್ತು ಅವನ ಸಂಬಂಧಿಗಳು ಮಾಡಿದ ಎರಡು ಗುಂಪುಗಳ ನಡುವೆ ಸಂಧಾನ ನಡೆಸಿ ಒಂದು ಗೂಡಿಸಿ ಮತ್ತೆ ಸಂಘಕ್ಕೆ ಸೇರಿಸಿದ ಸ್ಥಳ (ಮೈತ್ರಿ ಸ್ಥೂಪ) ರಾಜಗೃಹ, ಬುದ್ದನು ಭಕ್ತರ ಕೋರಿಕೆಯ ಮೇರೆಗೆ ತಮ್ಮ ಜೀವಾವಧಿಯನ್ನು ಮೂರು ತಿಂಗಳು ಮುಂದೂಡಿದ ಸ್ಥಳ (ವಿಜಯ ಸ್ಥೂಪ) ವೈಶಾಲಿ, ಬುದ್ದನು ನಿರ್ವಾಣ ಹೊಂದಿದ ಸ್ಥಳ (ಪರಿನಿರ್ವಾಣ ಸ್ಥೂಪ) ಕುಶಿನಗರವಾಗಿದೆ. ಈ ಎಂಟು ಸ್ಥೂಪಗಳು ನೋಡಲು ಆಕರ್ಷಕವಾಗಿವೆ.
-
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ












Click it and Unblock the Notifications