ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Travelogue: ಸೋಲೋ ಪ್ರವಾಸ - ಆಯ್ಕೆ ಮತ್ತು ಅನುಭವಗಳ ಸುತ್ತಾಟ

By ಕಾಂತಿ ಹೆಗಡೆ
|
Google Oneindia Kannada News

ಆಕೆ ತೊಂಬತ್ತೈದರ ಹಣ್ಣು ಹಣ್ಣು ಮುದುಕಿ. ಸುಕ್ಕಾದ ದೇಹ, ಉತ್ಸಾಹ ತುಂಬಿದ ಕಣ್ಣುಗಳು. ನನ್ನಜ್ಜಿ ನಿನ್ನ ನೋಡಿದ್ರೆ ಖುಷಿಯಾಗ್ತಾರೆ, ಬಾ .. ಎಂದು ಮೊಮ್ಮಗ ನನ್ನ ಗೆಳೆಯ ತನ್ನ ಮನೆಗೆ ಕರೆದೊಯ್ದಿದ್ದ. ರಷಿಯಾದಿಂದ ಅಮೆರಿಕಕ್ಕೆ ವಲಸೆ ಬಂದ ಜಿವಿಶ್(Jews) ಕುಟುಂಬ. ನಾನು ಭಾರತೀಯಳು. ಸ್ವತಂತ್ರವಾಗಿ ಒಬ್ಬಳೇ ಬದುಕುತ್ತೇನೆ, ಸುತ್ತುತ್ತೇನೆ ಅಂತ ನನ್ನ ಬಗ್ಗೆ ಅಜ್ಜಿಗೆ ಪ್ರಾಥಮಿಕ ಮಾಹಿತಿ ನನ್ನ ಗೆಳೆಯನ ತಾಯಿಯಿಂದ ಆಗಲೇ ತಿಳಿದಿತ್ತು. ಭಾರತದ ಒಟ್ಟಾರೆ ಬದುಕು, ಸಂಸ್ಕೃತಿ, ನನ್ನ ಸುತ್ತಾಟಗಳ ಅನುಭವಗಳ ಬಗೆಗೆ ಅಜ್ಜಿ ಸಾವಧಾನವಾಗಿ ನನ್ನಿಂದ ಕೇಳಿಕೊಂಡು ಕಣ್ಣೀರಾಗಿದ್ದರು.

ಯು ಆರ್ ಬ್ಲೆಸ್ಸ್ ಡ್ ಮೈ ಚೈಲ್ಡ್, I always wanted to travel the world. I couldn't. ಮೇ ಬಿ ಇನ್ ಮೈ ನೆಕ್ಸ್ಟ್ ಬರ್ತ್...! ಕಳೆದ ವರುಷ ಆಕೆಯ ದೇಹಾಂತ್ಯವೂ ಆಗಿ, ಆಕೆಯ ಆಸೆಯಂತೆ ಅಸ್ಥಿಯನ್ನು ಆಳವಾದ ಪೆಸಿಫಿಕ್ ಮಹಾಸಾಗರದ ಮಧ್ಯ ಕೊಂಡೊಯ್ದು ವಿಸರ್ಜಿಸಲಾಯಿತು. ಆಕೆಯ ದೇಹದ ಪ್ರತಿ ಕಣವೂ ಸಾಗರನಲ್ಲಿ ಲೀನವಾಗಿ ಪ್ರಪಂಚದ ಎಲ್ಲಾ ಭಾಗಗಳನ್ನೂ ಸೋಕಬೇಕೆಂಬುದೇ ಆಕೆಯ ಕೊನೆ ಆಸೆಯಾಗಿತ್ತಂತೆ.

ನಾಗಾಲ್ಯಾಂಡ್: ಹಾರ್ನ್‌ಬಿಲ್ ಉತ್ಸವ ಮತ್ತು ನೇತುಹಾಕಿದ ಮಾನವ ತೋರಣನಾಗಾಲ್ಯಾಂಡ್: ಹಾರ್ನ್‌ಬಿಲ್ ಉತ್ಸವ ಮತ್ತು ನೇತುಹಾಕಿದ ಮಾನವ ತೋರಣ

ಮೊನ್ನೆ ಮೊನ್ನೆ ವಿಯೆಟ್ನಾಮ್ ಪ್ರವಾಸ ಹೋದಾಗ ಮೊದಲ ದಿನ ಒಂದಷ್ಟು ಫೋಟೋಗಳನ್ನು ಅಪ್ಲೋಡ್ ಮಾಡಿದ್ದೆ. ನೂರಕ್ಕೂ ಹೆಚ್ಚು ಮೆಸೇಜುಗಳು ನನ್ನ ವಾಟ್ಸಪ್, ಫೇಸ್ಬುಕ್ ಇಂಬಾಕ್ಸಿನಲ್ಲಿ. ಬಹು ಬೇಗ ಮದುವೆಯಾಗಿ ತೋಟ - ಮನೆ ಮಕ್ಕಳು ನಿಭಾಯಿಸಿಕೊಂಡಿರುವ ಗೆಳತಿಯರು, ಐವತ್ತು ಅರವತ್ತರ ಆಸುಪಾಸಿನ ಹಿರಿಯ ಉತ್ಸಾಹಿಗಳು, ಹಲವರು ಮತ್ತಷ್ಟು ಫೋಟೋ, ವಿಡಿಯೋ ಮಾಹಿತಿಗಾಗಿ ಕೋರಿದ್ದರು. ಹಾಗೆಂದೇ ನಾ ಹೋದ ಜಾಗದಲ್ಲೆಲ್ಲ ಸಾಧ್ಯವಾದಷ್ಟೂ ನಿಖರ ಮಾಹಿತಿ ಸಂಗ್ರಹಿಸಿ ಪ್ರತಿದಿನ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿಯೊಟ್ಟಿಗೆ ಫೋಟೋ ಹರಿಯಬಿಡುತ್ತಿದ್ದೆ. ನಾನೇ ಹೋಗಿ ಬಂದಂಗಾಯ್ತು ಕಣೇ, ಅಪರೂಪದ ಜಾಗಗಳು exist ಇದೆ ಅಂತ ಕೂಡ ಗೊತ್ತಿರ್ಲಿಲ್ಲ ತೋರಿಸಿದ್ದಕ್ಕೆ ಥ್ಯಾಂಕ್ಸ್ ಎಂಬೆಲ್ಲ ಪ್ರತಿಕ್ರಿಯೆಗಳು ಬಂದಾಗ ಧನ್ಯತಾ ಭಾವ.

ಸೋಲೋ ಟ್ರಾವೆಲಿಂಗ್ easyನ, How to start?

ಸೋಲೋ ಟ್ರಾವೆಲಿಂಗ್ easyನ, How to start?

ಸೋಲೋ ಎನ್ನುವುದು ಕಂಫರ್ಟ್. ಅದು ಬದುಕಿನ ಪ್ರಯಾಣವಾಗಿರಬಹುದು ಅಥವಾ ಸೋಲೋ ಟ್ರಿಪ್ ಇರಬಹುದು. ಅನುಭವಗಳು ವ್ಯಕ್ತಿಗತವಾಗಿರುತ್ತವೆ. ಸುಲಭ ಅಥವಾ ಕಷ್ಟಕರ ಎನ್ನುವುದು ನಮ್ಮ ಒಳನೋಟ ಮತ್ತು ವ್ಯಕ್ತಿಗತ ನಿಲುವನ್ನಾಧರಿಸಿ ನಮ್ಮ ಅನುಭವಕ್ಕೆ ತಂದುಕೊಳ್ಳುವಂಥದ್ದು. ಈಸಿ ಖಂಡಿತ ಅಲ್ಲ, ಸುಲಭಗೊಳಿಸಿಕೊಳ್ಳುವುದಷ್ಟೇ ಮುಖ್ಯ. ಶುರುವಾತಿಗೊಂದು ಗಟ್ಟಿ ನಿರ್ಧಾರ, ಬಂದದ್ದನ್ನು ನಿಭಾಯಿಸುವ ಬಲವಾದ ಗುಂಡಿಗೆ, ಒಂದಷ್ಟು ಮಾಹಿತಿಗಳು ಮತ್ತು ತೆರೆದ ಮನಸ್ಸು.. ಇವಿಷ್ಟೇ ಮೊದಲ ನಡೆ.

1. ಮೊದಲ ಸೋಲೋ ಪ್ರವಾಸಕ್ಕೆ ಹೆಚ್ಚು ಮಾಹಿತಿಯಿರುವ, ಜನ ಸಂದಣೆಯಿರುವ tourist destination ಆಯ್ಕೆ ಮಾಡಿಕೊಳ್ಳುವುದು ಒಳ್ಳೆಯದು. ಆ ರೀತಿಯ ಜಾಗಗಳಲ್ಲಿ ಒಳ್ಳೆಯ ಟ್ರಾವೆಲ್ಲರ್ ಹಾಸ್ಟೆಲ್ಲುಗಳು, ಹೋಟೆಲ್ಲುಗಳು ಲಭ್ಯ. ಮುಂಚಿತವಾಗಿ ಕಾಯ್ದಿರಿಸುವುದರಿಂದ ಸ್ವಲ್ಪ ಭದ್ರತಾ ಭಾವ ಕೂಡ.
2. ಪ್ರಖ್ಯಾತ ಜಾಗಗಳಲ್ಲಿ ನಾವು ತಂಗುವ ಹೋಟೆಲ್ಲುಗಳು, ಹೋಂ ಸ್ಟೇ ಅಥವಾ ಹಾಸ್ಟೆಲ್ಲುಗಳು ಸುತ್ತಲಿನ ಜಾಗಗಳ ಬಗ್ಗೆ ಸಂಪೂರ್ಣ ಮಾಹಿತಿ ಕೊಡುತ್ತವೆ ಹಾಗೂ ಕೆಲವು ಗೈಡೆಡ್ ಟೂರ್ ಬುಕ್ ಮಾಡುವುದೂ ಉಂಟು.

3. ನಾನು ಸಾಮಾನ್ಯವಾಗಿ ಟ್ರಾವೆಲ್ಲರ್ ಹಾಸ್ಟೆಲ್ಲುಗಳಲ್ಲಿ ತಂಗುವ ಇತರೆ ಸೋಲೋ ಟ್ರಾವೆಲರುಗಳೊಟ್ಟಿಗೆ ಸಂವಹಿಸಿ ಅವರ ಅನುಭವಗಳ ಬಗ್ಗೆ ತಿಳಿದುಕೊಳ್ಳುತ್ತೇನೆ. ಗೈಡೆಡ್ ಟೂರ್ ತೆಗೆದುಕೊಳ್ಳದೆ, ನನ್ನಷ್ಟಕ್ಕೆ ಆರಾಮಾಗಿ ಓಡಾಡುವುದು ನನಗಿಷ್ಟ. ಲೋಕಲ್ ಶಾಪ್, ರೆಸ್ಟೋರೆಂಟುಗಳಿಗೆ ತೆರಳಿ ಕೂಡ ನನಗೆ ಬೇಕಾದ ಮಾಹಿತಿ ಪಡೆಯುತ್ತೇನೆ. ಹೆಚ್ಚಾಗಿ ಹಾಸ್ಟೆಲುಗಳಲ್ಲಿ ಇತರೆ ಪ್ರಯಾಣಿಕರ ಜೊತೆಗೂಡಿ ಸುತ್ತುವುದು ಆರ್ಥಿಕವಾಗಿ ಹೊರೆಯಾಗದೆ, ಒಂಟಿತನವೂ ಬಾಧಿಸದೆ ಸದಭಿರುಚಿಯ ಹೊಸ ಗೆಳೆತನಕ್ಕೂ ನಾಂದಿ ಹಾಡುತ್ತದೆ. ನನಗೆ ಬೇಕಾದ ಜಾಗಗಳನ್ನು ಮಾತ್ರವೇ ಆಯ್ಕೆ ಮಾಡಿಕೊಳ್ಳುವ ಸಂಪೂರ್ಣ ಸ್ವತಂತ್ರವೂ ನನಗಿರುತ್ತದೆ.

ಒಂದೆರಡು ಬಾರಿ ಹೀಗೆ ಹೋದಾಗ ನಾವು ಸೋಲೋ ಟ್ರಾವೆಲಿಂಗ್ ಆನಂದಿಸುತ್ತೇವೋ ಅಥವಾ ಸಾಕಪ್ಪಾ ಸಾಕು ಎಂದು ಬಳಲುತ್ತೇವೋ ಎಂಬ ಸ್ವಯಂ ಸಾಕ್ಷಾತ್ಕಾರ ನಮಗೇ ಆಗಿಬಿಡುತ್ತದೆ. ಮುಂದುವರೆಸುವುದೋ ಅಥವಾ ಅಲ್ಲಿಗೆ ನಿಲ್ಲಿಸುವುದೋ ಎಂಬ ನಿರ್ಧಾರವೂ ನಮ್ಮದೇ.

ವಿಯೆಟ್ನಾಂನಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ: ವಿಶ್ವದ ಅತಿ ಉದ್ದದ ಗಾಜಿನ ಸೇತುವೆ ಓಪನ್ವಿಯೆಟ್ನಾಂನಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ: ವಿಶ್ವದ ಅತಿ ಉದ್ದದ ಗಾಜಿನ ಸೇತುವೆ ಓಪನ್

 ಒಬ್ರೇ ಹೋದ್ರೆ ಜಾಸ್ತಿ ಖರ್ಚು ಬರಲ್ವಾ ?

ಒಬ್ರೇ ಹೋದ್ರೆ ಜಾಸ್ತಿ ಖರ್ಚು ಬರಲ್ವಾ ?

ಖರ್ಚು ನಮ್ಮ ಪ್ಲಾನಿಂಗ್ ಮೇಲೆ ಅವಲಂಬಿತ. ನಾನು ದೀರ್ಘಕಾಲ ಸೋಲೋ ಟ್ರಾವೆಲಿಂಗ್ ಮಾಡುವಾಗ ಹಲವೆಡೆ couchsurfing ಬಳಸುತ್ತೇನೆ. ಉಚಿತವಾಗಿ ತಂಗುವುದು ಮತ್ತು ಸಾರ್ವಜನಿಕ ಸಾರಿಗೆ ಬಳಸುವುದು ನನ್ನ ಖರ್ಚನ್ನು ಎಷ್ಟೋ ತಗ್ಗಿಸಿವೆ. ಅನುಭವಗಳನ್ನು ಮತ್ತೂ ಪುಷ್ಟೀಕರಿಸಿವೆ. ಟ್ರಾವೆಲ್ಲರ್ ಹಾಸ್ಟೆಲ್ಲುಗಳು ಹೋಟಲ್ಲುಗಳಿಗೆ ಹೋಲಿಸಿದರೆ ಅಗ್ಗ.

ಸುತ್ತುವುದು ಬೆಂಬಿಡದ ಬಯಕೆಯಾದಾಗ ಅದಕ್ಕೆಂದೇ ಸ್ವಲ್ಪ ಮಟ್ಟಿಗೆ ಉಳಿತಾಯ ಮಾಡುವುದೂ ಸಮಂಜಸವೇ. ಮದುವೆ, ಮುಂಜಿ, ಮುಂಡನ, ಹಬ್ಬ ಹರಿದಿನಕ್ಕೋಸ್ಕರ ಖರ್ಚೆಷ್ಟು ಎಂದು ಕೇಳದ ನಾವು ತೀರಾ ತಿರುಗಾಟಕ್ಕೆ ಮಾತ್ರವೇ ಖರ್ಚಿನ ಬಗ್ಗೆ ಯೋಚಿಸುವುದು ಯಾಕೆ? ನನ್ನ ಸ್ಯಾಲರಿಯ ಸ್ವಲ್ಪ ಭಾಗ ಟ್ರಾವೆಲಿಂಗ್ ಇನ್ವೆಸ್ಟ್ಮೆಂಟ್ ಅಂತಾನೇ ಕಾಯ್ದಿರಿಸುವುದು. ರಿಟೈರ್ಮೆಂಟ್, ಫ್ಯಾಮಿಲಿ, ಇತರೆ ಇನ್ವೆಸ್ಟ್‌ಮೆಂಟ್‌ ಪ್ಲಾನ್ನಿಂಗಿನಂತೆ ಟ್ರಾವೆಲ್ ಪ್ಲಾನಿಂಗ್ ಕೂಡ ಮುಖ್ಯ. ನಮ್ಮ ಆದ್ಯತೆಗಳಿಗೆ ಒತ್ತು ಕೊಟ್ಟೇ ಖರ್ಚು ವೆಚ್ಚದ ಯೋಜನೆ ಮಾಡುವುದು ಒಳ್ಳೆಯದಲ್ಲವೇ?

ಹಲವು ಯುರೋಪಿಯನ್, ಅಮೆರಿಕನ್ ವಿದ್ಯಾರ್ಥಿಗಳು ಓದಿನ ಮಧ್ಯೆ ಬ್ರೇಕ್ ತೆಗೆದುಕೊಂಡು ವರ್ಷಾನುಗಟ್ಟಲೆ ಪ್ರವಾಸ ಮಾಡುತ್ತಾರೆ. ಇವರ ಪ್ರವಾಸಗಳನ್ನು sponsor ಮಾಡಿಕೊಳ್ಳುವುದು ಕೂಡ ಇವರದ್ದೇ ಜವಾಬ್ದಾರಿ. ಅದಕ್ಕೆಂದೇ ವೊಲುಂಟೀರಿಂಗ್ ಕಾರ್ಯಕ್ರಮಗಳೂ ಇರುತ್ತವೆ. ಕೆಲವರು ಹೋದಲ್ಲಿ ರೆಸ್ಟೋರೆಂಟ್, ಹಾಸ್ಟೆಲ್ಲುಗಳಲ್ಲಿ ಕೆಲಸ ಮಾಡಿ ಕೂಡ ಸಂಪಾದಿಸುತ್ತಾ ಸುತ್ತುತ್ತಾರೆ.

ಪ್ರವಾಸದ ಅನುಭವಗಳಿಂದಾಗುವ ಕಲಿಕೆ, ವಿಸ್ತಾರಗೊಳ್ಳುವ ಜ್ಞಾನ ಎಲ್ಲವೂ ತಮ್ಮ ಜೀವನ ಬದಲಿಸಲು, ಆಸಕ್ತಿಗಳನ್ನು ಮರು ಆಯ್ಕೆ ಮಾಡಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಯಿತು ಎನ್ನುತ್ತಾರವರು. ಆ ರೀತಿಯ sense of independence ಕಲಿಸಿಕೊಡುವುದು ಪೋಷಕರ ಹಾಗೂ ವ್ಯವಸ್ಥೆಯ ನೈತಿಕ ಜವಾಬ್ದಾರಿ

ನಾವು ಉಳಿಯೋ ಜಾಗ, ಓಡಾಡೋ ಜಾಗ ಸೇಫ್ ಹೌದೋ ಅಲ್ವೋ ಹೇಗೆ ಗೊತ್ತಾಗ್ಬೇಕು?

ನಾವು ಉಳಿಯೋ ಜಾಗ, ಓಡಾಡೋ ಜಾಗ ಸೇಫ್ ಹೌದೋ ಅಲ್ವೋ ಹೇಗೆ ಗೊತ್ತಾಗ್ಬೇಕು?

ಹಲವು ಮೂಲಗಳಿಂದ ಆಗಾಗ ಈ ಪ್ರಶ್ನೆ ನನಗೆ ಬರುತ್ತಲೇ ಇರುತ್ತದೆ. ನಾನವರಿಗೆ ಕೇಳುತ್ತೇನೆ, How safe do you feel at home? ಈ ಪ್ರಶ್ನೆಗೆ ಬರುವ ಪ್ರತಿಕ್ರಿಯೆಗಳನ್ನಿಟ್ಟುಕೊಂಡೇ ಪುಸ್ತಕ ಬರೆದುಬಿಡಬಹುದೇನೋ.

ವಿಶೇಷವಾಗಿ ಭಾರತದಂತಹ ದೇಶಗಳಲ್ಲಿ ಹೆಣ್ಣು ಮಕ್ಕಳನ್ನು ಪರಾವಲಂಬಿ ಚೌಕಟ್ಟಿನಲ್ಲಿ ಬೆಳೆಸಲಾಗುತ್ತದೆ. ಎಷ್ಟೋ ವರ್ಷಗಳ ಹಿಂದೆ ಆಸ್ಟ್ರೇಲಿಯಾ ಮೂಲದ ಸೋಲೋ ಟ್ರಾವೆಲರ್ ಒಬ್ಬಾಕೆಯ ಬ್ಲಾಗ್ ಹಿಂಬಾಲಿಸುತ್ತಿದ್ದೆ. ಅತೀ ಹಿಂದುಳಿದ ದೇಶಗಳ ಹಳ್ಳಿ ಹಳ್ಳಿಗಳನ್ನು ಒಬ್ಬಳೇ ಸುತ್ತುತ್ತಿದ್ದ ಆಕೆ ಅಲ್ಲಿನ ನೈಜ ಚಿತ್ರಣ ಕೊಡುತ್ತಿದ್ದರು. ನಲವತ್ತರ ಆಸುಪಾಸಿನಲ್ಲಿ ತನ್ನ ಮೊದಲ ಮದುವೆಯಾಗುವಾಗ ಆಕೆ ತನಗೆ ತಾನು ಕೇಳಿಕೊಳ್ಳುತ್ತಾಳೆ. "Am I really prepared to enter into this relationship now? or is it too early?" ಹಾಗೆ ತನ್ನೊಳ ಹೊಕ್ಕು ಪ್ರಾಮಾಣಿಕವಾಗಿ ಪ್ರಶ್ನಿಸಿಕೊಂಡು, ಬೇಕಿದ್ದದ್ದನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಅಲ್ಲಿಯ ಸಮಾಜ ಸೃಷ್ಟಿಸಿಕೊಟ್ಟಿದೆ. ಲಿಂಗ ಭೇದವಿಲ್ಲದೆ ಆತ್ಮವಿಶ್ವಾಸ ಬೆಳಸಿಕೊಂಡಾಕೆಗೆ ಪ್ರಪಂಚದ ಯಾವುದೋ ಮೂಲೆಯ ಹಳ್ಳಿ ಹಳ್ಳಿಗಳಲ್ಲಿ ಒಬ್ಬಳೇ ತಂಗುವುದು ಅಸುರಕ್ಷಿತ ಅನಿಸಿರಲಾರದು.

ಸೇಫ್ - ಅನ್ ಸೇಫ್ ಎಂಬುದು ನಮ್ಮೊಳಗಿನ ಪರಿಕಲ್ಪನೆಗಳು. ನಾವು ಬೆಳೆದುಬಂದ ರೀತಿ, ಸುತ್ತಲಿನ ಸಮಾಜದ ಹೇರಿಕೆಗಳು ಈ ರೀತಿಯ ಅಭಿಪ್ರಾಯಗಳ ಮೇಲೆ ಸುಪ್ತ ಪ್ರಭಾವ ಬೀರಿರುತ್ತವೆ. ಹಾಗಾಗಿ ಸೇಫ್, ಅನ್ ಸೇಫ್ ಬಗೆಗಿನ ನಮ್ಮೊಳಗಿನ ಸುಪ್ತ ಪ್ರಜ್ಞೆಯ ಮರು ವ್ಯಾಖ್ಯಾನ ಬಹು ಮುಖ್ಯ.

1. ನಾವು ಉಳಿಯೋ ಜಾಗದ ಬಗೆಗಿನ ಮಾಹಿತಿ ಮತ್ತು ರಿವ್ಯೂ ಗೂಗಲ್ ಮೂಲಕ ಹಾಗೂ ಹೋಟೆಲ್ ಬುಕಿಂಗ್ ವೆಬ್‌ಸೈಟ್‌ಗಳಲ್ಲೇ ಸಿಕ್ಕಿಬಿಡುತ್ತದೆ.

2. ತಡ ರಾತ್ರಿ ಜನಸಂದಣಿಯಿರದ ಪ್ರದೇಶಗಳಲ್ಲಿ ಒಬ್ಬರೇ ಓಡಾಡದೇ, ನಮ್ಮಂತೆ ಪ್ರಯಾಣ ಬಂದ ಇತರರೊಟ್ಟಿಗೆ ಸೇರಿಕೊಳ್ಳುವುದು ಉತ್ತಮ.

3. ಇಲ್ಲಿ ನಿರ್ಬಂಧ ಜಾಗಗಳು, ಹೋಗಲೇಬಾರದ ಪ್ರದೇಶಗಳಿವೆಯೇ ಎಂದು ಹೋಟೆಲ್ ಅಥವಾ ಲೋಕಲ್ ಶಾಪ್‌ಗಳಲ್ಲಿ ಕೇಳಿ ತಿಳಿದುಕೊಳ್ಳಬಹುದು.

4. ಸ್ಥಳೀಯರೊಟ್ಟಿಗೆ ಬೆರೆತಷ್ಟೂ ನಮಗೆ ಅಲ್ಲಿನ ರೀತಿ - ರಿವಾಜುಗಳೂ ಅರ್ಥವಾಗುತ್ತವೆ. ಜೊತೆಗೆ ಎಲ್ಲಿ ಹೇಗೆ ಏನೇನು ನೋಡಬಹುದು ಎಂಬ ಮಾಹಿತಿಯೂ ದೊರೆಯುತ್ತದೆ. ಹಾಗೆಂದೇ ಹಲವು less touristy ಜಾಗಗಳಿಗೆ ಹೋಗಲು ಸಾಧ್ಯವಾಗುವುದು.

 ಹೋದಲ್ಲೆಲ್ಲ ನಮಗೆ ಬೇಕಿರೋ ಫುಡ್ ಸಿಗುತ್ತಾ ?

ಹೋದಲ್ಲೆಲ್ಲ ನಮಗೆ ಬೇಕಿರೋ ಫುಡ್ ಸಿಗುತ್ತಾ ?

ನಾನು ಹೋದಲ್ಲೆಲ್ಲ ಹೆಚ್ಚಾಗಿ ಆ ಜಾಗದ ಜನರ ಆಹಾರ, ರೀತಿ ನೀತಿಗಳನ್ನು ಅರಿಯಲು ಆದ್ಯತೆ ಕೊಡುತ್ತೇನೆ. ಆಹಾರ ಜೀವನ ಕ್ರಮವಲ್ಲವೇ? ಅದು ಭಾರತದೊಳಗೇ ಬೇರೆ ಭಾಗಗಳಾಗಿರಬಹುದು ಅಥವಾ ಹೊರ ದೇಶಗಳಾಗಿರಬಹುದು. ಸ್ವಲ್ಪ ದಿನ ನಾವು ಹೊಸ ರುಚಿ ಸವಿಯಲು ತಯಾರಾದರಾಯಿತು. ಹಲವೆಡೆಗಳಲ್ಲಿ ಭಾರತೀಯ ರೆಸ್ಟೋರೆಂಟುಗಳಿವೆ. ಆದರೆ ಗುಡ್ಡಗಾಡು, ಹಳ್ಳಿಗಳನ್ನು ಸುತ್ತುತ್ತೇವಾದರೆ ಸ್ಥಳೀಯ ಆಹಾರಕ್ಕೆ ಒಗ್ಗಿಸಿಕೊಳ್ಳುವುದು ಅನಿವಾರ್ಯ. ಅದೊಂದು ಅನುಭವ ಕೂಡ.

ಹೊರದೇಶಗಳಲ್ಲಿ ಒಬ್ಬರೇ ಹೋದಾಗ ಸಮಸ್ಯೆಗಳಾದರೆ ಹೇಗೆ ನಿಭಾಯಿಸಬೇಕು?

ಇದನ್ನು ಕೆಲವು ಉದಾಹರಣೆಗಳೊಂದಿಗೆ ವಿವರಿಸುವುದೇ ಉತ್ತಮ. ನಾನು ಥೈಲ್ಯಾಂಡಿನ ಬ್ಯಾಂಕಾಕ್ ನಗರದೊಳಗೆ ಆಗ ತಾನೇ ಕಾಲಿಟ್ಟಿದ್ದೆ. ಬಸ್ ನಿಲ್ದಾಣದಲ್ಲೆಲ್ಲೂ ಇಂಗ್ಲಿಷ್ ಬೋರ್ಡ್ ಕಾಣಸಿಗದು. ಜನರಿಗೆ ಇಂಗ್ಲಿಷ್ ಬಾರದು. ಗೂಗಲ್ ಟ್ರಾನ್ಸ್‌ಲೇಟರ್ ಬಳಸಿ ಸಂವಹಿಸುವುದಕ್ಕೂ ಇಂಟರ್ನೆಟ್ ಬೇಕು. ಹಾಗೂ ಹೀಗೂ ನನ್ನಂತೆ ಬಂದ ವಿದೇಶೀಯರನ್ನು ಹುಡುಕಿ ಹೀಗೀಗೆ ಅಂತ ಹೇಳಿ ಕ್ಯಾಬ್ ಬುಕ್ ಮಾಡೋದಕ್ಕೆ ಇಂಟರ್ನೆಟ್ ಬೇಕು ಹಾಟ್ ಸ್ಪಾಟ್ ಕೊಡಿ ಅಂತ ಇಸ್ಕೊಂಡೆ.

ಒಂದಿನ ತಡರಾತ್ರಿ ರೈಲು ನಿಲ್ದಾಣದಲ್ಲೂ ಮತ್ತದೇ ಸಂಕಟ. ಮಳೆ ಬರುತ್ತಿತ್ತಾದ್ದರಿಂದ ಕ್ಯಾಬುಗಳೂ ತಿರಸ್ಕರಿಸುತ್ತಿದ್ದವು. ಹಾದಿಯಲ್ಲಿ ಹೋಗುತ್ತಿದ್ದ ಪೊಲೀಸ್ ಒಬ್ಬರನ್ನು ಮಾತಾಡಿಸಿ ಸಹಾಯ ಕೇಳಿದ್ದೆ. ಒಮ್ಮೊಮ್ಮೆ ಬುಕ್ ಮಾಡಿದ ಹೋಟೆಲ್ ಅಸ್ತಿತ್ವದಲ್ಲಿರದೇ ರಾತ್ರಿ ಪ್ರಯಾಣ ಮಾಡಿ ತಂಗುವ ವ್ಯವಸ್ಥೆ ಮಾಡಿಕೊಳ್ಳಲು ಒದ್ದಾಡಿದ್ದಿದೆ. ಸಮಸ್ಯೆಗಳು ಹೀಗೆ ಬರುತ್ತೆ ಅಂತ ಹೇಳೋಕಾಗಲ್ಲ.

1. ಸೋಲೋ ಟ್ರಾವೆಲ್ ಮಾಡುವಾಗ ಬರುವ ಇಂತಹ ಸಮಸ್ಯೆಗಳು ಸಮಯ ಪ್ರಜ್ಞೆ ಮತ್ತು ನಮ್ಮ ಮಾನಸಿಕ ಸ್ಥೈರ್ಯವನ್ನು ಹೆಚ್ಚಿಸುತ್ತವೆ. ಆದಷ್ಟೂ ಹೋದಲ್ಲೆಲ್ಲ ಏನಿಲ್ಲ ಅನ್ನೋದರ ಬಗ್ಗೆ ಗಮನ ಜಾಸ್ತಿ ಕೊಡದೆ ಇರುವ ಲಿಮಿಟೆಡ್ ಆಯ್ಕೆಗಳನ್ನು ಬಳಸಿಕೊಳ್ಳುವತ್ತ ಹೆಚ್ಚು ಸಕ್ರಿಯವಾಗಿ ಕಾರ್ಯನಿರತರಾಗಬೇಕು.

2. ಸಾರ್ವಜನಿಕ ಸಾರಿಗೆ ಬಳಸುವಾಗ ಒಮ್ಮೊಮ್ಮೆ ಮಧ್ಯರಾತ್ರಿ ನಿರ್ಜನ ಪ್ರದೇಶಗಳಲ್ಲಿ ಇಳಿದುಕೊಳ್ಳುವ ಪ್ರಸಂಗ ಬರಬಹುದು. ಮೊದಲೇ ತಂಗುವ, ಹಾಗೂ ಪ್ರಯಾಣದ ವ್ಯವಸ್ಥೆ ಮಾಡಿಕೊಳ್ಳಬೇಕು. ಸ್ವಯಂ ರಕ್ಷಣೆಗೋಸ್ಕರ ಪೆಪ್ಪರ್ ಸ್ಪ್ರೇ ಯಂತಹ ಆಯುಧಗಳನ್ನು ಹ್ಯಾಂಡಿ ಆಗಿ ಇಟ್ಟುಕೊಳ್ಳುವುದೊಳ್ಳೆಯದು.

3. ಹೊರರಾಜ್ಯ ಅಥವಾ ಹೊರ ದೇಶಗಳಿಗೆ ಹೋಗುವಾಗ ಪಾಸ್‌ಪೋರ್ಟ್‌ ಅಥವಾ ಐಡೆಂಟಿಟಿ ಪ್ರೂಫ್ ಡಾಕ್ಯುಮೆಂಟುಗಳ ಸಾಫ್ಟ್ ಕಾಪಿ ಮತ್ತು ಒಂದಷ್ಟು ಹಾರ್ಡ್ ಕಾಪಿ ಇಟ್ಟುಕೊಳ್ಳುವುದೊಳ್ಳೆಯದು. ಮೊಬೈಲೊ, ಲಗ್ಗೇಜು, ಪಾಸ್‌ಪೋರ್ಟ್‌ ಮತ್ತೇನಾದರೂ ಕಳೆದುಕೊಂಡಲ್ಲಿ ಅಲ್ಲಿ ವ್ಯವಸ್ಥೆಯ ಸಹಾಯ ತೆಗೆದುಕೊಳ್ಳಲು ಈ ಮುನ್ನೆಚ್ಚರಿಕೆಗಳು ಸಹಕಾರಿ.

4. ಅಲ್ಲಿನ ಪೊಲೀಸ್ ಸ್ಟೇಷನ್, ಹಾಸ್ಪಿಟಲ್ ಮತ್ತು ಹೆಲ್ಪ್ ಲೈನ್ ನಂಬರುಗಳನ್ನು ಹೊರಡುವ ಮೊದಲೇ ಹುಡುಕಿ ಸೇವ್ ಮಾಡಿಕೊಳ್ಳಬೇಕು. ಎಮರ್ಜೆನ್ಸಿ ನಂಬರುಗಳು ಎಮರ್ಜೆನ್ಸಿ ಪರಿಸ್ಥಿತಿಗಳಲ್ಲಿ ಅವಶ್ಯವಾಗಿ ಉಪಯೋಗವಾಗುತ್ತವೆ.

5. ಪ್ರತೀ ದೇಶದ ವ್ಯವಸ್ಥೆಗಳೂ ವಿಭಿನ್ನ. ಅಲ್ಲಿನ ಸಾರಿಗೆ ವ್ಯವಸ್ಥೆ, ಆಹಾರ, ಸಮಕಾಲೀನ ಆಗುಹೋಗುಗಳ ಬಗ್ಗೆ ತಿಳುವಳಿಕೆ ಮುಖ್ಯ. ಬಸ್ಸು, ರೈಲು, ಕ್ಯಾಬ್ ಸರ್ವಿಸ್ ನಂತಹ ಬಹುಮುಖ್ಯವಾದವುಗಳ ಅಂತರ್ಜಾಲ ಕೊಂಡಿ ಅಥವಾ ಆಪ್ ಇನ್‌ಸ್ಟಾಲ್ ಮಾಡಿಟ್ಟುಕೊಳ್ಳುವುದು ಉತ್ತಮ.

6. ಅಲ್ಲಿನ ಕರೆನ್ಸಿ ಎಕ್ಸ್‌ಚೇಂಜ್ ಮಾಡಿಟ್ಟುಕೊಳ್ಳುವುದು ಅಥವಾ ಸೂಕ್ತ ಇಂಟರ್‌ನ್ಯಾಷನಲ್ ಕಾರ್ಡ್ ಕೊಂಡುಕೊಳ್ಳುವುದು ತುಂಬಾ ಮುಖ್ಯ.

 ಸುಖಕರವಾದ ಸೋಲೋ ಪ್ರವಾಸಕ್ಕೆ ಒಂದಷ್ಟು ಸೂತ್ರಗಳು

ಸುಖಕರವಾದ ಸೋಲೋ ಪ್ರವಾಸಕ್ಕೆ ಒಂದಷ್ಟು ಸೂತ್ರಗಳು

1. ಲಗ್ಗೇಜು ಭಾರವಾದಷ್ಟೂ ಕಿರಿ ಕಿರಿ ಜಾಸ್ತಿ. ಅವಶ್ಯಕವಾದ ಸೂಕ್ತ ವಸ್ತುಗಳನ್ನು ಮಾತ್ರವೇ ಕೊಂಡೊಯ್ಯುವುದರಿಂದ ಭಾರವೂ ಕಡಿಮೆ, ಸಾರ್ವಜನಿಕ ಸಾರಿಗೆ ಬಳಸಿಕೊಂಡೇ ಆರಾಮಾಗಿ ಓಡಾಡಬಹುದು.

2. ಇಂಟರ್‌ನ್ಯಾಷನಲ್ ಪ್ರವಾಸ ಹೊರಡುವ ಮುಂಚೆ ಟ್ರಾವೆಲ್ ಇನ್ಶೂರೆನ್ಸ್ ಖರೀದಿಸಿ.

3. ಟ್ರಾವೆಲ್ಲರ್ ಹಾಸ್ಟೆಲ್ಲುಗಳಲ್ಲಿ ತಂಗುವುದರಿಂದ ಖರ್ಚು ಕಡಿಮೆ. ಹೊಸ ಮಂದಿಯೊಟ್ಟಿಗೆ ಸಂವಹಿಸಿ ಸ್ನೇಹ ಬೆಳೆಸಿಕೊಳ್ಳುವುದೂ, ಜೊತೆಗೆ ತಿರುಗಾಡುವುದೂ ಸುಲಭ.

4. ನಮ್ಮ ಅಭಿರುಚಿಗೆ ತಕ್ಕಂಥ ಜಾಗಗಳ ಬಗ್ಗೆ ಸ್ವಲ್ಪ ಹುಡುಕಾಡಿ, ನಾವು ನೋಡಲೇಬೇಕೆಂದುಕೊಂಡ ಜಾಗಗಳ ಒಂದು ಲಿಸ್ಟ್ ತಯಾರಿಸಿಕೊಳ್ಳುವುದು ಉತ್ತಮ. ಇದು ಕಡಿಮೆ ಸಮಯ ದಲ್ಲಿ ನಮ್ಮ ಅಭಿರುಚಿಗಳನ್ನು ಪೂರೈಸಿಕೊಳ್ಳಲು ಉಪಯೋಗವಾಗುತ್ತದೆ.

5. ಹೊಸ ಜಾಗಗಳಿಗೆ ಹೋಗುವಾಗ ಆದಷ್ಟು ರಾತ್ರಿ ಪ್ರಯಾಣಿಸಿ, ಬೆಳಗಿನ ಜಾವ ತಲುಪುವುದು ಉತ್ತಮ. ಅದರಿಂದಾಗಿ ಹೆಚ್ಚು ಜಾಗಗಳನ್ನು ನೋಡಲು ಸಮಯದ ಉಳಿತಾಯವೂ ಆಗುತ್ತದೆ ಮತ್ತು ತಡವಾಗಿ ತಲುಪಿ ಸಮಸ್ಯೆಗಳಾದಲ್ಲಿ ಪರಿಹರಿಸಿಕೊಳ್ಳುವುದೂ ಸುಲಭ.

6. ಉಳಿದುಕೊಂಡ ಜಾಗದಲ್ಲಿ ರೆಸೆಪಿಷನಿಸ್ಟ್ ಅಥವಾ ಆ ಮನೆಯವರೊಟ್ಟಿಗೆ ಬಾಂಧವ್ಯ ಬೆಳೆಸಿಕೊಳ್ಳುವುದರಿಂದ ಹೆಚ್ಚಿನ ಮಾಹಿತಿಯೂ ಲಭ್ಯವಾಗುತ್ತದೆ. ಮತ್ತು ಸೂಕ್ತ ಸಲಹೆ ಸಹಕಾರಗಳೂ ಸಿಗುತ್ತವೆ.

7. ಎಲ್ಲಾ ಮುಂಜಾಗ್ರತಾ ಕ್ರಮಗಳನ್ನೂ ಮೀರಿ ಕೆಲವೊಮ್ಮೆ ಸಮಸ್ಯೆಗಳು ಉದ್ಭವಿಸುತ್ತವೆ. ಅಂತಹ ಸಮಯದಲ್ಲಿ ಧೀರ್ಘವಾಗಿ ಉಸಿರಾಡಿ, ಭಯ, ಕೋಪ - ಹಿಂಜರಿತಗಳಿಗೆ ಆಸ್ಪದ ಕೊಡದೆ ಮೌನವಾಗಿ ಸಮಸ್ಯೆಯ ಸುಳಿಯಿಂದ ಹೊರಬರುವ ಮಾರ್ಗಗಳ ಬಗ್ಗೆ ಯೋಚಿಸುವುದು ಉತ್ತಮ. ಮುಖದಲ್ಲಿ ತಿಳಿ ನಗು ಹೊತ್ತು ಸುತ್ತ ಇರುವವರೊಟ್ಟಿಗೆ ಮಾತನಾಡಿ ಸಲಹೆಗಳನ್ನೂ ತೆಗೆದುಕೊಳ್ಳಬಹುದು. ವಿಷಮ ಪರಿಸ್ಥಿತಿಗಳು ಹೊಸ ಅನುಭವಗಳಷ್ಟೇ.

8. ಸ್ಥಳೀಯರನ್ನು ಗೌರವಿಸುವುದು, ಅಲ್ಲಿನ ಕಾನೂನು ಪಾಲನೆ ಮಾಡುವುದು ಅವಶ್ಯಕ. Observational ಆಗಿರುವುದು ಮುಖ್ಯವೇ ಹೊರತು judgmental ಆಗಿ ವರ್ತಿಸುವುದು ಹಲವೆಡೆಗಳಲ್ಲಿ ಪೇಚಿಗೆ ಸಿಲುಕಿಸಬಹುದು.

 ನನ್ನ ಪಾಡಿಗೆ ನಾನು ಬದುಕುವ ಭಾಗ್ಯ ಸಿಕ್ಕಿದ್ದಕ್ಕೆ ನನಗೆ ಕೃತಜ್ಞತೆಯಿದೆ

ನನ್ನ ಪಾಡಿಗೆ ನಾನು ಬದುಕುವ ಭಾಗ್ಯ ಸಿಕ್ಕಿದ್ದಕ್ಕೆ ನನಗೆ ಕೃತಜ್ಞತೆಯಿದೆ

ಮುಂದೊಂದು ದಿನ ನಿವೃತ್ತ ಜೀವನ ನಡೆಸುವಾಗ ಹಳೆಯ ಹಾರ್ಡ್ ಡಿಸ್ಕುಗಳಲ್ಲಿ ಪೇರಿಸಿಟ್ಟ ಇಂತಹ ನೆನಪುಗಳು ಬಹುಶಃ ಖುಷಿ ಮೂಡಿಸಬಹುದು. ಮೊನ್ನೆ ಮೊನ್ನೆ ನನ್ನ ಸಹೋದ್ಯೋಗಿಯೊಬ್ಬರು are you happily single? ಎಂದು ಕೇಳಿದ್ದರು. ನಾನು ಹೌದು ಎಂದೆ. ಬೇರೆಯವರ ಮರ್ಜಿಗೆ ಕಾಯಬೇಕಾದ ಯಾವ ಚೌಕಟ್ಟಿನೊಳಗೂ ತೂರಿಸಿಕೊಳ್ಳ ಬಯಸದೆ, ನನ್ನ ಪಾಡಿಗೆ ನಾನು ಬದುಕುವ ಭಾಗ್ಯ ಸಿಕ್ಕಿದ್ದಕ್ಕೆ ನನಗೆ ಕೃತಜ್ಞತೆಯಿದೆ.

ಸಾವು ಕದ ಬಡಿವ ಆ ಹೊತ್ತಿನಲ್ಲಿ ನಮ್ಮ ಈ ಬದುಕಿನ ಆಯ್ಕೆಗಳ ಬಗ್ಗೆ ಸಮಾಧಾನದ ನಿಟ್ಟುಸಿರು ಬಿಡಬೇಕೆಂದರೆ ಆಯ್ಕೆ ಸ್ವಂತದ್ದೇ ಆಗಿರಬೇಕು. ಅದು ಪ್ರವಾಸವೇ ಆಗಬೇಕೆಂದೇನೂ ಇಲ್ಲ. ಈ ಹೊತ್ತಿನಲ್ಲಿ ನಮಗೆ ಖುಷಿ ಕೊಡುವ ಇನ್ನೇನೋ ಆಗಿರಬಹುದು. ಹಾಗಿದ್ದಾಗ ಕಠಿಣ ಅನುಭವಗಳೂ ಪಾಠವಾಗುತ್ತವೆ.ನಾವು ನಮ್ಮೊಳಗೆ ಬೆಳೆಯುತ್ತೇವೆ.

ನನ್ನ ಮಟ್ಟಿಗೆ ಪ್ರವಾಸ ಈ ಕ್ಷಣದ ಖುಷಿಯಷ್ಟೇ ಆಗಿರದೆ ಬದುಕು ಕದ ತೆರೆದು ಕಲಿಸುವ ಹೊಸ ಹೆಜ್ಜೆ. ಪ್ರತಿ ಹೆಜ್ಜೆಯ ನೆನಪುಗಳನ್ನು ಒಂದಿಷ್ಟು ತಲೆಯಲ್ಲಿ ಮತ್ತೊಂದಿಷ್ಟು ಹಾರ್ಡ್ ಡಿಸ್ಕಿನಲ್ಲಿ ಜೋಪಾನವಾಗಿ ಪೇರಿಸಿಡುವುದೂ ನನ್ನ ರಿಟೈರ್ಮೆಂಟ್ ಪ್ಲಾನಿಗೋಸ್ಕರ ನಾನು ಮಾಡುವ ಇನ್ವೆಸ್ಟ್‌ಮೆಂಟ್‌.

English summary
Solo Travel: Your Choice and Experience by Kanthi MG who shares her Vietnam Travelogue and tips for Solo Traveling.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X