Shivamogga Airport: ಶಿವಮೊಗ್ಗಕ್ಕೆ ಶೀಘ್ರದಲ್ಲೇ ಎಂಟ್ರಿ ಕೊಡಲಿವೆ ಮತ್ತೆರಡು ಕಂಪನಿಗಳ ವಿಮಾನಗಳು -ಯಾವುವು?
ಶಿವಮೊಗ್ಗ, ನವೆಂಬರ್, 22: ಈಗಾಗಲೇ ಮಲೆನಾಡಿನ ಹೆಬ್ಬಾಗಿಲು ಅಂತಲೇ ಕರೆಸಿಕೊಳ್ಳುವ ಶಿವಮೊಗ್ಗದ ಹೊರವಲಯದಲ್ಲಿರುವ ಸೋಗಾನೆ ಬಳಿ ನಿರ್ಮಾಣ ಆಗಿರುವ ವಿಮಾನ ನಿಲ್ದಾಣದಿಂದ ಹೊಸ ಮೂರು ಮಾರ್ಗಗಳಿಗೆ ಈಗಾಗಲೇ ವಿಮಾನ ಸೇವೆ ಆರಂಭವಾಗಿದೆ. ಸ್ಟಾರ್ ಏರ್ ವಿಮಾನಯಾನ ಸಂಸ್ಥೆಯು ಹೈದರಾಬಾದ್, ತಿರುಪತಿ ಮತ್ತು ಗೋವಾಕ್ಕೆ ಮೂರು ಹೊಸ ದೈನಂದಿನ ವಿಮಾನಗಳ ಸಂಚಾರವನ್ನು ಪ್ರಾರಂಭ ಮಾಡಿದೆ. ಇದರ ಬೆನ್ನಲ್ಲೇ ಇನ್ನೆರಡು ಕಂಪೆನಿಯ ವಿಮಾನಗಳು ಶೀಘ್ರದಲ್ಲೇ ಬರಲಿವೆ ಎಂದು ಸಂತಸದ ಸುದ್ದಿಯೊಂದು ಹೊರಬಿದ್ದಿದೆ.
ಮಲೆನಾಡಿನಿಂದ ಇಂಡಿಗೋ ಹಾಗೂ ಸ್ಟಾರ್ ಏರ್ ವಿಮಾನ ಹಾರಾಟ ಆರಂಭವಾದ ಬೆನ್ನಲ್ಲೇ ಇನ್ನೆರಡು ಕಂಪೆನಿಯ ವಿಮಾನಗಳ ವಿವಿಧ ಮಾರ್ಗದಲ್ಲಿ ಶೀಘ್ರದಲ್ಲೇ ಹಾರಾಟ ಆರಂಭಿಸಲಿವೆ ಎಂದು ಸಂತಸದ ಸುದ್ದಿ ಹೊರಬಿದ್ದಿದೆ. ಸೋಗಾನೆ ವಿಮಾನ ನಿಲ್ದಾಣದಲ್ಲಿ ಸ್ಟಾರ್ ಏರ್ ವಿಮಾನ ಹಾರಾಟಕ್ಕೆ ಚಾಲನೆ ನೀಡಿದ ವೇಳೆ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ ಅವರು ಈ ಸಂತಸದ ವಿಚಾರವನ್ನು ಹಂಚಿಕೊಂಡಿದ್ದಾರೆ.

ಇಂಡಿಗೋ ಹಾಗೂ ಸ್ಟಾರ್ ಏರ್ ವಿಮಾನ ಹಾರಾಟ ಆರಂಭವಾಗಿದೆ. ಇದರ ಬೆನ್ನಲ್ಲೇ ಪ್ರತಿಷ್ಠಿತ ಏರ್ ಇಂಡಿಯಾ ಹಾಗೂ ಸ್ಪೇಸ್ ಜೆಟ್ ಕಂಪನಿಗಳ ಜೊತೆಯಲ್ಲಿ ಟೆಂಡರ್ ಆಗಿದ್ದು, ಶೀಘ್ರದಲ್ಲೇ ಈ ವಿಮಾನಗಳ ಹಾರಾಟಕ್ಕೆ ಎಲ್ಲ ಸಿದ್ಧತೆಗಳು ನಡೆದಿವೆ ಎಂದರು. ಹಾಗೂ ರಾಷ್ಟ್ರ ರಾಜಧಾನಿ ನವದೆಹಲಿ, ಹೈದರಾಬಾದ್, ಚೆನ್ನೈ ಸೇರಿದಂತೆ ವಿವಿಧ ನಗರಗಳಿಗೆ ಶಿವಮೊಗ್ಗದಿಂದ ಹಾರಾಟ ಆರಂಭಿಸಲು ಸಿದ್ಧತೆಗಳಿ ನಡೆದಿದ್ದು, ಇದು ಶೀಘ್ರದಲ್ಲೇ ಫಲ ನೀಡಲಿದೆ ಎಂದರು.
ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಹಾರಾಟ ಆರಂಭವಾದ ನಂತರ ಮಂಜಿನ ಸಮಸ್ಯೆಯಿಂದಾಗಿ 3-4 ಬಾರಿ ಲ್ಯಾಂಡ್ ಮಾಡಲಾಗದೇ, ಬೆಂಗಳೂರಿಗೆ ವಾಪಾಸ್ ತೆರಳಿರುವ ಘಟನೆ ನಡೆದಿತ್ತು. ಮಲೆನಾಡಿನ ಭಾಗದಲ್ಲಿ ಮಂಜು ಸಾಮಾನ್ಯ ಆಗಿದ್ದು, ಇದರಿಂದಾಗಿ ವಿಮಾನ ಹಾರಾಟಕ್ಕೆ ಸಮಸ್ಯೆ ಆಗಬಾರದು ಎಂಬ ಕಾರಣಕ್ಕಾಗಿ ಎಲ್ಲ ರೀತಿಯ ತಾಂತ್ರಿಕ ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.
ಫಾಗ್ ವಿಎಫ್‌ಆರ್ ಸಮಸ್ಯೆ ಪರಿಹಾರಕ್ಕೆ ಹಾಗೂ ನೈಟ್ ಲ್ಯಾಂಡಿಂಗ್ ಮಾಡಲು ಅವಶ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಇದು ಡಿಸೆಂಬರ್ ವೇಳೆಗೆ ಮುಕ್ತಾಯ ಆಗಲಿದೆ ಎಂದರು. ಇನ್ನು ಶಿವಮೊಗ್ಗ ವಿಮಾನ ನಿಲ್ದಾಣದಿಂದ ವಿವಿಧ ವಿಮಾನಗಳು ಹಾರಾಟ ಆರಂಭಿಸಿರುವುದು ಮಲೆನಾಡು ಭಾಗದ ಸಮಗ್ರ ಅಭಿವೃದ್ಧಿಗೆ ಹೆಬ್ಬಾಗಿಲು ತೆರೆದಂತಾಗಿದೆ ಎಂದರು.
ಮಧ್ಯ ಕರ್ನಾಟಕದ ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು, ಚಿತ್ರದುರ್ಗ ಸೇರಿದಂತೆ ಉತ್ತರ ಕನ್ನಡವೂ ಒಳಗೊಂಡಂತೆ ಸುತ್ತಲ ಜಿಲ್ಲೆಗಳಿಗೆ ಶಿವಮೊಗ್ಗ ವಿಮಾನ ನಿಲ್ದಾಣ ಸಹಕಾರಿಯಾಗಿದೆ. ಶಿವಮೊಗ್ಗ ವಿಮಾನ ನಿಲ್ದಾಣದಿಂದ ಹೆಚ್ಚು ವಿಮಾನ ಹಾರಾಟದಿಂದ ಶಿವಮೊಗ್ಗ ಸೇರಿದಂತೆ ಈ ಜಿಲ್ಲೆಗಳ ವಾಣಿಜ್ಯ ಹಾಗೂ ಪ್ರವಾಸೋದ್ಯಮ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸಹಕಾರಿ ಆಗಿದೆ. ಇದರ ಸದುಪಯೋಗ ಮಾಡಿಕೊಳ್ಳಲು ಈಗಾಗಲೇ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಮೂರು ಹೊಸ ಮಾರ್ಗಗಳಿಗೆ ವಿಮಾನ ಸಂಚಾರ
ಈಗಾಗಲೇ ಶಿವಮೊಗ್ಗ-ಬೆಂಗಳೂರು ಸಂಚಾರ ಆರಂಭವಾಗಿದೆ. ಇದೀಗ ನಿನ್ನೆಯಿಂದ (ನವೆಂಬರ್ 21) ಹೈದರಾಬಾದ್, ಗೋವಾ, ತಿರುಪತಿಗೂ ಒಟ್ಟು ನಾಲ್ಕು ಮಾರ್ಗಗಗಳಿಗೆ ವಿಮಾನ ಸಂಚಾರ ಆರಂಭ ಆದಂತಾಗಿದೆ. ವಿಮಾನಯಾನ ಸಂಸ್ಥೆಯು ತಮ್ಮ ಹೊಸ Embraer E175 ವಿಮಾನವನ್ನು ಬಳಸಿಕೊಂಡು ಈ ಬಹು ನಿರೀಕ್ಷಿತ ಮಾರ್ಗಗಳಲ್ಲಿ ಸಂಚಾರ ಆರಂಭ ಮಾಡಿದೆ.
ಶಿವಮೊಗ್ಗದಿಂದ ಗೋವಾ, ಹೈದರಾಬಾದ್ ಹಾಗೂ ತಿರುಪತಿಗೆ ವಾರದಲ್ಲಿ ಸ್ಟಾರ್ ಏರ್‌ನಿಂದ ನಾಲ್ಕು ದಿನ ವಿಮಾನ ಹಾರಾಟ ಇಂದಿನಿಂದಲೇ ಆರಂಭ ಆಗಿದೆ. ಶಿವಮೊಗ್ಗ-ಗೋವಾ, ಹೈದರಾಬಾದ್ ಮತ್ತು ತಿರುಪತಿ ನಡುವೆ ಪ್ರತಿ ಮಂಗಳವಾರ, ಬುಧವಾರ, ಗುರುವಾರ ಮತ್ತು ಶನಿವಾರ ಈ ವಿಮಾನ ಹಾರಾಟ ಸೌಲಭ್ಯ ಇರಲಿದೆ. ಈ ಸೌಲಭ್ಯವನ್ನು ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ಮನವಿ ಮಾಡಿದ್ದಾರೆ.
ಉಡಾನ್ ಯೋಜನೆಯಡಿ ಈ ಮೂರು ಮಾರ್ಗಗಗಳಿಗೆ ಹೋಗಲು ಕೇಂದ್ರ ಸರ್ಕಾರ ವಿಮಾನಯಾನ ಸಂಸ್ಥೆಗೆ ಸಬ್ಸಿಡಿ ನೀಡಲಿದೆ. ಎಕಾನಮಿ ಕ್ಲಾಸ್‌ನಲ್ಲಿ 1,999 ರೂಪಾಯಿ ಪಾವತಿಸಿ ಟಿಕೆಟ್ ಪಡೆಯಬಹುದಾಗಿದೆ.
ಫೆಬ್ರವರಿ 27ರಂದು ಪ್ರಧಾನಿ ನರೇಂದ್ರ ಮೋದಿ ಅವರು ಶಿವಮೊಗ್ಗ ಏರ್‌ಪೋರ್ಟ್ ಉದ್ಘಾಟಿಸಿದ್ದರು. ಬಳಿಕ ಆಗಸ್ಟ್ 31ರಿಂದ ಶಿವಮೊಗ್ಗ- ಬೆಂಗಳೂರು ವಿಮಾನ ಸಂಚಾರ ಆರಂಭ ಆಗಿತ್ತು. ಇದೀಗ ಇಂದಿನಿಂದ ಮತ್ತೆ ಮೂರು ನಗರಗಳಿಗೆ ಶಿವಮೊಗ್ಗ ಏರ್‌ಪೋರ್ಟ್ ಮೂಲಕ ಸಂಪರ್ಕ ಲಭ್ಯ ಆಗಲಿದೆ. ಹೈದರಾಬಾದ್ ಹಾಗೂ ತಿರುಪತಿಗೆ ವಾರದಲ್ಲಿ 4 ದಿನ ಮಾತ್ರ ವಿಮಾನ ಸಂಚಾರ ಇರಲಿದೆ. ಉಡಾನ್ ಯೋಜನೆಯ ಸಬ್ಸಿಡಿ ಪಡೆಯುವವರು ಮೊದಲೇ ಟಿಕೆಟ್ ಬುಕಿಂಗ್ ಮಾಡಬೇಕಿದೆ.












Click it and Unblock the Notifications