ಮೈಸೂರು ಅರಮನೆ ಪ್ರವೇಶ ಟಿಕೆಟ್ ಈಗ ವಾಟ್ಸ್‌ಪ್‌ನಲ್ಲೇ ಪಡೆಯಿರಿ
ಮೈಸೂರು, ಆಗಸ್ಟ್ 18: ಕರ್ನಾಟಕ ಸರ್ಕಾರ ಮೈಸೂರು ಅರಮನೆಗೆ ಭೇಟಿ ನೀಡುವ ಪ್ರವಾಸಿಗರಿಗೆ ಸಿಹಿಸುದ್ದಿ ನೀಡಿದೆ. ಅರಮನೆ ಪ್ರವೇಶ ಟಿಕೆಟ್ ಪಡೆಯಲು ಜನರು ಇನ್ನು ಮುಂದೆ ಕ್ಯೂನಲ್ಲಿ ನಿಲ್ಲಬೇಕಿಲ್ಲ. ಕೈಯಲ್ಲಿರುವ ಸ್ಮಾರ್ಟ್ ಫೋನ್ ಮೂಲಕ Hi ಎಂಬ ಸಂದೇಶ ಕಳಸಿ ಟಿಕೆಟ್ ಅನ್ನು ವಾಟ್ಸಪ್ ಮೂಲಕ ಪಡೆಯುವ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ.
ಕರ್ನಾಟಕ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಇ-ಆಡಳಿತ) ಅಡಿಯಲ್ಲಿರುವ ವಿದ್ಯುನ್ಮಾನ ನಾಗರಿಕ ಸೇವಾ ವಿತರಣಾ ನಿರ್ದೇಶನಾಲಯವು (ಇಡಿಸಿಎಸ್) ಮೂಲಕ ಮೊಬೈಲ್‌ನಲ್ಲೇ ವಾಟ್ಸಪ್ ಮೂಲಕ ಟಿಕೆಟ್ ಬುಕ್ ಮಾಡುವ ವ್ಯವಸ್ಥೆ ಮಾಡಲಾಗಿದೆ.

ಇದಕ್ಕಾಗಿಯೇ ವಾಟ್ಸಪ್ ಟಿಕೆಟಿಂಗ್ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದೆ. ಇದರಿಂದಾಗಿ ಸುಲಭವಾಗಿ ಬೆರಳ ತುದಿಯಲ್ಲಿಯೇ ಟಿಕೆಟ್ ಪಡೆಯಬಹುದು ಎಂದು ಮೈಸೂರು ಅರಮನೆ ಮಂಡಳಿಯ ಉಪ ನಿರ್ದೇಶಕ ಟಿ. ಎಸ್. ಸುಬ್ರಮಣ್ಯ ತಿಳಿಸಿದ್ದಾರೆ. ಬುಧವಾರದಿಂದಲೇ ಈ ವ್ಯವಸ್ಥೆ ಜಾರಿಗೆ ಬಂದಿದ್ದು, ಜನರಿಂದಲೂ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ.
ವಾಟ್ಸಪ್ ಮೂಲಕ ಟಿಕೆಟ್ ಬುಕ್ ಮಾಡಿ: ಮೈಸೂರಿಗೆ ಭೇಟಿ ನೀಡುವ ಪ್ರವಾಸಿಗರು 884160088 ಸಂಖ್ಯೆಗೆ Hi ಎಂದು ಸಂದೇಶ ಕಳಿಸುವ ಮೂಲಕ ಅಥವ ಅರಮನೆಯ ವೆಬ್‌ಸೈಟ್ https://mysorepalace.karnataka.gov.in/index.html ನಲ್ಲಿ ನೀಡಲಾಗಿರುವ ಕ್ಯುಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಟಿಕೆಟ್ ಬುಕ್ ಮಾಡಬಹುದು. ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಟಿಕೆಟ್ ಬುಕ್ ಮಾಡುವ ಸೌಲಭ್ಯಗಳು ಲಭ್ಯವಿದೆ.
ಒಮ್ಮೆ ಟಿಕೆಟ್ ಖರೀದಿ ಮಾಡಿದರೆ ಅದರ ಅವಧಿ 5 ದಿನಗಳ ತನಕ ಇರುತ್ತದೆ. ಈ ಮಾದರಿಯಲ್ಲಿ ಬುಕ್ ಮಾಡಿದ ಟಿಕೆಟ್‌ಗಳ ಮೂಲಕ ಬೆಳಗ್ಗೆ 10 ರಿಂದ ಸಂಜೆ 5.30ರ ತನಕ ಅರಮನೆಯನ್ನು ವೀಕ್ಷಣೆ ಮಾಡಬಹುದು ಎಂದು ಅರಮನೆಯ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.
ಮೈಸೂರು ನಗರಕ್ಕೆ ಆಗಮಿಸುವ ಪ್ರವಾಸಿಗರು ಅತಿ ಹೆಚ್ಚು ಭೇಟಿ ನೀಡುವ ಸ್ಥಳಗಳಲ್ಲಿ ಮೈಸೂರು ಅರಮನೆಯೂ ಒಂದು. ದಸರಾ ಸಂದರ್ಭದಲ್ಲಿ ಇದು ರಾಜ್ಯದ ಜನರ ಕೇಂದ್ರ ಬಿಂದುವಾಗಿರುತ್ತದೆ. ವರ್ಷಪೂರ್ತಿ ಅರಮನೆಯ ಸೌಂದರ್ಯವನ್ನು ಸವಿಯಲು ಪ್ರವಾಸಿಗರು ಆಗಮಿಸುತ್ತಲೇ ಇರುತ್ತಾರೆ.
ದಸರಾ ಸಂದರ್ಭದಲ್ಲಿ ಮೈಸೂರು ಅರಮನೆಯಲ್ಲಿ ನಡೆಯುವ ಖಾಸಗಿ ದರ್ಬಾರ್ ಅಂದಿನ ರಾಜವೈಭವಕ್ಕೆ ಇಂದಿಗೂ ಸಾಕ್ಷಿಯಾಗಿದೆ. ಮೈಸೂರು ಸಂಸ್ಥಾನದ ಸುಮಾರು 25 ರಾಜರ, 550 ವರ್ಷಗಳ ರಾಜವೈಭವಕ್ಕೆ ಮೈಸೂರು ಅರಮನೆ ಸಾಕ್ಷಿಯಾಗಿ ನಿಂತಿದೆ. ವಾಸ್ತುಶಿಲ್ಪ, ಒಳಾಂಗಣ ವಿನ್ಯಾಸ ಸೇರಿದಂತೆ ವಿವಿಧ ಆಕರ್ಷಣೆಗಳು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತವೆ.
ಇಷ್ಟು ದಿನ ಅರಮನೆ ನೋಡಲು ಆಗಮಿಸುವ ಜನರು ಮೈಸೂರಿಗೆ ಬಂದು. ಅರಮನೆ ಹೊರಗೆ ಇರುವ ಟಿಕೆಟ್ ಕೌಂಟರ್‌ನಲ್ಲಿ ಕ್ಯೂನಲ್ಲಿ ನಿಂತು ಟಿಕೆಟ್ ಖರೀದಿ ಮಾಡಿ, ಅರಮನೆ ನೋಡಲು ತೆರಳಬೇಕಿತ್ತು. ಆದರೆ ಈಗ ವಾಟ್ಸಪ್ ಮೂಲಕ ಟಿಕೆಟ್ ಬುಕ್ ಮಾಡಲು ಅವಕಾಶ ನೀಡಲಾಗಿದೆ. ಇದರಿಂದಾಗಿ ಪ್ರವಾಸಿಗರಿಗೂ ಅನುಕೂಲವಾಗಿದೆ.
ಮೈಸೂರು ಅರಮನೆಯ ಆಕರ್ಷಣೆಗಳಲ್ಲಿ ಪ್ರಮುಖವಾದದ್ದು ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಜಂಬೂ ಸವಾರಿಯಲ್ಲಿ ನಾಡ ದೇವತೆ ಚಾಮುಂಡೇಶ್ವರಿಯನ್ನು ಹೊತ್ತು ಸಾಗುವ 750 ಕೆ.ಜಿ. ತೂಕದ ಚಿನ್ನದ ಅಂಬಾರಿ. ಮೈಸೂರು ಅರಮನೆಯಲ್ಲಿಯೇ ಅಂಬಾರಿ ಇರಲಿದ್ದು, ಪ್ರವಾಸಿಗರು ಇದನ್ನು ಕಣ್ತುಂಬಿಕೊಳ್ಳಬಹುದಾಗಿದೆ.
ಇದು ಮಾತ್ರವಲ್ಲ 135 ಕೆ.ಜಿ. ಬಂಗಾರದ ರತ್ನಖಚಿತ ಸಿಂಹಾಸನವೂ ಇಲ್ಲಿದೆ. ಅರಮನೆಯಲ್ಲಿನ ಆಯುಧ ಶಾಲೆ, ಸಂಗೀತ ಕೊಠಡಿ ಸೇರಿದಂತೆ ಹತ್ತು ಹಲವು ಆಕರ್ಷಣೆಗಳಿದ್ದು, ಮೈಸೂರಿಗೆ ಆಗಮಿಸುವ ಪ್ರವಾಸಿಗರು ತಪ್ಪದೇ ಅರಮನೆಗೆ ಭೇಟಿ ನೀಡುತ್ತಾರೆ.












Click it and Unblock the Notifications