ಕೇರಳ-ಕರ್ನಾಟಕ ನಡುವೆ ರೈಲು; ಅಂತಿಮ ಸಮೀಕ್ಷೆಗೆ 5.90 ಕೋಟಿ ಬಿಡುಗಡೆ
ಬೆಂಗಳೂರು, ಮೇ 17; ಕರ್ನಾಟಕದ ಹೊಸ ರೈಲ್ವೆ ಯೋಜನೆಯೊಂದರ ಅಂತಿಮ ಸಮೀಕ್ಷೆಗೆ ರೈಲ್ವೆ ಸಚಿವಾಲಯ 5.90 ಕೋಟಿ ರೂ. ಬಿಡುಗಡೆ ಮಾಡಿದೆ. ಈ ಮಾರ್ಗ ನಿರ್ಮಾಣದಿಂದ ಎರ್ನಾಕುಲಂ ಮತ್ತು ಬೆಂಗಳೂರು ನಡುವಿನ ಪ್ರಯಾಣದ ಅಂತರ ಕಡಿಮೆಯಾಗಲಿದೆ ಎಂದು ಅಂದಾಜಿಸಲಾಗಿದೆ.
ರೈಲ್ವೆ ಇಲಾಖೆ ನೀಲಂಬೂರು-ನಂಜನಗೂಡು ವಯಾ ವಯನಾಡು ಹೊಸ ರೈಲು ಮಾರ್ಗ ನಿರ್ಮಾಣ ಮಾಡುತ್ತಿದೆ, ಇದಕ್ಕಾಗಿ ಪ್ರಸ್ತಾವನೆ ಸಿದ್ಧವಾಗಿದೆ. ಈ ಪ್ರಸ್ತಾವಿತ ಮಾರ್ಗದ ಅಂತಿಮ ಸ್ಥಳ ಸಮೀಕ್ಷೆ (ಎಫ್‌ಎಲ್‌ಎಸ್) ನಡೆಸಲಿದೆ, ಇದಕ್ಕಾಗಿ ಅನುದಾನ ಬಿಡುಗಡೆ ಮಾಡಲಾಗಿದೆ.
ಕೇರಳದ ಇ. ಶ್ರೀಧರನ್ ನೀಲಂಬೂರು-ಮೈಸೂರು ನಡುವಿನ ಈ ರೈಲು ಮಾರ್ಗ ಪ್ರಸ್ತಾಪಿಸಿದ್ದಾರೆ. ದೇಶಾದ್ಯಂತ ಮೆಟ್ರೋ ಮ್ಯಾನ್ ಎಂದೇ ಖ್ಯಾತಿಗಳಿಸಿರುವ ಅವರು ಈ ಮಾರ್ಗದ ಪ್ರಸ್ತಾಪ ಮಾಡಿ, ಅರ್ಧ ಭಾಗದ ಸಮೀಕ್ಷೆ ಪೂರ್ಣಗೊಳಿಸಿದ್ದರು. ಕೇರಳದ ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರ ಇದರ ಜೊತೆಗೆ ತಲಸ್ಸೇರಿ-ಮೈಸೂರು ನಡುವೆ ನೂತನ ಮಾರ್ಗ ನಿರ್ಮಾಣ ಮಾಡಲು ಸಹ ಮುಂದಾಗಿದೆ.

ದೆಹಲಿ-ಕೇರಳ ನಡುವೆ ನೇರ ಸಂಪರ್ಕ; ನೀಲಂಬೂರು ಮತ್ತು ಮೈಸೂರಿನ ನಂಜನಗೂಡು ನಡುವಿನ ರೈಲು ಮಾರ್ಗ ಬೆಂಗಳೂರು-ಎರ್ನಾಕುಲಂ ನಡುವಿನ ರೈಲು ಪ್ರಯಾಣದ ಅವಧಿ ಕಡಿಮೆಗೊಳಿಸುವುದಿಲ್ಲ. ಇದು ಕೇರಳ ಮತ್ತು ದೆಹಲಿ ನಡುವೆ ವಯಾ ಬೆಂಗಳೂರು ಹೊಸ ಮಾರ್ಗಕ್ಕೆ ಅನುಕೂಲವಾಗಲಿದೆ ಎಂಬ ಸುದ್ದಿಗಳಿವೆ. ಈ ಮಾರ್ಗ ಬೆಂಗಳೂರು-ಎರ್ನಾಕುಲಂ ನಡುವಿನ 100 ಕಿ. ಮೀ. ಮತ್ತು ಮೈಸೂರು-ಎರ್ನಾಕುಲಂ ನಡುವಿನ 400 ಕಿ. ಮೀ. ಪ್ರಯಾಣದ ಕಡಿಮೆ ಮಾಡಲಿದೆ ಎಂದು ಅಂದಾಜಿಸಲಾಗಿದೆ.
ನೀಲಂಬೂರು-ನಂಜನಗೂಡು ನಡುವಿನ ಹೊಸ ರೈಲು ಮಾರ್ಗದ ಉದ್ದ 236 ಕಿ. ಮೀ.ಗಳು. ಇ. ಶ್ರೀಧರನ್ ಅವರ ಅಪೂರ್ಣಗೊಂಡ ಸಮೀಕ್ಷೆಯ ವರದಿ 176 ಕಿ. ಮೀ. ಎಂದು ಹೇಳಿದೆ. ಈ ಕುರಿತು ಅವರು ರಾಜಕಾರಣಿಗಳನ್ನು ಸಹ ಭೇಟಿ ಮಾಡಿ ವಿವರಣೆ ನೀಡಿದ್ದರು. ಎಫ್‌ಎಲ್‌ಎಸ್ ವರದಿ ಅಂತಿಮ ಡಿಪಿಆರ್ ಅಲ್ಲ. ಆದರೆ ಇದು ರೈಲು ಆರಂಭ ಮತ್ತು ಕೊನೆಯ ನಿಲ್ದಾಣ ಹಾಗೂ ನಡುವೆ ಬರುವ ನಿಲ್ದಾಣಗಳ ಮಾಹಿತಿಯನ್ನು ಒಳಗೊಂಡಿರುತ್ತದೆ.

ವಯನಾಡು ಮೂಲಕ ನೀಲಂಬೂರು-ನಂಜನಗೂಡು ರೈಲು ಮಾರ್ಗ ನಿರ್ಮಾಣವಾಗಬೇಕು ಎಂಬುದು ಈಗಿನ ಬೇಡಿಕೆಯಲ್ಲ. 2002ರಿಂದಲೂ ಹಲವು ಸಂಘಟನೆಗಳು ಈ ಮಾರ್ಗಕ್ಕಾಗಿ ಬೇಡಿಕೆ ಇಟ್ಟಿವೆ, ಇದಕ್ಕಾಗಿ ಸಮೀಕ್ಷೆಯನ್ನು ಸಹ ಮಾಡಲಾಗಿತ್ತು. ಬೆಂಗಳೂರಿನಿಂದ ಕೇರಳದ ಮಧ್ಯ ಭಾಗಕ್ಕೆ ವೇಗವಾಗಿ ತಲುಪಲು ಈ ಮಾರ್ಗ ಸಹಾಯಕವಾಗಲಿದೆ ಎಂದು ಸಂಘಟನೆಗಳು ಹೇಳಿದ್ದವು.
ಈ ಮಾರ್ಗ ನಿರ್ಮಾಣವಾದರೆ ಕೊಂಕಣ ರೈಲು ಮಾರ್ಗ ವಿವಿಧ ಕಾರಣಕ್ಕೆ ಬಂದ್ ಆದರೆ ಬೈಪಾಸ್ ಆಗಿ ಬಳಕೆ ಮಾಡಬಹುದು ಎಂದು ಅಂದಾಜಿಸಲಾಗಿದೆ. ಅಲ್ಲದೇ ಘಟ್ಟ ಪ್ರದೇಶದಲ್ಲಿನ ರೈಲುಗಳ ಸಂಚಾರ ದಟ್ಟಣೆಗೆ ಸಹಾಯಕವಾಗಲಿದೆ ಎಂಬ ವಾದವೂ ಇದೆ.
ನೀಲಂಬೂರು-ನಂಜನಗೂಡು ರೈಲು ಮಾರ್ಗ ಬಂಡೀಪುರ ರಾಷ್ಟ್ರೀಯ ಉದ್ಯಾನದ ಮೂಲಕ ಹಾದು ಹೋಗುತ್ತದೆ. ಆದ ಕಾರಣ ಕರ್ನಾಟಕ ಸರ್ಕಾರ ಮತ್ತು ಅರಣ್ಯ ಇಲಾಖೆ ಈ ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿವೆ. ಮಾರ್ಗ ನಿರ್ಮಾಣಗೊಂಡರೆ ಕಾಡು ಪ್ರಾಣಿಗಳಿಗೆ ತೊಂದರೆಯಾಗಲಿದೆ ಎಂಬ ವಾದವಿದೆ.
ರೈಲು ಯೋಜನೆಗೆ ಒಪ್ಪಿಗೆ ಸಿಕ್ಕಿದರೆ ಕಾಡು ಪ್ರಾಣಿಗಳಿಗೆ ತೊಂದರೆಯಾಗದಂತೆ 19 ಕಿ. ಮೀ. ಸುರಂಗ ಮಾರ್ಗವನ್ನು ಸಹ ನಿರ್ಮಾಣ ಮಾಡುವ ಪ್ರಸ್ತಾವನೆ ಇದೆ. ಯೋಜನೆಯ ಡಿಪಿಆರ್ ತಯಾರು ಮಾಡಲು ಕೇರಳ ಸರ್ಕಾರ ಈ ಹಿಂದೆಯೇ 8 ಕೋಟಿ ಅನುದಾನ ಮೀಸಲಿಟ್ಟಿತ್ತು. ಈ ಯೋಜನೆಯಲ್ಲಿ ಸುಮಾರು 62 ಕಿ. ಮೀ. ಮಾರ್ಗ ಕರ್ನಾಟಕದಲ್ಲಿ ಹಾದು ಹೋಗುತ್ತದೆ. ಉಳಿದ ಮಾರ್ಗ ಕೇರಳದಲ್ಲಿ ಸಾಗಲಿದೆ.












Click it and Unblock the Notifications