NH 48 ವಾಹನ ಸವಾರರಿಗೆ ಮಾಹಿತಿ, 2 ಟೋಲ್ ರದ್ದು
ಬೆಂಗಳೂರು, ಮೇ 23: ಬೆಂಗಳೂರು-ತುಮಕೂರು-ಚಿತ್ರದುರ್ಗ ಮಾರ್ಗದ ವಾಹನ ಸವಾರರಿಗೆ ಸಿಹಿಸುದ್ದಿ ಇದೆ. ರಾಷ್ಟ್ರೀಯ ಹೆದ್ದಾರಿ 48 ಅನ್ನು ನಿಯಂತ್ರಿತ ಪ್ರವೇಶದ ಹೆದ್ದಾರಿಯಾಗಿ ಅಭಿವೃದ್ಧಿ ಮಾಡಲಾಗುತ್ತದೆ. ಇದರಿಂದಾಗಿ ಹೆಚ್ಚಿನ ವೇಗದ ವಾಹನ ಸಂಚಾರಕ್ಕಾಗಿ ಅನುಕೂಲವಾಗಲಿದೆ. ಟೋಲ್ ಸಹ ಕಡಿಮೆಯಾಗಲಿದೆ.
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಎನ್‌ಹೆಚ್ 48 ಅನ್ನು access controlled ಹೆದ್ದಾರಿಯಾಗಿ ಪರಿವರ್ತಿಸಲಿದೆ. ಇದರಿಂದಾಗಿ ಎರಡು ಟೋಲ್‌ಗಳು ಸಹ ರದ್ದಾಗಲಿವೆ. ನೆಲಮಂಗಲ-ತುಮಕೂರು, ತುಮಕೂರು-ಚಿತ್ರದುರ್ಗದ ತನಕ ಈ ಸೌಲಭ್ಯ ವಾಹನ ಸವಾರರಿಗೆ ಸಿಗಲಿದೆ.

2025ರ ಡಿಸೆಂಬರ್ ವೇಳೆಗೆ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಮಾದರಿಯಲ್ಲಿ ಎನ್‌ಹೆಚ್ 48ರಲ್ಲಿ ನೆಲಮಂಗಲ-ತುಮಕೂರು ಹೈವೇಯನ್ನು ಆಕ್ಸೆಸ್ ಕಂಟ್ರೋಲ್ಡ್ ಆಗಿ ಮಾಡಲಾಗುತ್ತದೆ. ಆದ್ದರಿಂದ ಈಗಿರುವ ಎರಡು ಟೋಲ್‌ನಲ್ಲಿ ಒಂದು ರದ್ದಾಗುತ್ತದೆ.
ಯೋಜನೆ ವಿವರಗಳು: ರಾಷ್ಟ್ರೀಯ ಹೆದ್ದಾರಿಯಲ್ಲಿ ಈಗ ಆಗುತ್ತಿರುವ ವಾಹನ ಸಂಚಾರ ದಟ್ಟಣೆ ಗಮನದಲ್ಲಿಟ್ಟುಕೊಂಡು ಈಗಿರುವ 6 ಪಥದ ರಸ್ತೆಯನ್ನು 10 ಪಥವಾಗಿ ಮಾಡಲಾಗುತ್ತದೆ. ಆಗ ನೆಲಮಂಗಲ ಟೋಲ್‌ಗೇಟ್ ಇರುವುದಿಲ್ಲ. ಚೊಕ್ಕೇನಹಳ್ಳಿ ಮತ್ತು ಕುಲುಮೇಪಾಳ್ಯ ಟೋಲ್ ರದ್ದುಗೊಳಿಸಲಾಗುತ್ತದೆ. ಬದಲಾಗಿ ರಾಯಲಪಾಳ್ಯದಲ್ಲಿ ಹೊಸ ಟೋಲ್ ಸ್ಥಾಪನೆಯಾಗಲಿದೆ. ರಸ್ತೆಯನ್ನು 10 ಪಥವಾಗಿ ಪರಿವರ್ತನೆ ಮಾಡಿ ಬ್ಯಾರಿಕೇಡ್ ಅಳವಡಿಕೆ ಮಾಡಲಾಗುತ್ತದೆ.
ಹೆದ್ದಾರಿ ವಿಸ್ತರಣೆ ಕಾಮಗಾರಿ ಈಗಾಗಲೇ ನಡೆಯುತ್ತಿದೆ. 2025ರ ಆಗಸ್ಟ್‌ನಲ್ಲಿ ಕಾಮಗಾರಿ ಪೂರ್ಣಗೊಳಿಸಲು ಗಡುವು ನೀಡಲಾಗಿತ್ತು. ಆದರೆ ಭೂ ಸ್ವಾಧೀನ ವಿಳಂಬದ ಕಾರಣ ಕಾಮಗಾರಿ ತಡವಾಗಲಿದ್ದು, 2025ರ ಡಿಸೆಂಬರ್‌ನಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.
2004ರಲ್ಲಿ ನಿರ್ಮಿಸಲಾದ ಎರಡು ಟೋಲ್ ಪ್ಲಾಜಾಗಳು ಹತ್ತಿರದಲ್ಲಿವೆ. ಅವುಗಳನ್ನು ರದ್ದುಗೊಳಿಸಿ ಒಂದೇ ಟೋಲ್ ಮಾಡಲಾಗುತ್ತದೆ. ಸದ್ಯ ಬೆಂಗಳೂರು-ಚಿತ್ರದುರ್ಗ ವಾಹನ ಸವಾರರು ಕುಲುವೇಪಾಳ್ಯದಲ್ಲಿ 25, ಚೊಕ್ಕೇನಹಳ್ಳಿಯಲ್ಲಿ 20, ತುಮಕೂರು-ಶಿರಾ ನಡುವೆ ಕರಜೀವನಹಳ್ಳಿಯಲ್ಲಿ 100 ಮತ್ತು ಹಿರಿಯೂರು-ಚಿತ್ರದುರ್ಗ ನಡುವೆ 100 ರೂ. ಟೋಲ್ ಪಾವತಿಸುತ್ತಿದ್ದಾರೆ.
ರಾಯಲಪಾಳ್ಯದಲ್ಲಿ ನಿರ್ಮಾಣವಾಗುವ ಹೊಸ ಟೋಲ್‌ನಲ್ಲಿ ಎಷ್ಟು ದರವಿರಲಿದೆ? ಎಂಬುದು ಇನ್ನೂ ಅಂತಿಮವಾಗಿಲ್ಲ. ಹೆದ್ದಾರಿಯಲ್ಲಿ ಗೊರಗುಂಟೆಪಾಳ್ಯ-ನೆಲಮಂಗಲ ನಡುವೆ ಈಗಾಗಲೇ ಪ್ರವೇಶ ನಿಯಂತ್ರಿತವಾಗಿದೆ. ಹಂತ-ಹಂತವಾಗಿ ನೆಲಮಂಗಲ-ತುಮಕೂರು ನಡುವೆ ಈ ವ್ಯವಸ್ಥೆ ಮಾಡಲಾಗುತ್ತದೆ.
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಕೆಲವು ದಿನಗಳ ಹಿಂದೆ ರಾಷ್ಟೀಯ ಹೆದ್ದಾರಿ 48ರ ಚಿತ್ರಗಳನ್ನು ಟ್ವೀಟ್ ಮಾಡಿದ್ದರು. ಬೆಂಗಳೂರು-ಚಿತ್ರದುರ್ಗ ನಡುವೆ ವಾಹನಗಳ ಸುಗಮ ಸಂಚಾರಕ್ಕೆ ಹೇಗೆ ವ್ಯವಸ್ಥೆ ಮಾಡಲಾಗಿದೆ? ಎಂದು ವಿವರಿಸಿದ್ದರು.
ನೆಲಮಂಗಲ ಟೋಲ್ ಬಗ್ಗೆ ವಾಹನ ಸವಾರರು ಸದಾ ದೂರು ನೀಡುತ್ತಾರೆ. ಟೋಲ್‌ನಲ್ಲಿ ವಾಹನ ಪಾಸ್ ಆಗದಿದ್ದರೂ ಸಹ ಫಾಸ್ಟ್‌ಟ್ಯಾಗ್‌ನಲ್ಲಿ ಹಣ ಕಡಿತವಾಗುತ್ತದೆ ಎಂಬುದು ಆರೋಪ. ಈ ದೂರುಗಳ ಕುರಿತು ಎನ್‌ಎಚ್‌ಎಐ ಈಗಾಗಲೇ ಗಮನಹರಿಸಿದೆ. ಟೋಲ್ ಸಂಗ್ರಹ ಮಾಡುವ ಗುತ್ತಿಗೆದಾರರಿಗೂ ನೋಟಿಸ್ ನೀಡಿದೆ.
ಆದರೆ access controlled ಹೆದ್ದಾರಿಯಾಗಿ ಪರಿವರ್ತನೆಗೊಂಡ ಬಳಿಕ ವಾಹನಗಳ ಪ್ರವೇಶ ನಿಯಂತ್ರಣ ಮಾಡಲಾಗುತ್ತದೆ. ಈಗ ಟೋಲ್ ಬಳಿ ವಾಹನ ನಿಯಂತ್ರಣ ಇಲ್ಲದ ಕಾರಣ ಸಮಸ್ಯೆ ಆಗುತ್ತಿದೆ ಎಂದು ವಾಹನ ಸವಾರರು ದೂರುತ್ತಿದ್ದಾರೆ.
access controlled ಆದ ಬಳಿಕ ಎರಡು ಟೋಲ್ ರದ್ದಾಗುತ್ತದೆ. ಆದರೆ ಇರುವ ಒಂದು ಟೋಲ್‌ನಲ್ಲಿ ಟೋಲ್ ಪಾವತಿ ಮಾಡದೇ ಸಂಚಾರ ನಡೆಸುವಂತಿಲ್ಲ. ಹಾಗೆ ಸಂಚರಿಸಿದರೆ ದಂಡ ಸಹ ಪಾವತಿಸಬೇಕಾಗುತ್ತದೆ. ಎಲ್ಲಾ ಕಾಮಗಾರಿ ಮುಗಿದು 2025ರ ಡಿಸೆಂಬರ್ ವೇಳಗೆ ನೆಲಮಂಗಲ-ತುಮಕೂರು, ತುಮಕೂರು-ಚಿತ್ರದುರ್ಗದ ಸಂಚಾರ ಮತ್ತಷ್ಟು ಸುಲಭವಾಗುವ ನಿರೀಕ್ಷೆ ಇದೆ.












Click it and Unblock the Notifications