New year 2024: ಕ್ರಿಸ್‌ಮಸ್ & ಹೊಸ ವರ್ಷಕ್ಕೆ ಪ್ರವಾಸ ಕೈಗೊಳ್ಳುವ ಪ್ಲಾನ್ ಇದ್ಯಾ? ಕೋಟೆನಾಡಿನಲ್ಲಿವೆ ಸುಂದರ ತಾಣಗಳು
ಚಿತ್ರದುರ್ಗ, ಡಿಸೆಂಬರ್ 19: ಸಾಮಾನ್ಯ ಕ್ರಿಸ್‌ಮಸ್ ಹಾಗೂ ಹೊಸವರ್ಷದ ಸಮಯದಲ್ಲಿ ಬಹುತೇಕ ಮಂದಿ ಪ್ರವಾಸಕ್ಕೆ ಹೋಗುವ ಪ್ಲಾನ್ ಮಾಡಿಕೊಂಡಿರುತ್ತಾರೆ. ಹಾಗಾದರೆ ಈ ವೇಳೆ ಪ್ರವಾಸ ಕೈಗೊಳ್ಳಲು ಚಿತ್ರದುರ್ಗ ಜಿಲ್ಲೆಯಲ್ಲಿವೆ ಸೂಕ್ತ ಪ್ರವಾಸಿ ತಾಣಗಳು. ಬೆಂಗಳೂರಿನಿಂದ ಹಾಗೂ ಇನ್ನಿತರ ಊರುಗಳಿಂದ ಇಲ್ಲಿಗೆ ಪ್ರಯಾಣ ಬೆಳೆಸುವವರು ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಕ್ರಿಸ್‌ಮಸ್ ಹಾಗೂ ಹೊಸ ವರ್ಷಕ್ಕೆ ಸ್ನೇಹಿತರು ಮತ್ತು ಕುಟುಂಬದ ಸದಸ್ಯರೊಂದಿಗೆ ಪ್ರವಾಸ ಕೈಗೊಳ್ಳುವ ಯೋಚನೆ ಇದೆಯೇ ಹಾಗಾದ್ರೆ ನಮ್ಮ ಜಿಲ್ಲೆಯಲ್ಲಿ ರಮಣೀಯವಾದ ಒಂದಿಷ್ಟು ಪ್ರವಾಸಿ ತಾಣಗಳಿವೆ. ಇಲ್ಲಿಗೆ ನೀವು ಭೇಟಿ ನೀಡಿ ಆನಂದಿಸಬಹುದು. ಯಾವುವು ಆ ಸ್ಥಳಗಳು ಹಾಗೂ ತಲುಪುವ ಮಾರ್ಗಗಗಳು ಹೀಗಿವೆ ತಿಳಿಯಿರಿ.

ಚಿತ್ರದುರ್ಗ ಒಂದು ಸುಂದರವಾದ ಪ್ರವಾಸಿ ಆಕರ್ಷಣೆಯನ್ನು ಹೊಂದಿರುವ ಪ್ರದೇಶವಾಗಿದೆ. ದೇಶ ವಿದೇಶಗಳಿಂದಲೂ ಪ್ರವಾಸಿಗರು ಚಿತ್ರದುರ್ಗಕ್ಕೆ ಲಗ್ಗೆ ಇಡುತ್ತಾರೆ. ಚಿತ್ರದುರ್ಗವು ಕಲ್ಲು ಬಂಡೆಗಳಿಂದ ಆವರಿಸಲ್ಪಟ್ಟಿದೆ. ಈ ಚಿತ್ರದುರ್ಗವನ್ನು ಕಲ್ಲಿನ ಕೋಟೆ ಎಂದು ಕೂಡ ಕರೆಯಲಾಗುತ್ತದೆ. ವಿಸ್ಮಯಕಾರಿ ದೃಶ್ಯಗಳು, ಐತಿಹಾಸಿಕ ಪುರಾತನ ದೇವಾಲಯಗಳು, ಶೌರ್ಯದಿಂದ ತುಂಬಿದ ಇತಿಹಾಸದ ನಿದರ್ಶನಗಳನ್ನು ಇಲ್ಲಿ ಕಾಣಬಹುದಾಗಿದೆ.
ಚಿತ್ರದುರ್ಗ ಕೋಟೆ ಅಂಕು ಡೊಂಕಾದ ಮಾರ್ಗಗಳು ಶತ್ರು ಸೈನಿಕರಿಗೆ ಕ್ಲಿಷ್ಟ ಪರಿಸ್ಥಿತಿಗೆ ಒಳಗಾಗುವಂತೆ ಮಾಡುತ್ತಿತ್ತು. ಸುಭದ್ರವಾಗಿರುವ ಈ ಕೋಟೆಯನ್ನು ರಾಷ್ಟ್ರಕೂಟರು, ಚಾಲುಕ್ಯರು, ಹೊಯ್ಸಳರು ಮತ್ತು ಚಿತ್ರದುರ್ಗದ ಪಾಳೆಗಾರರು ಸೇರಿದಂತೆ ಹಲವು ರಾಜ ಮನೆತನಗಳು ಕೋಟೆಯನ್ನು ಆಳ್ವಿಕೆ ಮಾಡಿ ನಿರ್ಮಿಸಿವೆ.
ಈ ಬೃಹತ್ ಸುಂದರವಾದ ಕೋಟೆಯ ಒಳಭಾಗದಲ್ಲಿ ಹಿಡಿಂಬೇಶ್ವರ ದೇವಾಲಯ, ಸಂಪಿಗೆ ಸಿದ್ದೇಶ್ವರ ದೇವಾಲಯ, ಗೋಪಾಲಕೃಷ್ಣ ದೇವಾಲಯ, ಏಕನಾಥೇಶ್ವರಿ ದೇವಾಲಯ ಸೇರಿದಂತೆ ಇನ್ನು ಹಲವಾರು ದೇವರಗಳು ದೇವಾಲಯಗಳನ್ನು ಒಳಗೊಂಡಿದೆ. ಇಲ್ಲಿನ ಹಿಡಿಂಬೇಶ್ವರ ದೇವಾಲಯದಲ್ಲಿ ಒಂದು ದೊಡ್ಡ ಮೂಳೆಯ ತುಂಡನ್ನು ಗಮನಿಸಬಹುದು. ಈ ಮೂಳೆಯನ್ನು ಇಡಿಂಬಾಸುರನ ರಾಕ್ಷಸ ಹಲ್ಲು ಎಂದು ಹೇಳಲಾಗುತ್ತಿದೆ.
ಅಲ್ಲದೆ ಕೋಟೆಯ ಒಳಗೆ ಒನಕೆ ಓಬವ್ವನ ಕಿಂಡಿ, ಅಕ್ಕತಂಗಿಯರ ಹೊಂಡ, ಕುದುರೆ ಹೆಜ್ಜೆ ಸೇರಿದಂತೆ ಬೃಹತ್ ಬಂಡೆಗಳನ್ನು ಸಹ ಕಾಣಬಹುದಾಗಿದೆ. ಕೋಟೆಯ ಸೌಂದರ್ಯವನ್ನು ಸವಿದ ಬಳಿಕ ಕೋಟೆಯ ಹೊರಗಡೆ ಬಂದು ಪಕ್ಕದಲ್ಲೇ ಸಿಗುವ ಒಂದಿಷ್ಟು ತಿಂಡಿ ತಿನಿಸು, ಚಹ ಸೇವಿಸಿ ಚಂದ್ರವಳ್ಳಿ ತೋಟದ ಕಡೆ ಪ್ರಯಾಣ ಬೆಳೆಸಬಹುದು.
ಚಂದ್ರವಳ್ಳಿ ಗುಹೆಗಳು: ಜಿಲ್ಲೆಯ ಮತ್ತೊಂದು ಪ್ರಮುಖವಾದ ಆಕರ್ಷಣೆಯಾಗಿರುವ ಸ್ಥಳವೆಂದರೆ ಚಂದ್ರವಳ್ಳಿ ತೋಟ ಹಾಗೂ ಗುಹೆಗಳು. ಈ ಗುಹೆಗಳು ಸುಮಾರು 3000 ವರ್ಷಗಳಷ್ಟು ಹಳೆಯ ಅವೇಷಗಳನ್ನು ಬಹಿರಂಗ ಪಡಿಸುತ್ತದೆ. ಶಾತವಾಹನರಿಗೆ ಸಂಬಂಧಿಸಿದ ನಾಣ್ಯಗಳು, ರೋಮನ್ ಬೆಳ್ಳಿ ನಾಣ್ಯಗಳು, ಚಿನ್ನ, ಬೆಳ್ಳಿ ಮತ್ತು ತಾಮ್ರದ ಆಭರಣಗಳು ಇಲ್ಲಿ ಪತ್ತೆಯಾಗಿವೆ.
ದಂತಕಥೆಯ ಪ್ರಕಾರ, ಒಂದು ಕಾಲದಲ್ಲಿ ಚಂದ್ರಹಾಸ ರಾಜನು ಇಲ್ಲಿ ಆಳ್ವಿಕೆ ಮಾಡುತ್ತಿದ್ದನು. ಹಾಗಾಗಿಯೇ ಈ ಸ್ಥಳಕ್ಕೆ ಚಂದ್ರವಳ್ಳಿ ಎಂಬ ಹೆಸರು ಬಂದಿದೆ ಎಂದು ಹೇಳಲಾಗುತ್ತದೆ. ಇದಾದ ಬಳಿಕ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಮೂಲಕ ಹಿರಿಯೂರು ಬಲಭಾಗಕ್ಕೆ ಹೊದರೆ ರಾಜ್ಯದ ಹಳೆಯ ಅಣೆಕಟ್ಟನ್ನು ನೋಡಬಹುದು ಅದೇ ವಾಣಿ ವಿಲಾಸ ಜಲಾಶಯ.
ವಿವಿ ಸಾಗರ ಡ್ಯಾಂ: ರಾಜ್ಯದ ಅತ್ಯಂತ ಹಳೆಯದ ಅಣೆಕಟ್ಟುಗಳಲ್ಲಿ ವಾಣಿವಿಲಾಸ ಜಲಾಶಯವು ಒಂದಾಗಿದೆ. ಚಿತ್ರದುರ್ಗದಿಂದ ಸುಮಾರು 60 ಕಿಲೋ ಮೀಟರ್ ದೂರದ ಹಿರಿಯೂರು ಮೂಲಕ ಹೊಸದುರ್ಗ ರಸ್ತೆ ಮೂಲಕ ಸಾಗಿದರೆ ಈ ಜಲಾಶಯವನ್ನು ತಲುಪಬುದಾಗಿದೆ. ವಾಣಿವಿಲಾಸ ಪುರ ಎಂಬ ಗ್ರಾಮದ ಬಳಿ ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರು ಅವರು ವಾಣಿ ವಿಲಾಸ ಜಲಾಶಯವನ್ನು 1907ರಲ್ಲಿ ವೇದಾವತಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ.
2022ರಲ್ಲಿ ಡ್ಯಾಂ ಎರಡನೇ ಬಾರಿಗೆ ಕೋಡಿ ಬಿದ್ದಿತ್ತು. ಇದೀಗ ಪ್ರಸ್ತುತ ಜಲಾಶಯದ ನೀರಿನ ಮಟ್ಟ ಸುಮಾರು 120 ಅಡಿ ಇದೆ. ಎರಡು ಕಣಿವೆ ಗುಡ್ಡಗಳ ಮಧ್ಯೆ ಡ್ಯಾಂ ಇದೆ. ಜಲಾಶಯಕ್ಕೆ ಭೇಟಿ ನೀಡಿ ಜಲಾಶಯದ ನೀರಿನ ಸೊಬಗು, ಹಸಿರು ಕಣಿವೆಗಳ ಗುಡ್ಡ, ಹಿನ್ನಿರಿನ ಪ್ರದೇಶ, ಗುಡ್ಡಗಳ ಮೇಲಿರುವ ವಿಂಡ್ ವಿಲ್‌ಗಳು, ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಗಿಡಮರಗಳ ನಿಸರ್ಗ ರಮಣೀಯ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು.
ಅಲ್ಲದೆ ಜಲಾಶಯದ ಎಡಭಾಗಕ್ಕೆ ಹುತ್ತರಿ ಗುಡ್ಡ ಭಾಲಭಾಗಕ್ಕೆ ಛತ್ರಿಗುಡ್ಡ ನೋಡಿಕೊಂಡು, ಡ್ಯಾಂ ಮುಂಭಾಗದಲ್ಲಿರುವ ಶ್ರೀ ಕಣಿವೆ ಮಾರಮ್ಮನ ದರ್ಶನ ಪಡೆದು, ಡ್ಯಾಂ ಹಿನ್ನೀರಿನ ಪ್ರದೇಶಕ್ಕೆ ಭೇಟಿ ನೀಡಿ. ಬಳಿಕ ಹಿನ್ನೀರು, ಜಲಾಶಯದ ಕೋಡಿ ಬೀಳುವ ಜಾಗ ಹಾಗೂ ಐತಿಹಾಸಿಕ ವಿಷ ಜಂತು ಪರಿಹಾರಕ ಹಾರ ಕಣಿವೆ ಶ್ರೀ ರಂಗನಾಥ ಸ್ವಾಮಿಯ ದರ್ಶನ ಕೂಡ ಪಡೆಯಬಹುದಾಗಿದೆ.
ಒಟ್ಟಾರೆಯಾಗಿ ಒಂದು ದಿನ ಚಿತ್ರದುರ್ಗ ಪ್ರವಾಸ ಕೈಗೊಂಡರೆ ಡಿಸೆಂಬರ್ ಮತ್ತು ಜನವರಿ ತಿಂಗಳು ಸೂಕ್ತವಾದ ಸಮಯವಾಗಿದೆ. ಯಾಕಂದರೆ ಇದೀಗ ಚಳಿಗಾಲ ಆರಂಭವಾಗಿದೆ. ಬೇಸಿಗೆ ಕಾಲದಲ್ಲಿ ತಾಪಮಾನ ಹೆಚ್ಚಾಗಿರುವುದರಿಂದ ಚಳಿಗಾಲದಲ್ಲಿ ಭೇಟಿ ನೀಡುವುದಕ್ಕೆ ಸೂಕ್ತವಾದ ಸಮಯವಾಗಿದೆ. ಆಗಾದ್ರೆ ತಡವೇಕೆ ಕ್ರಿಸ್‌ಮಸ್ ಹಾಗೂ ಹೊಸ ವರ್ಷಕ್ಕೆ ಚಿತ್ರದುರ್ಗ ಜಿಲ್ಲೆಯ ಸೌಂದರ್ಯ ನೋಡಿ ಮನಸೂರೆಗೊಳ್ಳಬಹುದು.












Click it and Unblock the Notifications