ಸೀತೆ, ಬುದ್ಧರ ಜನ್ಮಸ್ಥಳ ನೇಪಾಳ ಪ್ರವಾಸ

ನೇಪಾಳದ ಬಗ್ಗೆ ಕಿರುಮಾಹಿತಿ : ಸ್ವಾತಂತ್ರ್ಯ ದೇಶವಾದ ನೇಪಾಳ ಸುಮಾರು 140,341 ಚದರ ಕಿಮೀಗಳಷ್ಟು ವಿಸ್ತಾರವಾಗಿದ್ದು ತನ್ನ ಗಡಿಯನ್ನು ಚೈನಾ ಹಾಗೂ ಭಾರತದೊಂದಿಗೆ ಹಂಚಿಕೊಂಡಿದೆ. ನೇಪಾಳದ ಹೆಸರು ಕೇಳಿದಂತೆ ನಮ್ಮ ಮನಸ್ಸಿಗೆ ಮೊದಲು ಬರುವುದು ಪಶುಪತಿನಾಥ ಮಂದಿರ, ಮುಕ್ತಿನಾಥ, ಬೆಟ್ಟ-ಗುಡ್ಡ-ಕಣಿವೆಗಳು, ಹಿಮಾಲಯ ಪರ್ವತ. ಪುರಾತನ ನಾಗರೀಕತೆಯ ಹೆಗ್ಗಳಿಕೆ ಹೊಂದಿರುವ ನೇಪಾಳ ಸೀತೆ ಹಾಗೂ ಗೌತಮ ಬುದ್ಧರ ಜನ್ಮಸ್ಥಳವೆಂದು ಪ್ರಸಿದ್ಧವಾದ ಈ ದೇಶದ ಕಾಠ್ಮಂಡು ಕಣಿವೆಯಲ್ಲಿರುವ ಪಶುಪತಿನಾಥ ಮಂದಿರ ವಿಶ್ವದ ಹಿಂದೂಗಳೆಲ್ಲಾ ಒಮ್ಮೆ ನೋಡಬೇಕೆಂದು ಅಪೇಕ್ಷಿಸುವ ದೇವಸ್ಥಾನ.
ಕಾಂತೀಪುರ (ಕಾಠ್ಮಂಡು, ಕಾಂತಿನಗರ), ಲಲಿತಪುರ (ಪಾಟನ್, ಸುಂದರ ನಗರ) ಹಾಗೂ ಭಕ್ತಪುರ (ಭಡಗಾಂ, ಭಕ್ತರ ನಗರ) ಹೀಗೆ ಮೂರು ಪುರಾತನ ನಗರಗಳು ಕಾಠ್ಮಂಡು ಕಣಿವೆಯಲ್ಲಿ ಪ್ರಖ್ಯಾತವಾಗಿದ್ದು ಪಶುಪತಿಕ್ಷೇತ್ರ(ಕಾಠ್ಮಂಡು)ವು ದೇವಸ್ಥಾನ ಮತ್ತು ಮಂದಿರಗಳಿಗಾಗಿ ಪ್ರಸಿದ್ಧಿ ಪಡೆದಿದೆ. ಧ್ಯಾನ ಮತ್ತು ಮುಕ್ತಿಗೆ ಈ ಕ್ಷೇತ್ರ ಪ್ರಶಸ್ತವಾಗಿದ್ದು ದಕ್ಷಪ್ರಜಾಪತಿ ಹಾಗೂ ಅಷ್ಟ ಚಿರಂಜೀವಿಗಳು ಇಲ್ಲಿ ಧ್ಯಾನ ಮಾಡಿರುವ ಪ್ರತೀತಿಯಿದೆ.
ಪಶುಪತಿನಾಥ ಮಂದಿರ : ಬಾಗಮತಿ ನದಿಯ ತಟದಲ್ಲಿರುವ ಪಶುಪತಿನಾಥ ಮಂದಿರಕ್ಕೆ ನಾಲ್ಕು ಮಹಾದ್ವಾರ, ನಾಲ್ಕು ಬಾಗಿಲುಗಳಿದ್ದು, ಶಿವಲಿಂಗದ ಮೇಲ್ಬಾಗದಲ್ಲಿ ಪಶುಪತಿನಾಥ ಹಾಗೂ ನಾಲ್ಕು ಕಡೆ ಶಿವನ ಮುಖವಿರುವುದೇ ವೈಶಿಷ್ಟ್ಯ. ಈ ಪಂಚಮುಖೀ ವಿಗ್ರಹದಲ್ಲಿ ಪಶುಪತಿನಾಥನ ನಾಲ್ಕು ಮುಖಗಳು ತತ್ಪುರುಷ/ಪರಬ್ರಹ್ಮ (ಪೂರ್ವದಿಕ್ಕಿನಲ್ಲಿ), ಅಘೋರ (ದಕ್ಷಿಣ), ವಂದೇವ (ಉತ್ತರ) ಮತ್ತು ಸದ್ಯೋಜಾತ (ಪಶ್ಹಿಮ). ಈ ಜ್ಯೋತಿರ್ಲಿಂಗದ ನಾಲ್ಕು ಮುಖಗಳು ದ್ವಾರಕಾ, ರಾಮೇಶ್ವರ, ಜಗನ್ನಾಥ ಮತ್ತು ಬದರೀನಾಥವನ್ನು ಪ್ರತಿನಿಧಿಸುತ್ತವೆ. ಹಾಗಾಗಿ ಪಶುಪತಿನಾಥ ದೇವಸ್ಥಾನಕ್ಕೆ ಹೋಗುವುದು ಈ ನಾಲ್ಕು ಸ್ಥಳಗಳಿಗೆ ತೀರ್ಥಯಾತ್ರೆಗೆ ಹೋಗಿಬಂದುದಕ್ಕೆ ಸಮವೆಂದು ನಂಬಿಕೆಯಿದೆ. ನಾಲ್ಕು ಮುಖಗಳಿರುವಂತೆ ನಾಲ್ಕೂ ಕಡೆ ಎರಡು ಕೈಗಳಿದ್ದು ಬಲಗೈಯಲ್ಲಿ ರುದ್ರಾಕ್ಷಿ ಹಾಗೂ ಎಡಗೈಯಲ್ಲಿ ಅಮೃತಕಳಶವಿದೆ.
ಜ್ಯೋತಿರ್ಲಿಂಗವು ಸೃಷ್ಟಿಕರ್ತ ಬ್ರಹ್ಮನನ್ನೂ ; ಪ್ರಕೃತಿಯ ಐದು ಅಂಶಗಳಾದ ಆಕಾಶ, ವಾಯು, ತೇಜ, ಜಲ ಹಾಗೂ ಪೃಥ್ವಿಯನ್ನೂ ಪ್ರತಿಬಿಂಬಿಸುತ್ತದೆಂದು ಪ್ರತೀತಿಯಿದೆ. ಹಾಗೆಯೇ ಪಂಚದ್ರವ್ಯಗಳಾದ ಹಾಲು, ಮೊಸರು, ಸಕ್ಕರೆ, ತುಪ್ಪ ಮತ್ತು ಜೇನುತುಪ್ಪಗಳಿಂದ ಶಿವಲಿಂಗಕ್ಕೆ ಅಭಿಷೇಕ ಮಾಡಲಾಗುತ್ತದೆ. ನಿತ್ಯಪೂಜೆಯಲ್ಲದೇ ಸೋಮವಾರ, ಏಕಾದಶಿ, ಹುಣ್ಣಿಮೆ, ಹಬ್ಬ, ಹರಿದಿನಗಳಂದು ವಿಶೇಷ ಪೂಜೆ ನಡೆಸಲಾಗುತ್ತದೆ. ಶಿವಲಿಂಗಕ್ಕೆ ಸ್ನಾನ, ಅಭಿಷೇಕ, ಅಲಂಕಾರವನ್ನು ಹತ್ತಿರದಿಂದ ನೋಡುವುದೇ ಕಣ್ಣಿಗೆ ಹಬ್ಬ. ವಿಶೇಷ ಪೂಜೆಗಳ ದಿನ ಬಲಭೋಗವನ್ನು ಅರ್ಪಿಸಲಾಗುತ್ತದೆ.
ಸಾರ್ವಜನಿಕರ ಪ್ರವೇಶದ ದೇವಸ್ಥಾನದ ಪಶ್ಚಿಮ ದ್ವಾರ ಬೆಳಿಗ್ಗೆ 4 ಘಂಟೆಗೇ ತೆರೆಯುತ್ತದೆ. ಬೆಳಿಗ್ಗೆ ಪಂಚಾಮೃತ ಸ್ನಾನ-ಪೂಜೆ, ಮಧ್ಯಾಹ್ನ 1-1.30ಯ ಹೊತ್ತಿಗೆ ಅಲಂಕಾರ, ಸಂಜೆ 7.30ಯ ಹೊತ್ತಿಗೆ ಆರತಿ. ಭಕ್ತಾದಿಗಳು ಹೂವು, ಹೂಮಾಲೆ, ಬಿಲ್ವದ ಎಲೆ-ಹಣ್ಣುಗಳನ್ನು ದೇವರಿಗೆ ಅರ್ಪಿಸಬಹುದು. ಶಿವರಾತ್ರಿ ಹಬ್ಬದಂದು ರಾತ್ರಿ 9 ಘಂಟೆಗೆ ಶುರುವಾಗುವ ಪೂಜೆ ರಾತ್ರಿಯಿಡೀ ಮುಂದುವರೆಯುತ್ತದೆ. ಶಿವರಾತ್ರಿಯಲ್ಲದೇ ಮಘೆ/ಮಾಘ ಸಂಕ್ರಾಂತಿ (ಜನವರಿ), ಜನೈ ಪೂರ್ಣಿಮಾ (ಜುಲೈ/ಆಗಸ್ಟ್), ತೇಜ್ (ವಿವಾಹಿತ ಮಹಿಳೆಯರು ತಮ್ಮ ಪತಿಯ ದೀರ್ಘಾಯಸ್ಸಿಗಾಗಿ ಪ್ರಾರ್ಥಿಸುವ ಹಬ್ಬ, ಆಗಸ್ಟ್) ಮತ್ತು ಬಾಲ ಚತುರ್ದಶಿ (ಕುಟುಂಬದ ಮೃತರ ಸ್ಮರಣೆಗಾಗಿ ಆಚರಿಸುವ ಹಬ್ಬ - ನವೆಂಬರ್/ ಡಿಸೆಂಬರ್) ಹಬ್ಬಗಳನ್ನು ಆಚರಿಸಲಾಗುತ್ತದೆ.
ಈ ದೇವಸ್ಥಾನದ ಆವರಣದಲ್ಲಿ ಪಶುಪತಿನಾಥನ ದೇವಸ್ಥಾನವಲ್ಲದೆ ಶಂಕರಾಚಾರ್ಯ, ವಾಸುಕೀನಾಥ, ಸತ್ಯನಾರಾಯಣ, ಶ್ರೀಕೃಷ್ಣ, ಗಣೇಶ, ರಾಮ-ಜಾನಕಿ, ಆಂಜನೇಯ, ಲಕ್ಷ್ಮೀನಾರಾಯಣ, ಗೋರಖನಾಥ ಹಾಗೂ ಶ್ರೀ ರಾಜರಾಜೇಶ್ವರಿ ಮಂದಿರ; ಬುಢಾನೀಲಕಂಠ ವಿಗ್ರಹದ ಮೂಲಕೃತಿಯ ಪ್ರತಿರೂಪ; ಮುಕ್ತಿಮಂಡಲ; ನಂದಿ, ಉನ್ಮತ್ತ ಭೈರವ ಕೀರ್ತಿಮುಖ ಭೈರವ, ಮಂಗಳಗೌರಿ, ವಿರೂಪಾಕ್ಷ ಮತ್ತು ಕಾಮದೇವನ ಮೂರ್ತಿಗಳು; 64 ಶಿವಲಿಂಗಗಳು ಹೀಗೆ ಹಲವಾರು ದೇವತೆಗಳಿಗೆ ಪೂಜೆ ನಡೆಯುತ್ತದೆ.











Click it and Unblock the Notifications