Vande Bharat Train: ಮಧುರೈ-ಬೆಂಗಳೂರು ವಂದೇ ಭಾರತ್ ರೈಲಿಗೆ ಶನಿವಾರ ಚಾಲನೆ, ವೇಳಾಪಟ್ಟಿ
ಬೆಂಗಳೂರು, ಆಗಸ್ಟ್ 31: ಬೆಂಗಳೂರು ನಗರಕ್ಕೆ ಮತ್ತೊಂದು ವಂದೇ ಭಾರತ್ ರೈಲು ಸಂಚಾರ ಆರಂಭವಾಗಲಿದೆ. ಭಾರತೀಯ ರೈಲ್ವೆ ಶನಿವಾರ ಒಟ್ಟು 3 ವಂದೇ ಭಾರತ್ ರೈಲು ಸಂಚಾರಕ್ಕೆ ಚಾಲನೆ ನೀಡಲಿದೆ. ಒಂದು ರೈಲು ಮಧುರೈ-ಬೆಂಗಳೂರು ನಡುವೆ ಸಂಚಾರವನ್ನು ನಡೆಸಲಿದೆ. ರೈಲುಗಳ ಪ್ರಾಯೋಗಿಕ ಸಂಚಾರ ಪೂರ್ಣಗೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ ರೈಲು ಸಂಚಾರಕ್ಕೆ ಮಧ್ಯಾಹ್ನ 12.30ಕ್ಕೆ ಹಸಿರು ನಿಶಾನೆ ತೋರಿಸಲಿದ್ದಾರೆ.
ಪ್ರಧಾನ ಮಂತ್ರಿಗಳ ಕಾರ್ಯಾಲಯ ಆಗಸ್ಟ್ 31ರಂದು 3 ವಂದೇ ಭಾರತ್ ರೈಲುಗಳಿಗೆ ಪ್ರಧಾನಿಗಳು ಹಸಿರು ನಿಶಾನೆ ತೋರಲಿದ್ದಾರೆ. ಈ ರೈಲುಗಳು ಉತ್ತರ ಪ್ರದೇಶ, ತಮಿಳುನಾಡು ಮತ್ತು ಕರ್ನಾಟಕಕ್ಕೆ ಸಂಪರ್ಕ ವೃದ್ಧಿಸಲಿವೆ. ಹೊಸ ವಂದೇ ಭಾರತ್ ರೈಲುಗಳು ಪ್ರಯಾಣಿಕರಿಗೆ ವಿಶ್ವದರ್ಜೆಯ ಪ್ರಯಾಣದ ಅನುಭವ ನೀಡುತ್ತವೆ, ಪ್ರಯಾಣದ ಅವಧಿ ತಗ್ಗಿಸುತ್ತವೆ ಮತ್ತು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಿವೆ ಎಂದು ಹೇಳಿದೆ.

ನರೇಂದ್ರ ಮೋದಿ ಶನಿವಾರ ಮಧ್ಯಾಹ್ನ 12.30ಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ 3 ವಂದೇ ಭಾರತ್ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿಸಲಿದ್ದಾರೆ. ಪ್ರಧಾನ ಮಂತ್ರಿಗಳ 'ಮೇಕ್ ಇನ್ ಇಂಡಿಯಾ' ಮತ್ತು 'ಆತ್ಮ ನಿರ್ಭರ್ ಭಾರತ'ದ ದೂರದೃಷ್ಟಿಯನ್ನು ಸಾಕಾರಾಗೊಳಿಸುವ ಅತ್ಯಾಧುನಿಕ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ವಿವಿಧ ನಗರಗಳಿಗೆ ಅತಿ ವೇಗವಾಗಿ ಸಂಪರ್ಕ ಕಲ್ಪಿಸುತ್ತದೆ.
ಶನಿವಾರ ಮೀರತ್-ಲಕ್ನೋ, ಮಧುರೈ-ಬೆಂಗಳೂರು ಮತ್ತು ಚೆನ್ನೈ -ನಾಗರಕೋಯಿಲ್ ನಡುವಿನ ಮೂರು ಮಾರ್ಗಗಳಲ್ಲಿ ವಂದೇ ಭಾರತ್ ರೈಲು ಸಂಚಾರ ಆರಂಭವಾಗಲಿದೆ. ಮೀರತ್-ಲಕ್ನೋ ರೈಲಿನಿಂದ ಎರಡು ನಗರಗಳ ನಡುವಿನ ಪ್ರಸ್ತುತ ವೇಗದ ರೈಲಿಗೆ ಹೋಲಿಸಿದರೆ ಪ್ರಯಾಣಿಕರಿಗೆ ಸುಮಾರು 1 ಗಂಟೆಯ ಸಮಯ ಉಳಿತಾಯವಾಗಲಿದೆ. ಚೆನ್ನೈ ಎಗ್ಮೋರ್-ನಾಗರ್‌ಕೋಯಿಲ್ ವಂದೇ ಭಾರತ್ ರೈಲಿನಿಂದ ಸುಮಾರು 2 ಗಂಟೆ ಸಮಯ ಉಳಿತಾಯವಾಗಲಿದೆ.
ಮಧುರೈ-ಬೆಂಗಳೂರು ರೈಲು: ಮಧುರೈ-ಬೆಂಗಳೂರು ನಡುವಿನ ವಂದೇ ಭಾರತ್ ರೈಲು ಸಂಚಾರದಿಂದ ಉಭಯ ನಗರಗಳ ನಡುವಿನ ಪ್ರಯಾಣದ ಅವಧಿ ಸುಮಾರು 1 ಗಂಟೆ 30 ನಿಮಿಷ ಕಡಿಮೆಯಾಗಲಿದೆ ಎಂದು ರೈಲ್ವೆ ಇಲಾಖೆ ಅಂದಾಜಿಸಿದೆ. ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಮಧುರೈ-ಬೆಂಗಳೂರು (ಕಂಟೋನ್ಮೆಂಟ್) ನಡುವೆ ಸಂಪರ್ಕವನ್ನು ಕಲ್ಪಿಸುತ್ತದೆ.
ಈ ಹೊಸ ವಂದೇ ಭಾರತ್ ರೈಲುಗಳು ಉತ್ತರ ಪ್ರದೇಶ, ತಮಿಳುನಾಡು ಮತ್ತು ಕರ್ನಾಟಕ ಈ ಮೂರು ರಾಜ್ಯಗಳ ಜನರಿಗೆ ವಿಶ್ವದರ್ಜೆಯ ವೇಗ ಮತ್ತು ಸೌಕರ್ಯದೊಂದಿಗೆ ಪ್ರಯಾಣಿಸಲು ಅನುಕೂಲ ಮಾಡಿಕೊಡುತ್ತದೆ. ರೈಲು ಸೇವೆ ಸಾಮಾನ್ಯ ಪ್ರಯಾಣಿಕರು, ವೃತ್ತಿಪರರು, ವ್ಯಾಪಾರ ಮತ್ತು ವಿದ್ಯಾರ್ಥಿ ಸಮುದಾಯಕ್ಕೆ ಹೊಸ ಗುಣಮಟ್ಟದ ರೈಲು ಸೇವೆಯನ್ನು ನೀಡುತ್ತದೆ ಎಂದು ಇಲಾಖೆ ಹೇಳಿದೆ.
ಭಾರತೀಯ ರೈಲ್ವೆ ಮಧುರೈ-ಬೆಂಗಳೂರು ನಡುವಿನ ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ದರವನ್ನು ಇನ್ನೂ ಘೋಷಣೆ ಮಾಡಿಲ್ಲ. ಬೆಂಗಳೂರು ಮತ್ತು ಮಧುರೈನಿಂದ ಹೊರಡುವ ಈ ಮಾರ್ಗದ ರೈಲುಗಳು ದಿಂಡಿಗಲ್, ತಿರುಚಿರಾಪಳ್ಳಿ, ನಾಮಕಲ್, ಸೇಲಂ, ಕೃಷ್ಣರಾಜಪುರದಲ್ಲಿ ನಿಲುಗಡೆ ಹೊಂದಿವೆ. ಮಂಗಳವಾರ ಹೊರತುಪಡಿಸಿ ವಾರದ 6 ದಿನಗಳ ಕಾಲ ರೈಲು ಓಡಲಿದೆ.
ಸದ್ಯದ ವೇಳಾಪಟ್ಟಿಯ ಪ್ರಕಾರ ಮಧುರೈ-ಬೆಂಗಳೂರು ಕಂಟೋನ್ಮೆಂಟ್ ನಡುವಿನ ರೈಲು ನಂಬರ್ 20671 ಮಧುರೈನಿಂದ 5.15ಕ್ಕೆ ಹೊರಡಲಿದೆ, ಕಂಟೋನ್ಮೆಂಟ್ ರೈಲು ನಿಲ್ದಾಣಕ್ಕೆ ಮಧ್ಯಾಹ್ನ 1 ಗಂಟೆಗೆ ಆಗಮಿಸಲಿದೆ. ಬೆಂಗಳೂರು ಕಂಟೋನ್ಮೆಂಟ್-ಮಧುರೈ ನಡುವಿನ ರೈಲು ನಂಬರ್ 20672 ರೈಲು ಮಧ್ಯಾಹ್ನ 1.30ಕ್ಕೆ ಕಂಟೋನ್ಮೆಂಟ್ ರೈಲು ನಿಲ್ದಾಣದಿಂದ ಹೊರಡಲಿದ್ದು, ಮಧುರೈಗೆ 9.45ಕ್ಕೆ ತಲುಪಲಿದೆ.
ಕರ್ನಾಟಕದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು 2022ರ ನವೆಂಬರ್‌ನಲ್ಲಿ ಮೈಸೂರು-ಬೆಂಗಳೂರು-ಚೆನ್ನೈ ನಡುವೆ ಆರಂಭವಾಯಿತು. ಇದು ದಕ್ಷಿಣ ಭಾರತದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಾಗಿತ್ತು. ಬಳಿಕ ವಿವಿಧ ಮಾರ್ಗದಲ್ಲಿ ರೈಲುಗಳ ಸಂಚಾರ ಆರಂಭವಾಗಿದೆ.
ಸದ್ಯ, ಕೆಎಸ್ಆರ್ ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ, ಯಶವಂತಪುರ-ಕಾಚಿಗುಡ, ಬೆಂಗಳೂರು-ಕೊಯಮತ್ತೂರು, ಬೆಂಗಳೂರು-ಕಲಬುರಗಿ, ಮಂಗಳೂರು-ಮಡಗಾಂವ್, ಬೆಂಗಳೂರು-ಕಲಬುರಗಿ ನಡುವೆ ವಂದೇ ಭಾರತ್ ರೈಲು ಸಂಚಾರವನ್ನು ನಡೆಸುತ್ತಿವೆ. ಈಗ ಬೆಂಗಳೂರು-ಮಧುರೈ ನಡುವೆ ಮತ್ತೊಂದು ರೈಲು ಸಂಚಾರ ಆರಂಭವಾಗುತ್ತಿದೆ.












Click it and Unblock the Notifications