Pearl Valley: ಬೆಂಗಳೂರಿನ ಸಮೀಪದಲ್ಲೇ ಇದೆ ಸುಂದರ ಪ್ರವಾಸಿತಾಣ; ಪ್ರೇಮಿಗಳಿಗೆ, ನವದಂಪತಿಗೆ ಹೇಳಿ ಮಾಡಿಸಿದ ಸ್ಥಳ!
ಕೆಲವೊಂದು ಸಲ ಪ್ರತಿಯೊಬ್ಬರಿಗೂ ಏಕಾಂತ ಬೇಕು ಅನಿಸುತ್ತದೆ. ಪ್ರಕೃತಿಯ ಮಡಿಲಲ್ಲಿ, ಹಕ್ಕಿಗಳ ಕಲರವ ಕೇಳುತ್ತಾ ಒತ್ತಡಗಳನ್ನು ನಿವಾರಿಸಿಕೊಳ್ಳಲು ಬಯಸುತ್ತಾರೆ. ಅದರಲ್ಲೂ ಪ್ರೇಮಿಗಳು, ನವದಂಪತಿಗಳು ಹಚ್ಚ ಹಸಿರಿನ ಪ್ರಕೃತಿಯ ತಾಣವನ್ನು ಹೆಚ್ಚು ಇಷ್ಟ ಪಡುತ್ತಾರೆ.
ಮುಖ್ಯವಾಗಿ ಬೆಂಗಳೂರು ನಗರದ ಜನತೆ ಕೆಲಸದ ಒತ್ತಡ, ಟ್ರಾಫಿಕ್ ಕಿರಿಕಿರಿ, ಕಿರಿದಾದ ಮನೆಗಳು. ಹೀಗೆ ಅನೇಕ ಸಮಸ್ಯೆಗಳಿಂದಾಗಿ ದಂಪತಿಗಳು, ನವವಿವಾಹಿತರು ಹಾಗೂ ಪ್ರೇಮಿಗಳಿಗೆ ಒಂದಷ್ಟು ಸಮಯ ತಮ್ಮ ಸಂಗಾತಿಯೊಂದಿಗೆ ಏಕಾಂತದಲ್ಲಿ ಕಳೆಯುತ್ತಾ, ಮನಸನ್ನು ಹಗುರ ಮಾಡಿಕೊಳ್ಳುತ್ತಾ, ತಮ್ಮ ಪ್ರೀತಿಯನ್ನು, ಕಾಳಜಿಯನ್ನು, ಅಕ್ಕರೆಯನ್ನು ವ್ಯಕ್ತಪಡಿಸಲು ಏಕಾಂತ ಬೇಕಾಗುತ್ತದೆ.

ಮುತ್ಯಾಲಮಡುವು ಏಕಾಂತದ ಸೊಬಗು
ಬೆಂಗಳೂರಿನ ಜನತೆ, ತಮ್ಮ ಪ್ರದೇಶದ ಕೂಗಳತೆಯ ದೂರದಲ್ಲೇ ಹಲವು ಪ್ರವಾಸಿ ತಾಣಗಳ ಕುರಿತು ಮಾಹಿತಿಯ ಕೊರತೆಯಿಂದಾಗಿ ನೋಡೇ ಇರುವುದಿಲ್ಲ. ಅಂತಹ ಪ್ರವಾಸಿ ತಾಣಗಳ ಪೈಕಿ ಬೆಂಗಳೂರು ನಗರದಿಂದ ಕೇವಲ 40 ಕಿಮೀ ದೂರದಲ್ಲಿರುವ ಆನೇಕಲ್ ತಾಲ್ಲೂಕು ವ್ಯಾಪ್ತಿಗೆ ಸೇರಿದ ಮುತ್ಯಾಲಮಡುವು ಒಂದಾಗಿದೆ.
ಮುತ್ತುಗಳಂತೆ ಕಂಗೊಳಿಸುವ ಜಲಪಾತ
ಮುತ್ಯಾಲಮಡುವಿನ ಪ್ರವಾಸಿ ತಾಣದ ಹೆಸರೇ ಹೇಳಿದಂತೆ ಪ್ರತಿ ನೀರ ಹನಿಯು ಮುತ್ತುಗಳಂತೆ ಗೋಚರಿಸುತ್ತಾ ಪ್ರಪಾತಕ್ಕೆ ಧುಮ್ಮಿಕ್ಕುವ ಜಲಪಾತ. ಮುತ್ಯಾಲಮಡುವಿನ ವಿಶೇಷ ಏನೆಂದರೆ ಪ್ರವಾಸಿಗರು ಜಲಪಾತದ ಸಂಪೂರ್ಣವಾಗಿ ಕೆಳಗಡೆ ಇಳಿಯುವಂತೆ ಮೆಟ್ಟಿಲುಗಳ ವ್ಯವಸ್ಥೆ ಮಾಡಲಾಗಿದೆ. ಒಂದೊಂದು ಮೆಟ್ಟಿಲು ಇಳಿಯುತ್ತಿದ್ದಂತೆ ಜಾಲಪಾತದಲ್ಲಿ ಧುಮ್ಮಿಕ್ಕುವ ನೀರಿನ ಶಬ್ದ ಪ್ರವಾಸಿಗರ ಎದೆ ಬಡಿತವನ್ನು ಹೆಚ್ಚಿಸುತ್ತದೆ.
ನೂರಾರು ಅಡಿಗಳ ಮೇಲಿಂದ ದುಮುಕುವ ಜಲದ ರಾಶಿಯನ್ನು ತಲೆಎತ್ತಿ ನೋಡಿದರೆ, ನೀರಿನ ಹನಿಗಳ ಮೇಲೆ ಸೂರ್ಯ ಕಿರಣಗಳು ಸ್ಪರ್ಶಿಸುವುದರಿಂದ ನೋಡುಗರಿಗೆ ಮುತ್ತುಗಳಂತೆ ಕಂಗೊಳಿಸುತ್ತವೆ. ಅದನ್ನು ಕಣ್ತುಂಬಿಸಿಕೊಳ್ಳುವುದೇ ಒಂದು ಸಂಭ್ರಮ. ಪ್ರಕೃತಿಯ ವಿಸ್ಮಯಕ್ಕೆ ಮನಸೋಲದೆ ಇರದು. ಹಾಗೆಯೇ ಜಲಪಾತದ ಸುತ್ತಮುತ್ತ ಸ್ವಲ್ಪ ದೂರದ ಮಟ್ಟಿಗೆ ವಿಹರಿಸಲು ಅವಕಾಶವಿದೆ. ಅಲ್ಲಿನ ಬಂಡೆಗಳ ಮೇಲೆ, ಮರದಡಿಯಲ್ಲಿ ಏಕಾಂತವಾಗಿ ಕುಳಿತು ಕೊಳ್ಳಬಹುದಾಗಿದೆ. ನೂರಾರು ಅಡಿಗಳ ಜಲಪದ ಅಡಿಯಲ್ಲಿ ತಮ್ಮ ಏಕಾಂತವನ್ನು ಕಳೆಯಲು ಸೂಕ್ತ ಪ್ರದೇಶವಾಗಿದೆ.
ಶಿವನ ದರ್ಶನ ಮಾಡಬಹುದು
ಜಲಪಾತದಲ್ಲಿ ಕಾಲನ್ನು ಇಳಿಬಿಟ್ಟು ಕುಳಿತುಕೊಳ್ಳಲು, ನೀರಿನಲ್ಲಿ ಆಟ ಆಡಲು ವ್ಯವಸ್ಥೆ ಇದೆ. ಹಾಗೆಯೇ ಜಲತಾಪದ ಮುಂಭಾಗವೇ ಶಿವನ ದೇವಸ್ಥಾನವಿದೆ. ಇತಿಹಾಸ ಪ್ರಸಿದ್ಧ ದೇವಸ್ಥಾನ ಆಗಿರುವುದರಿಂದ ಪ್ರತಿದಿನ ಪೂಜೆ ನಡೆಯುತ್ತದೆ. ಜಲಪಾತದಲ್ಲಿ ಸ್ನಾನ ಮಾಡಿ ಶಿವನ ದರ್ಶನ ದೇವರ ಆಶೀರ್ವಾದ ಪಡೆಯಬಹುದು.
ಬೋಟಿಂಗ್ ವ್ಯವಸ್ಥೆ
ಮುತ್ಯಾಲಮಡುವು ಜಲಪಾತದ ವೀಕ್ಷಣೆ ಎಷ್ಟು ಮುಖ್ಯವೋ ಬೋಟಿಂಗ್‌ನಲ್ಲಿ ಕೆರೆಯನ್ನು ಒಂದು ಸುತ್ತು ಬರುವುದು ಮನಸಿಗೆ ಆಹ್ಲಾದಕರನ್ನು ಉಂಟು ಮಾಡುವಂತಹದ್ದಾಗಿದೆ. ಹಾಗೆ ನೋಡಿದರೆ ಪ್ರೇಮಿಗಳು, ನವ ದಂಪತಿಗಳು ಬೋಟಿಂಗ್‌ನಲ್ಲಿ ಕೂತು ಒಬ್ಬರ ಹೆಗಲು ಮತ್ತೊಬ್ಬರಿಗೆ ಸೋಕಿಸುತ್ತಾ ಒಂದು ಸುತ್ತು ಬೋಟಿಂಗ್ ಹೋಗಿ ಬರುವುದು ಇಲ್ಲಿ ಸಾಮಾನ್ಯವಾಗಿದೆ.
ಸುಸಜ್ಜಿತವಾದ ಹೋಟೆಲ್ ವ್ಯವಸ್ಥೆ
ಮುತ್ಯಾಲಮಡುವು ಪ್ರವಾಸಿ ತಾಣವು ಕರ್ನಾಟಕ ಪ್ರವಾಸೋದ್ಯಮ ಇಲಾಖೆಯಡಿ ಬರುವುದರಿಂದ ಕೆಎಸ್‌ಟಿಸಿಡಿಸಿ ರೆಸ್ಟೋರೆಂಟ್ ವ್ಯವಸ್ಥೆ ಇದೆ. ಬೆಂಗಳೂರು ಕೆಂಪೇಗೌಡ ಬಸ್ ನಿಲ್ದಾಣದಿಂದ ಬನ್ನೇರುಘಟ್ಟ ಮಾರ್ಗವಾಗಿ ಆನೇಕಲ್ ಬಸ್ ನಿಲ್ದಾಣಕ್ಕೆ ಬಂದು ಅಲ್ಲಿಂದ ಖಾಸಗಿ ವಾಹನಗಳಿಂದ ಪ್ರವಾಸಿ ತಾಣಕ್ಕೆ ತಲುಪಬಹುದು. ಹಾಗೆಯೇ ಹೊಸೂರು ರಾಷ್ಟ್ರೀಯ ಹೆದ್ದಾರಿ ಮಾರ್ಗದಲ್ಲಿ ಬರುವ ಚಂದಾಪುರ-ಆನೇಕಲ್ ಮಾರ್ಗದ ಮೂಲಕವೂ ಪ್ರವಾಸಿ ತಾಣಕ್ಕೆ ತಲುಪಬಹುದಾಗಿದೆ.












Click it and Unblock the Notifications