Madikeri: ಮಂಜಿನನಗರಿ ಮಡಿಕೇರಿಗೆ ಸ್ವಚ್ಛ ನಗರಿಯ ಕಿರೀಟ
ಮಡಿಕೇರಿ, ಜನವರಿ 10: ಮಂಜಿನ ನಗರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕೊಡಗಿನ ಮುಖ್ಯಪಟ್ಟಣ ಮಡಿಕೇರಿ ಸ್ವಚ್ಛ ನಗರಿ ಎಂಬ ಹಿರಿಮೆಗೆ ಪಾತ್ರವಾಗಿದೆ. ಈಗಾಗಲೇ ಅತ್ಯಂತ ಶುಭ್ರ ಗಾಳಿಯನ್ನು ಹೊಂದಿರುವ ಪ್ರದೇಶ ಎಂಬ ಪ್ರಶಂಸೆಯೊಂದಿಗೆ ಪ್ರವಾಸಿಗರಿಗೂ ಮೆಚ್ಚಿನ ತಾಣವಾಗಿ ಗಮನಸೆಳೆಯುತ್ತಿದೆ. ಕರ್ನಾಟಕದ 50 ನಗರಗಳಲ್ಲಿಯೂ ಸಮೀಕ್ಷೆ ನಡೆಸಲಾಗಿತ್ತು.
ಹಾಗೆನೋಡಿದರೆ ಮಡಿಯಾಗಿದ್ದ ಕೇರಿ ಮಡಿಕೇರಿ ಆಯಿತು ಎಂಬ ಮಾತುಗಳಿವೆ. ಹಿಂದಿನಿಂದಿಲೂ ಮಡಿಕೇರಿ ಮಡಿಯಾಗಿತ್ತು. ಇದೀಗ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದ್ದರೂ ಶುದ್ಧ ಪರಿಸರ ಮತ್ತು ಶುದ್ಧ ಗಾಳಿಯನ್ನು ಉಳಿಸಿಕೊಳ್ಳುತ್ತಿದ್ದು, ಇಲ್ಲಿನ ಪ್ರಶಾಂತ ಪರಿಸರ ದೂರದ ಪ್ರವಾಸಿಗರಿಗೆ ಇಷ್ಟವಾಗುತ್ತಿದೆ. ಸದ್ಯ ಭಾರತದ ಸ್ವಚ್ಛತೆ ಸಂಬಂಧಿತ ಖಾಸಗಿ ಸಂಸ್ಥೆಯೊಂದು ನಡೆಸಿದ ಸಮೀಕ್ಷೆಯಲ್ಲಿ ಮಡಿಕೇರಿ ಸ್ವಚ್ಛ ನಗರಿ ಎಂಬುದನ್ನು ಉಲ್ಲೇಖ ಮಾಡಲಾಗಿದೆ.

ಕೊಡಗಿನ ಗಾಳಿ ದೇಶದಲ್ಲಿಯೇ ಅತ್ಯಂತ ಶುಭ್ರ ಗಾಳಿ ಎಂಬ ಹಿರಿಮೆಯಿತ್ತು. ಇದರ ಜತೆಗೆ ಮಡಿಕೇರಿಗೆ ಅತ್ಯಂತ ಸ್ವಚ್ಚ ನಗರಿಯ ಕೀರ್ತಿಯೂ ಸಂದಿದ್ದು ಇದರ ಕೀರ್ತಿ ನಗರವನ್ನು ಸ್ವಚ್ಛವಾಗಿರಿಸುವಲ್ಲಿ ಶ್ರಮಿಸುತ್ತಿರುವ ಮಡಿಕೇರಿ ನಗರಸಭೆಯ ಸ್ವಚ್ಚತಾ ಸಿಬ್ಬಂದಿಗಳಿಗೆ, ಪೌರ ಕಾಮಿ೯ಕರಿಗೆ, ಅಧಿಕಾರಿ ವರ್ಗಕ್ಕೆ, ಸ್ಥಳೀಯ ನಿವಾಸಿಗಳಿಗೆ ಸಲ್ಲುತ್ತದೆ.
ಶಾಸಕ ಮಂಥರಗೌಡ ಅಭಿನಂದನೆ
ಮಡಿಕೇರಿಗೆ ಸ್ವಚ್ಛನಗರಿ ಹಿರಿಮೆ ಸಂದಿದಕ್ಕೆ ಶಾಸಕ ಮಂಥರ್ ಗೌಡ ಅವರು, ಮಡಿಕೇರಿಯ ಸ್ವಚ್ಛತೆಗೆ ಕಾರಣೀಕರ್ತರಾದ ಜಿಲ್ಲಾಡಳಿತ, ಮಡಿಕೇರಿ ಜನತೆ, ನಗರಸಭೆಯ ಜನಪ್ರತಿನಿಧಿಗಳು, ಅಧಿಕಾರಿ, ಸಿಬ್ಬಂದಿಗಳು, ಪೌರಕಾರ್ಮಿಕರು, ಸ್ವಯಂಸೇವಾ ಸಂಸ್ಥೆಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಪ್ರವಾಸಿಗರ ದಟ್ಟಣೆ ಹೆಚ್ಚಾಗಿದ್ದರೂ ಯಾವುದೇ ಸಮಸ್ಯೆ ಎದುರಾದರೂ ಕಿಂಚಿತ್ತೂ ಬೇಸರಿಸದೆ ನಗರವನ್ನು ಸ್ವಚ್ಛವಾಗಿಡುವಲ್ಲಿ ನಗರಸಭೆಯ ಪೌರಕಾರ್ಮಿಕರು ಶ್ರಮಿಸುತ್ತಿದ್ದು ಅವರಿಗೆ ವೈಯಕ್ತಿಕವಾಗಿ ಧನ್ಯವಾದ ಮತ್ತು ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಮಡಿಕೇರಿ ದಸರಾ, ಹೊಸ ವಷ೯ಗಳಲ್ಲಿ ಅತ್ಯಧಿಕ ಪ್ರವಾಸಿಗರು, ಜನರಿದ್ದಾಗಲೂ ಅತ್ಯಧಿಕ ತ್ಯಾಜ್ಯವನ್ನು ತೆರವುಗೊಳಿಸಿ ಸ್ವಚ್ಚತೆಗೆ ಕಾರಣರಾದ ಪೌರಕಾರ್ಮಿಕರನ್ನು ಎಷ್ಟು ಅಭಿನಂದಿಸಿದರೂ ಕಡಿಮೆಯೇ. ಇದೀಗ ಸ್ವಚ್ಚ ನಗರಿ ಎಂಬ ಹಿರಿಮೆಯನ್ನು ಸದಾ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಎಲ್ಲರೂ ಸಮನ್ವಯದಿಂದ ಕಾರ್ಯಪ್ರವೖತ್ತರಾಗಬೇಕು. ಮನೆಯ ವ್ಯಾಪ್ತಿ, ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಯೊಬ್ಬರೂ ಸ್ವಚ್ಛತೆಗೆ ಆದ್ಯತೆ ನೀಡಬೇಕೆಂದು ಹಾಗೆಯೇ ಜಿಲ್ಲೆಯ ಎಲ್ಲ ಗ್ರಾಮಪಂಚಾಯತ್, ಸ್ಥಳೀಯ ಸಂಸ್ಥೆಗಳೂ ಈ ನಿಟ್ಟಿನಲ್ಲಿ ಕಾರ್ಯಪ್ರವೖತ್ತವಾಗಲಿ ಎಂದು ಸಲಹೆ ನೀಡಿದ್ದಾರೆ.

ಮಡಿಕೇರಿಯ ಐತಿಹಾಸಿಕ ವಿವರ
ಇನ್ನು ಮಡಿಕೇರಿ ಬಗ್ಗೆ ಹೇಳಬೇಕೆಂದರೆ ಹಾಲೇರಿ ವಂಶದ ಮೂರನೇ ರಾಜನಾದ ಮುದ್ದುರಾಜನು 1681ರಲ್ಲಿ ಕಡಿದಾಗಿದ್ದ ಬೆಟ್ಟ ಪ್ರದೇಶವನ್ನು ಕಡಿದು ಸಮತಟ್ಟು ಮಾಡಿ ಊರನ್ನು ನಿರ್ಮಿಸಿದನು. ಅಷ್ಟೇ ಅಲ್ಲದೆ ಅಲ್ಲಿ ಕೋಟೆ ನಿರ್ಮಿಸಿ ಆಳ್ವಿಕೆ ಮಾಡಿದನೆಂದು ಹೇಳಲಾಗಿದೆ. ಅವತ್ತು ಮದ್ದುರಾಜ ನಿರ್ಮಿಸಿದ ಊರು ಮುದ್ದುರಾಜಕೇರಿಯಾಗಿ ಬಳಿಕ ಮಡಿಕೇರಿಯಾಯಿತು. 1834ರಲ್ಲಿ ಬ್ರಿಟೀಷರ ವಶವಾಯಿತು. ಈ ನಡುವೆ ಟಿಪ್ಪು ಸುಲ್ತಾನನ ಕಾಲದಲ್ಲಿ ಈ ಪ್ರದೇಶ ಆತನ ವಶವಾಗಿತ್ತು. ಆತ ಜಾಫರ್ ಬಾದ್ ಎಂದು ಕರೆದಿದ್ದರು. ಬ್ರಿಟೀಷರ ಕಾಲದಲ್ಲಿ ಮರ್ಕರ ಎಂದು ಕೂಡ ಕರೆದಿದ್ದರು.
ನೂರಾರು ವರ್ಷಗಳ ಹಿಂದೆ ಪುಟ್ಟಪಟ್ಟಣವಾಗಿದ್ದ ಮಡಿಕೇರಿ ಮಡಿಯಾಗಿತ್ತು. ಇಡೀ ನಗರ ಸಮತಟ್ಟಿಲ್ಲದೆ ಏರುತಗ್ಗುಗಳಿಂದ ಕೂಡಿದ್ದು, ಗುಡ್ಡದ ಮೇಲಿನಿಂದ ನೋಡಿದಾಗ ಕಂಡು ಬರುವ ದೃಶ್ಯಗಳು ಮನಮೋಹಕವಾಗಿರುತ್ತದೆ. ಬೆಟ್ಟದ ನಡುವಿನಿಂದ ಮೇಲೆದ್ದು ಬರುವ ಸೂರ್ಯೋದಯ ಮತ್ತು ಬೆಟ್ಟಗಳ ನಡುವೆ ಲೀನವಾಗುವ ಸೂರ್ಯಾಸ್ತಮಾನವನ್ನು ನೋಡುವುದೇ ಮಜಾ. ಸಂಜೆಯಾಗುತ್ತಿದ್ದಂತೆಯೇ ನಡುಕ ಹುಟ್ಟಿಸುವ ಚಳಿ ಮುಂಜಾನೆ ಇಡೀ ನಗರವನ್ನೇ ಹೊದ್ದು ಕುಳಿತು ಬಿಡುವ ಮಂಜು ಒಂಥರಾ ಖುಷಿಕೊಡುತ್ತದೆ. ಹೀಗಾಗಿಯೇ ಇತ್ತೀಚೆಗಿನ ವರ್ಷಗಳಲ್ಲಿ ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿರುವುದು ವಿಶೇಷವಾಗಿದೆ.











Click it and Unblock the Notifications