KSRTC: "ಪಲ್ಲಕ್ಕಿ" ಮೇಲೆ ಪ್ರಯಾಣಿಕರಿಗೆ ಲವ್ವೋ.. ಲವ್ವು.. ಇನ್ನೂ 100 ಬಸ್‌ಗಳ ಸೇರ್ಪಡೆ-ಯಾವಾಗ & ಎಲ್ಲೆಲ್ಲಿಗೆ?
ಬೆಂಗಳೂರು, ಜನವರಿ, 01: ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾದ ಹಿನ್ನೆಲೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಇನ್ನೂ 100 ಪಲ್ಲಕ್ಕಿ ಸ್ಲೀಪರ್ ಬಸ್‌ಗಳನ್ನು ರಸ್ತೆಗಿಳಿಸಲು ನಿರ್ಧಾರ ಮಾಡಿದೆ.
"ಸಂತೋಷವು ಪ್ರಯಾಣಿಸುತ್ತಿದೆ" ಎಂಬ ಉಪಶೀರ್ಷಿಕೆಯೊಂದಿಗೆ ಕಾರ್ಯನಿರ್ವಹಿಸುವ ಪಲ್ಲಕ್ಕಿ ಬಸ್‌ಗಳು ಪ್ರಾರಂಭವಾದಾಗಿನಿಂದ ಪೂರ್ಣ ಸಾಮರ್ಥ್ಯದೊಂದಿಗೆ ಸಂಚಾರ ಮಾಡುತ್ತಿವೆ. ಇದು ಬಜೆಟ್ ಸ್ನೇಹಿ ಪ್ರಯಾಣ ಆಗಿದ್ದು, ಇದಕ್ಕೆ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.

ಐರಾವತ, ಅಂಬಾರಿ ರೀತಿಯಲ್ಲೇ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ 'ಪಲ್ಲಕ್ಕಿ' ಉತ್ಸವ ಬಸ್‌ಗಳಿಗೆ ಅಕ್ಟೋಬರ್ 7ರಂದು ಸಿಎಂದ ಸಿದ್ದರಾಮಯ್ಯ ಅವರು ಬೆಂಗಳೂರಿನಲ್ಲಿ ಚಾಲನೆ ನೀಡಿದ್ದರು.
ಬಸ್‌ನಲ್ಲಿರುವ ಸೌಲಭ್ಯಗಳು: ಪಲ್ಲಕ್ಕಿ ನಾನ್ ಎಸಿ ಸ್ಲೀಪರ್ ಬಸ್ ಆಗಿದೆ. ಇದು 30 ಸ್ಲೀಪರ್ ಬರ್ತ್ ಹೊಂದಿದ್ದು, ಅಂಬಾರಿ ಉತ್ಸವದಂತಹ ಪ್ರೀಮಿಯಂ ಬಸ್‌ಗಳಂತೆಯೇ ಸೌಕರ್ಯಗಳನ್ನು ಒದಗಿಸುತ್ತಿದೆ. ಪ್ರತೀ ಸ್ಲೀಪರ್‌ನಲ್ಲಿ ಮೊಬೈಲ್ ಹೋಲ್ಡರ್, ಮೊಬೈಲ್ ಚಾರ್ಜರ್ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಸಹ ಹೊಂದಿದೆ.
ಇನ್ನು ಎಮೆರ್ಜನಿ ಅಲರ್ಟ್ ವ್ಯವಸ್ಥೆ, ಆಡಿಯೋ ಮೂಲಕ ಪ್ರಯಾಣಿಕರಿಗೆ ಮಾಹಿತಿ ನೀಡುವ ಮತ್ತು ಪ್ರಯಾಣಿಕರಿಂದ ಮಾಹಿತಿ ಪಡೆಯುವ ಸೌಲಭ್ಯವಿದೆ. ಸೀಟ್ ನಂಬರ್ ಮೇಲೆ ಎಲ್‌ಇಡಿ ಬೆಳಕು, ಡಿಜಿಟಲ್ ಗಡಿಯಾರ, ಎಲ್‌ಇಡಿ ಫ್ಲೋರ್ ಮುಂತಾದ ಸೌಕರ್ಯಗಳಿವೆ. ಚಾಲಕನಿಗೆ ನೆರವಾಗುವ ಅತ್ಯಾಧುನಿಕ ಬ್ಯಾಕ್ ಕ್ಯಾಮೆರಾವೂ ಕೂಡ ಇದೆ.
ಕೆಎಸ್‌ಆರ್‌ಟಿಸಿ ಎಂಡಿ ಹೇಳಿದ್ದೇನು?: ಕೆಎಸ್‌ಆರ್‌ಟಿಸಿ ಎಂಡಿ ಅನ್ಬು ಕುಮಾರ್ ಮಾತನಾಡಿ, "ನಾವು ಅಕ್ಟೋಬರ್‌ನಲ್ಲಿ ಪಲ್ಲಕ್ಕಿ ಸ್ಲೀಪರ್ ಬಸ್‌ಗಳನ್ನು ಪರಿಚಯಿಸಿದ್ದೇವೆ ಮತ್ತು ಅಂದಿನಿಂದ ಇದು ಕೆಎಸ್‌ಆರ್‌ಟಿಸಿಯ ಅತ್ಯಂತ ಬೇಡಿಕೆಯ ಸೇವೆಗಳಲ್ಲಿ ಒಂದಾಗಿದೆ. ನಾವು ಈ ವರ್ಷ 40 ಬಸ್‌ಗಳನ್ನು ರಸ್ತೆಗಿಳಿಸಿದ್ದು, ಈ ಬಸ್ ಗಳಿಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ಸಿಗುತ್ತಿದೆ. ಅಲ್ಲದೆ 2024ರಲ್ಲಿ ಇನ್ನೂ 100 ಪಲ್ಲಕ್ಕಿ ಬಸ್‌ಗಳನ್ನು ರಸ್ತೆಗಿಳಿಸಲು ನಿರ್ಧರಿಸಿದ್ದೇವೆ," ಎಂದು ತಿಳಿಸಿದ್ದಾರೆ.
"ನಮ್ಮಲ್ಲಿ ಅನೇಕ ಸ್ಲೀಪರ್ ಬಸ್ ಸೇವೆಗಳಿವೆ. ಇತ್ತೀಚೆಗೆ ಅಂಬಾರಿ ಉತ್ಸವ, ಅಂಬಾರಿ ಡ್ರೀಮ್ ಕ್ಲಾಸ್ ಬಸ್ ಗಳನ್ನು ಪರಿಚಯಿಸಲಾಗಿತ್ತು. ಇವು ಪ್ರೀಮಿಯಂ ಮತ್ತು ಹವಾನಿಯಂತ್ರಿತ ಬಸ್‌ಗಳಾಗಿವೆ. ಈ ಸೇವೆಯ ಬೆಲೆಗಳು ಬಜೆಟ್ ಸ್ನೇಹಿಯಾಗಿವೆ. ಮತ್ತೊಂದೆಡೆ ಪಲ್ಲಕ್ಕಿಯು ನಾನ್-ಎಸಿ ಸ್ಲೀಪರ್ ಬಸ್ ಆಗಿದ್ದು, ಅದು ಬಜೆಟ್ ಸ್ನೇಹಿಯಾಗಿದೆ, ಹೀಗಾಗಿ ಇದಕ್ಕೆ ಬೇಡಿಕೆ ಹೆಚ್ಚಾಗುತ್ತಲಿದೆ.
ಎಸಿ ಸ್ಲೀಪರ್ ಬಸ್‌ಗಳಲ್ಲಿ ಪ್ರಯಾಣಿಸುವುದನ್ನು ತಪ್ಪಿಸಲು ಬಯಸುವವರು ಪಲ್ಲಕ್ಕಿಯನ್ನು ಇಷ್ಟಪಡುತ್ತಾರೆ. ಮತ್ತು ಈ ಬಸ್‌ಗಳು ಜನರು ತಮ್ಮನ್ನು ಆಯಾಸವಿಲ್ಲದೆ ದೂರದ ಸ್ಥಳಗಳನ್ನು ತಲುಪಲು ಸಹಾಯ ಮಾಡುತ್ತವೆ ಎಂದು ಕುಮಾರ್ ಹೇಳಿದರು. ಇನ್ನು ನಾವು 100 ಪಲ್ಲಕ್ಕಿ ಬಸ್‌ಗಳನ್ನು ರಸ್ತೆಗಿಳಿಸುತ್ತೇವೆ. ಮತ್ತು ಬೆಂಗಳೂರು ಮತ್ತು ಇತರ ಜಿಲ್ಲೆಗಳಿಂದ ದೂರದ ಸ್ಥಳಗಳನ್ನು ತಲುಪುವ ಜನರಿಗೆ ಇವು ಉತ್ತಮ ಸೇವೆಯನ್ನು ಒದಗಿಸಲಿವೆ ಎಂದು ತಿಳಿಸಿದ್ದಾರೆ.












Click it and Unblock the Notifications