ಇತಿಹಾಸದ ಕಥೆ ಹೇಳುವ ವೀರಾಜಪೇಟೆ ಗಡಿಯಾರಕಂಬ: ಇಲ್ಲಿನ ವಿಶೇಷತೆಗಳೇನು..?
ಮಡಿಕೇರಿ, ಸೆಪ್ಟೆಂಬರ್ 10: ಕೊಡಗಿಗೆ ಪ್ರವಾಸಕ್ಕೆಂದು ಆಗಮಿಸುವವರ ಸಂಖ್ಯೆ ಹೆಚ್ಚಾಗುತ್ತಲೇ ಹೋಗುತ್ತಿದೆ. ಇದೀಗ ಹಲವೆಡೆ ಮಳೆ ಕಡಿಮೆಯಾಗಿದ್ದರೂ ಕೊಡಗಿನಲ್ಲಿ ಮಾತ್ರ ಮಳೆ ಬಿಟ್ಟು ಹೋದಂತೆ ಕಾಣಿಸುತ್ತಿಲ್ಲ. ಸಾಮಾನ್ಯವಾಗಿ ಈ ವೇಳೆಗೆಲ್ಲ ಮಳೆ ಕಡಿಮೆಯಾಗುತ್ತಿತ್ತು. ಆದರೆ ಈ ವರ್ಷ ಮಾತ್ರ ಮುಂಗಾರು ಉತ್ತಮವಾಗಿದೆ. ಹೀಗಾಗಿ ನಾಡು ಸಮೃದ್ಧವಾಗಲಿದೆ ಸಂತಸ ಮನೆ ಮಾಡಿದೆ. ಮುಂದಿನ ದಿನಗಳಲ್ಲಿ ಇತ್ತ ಹೆಚ್ಚಿನ ಪ್ರವಾಸಿಗರು ಬರಲಿದ್ದಾರೆ ಎಂಬುದಂತು ನಿಶ್ಚಿತ.
ಪ್ರವಾಸಕ್ಕೆಂದು ಬರುವ ಪ್ರವಾಸಿಗರಲ್ಲಿ ಎರಡು ವರ್ಗದವರು ಬರುತ್ತಾರೆ. ಕೆಲವರು ಇಲ್ಲಿನ ಪ್ರೇಕ್ಷಣೀಯ ತಾಣಗಳನ್ನು ನೋಡಲು ಬಂದರೆ ಮತ್ತೆ ಕೆಲವರು ಕೆಲಸದ ಒತ್ತಡದಲ್ಲಿ ಕಳೆದು ಹೋಗಿ ಮಾನಸಿಕ ಮತ್ತು ದೈಹಿಕವಾಗಿ ಬಳಲಿದ್ದರಿಂದ ರಿಲ್ಯಾಕ್ಸ್ ಗಾಗಿ ಬರುತ್ತಾರೆ. ಹೀಗೆ ಬರುವವರು ಬೆಟ್ಟಗುಡ್ಡ ಕಾಫಿ ತೋಟಗಳ ನಡುವೆ ಇರುವ ರೆಸಾರ್ಟ್, ಹೋಂಸ್ಟೇಗಳಲ್ಲಿ ಒಂದಷ್ಟು ದಿನ ಕಳೆದು ಹಿಂತಿರುಗುತ್ತಾರೆ. ಪ್ರೇಕ್ಷಣೀಯ ತಾಣ, ದೇವಾಲಯ, ಸ್ಮಾರಕ ಇನ್ನಿತರ ಪ್ರೇಕ್ಷಣೀಯ ತಾಣಗಳನ್ನು ನೋಡುವ ಸಲುವಾಗಿಯೇ ಬರುವರು ಪ್ರತಿಯೊಂದರ ಮೇಲೆಯೂ ಕುತೂಹಲದ ನೋಟ ಬೀರುತ್ತಾರೆ.

ದೂರದಿಂದ ಬರುವ ಪ್ರವಾಸಿಗರಿಗೆ ಕೊಡಗಿನಲ್ಲಿರುವ ಕೆಲವು ವಿಶೇಷತೆಗಳ ಬಗ್ಗೆ ಮಾಹಿತಿಯೇ ದೊರೆಯುವುದಿಲ್ಲ. ಹೀಗಾಗಿ ಆ ಬಗ್ಗೆ ತಿಳಿಯದೆ ಹಿಂತಿರುಗುತ್ತಾರೆ. ಜಿಲ್ಲೆಯಲ್ಲಿ ಹೆಚ್ಚಾಗಿ ಜನರಲ್ ಕಾರ್ಯಪ್ಪ, ಜನರಲ್ ತಿಮ್ಮಯ್ಯ ಸೇರಿದಂತೆ ದೇಶಕ್ಕಾಗಿ ಸೇವೆ ಸಲ್ಲಿಸಿದ ಯೋಧರ ಪ್ರತಿಮೆಗಳಿವೆ. ಇವುಗಳೆಲ್ಲವನ್ನು ಪ್ರವಾಸಿಗರು ತುಂಬಾ ಕುತೂಹಲದಿಂದ ನೋಡುತ್ತಾರೆ. ಇಲ್ಲಿನ ನಗರಗಳು ಸಮತಟ್ಟುವಿಲ್ಲದೆ ಬೆಟ್ಟ ಗುಡ್ಡಗಳ ನಡುವೆಯಿದ್ದು, ರಸ್ತೆಗಳು ಕಿರಿದಾಗಿವೆ. ಹೀಗಾಗಿ ಇರುವ ಸ್ಥಳಗಳಲ್ಲಿ ಕಟ್ಟಡ, ರಸ್ತೆಗಳು, ಮನೆಗಳಿವೆ. ಇದರ ನಡುವೆಯೂ ಕೆಲವು ಸ್ಮಾರಕ ಶತಮಾನಗಳ ಇತಿಹಾಸವನ್ನು ಹೊಂದಿ ಗಮನಸೆಳೆಯುತ್ತಿವೆ.
ವೀರಾಜಪೇಟೆಗೊಂದು ಮುಕುಟ ಮಣಿ
ಇಂತಹ ಸ್ಮಾರಕಗಳ ನಡುವೆ ಜಿಲ್ಲೆಯ ತಾಲೂಕು ಕೇಂದ್ರದಲ್ಲಿ ಒಂದಾದ ವೀರಾಜಪೇಟೆಯಲ್ಲಿರುವ ಗಡಿಯಾರ ಕಂಬವೂ ಒಂದಾಗಿದೆ. ವೀರಾಜಪೇಟೆ ನಗರದೊಳಗೆ ಹಾದು ಹೋಗುವಾಗ ಈ ಗಡಿಯಾರ ಕಂಬ ಗಮನಸೆಳೆಯುತ್ತದೆ. ದೂರದಿಂದ ಬಂದವರು ಇದರತ್ತ ಅಚ್ಚರಿಯ ನೋಟ ಹರಿಸುತ್ತಾರೆ. ಈ ಗಡಿಯಾರ ಕಂಬ ವೀರಾಜಪೇಟೆ ನಗರದ ಹೃದಯಭಾಗದಲ್ಲಿದೆ. ಹೀಗಾಗಿ ಪಟ್ಟಣದಲ್ಲಿ ನಡೆಯುವ ಯಾವುದೇ ಮೆರವಣಿಗೆ, ಉತ್ಸವ, ಪ್ರತಿಭಟನೆಗಳು ಅಷ್ಟೇ ಅಲ್ಲದೆ ಬಸ್ ಸೇರಿದಂತೆ ಎಲ್ಲ ವಾಹನಗಳು ಇದರ ಮೂಲಕವೇ ಹಾದು ಹೋಗಬೇಕಾಗಿದೆ.

ವೀರಾಜಪೇಟೆಯಲ್ಲಿ ನಿರ್ಮಾಣವಾದ ಗಡಿಯಾರ ಕಂಬದ ಇತಿಹಾಸ ನೋಡುವ ಮುನ್ನ ನಾವು ವೀರಾಜಪೇಟೆ ನಗರ ನಿರ್ಮಾಣದ ಬಗ್ಗೆ ಹೇಳಲೇ ಬೇಕಾಗುತ್ತದೆ. ವೀರಾಜಪೇಟೆಯನ್ನು ನಿರ್ಮಿಸಿದ್ದು ಕೊಡಗಿನ ರಾಜ ದೊಡ್ಡವೀರರಾಜೇಂದ್ರ ಹೀಗಾಗಿ ಮೊದಲಿಗೆ ವೀರರಾಜೇಂದ್ರಪೇಟೆ ಎಂದು ಕರೆಯಲಾಗುತ್ತಿದ್ದು. ನಂತರದ ಕಾಲಾವಧಿಯಲ್ಲಿ ವೀರಾಜಪೇಟೆ ಆಗಿದೆ. ಇತಿಹಾಸದ ಪುಟ ಕೆದಕಿದರೆ ಕೊಡಗಿನ ರಾಜ ದೊಡ್ಡ ವೀರರಾಜೇಂದ್ರನನ್ನು ಮೂರನೇ ಆಂಗ್ಲೋ ಮೈಸೂರು ಯುದ್ಧದ ವೇಳೆ ಟಿಪ್ಪು ಸುಲ್ತಾನ ಶ್ರೀರಂಗಪಟ್ಟಣದಲ್ಲಿ ಸೆರೆಹಿಡಿದಿಟ್ಟಿದ್ದನು.
ಗಡಿಯಾರಕಂಬ ನಿರ್ಮಾಣ ಮಾಡಿದ್ದೇಕೆ?
1791-92ರ ಇಸವಿಯಲ್ಲಿ ಅಲ್ಲಿಂದ ದೊಡ್ಡವೀರರಾಜೇಂದ್ರ ಮತ್ತು ಇತರರು ಕೊಡಗಿನ ವೀರಾಜಪೇಟೆಗೆ ಬಂದು ನೆಲೆಯೂರಿದರು. ಅಷ್ಟೇ ಅಲ್ಲದೆ ತಮ್ಮೊಂದಿಗೆ ಬಂದಿದ್ದ ಕ್ರೈಸ್ತರು ಸೇರಿದಂತೆ ಒಂದಷ್ಟು ಜನಕ್ಕೆ ನೆಲೆಯೂರಲು ವೀರರಾಜೇಂದ್ರಪೇಟೆ ಸುತ್ತಮುತ್ತ ಅವಕಾಶ ಮಾಡಿಕೊಟ್ಟನು. ಅವತ್ತು ವೀರಾರಾಜೇಂದ್ರ ನಿರ್ಮಿಸಿದ ಪೇಟೆ ವೀರಾಜಪೇಟೆಯಾಗಿದೆ. ಬೆಟ್ಟಗುಡ್ಡಗಳಿಂದ ಆವೃತವಾಗಿರುವ ಪಟ್ಟಣದಲ್ಲಿ ಸಂತ ಅನ್ನಮ್ಮ ಇಗರ್ಜಿಯಿದ್ದು, ಇದರ ನಿರ್ಮಾಣಕ್ಕೂ ವೀರರಾಜೇಂದ್ರನೇ ಸಹಕಾರ ನೀಡಿದ್ದನು ಎನ್ನುವುದು ಕೂಡ ಇತಿಹಾಸವೇ.

ಇನ್ನು ಗಡಿಯಾರ ಕಂಬದ ಬಗ್ಗೆ ಹೇಳಬೇಕೆಂದರೆ ಇದನ್ನು ನಿರ್ಮಾಣ ಮಾಡಲು ಕಾರಣವಿದೆ. 1911ರಲ್ಲಿ ಬ್ರಿಟಿಷ್ ರಾಜ 5ನೇ ಜಾರ್ಜ್‌ನ ದೆಹಲಿಯಲ್ಲಿ ನಡೆದ ಕೊರೋನೇಷನ್ ದರ್ಬಾರ್ ನೆನಪಿಸುವುದಕ್ಕೋಸ್ಕರ ಈ ಕಂಬ ನಿರ್ಮಿಸಲಾಗಿದೆಯಂತೆ. ಹೀಗಾಗಿ ಬ್ರಿಟಿಷ್ ಆಡಳಿತ ಕಾಲದಲ್ಲಿ ಕೊಡಗಿನ ಚೀಫ್ ಕಮಿಷನರ್ ಆಗಿದ್ದ ಸರ್.ಹಗ್ಡಾಲಿ ಎಂಬವರು 1914ರ ಫೆ.5ರಂದು ಗಡಿಯಾರ ಕಂಬಕ್ಕೆ ಶಿಲಾ ನ್ಯಾಸ ಮಾಡಿದ್ದರಂತೆ.
ವಿರಾಜಪೇಟೆಗೆ ಸಮೀಪದ ದೇವಣಗೇರಿ ಗ್ರಾಮದ ಸುಬೇದಾರ್ ಮುಕ್ಕಾಟಿರ ಮುದ್ದಣ್ಣನವರ ಪುತ್ರನಾದ ಮುಕ್ಕಾಟಿರ ಅಯ್ಯಪ್ಪನವರು ಈ ಗಡಿಯಾರ ಕಂಬ ಕಟ್ಟಿಸಿದರು ಎಂದು ಹೇಳಲಾಗಿದೆ ಅಷ್ಟೇ ಅಲ್ಲದೆ .1915ರ ಜನವರಿಯಲ್ಲಿ ಅಂದಿನ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿದ್ದ ಆರ್.ಕೆ.ಎಲ್ಲಿಸ್ ಎಂಬುವರು ಗಡಿಯಾರ ಕಂಬದ ಉದ್ಘಾಟನೆಯನ್ನು ನೆರವೇರಿಸಿದರಂತೆ.
ಗಡಿಯಾರಕಂಬ ತೆರವು ವಿರೋಧಿಸಿದ್ದ ಜನ
ಅವತ್ತಿನ ಕಾಲದಲ್ಲಿ ಗಡಿಯಾರ ಎನ್ನುವುದೇ ವಿಸ್ಮಯವಾಗಿತ್ತು. ಕೆಲವರ ಮನೆಗಳಲ್ಲಿ ಗಡಿಯಾರವೇ ಇರಲಿಲ್ಲ. ಇಂತಹ ಸಂದರ್ಭ ಟಿಕ್ ಟಿಕ್ ಶಬ್ದ ಮಾಡುತ್ತಾ ಗಂಟೆಗೊಮ್ಮೆ ಸದ್ದು ಮಾಡುತ್ತಾ ಎಲ್ಲರನ್ನು ಎಚ್ಚರಿಸುತ್ತಿತ್ತು. ಅವತ್ತು ಜನ ಸಂಖ್ಯೆ ವಿರಳವಾಗಿತ್ತು. ಹೀಗಾಗಿ ತೊಂದರೆಯಾಗಿರಲಿಲ್ಲ. ನಂತರದ ಕಾಲಘಟ್ಟದಲ್ಲಿ ತಾವು ನಿರ್ಮಿಸಿದ ಗಡಿಯಾರ ಕಂಬವನ್ನು ಮುಕ್ಕಾಟಿರ ಅಯ್ಯಪ್ಪನವರು ಪುರಸಭೆಗೆ ಹಸ್ತಾಂತರಿಸಿದ್ದರು.
1977ರಲ್ಲಿ ವಿರಾಜಪೇಟೆ ಮುಖ್ಯ ಬೀದಿಗಳ ವಿಸ್ತರಣೆ ಮಾಡಬೇಕಾದ ಸನ್ನಿವೇಶ ನಿರ್ಮಾಣವಾದಾಗ ಅಂದಿನ ಲೋಕೋಪಯೋಗಿ ಸಚಿವರಾಗಿದ್ದ ಚೆನ್ನಬಸಪ್ಪನವರು ಈ ಕಂಬವನ್ನು ತೆರವುಗೊಳಿಸುವ ಪ್ರಸ್ತಾಪವನ್ನು ವಿಧಾನಸಭೆಯಲ್ಲಿ ಮಾಡಿದ್ದರು. ಆದರೆ ಇದಕ್ಕೆ ತೀವ್ರ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಇವತ್ತಿಗೂ ಉಳಿಯುವಂತಾಗಿದೆ.
ಸದ್ಯ ಗಡಿಯಾರ ಕಂಬ 110 ವರ್ಷಗಳನ್ನು ಪೂರೈಸುತ್ತಾ ಗಾಳಿ, ಮಳೆ, ಬಿಸಿಲಿಗೆ ಮೈಯೊಡ್ಡಿ ನಿಂತಿದೆ. ಹಲವು ಬಾರಿ ಗಡಿಯಾರ ದುರಸ್ತಿ ಕಂಡಿದೆ. ಜತೆಗೆ ಗಡಿಯಾರ ಕಂಬವನ್ನು ನವೀಕರಣಗೊಳಿಸಲಾಗಿದೆ. ಎರಡು ಅಂತಸ್ತಿನ ಗೋಪುರದಲ್ಲಿ ಗಡಿಯಾರವನ್ನು ಅಳವಡಿಸಲಾಗಿದೆ. ಇದು ಬೇರೆಡೆಗಳಲ್ಲಿರುವ ಗಡಿಯಾರ ಕಂಬಗಳಿಗೆ ಹೋಲಿಸಿದರೆ ಸ್ವಲ್ಪ ಮಟ್ಟಿಗೆ ಭಿನ್ನವಾಗಿ ಗೋಚರಿಸುತ್ತದೆ. ಸಾಮಾನ್ಯವಾಗಿ ಎಲ್ಲ ನಗರಗಳಲ್ಲಿಯೂ ಗಡಿಯಾರ ಕಂಬಗಳಿವೆ ಅದರಂತೆ ವೀರಾಜಪೇಟೆಯಲ್ಲಿಯೂ ಗಡಿಯಾರ ಕಂಬವಿದ್ದು ಇದು ಇತಿಹಾಸದ ಸಾಕ್ಷಿಯಾಗಿದೆ.












Click it and Unblock the Notifications