ಮೈಸೂರು-ಲಿಂಗಸುಗೂರು ಸ್ಲೀಪರ್ ಬಸ್; ದರ, ವೇಳಾಪಟ್ಟಿ
ಮೈಸೂರು, ಸೆಪ್ಟೆಂಬರ್ 27; ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (KKRTC) ಸಾಂಸ್ಕೃತಿಕ ನಗರಿ ಮೈಸೂರಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಸಿಹಿಸುದ್ದಿ ನೀಡಿದೆ. ಲಿಂಗಸುಗೂರು-ಮೈಸೂರು ನಡುವೆ ಸ್ಲೀಪರ್ ಬಸ್ ಸೇವೆಯನ್ನು ಆರಂಭಿಸಿದೆ.
ಈ ಕುರಿತು ಕೆಕೆಆರ್‌ಟಿಸಿಯ ರಾಯಚೂರು ವಿಭಾಗದ ಲಿಂಗಸುಗೂರು ವಿಭಾಗ ಟ್ವೀಟ್ ಮೂಲಕ ಮಾಹಿತಿ ನೀಡಿದೆ. ನೂತನವಾಗಿ ಈ ಮಾರ್ಗದಲ್ಲಿ ಎಸಿ ಹವಾನಿಯಂತ್ರಣ ರಹಿತ ಸ್ಲೀಪರ್ ಕೋಚ್ ಬಸ್ ಸೇವೆಯನ್ನು ಪ್ರಾರಂಭಿಸಲಾಗಿದೆ.

ರಾಯಚೂರಿನ ಲಿಂಗಸುಗೂರು ಇಂದ ಹೊರಡುವ ಬಸ್ ಮುದುಗಲ್, ತಾವರಗೇರಾ, ಗಂಗಾವತಿ, ಹೊಸಪೇಟೆ, ಚಿತ್ರದುರ್ಗ, ಪಾಂಡವಪುರ, ಶ್ರೀರಂಗಪಟ್ಟಣದ ಮೂಲಕ ಮೈಸೂರು ನಗರವನ್ನು ತಲುಪಲಿದೆ.
— KKRTC- ಕಕರಸಾನಿ (@KKRTC_Journeys) September 27, 2023
ವೇಳಾಪಟ್ಟಿ, ದರ; ಲಿಂಗಸುಗೂರು-ಮೈಸೂರು ನಡುವಿನ ನಾನ್ ಎಸಿ ಸ್ಲೀಪರ್ ಬಸ್ ಸೇವೆಗೆ 1080 ರೂ. ದರವನ್ನು ನಿಗದಿ ಮಾಡಲಾಗಿದೆ. ಈ ಬಸ್ ಲಿಂಗಸುಗೂರು ಇಂದ 7.30 & 6.15 ಆಗಮನ/ ನಿರ್ಗಮನ, ಮೈಸೂರಿನಿಂದ 8.30/ 6.55ಕ್ಕೆ ಆಗಮನ/ ನಿರ್ಗಮನವಾಗಲಿದೆ ಎಂದು ಮಾಹಿತಿ ನೀಡಲಾಗಿದೆ.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಹಲವಾರು ಐಷಾರಾಮಿ ಬಸ್ ಸೇವೆಗಳನ್ನು ಪ್ರಾರಂಭಿಸಿ ಪ್ರಯಾಣಿಕರನ್ನು ಸೆಳೆಯಲು ಮುಂದಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೆಕೆಆರ್‌ಟಿಸಿಯ 'ಅಮೋಘವರ್ಷ' ಹೆಸರಿನ ಐಷಾರಾಮಿ ಹವಾನಿಯಂತ್ರಣ ಸಹಿತ ಮತ್ತು ಹವಾನಿಯಂತ್ರಣ ರಹಿತ ಬಸ್‌ಗಳಿಗೆ ಕಲಬುರಗಿಯಲ್ಲಿ ಕೆಲವು ದಿನಗಳ ಹಿಂದೆ ಚಾಲನೆ ನೀಡಿದ್ದರು.
ಕನ್ನಡದ ಮೊಟ್ಟ ಮೊದಲ ಉಪಲಬ್ಧ ಗ್ರಂಥ 'ಕವಿರಾಜ ಮಾರ್ಗ' ಕೃತಿ ರಚಿಸಿದ ಕವಿ ಅಮೋಘವರ್ಷ ಹೆಸರಿನ ಬಸ್‌ಗಳನ್ನು ಕೆಕೆಆರ್‌ಟಿಸಿ ಪರಿಚಯಿಸಿತ್ತು. 'ಅಮೋಘವರ್ಷ' ಬ್ರಾಂಡ್‌ನಲ್ಲಿ 36 (ನಾನ್ ಎಸಿ) ಸ್ಲೀಪರ್ ಹಾಗೂ 4 (ಎಸಿ) ಸ್ಲೀಪರ್ ಬಸ್‍ಗಳನ್ನು ಖರೀದಿ ಮಾಡಲಾಗಿದೆ.
30 ಆಸನಗಳ ಸಾಮರ್ಥ್ಯದ ಈ ಬಸ್‌ಗಳು ಹಲವು ಐಷಾರಾಮಿ ಸೌಲಭ್ಯಗಳನ್ನು ಹೊಂದಿದ್ದು, ಪ್ರಯಾಣಿಕ ಸ್ನೇಹಿಯಾಗಿವೆ. ಸ್ವಯಂ ಚಾಲಿತ ಅಗ್ನಿ ನಂದಕ ಉಪಕರಣ, ಪ್ರತಿ ಸೀಟಿಗೆ ಕಿರು ಲಗೇಜ್, ಮೊಬೈಲ್/ ಲ್ಯಾಪ್ ಟಾಪ್ ಚಾರ್ಜಿಂಗ್ ಪಾಯಿಂಟ್, ರೀಡಿಂಗ್ ಲ್ಯಾಂಪ್ ವ್ಯವಸ್ಥೆ ಇದೆ. ಏರ್ ಸಸ್ಪೆಕ್ಷನ್ ಸಿಸ್ಟಮ್, ಪಬ್ಲಿಕ್ ಇನ್‍ಫಾರ್ಮೇಷನ್ ಸಿಸ್ಟಂ, ರಿವರ್ಸ್ ಪಾರ್ಕಿಂಗ್ ಅಲಾರ್ಮ್ ಸೌಲಭ್ಯಗಳನ್ನು ಬಸ್ ಒಳಗೊಂಡಿದೆ.
ಆಗಸ್ಟ್ 28ರಂದು ಕೆಕೆಆರ್‌ಟಿಸಿಯ ರಾಯಚೂರು ಜಿಲ್ಲೆಯ ಸಿಂಧನೂರು-ಬೆಂಗಳೂರು ನಡುವೆ 'ಕಲ್ಯಾಣ ರಥ' ಹೆಸರಿನ ಐಷರಾಮಿ ವೋಲ್ವೋ ಮಲ್ಟಿ ಆಕ್ಸೆಲ್ ಸ್ಲೀಪರ್ ಬಸ್ ಸೇವೆಯನ್ನು ಆರಂಭಿಸಿತ್ತು. ಸಂಸ್ಥೆಗೆ 'ಕಲ್ಯಾಣ ರಥ' ಬ್ರ್ಯಾಂಡ್‌ನ ವೋಲ್ವೋ ಮಲ್ಟಿ ಆಕ್ಸೆಲ್ ಸ್ಲೀಪರ್ ಬಸ್ ಹೊಸದಾಗಿ ಸೇರ್ಪಡೆ ಮಾಡಲಾಗಿದೆ.
ಈ ಬಸ್ ಸ್ಲೀಪರ್ ಕ್ಲಾಸ್ ಬಸ್ 40 ಆಸನಗಳನ್ನು ಒಳಗೊಂಡಿದೆ. ಬಿ.ಎಸ್-6 ಇಂಜಿನ್ ಹೊಂದಿದೆ. ಬಸ್ಸಿಗೆ ವಿಶಿಷ್ಟ ಸಸ್ಪೆಕ್ಷನ್‌ಗಳನ್ನು ಅಳವಡಿಸಲಾಗಿದೆ. ಸಂಪೂರ್ಣ ಹವಾನಿಯಂತ್ರಿತ ವ್ಯವಸ್ಥೆ ಇದ್ದು, ಸ್ವಯಂ ಚಾಲಿತ ಬಾಗಿಲು ತೆರೆಯುವ ವ್ಯವಸ್ಥೆ, ಬೆಂಕಿ ನಂದಿಸುವ ಉಪಕರಣಗಳ ವ್ಯವಸ್ಥೆ, ವಾಹನದ ಟ್ರ್ಯಾಕಿಂಗ್ ಗುರುತು ವ್ಯವಸ್ಥೆ, ಮೊಬೈಲ್ ಚಾರ್ಜಿಂಗ್ ಪಾಯಿಂಟ್ ಮುಂತಾದ ಸೌಲಭ್ಯಗಳಿವೆ.
ಸಿಂಧನೂರು-ಬೆಂಗಳೂರು ನಡುವಿನ ಈ ಬಸ್ ಸಂಚಾರ ನಡೆಸುತ್ತಿದೆ. ಪ್ರತಿ ದಿನ ಸಿಂಧನೂರಿನಿಂದ ರಾತ್ರಿ 10 ಗಂಟೆಗೆ ಹೊರಟು ಕಾರಟಗಿ-ಗಂಗಾವತಿ-ಬೂದುಗುಂಪ ಕ್ರಾಸ್-ಹೊಸಪೇಟೆ- ಕೂಡ್ಲಿಗಿ-ಹಿರಿಯೂರು-ತುಮಕೂರು ಮಾರ್ಗವಾಗಿ ಮರುದಿನ ಬೆಳಗ್ಗೆ 5.30ಕ್ಕೆ ಬಸ್ ಬೆಂಗಳೂರು ತಲುಪಲಿದೆ. ಬೆಂಗಳೂರಿನಿಂದ ರಾತ್ರಿ 10.15 ಗಂಟೆಗೆ ಹೊರಡುವ ಬಸ್ ಬೆಳಗ್ಗೆ 5.45ಕ್ಕೆ ಸಿಂಧನೂರು ತಲುಪಲಿದೆ.











Click it and Unblock the Notifications