IRCTC Down: ರೈಲು ಟಿಕೆಟ್ ಬುಕ್ಕಿಂಗ್ ಸಮಸ್ಯೆ, ತತ್ಕಾಲ್ ಟಿಕೆಟ್ ಸಿಗುವುದು ಅನುಮಾನ!
ದೇಶದಲ್ಲಿ ಹೆಚ್ಚು ಜನ ಪ್ರಯಾಣ ಮಾಡುವ ಸಂದರ್ಭದಲ್ಲೇ ಐಆರ್‌ಸಿಟಿಸಿ (Indian Railway Catering and Tourism Corporation) ವೆಬ್‌ಸೈಟ್ ಹಾಗೂ ಆ್ಯಪ್ ಕೈಕೊಟ್ಟಿದೆ. ಜನ ರೈಲು ಟಿಕೆಟ್‌ಗಳನ್ನು ಬುಕ್ ಮಾಡಲು ಸಾಧ್ಯವಾಗದೆ ಪರದಾಡುವಂತಾಗಿದೆ. ಕ್ರಿಸ್ಮಸ್ ಹಾಗೂ ಹೊಸ ವರ್ಷದ ಹಿನ್ನೆಲೆಯಲ್ಲಿ ರಜಾ ದಿನಗಳ ಸಂಖ್ಯೆ ಹೆಚ್ಚಾಗಿದೆ. ಈ ಸಮಯದಲ್ಲಿ ಹೆಚ್ಚು ಜನ ರೈಲು ಬುಕ್ ಮಾಡುತ್ತಿದ್ದಾರೆ. ಅಲ್ಲದೆ ಇದೀಗ ತತ್ಕಾಲ್ ಸಮಯವಾಗಿದ್ದು, ಇದೇ ಸಮಯದಲ್ಲಿ ಐಆರ್‌ಸಿಟಿಸಿ ಡೌನ್ ಆಗಿದೆ. ಇದರಿಂದ ರೈಲು ಬುಕ್ ಮಾಡಿಕೊಳ್ಳುತ್ತಿದ್ದ ಲಕ್ಷಾಂತರ ಜನ ಪರದಾಡುವಂತೆ ಆಗಿದೆ. ದೇಶದಾದ್ಯಂತ ಈ ಸಮಸ್ಯೆ ಆಗಿದೆ. ಇನ್ನು ರೈಲ್ವೆ ಇಲಾಖೆಯ ಇ- ಟಿಕೆಟಿಂಗ್ ಸೇವೆ ಕೊಡುವ ವೆಬ್‌ಸೈಟ್ ಮತ್ತು ಅಪ್ಲಿಕೇಶನ್‌ಗಳಲ್ಲೂ ಸಮಸ್ಯೆ ಆಗಿದೆ.
ಭಾರತೀಯ ರೈಲ್ವೆ ಇಲಾಖೆಯ ಇ-ಟಿಕೆಟ್ ಬುಕ್ಕಿಂಗ್‌ನ ಆನ್‌ಲೈನ್ ವೆಬ್‌ಸೈಟ್ ಮತ್ತು ಮೊಬೈಲ್ ಅಪ್ಲಿಕೇಶನ್‌ನಲ್ಲಿ ಸಮಸ್ಯೆ ಆಗಿದೆ. ಆದರೆ, ಈ ಬಗ್ಗೆ ಐಆರ್‌ಸಿಟಿಸಿ ಇಲ್ಲಿಯ ವರೆಗೆ ಅಧಿಕೃತವಾಗಿ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ. ಈ ಸಂಬಂಧ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ಹೆಚ್ಚಾಗುತ್ತಿದೆ. ಐಆರ್‌ಸಿಟಿ ವೆಬ್‌ಸೈಟ್ ಒಪನ್ ಮಾಡಿದ ಕೂಡಲೇ ನಿರ್ವಹಣೆ ಕೆಲಸ ನಡೆಯುತ್ತಿರುವುದರಿಂದ ಮುಂದುವರಿಸಲು ಸಾಧ್ಯವಾಗುತ್ತಿಲ್ಲ ಎನ್ನುವ ಸಂದೇಶ ಬರುತ್ತಿದೆ. ಈ ಅವಧಿಯಲ್ಲಿ ಹೆಚ್ಚು ಜನ ಪ್ರಯಾಣ ಮಾಡುತ್ತಿದ್ದಾರೆ. ಹೆಚ್ಚು ರೈಲು ಟಿಕೆಟ್‌ಬುಕ್ ಮಾಡುತ್ತಿರುವುದರಿಂದ ಈ ರೀತಿ ಸಮಸ್ಯೆ ಆಗುತ್ತಿದೆಯೇ ಅಥವಾ ವೆಬ್‌ಸೈಟ್‌ನಲ್ಲೇ ಸಮಸ್ಯೆ ಆಗಿದೆಯೇ ಎನ್ನುವ ಗೊಂದಲವೂ ಇದೆ.

ತತ್ಕಾಲ್ ಸಮಯ: ಇನ್ನು ಇದು ರೈಲ್ವೆ ಟಿಕೆಟ್ ಬುಕ್ಕಿಂಗ್‌ನಲ್ಲಿ ಅತ್ಯಂತ ಮಹತ್ವದ ಅಥವಾ ಪೀಕ್ ಅವರ್ ಆಗಿದೆ. ಈ ಸಮಯದಲ್ಲಿ ತತ್ಕಾಲ್ ಟಿಕೆಟ್‌ಗಳನ್ನು ಬಿಡಲಾಗುತ್ತದೆ. ಇದೇ ಸಂದರ್ಭದಲ್ಲಿ ಸೈಟ್ ಡೌನ್ ಆಗಿದೆ.ಈ ರೀತಿ ತತ್ಕಾಲ್ ಟಿಕೆಟ್ ಬುಕ್ ಮಾಡುವ ಸಮಯದಲ್ಲೇ ಐಆರ್‌ಸಿಟಿ ಡೌನ್ ಆಗುತ್ತಿರುವ ಬಗ್ಗೆ ಹಲವು ರೈಲು ಪ್ರಯಾಣಿಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಉದ್ದೇಶ ಪೂರ್ವಕವಾಗಿ ಈ ರೀತಿ ಮಾಡುತ್ತಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.
ಪ್ರತಿ ಬಾರಿಯೂ ಐಆರ್‌ಸಿಟಿಸಿ ವೆಬ್‌ಸೈಟ್ ಬೆಳಗ್ಗೆ 10 ಗಂಟೆ ಸಮಯಕ್ಕೆ ಸರಿಯಾಗಿ ಕ್ರ್ಯಾಶ್ ಆಗುತ್ತದೆ. ಎಲ್ಲಾ ತತ್ಕಾಲ್ ಟಿಕೆಟ್‌ಗಳು ಬುಕ್ ಆಗುವ ಸಮಯದಲ್ಲಿ ಈ ರೀತಿ ಸಮಸ್ಯೆ ಆಗುತ್ತಿದೆ. ತತ್ಕಾಲ್ ಸಮಯ ಮುಗಿದ ಮೇಲೆ ಇದು ಸರಿ ಹೋಗುತ್ತಿದೆ ಇದರ ಹಿಂದಿನ ಉದ್ದೇಶವೇನು ಎಂದು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ. ಇದಾದ ಮೇಲೆ ಪ್ರೀಮಿಯಂ ಟಿಕೆಟ್‌ಗಳು ಮಾತ್ರ ಕಾಣಿಸುತ್ತಿವೆ ಇದು ಐಆರ್‌ಸಿಟಿಸಿಯಿಂದ ಉದ್ದೇಶಪೂರ್ವಕವಾಗಿ ಆಗುತ್ತಿರುವ ತಪ್ಪು ಎಂದು ಆರೋಪಿಸಲಾಗಿದೆ.
ಒಂದೇ ತಿಂಗಳಲ್ಲಿ ಎರಡನೇ ಬಾರಿ ಸಮಸ್ಯೆ
ಇನ್ನು ಐಆರ್‌ಸಿಟಿಸಿ ವೆಬ್‌ಸೈಟ್‌ನಲ್ಲಿ ಒಂದೇ ತಿಂಗಳಲ್ಲಿ ಎರಡನೇ ಬಾರಿ ಈ ಸಮಸ್ಯೆ ಕಾಣಿಸಿಕೊಂಡಿದೆ. ಇದೇ ತಿಂಗಳು 9ರಂದು ಸಹ ಐಆರ್‌ಸಿಟಿ ಟಿಕೆಟ್ ಬುಕ್ಕಿಂಗ್‌ನಲ್ಲಿ ಸಮಸ್ಯೆ ಆಗಿ ರೈಲು ಪ್ರಯಾಣಿಕರು ಪರದಾಡಿದ್ದರು. ಇದೀಗ ಮತ್ತೆ ಅಂತಹದ್ದೇ ಸಮಸ್ಯೆ ಎದುರಾಗಿದೆ. ರೈಲ್ವೆ ಇಲಾಖೆ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಕೂಡಲೇ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಹಲವರು ಆಗ್ರಹಿಸಿದ್ದಾರೆ.












Click it and Unblock the Notifications