ಬೆಳಗಾವಿ-ಬೆಂಗಳೂರು ವಿಮಾನ ಪ್ರಯಾಣಿಕರೇ ಗಮನಿಸಿ
ಬೆಳಗಾವಿ, ಅಕ್ಟೋಬರ್ 12: ಬೆಳಗಾವಿಯ ಸಾಂಬ್ರಾ ಮತ್ತು ಬೆಂಗಳೂರು ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಡುವೆ ಸಂಚಾರ ನಡೆಸುವ ಪ್ರಯಾಣಿಕರಿಗೆ ಮಾಹಿತಿಯೊಂದಿಗೆ. ಗಡಿನಾಡು ಬೆಳಗಾವಿ ಮತ್ತು ರಾಜಧಾನಿ ಬೆಂಗಳೂರು ನಡುವಿನ ವಿಮಾನ ಸೇವೆಯೊಂದನ್ನು ರದ್ದುಗೊಳಿಸಲಾಗುತ್ತಿದೆ. ಅಕ್ಟೋಬರ್ 27ರಿಂದ ಜಾರಿಗೆ ಬರುವಂತೆ ಇಂಡಿಗೋ ವಿಮಾನಯಾನ ಸಂಸ್ಥೆ ವಿಮಾನ ಸೇವೆಯನ್ನು ರದ್ದುಗೊಳಿಸುತ್ತಿದೆ.
ಬೆಳಗಾವಿ- ಬೆಂಗಳೂರು ನಗರದ ನಡುವಿನ ಬೆಳಗ್ಗೆಯ ನೇರ ವಿಮಾನ ಸೇವೆಯನ್ನು ಇಂಡಿಗೋ ವಿಮಾನಯಾನ ಸಂಸ್ಥೆ ಅಕ್ಟೋಬರ್ 27ರಿಂದ ನಿಲ್ಲಿಸಲಿದೆ. ಆದ್ದರಿಂದ ಈ ಮಾರ್ಗದಲ್ಲಿ ಬೆಳಗ್ಗೆ ಸಂಚಾರ ನಡೆಸುವ ಪ್ರಯಾಣಿಕರು ಬೇರೆ ಸಾರಿಗೆ ವ್ಯವಸ್ಥೆಯನ್ನು ನೋಡಿಕೊಳ್ಳಬೇಕಾಗಿದೆ.

ಎರಡು ವರ್ಷಗಳಿಂದ ಬೆಳಗಾವಿ-ಬೆಂಗಳೂರು ನಗರದ ನಡುವೆ ಬೆಳಗ್ಗೆ ನೇರ ವಿಮಾನ ಸೇವೆ ಇತ್ತು. ಪ್ರಯಾಣಿಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಕಳೆದ ವರ್ಷ ವಿಮಾದಲ್ಲಿ ಶೇ 85ರಷ್ಟು ಸೀಟುಗಳು ಭರ್ತಿಯಾಗಿದ್ದವು. ಆದರೆ ಈಗ ವಿಮಾನ ಸೇವೆ ರದ್ದಾಗುತ್ತಿದ್ದು, ಇಂಡಿಗೋ ಮುಂಗಡ ಟಿಕೆಟ್ ಬುಕ್ಕಿಂಗ್ ಸಹ ನಿಲ್ಲಿಸಿದೆ.
ವಿಮಾನ ರದ್ದು ಏಕೆ?; ಇಂಡಿಗೋ ತನ್ನ ಚಳಿಗಾಲದ ವಿಮಾನ ಹಾರಾಟದ ವೇಳಾಪಟ್ಟಿಯ ಅನ್ವಯ ಹಲವು ನಗರದ ವಿಮಾನ ಸೇವೆಯಲ್ಲಿ ಬದಲಾವಣೆ ಮಾಡಿದೆ. ಈ ಹಿನ್ನಲೆಯಲ್ಲಿ ಬೆಳಗಾವಿ-ಬೆಂಗಳೂರು ನಡುವಿನ ಬೆಳಗ್ಗೆಯ ನೇರ ವಿಮಾನ ಸೇವೆ ರದ್ದಾಗಿದೆ.
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಿಂದ ಈಗಾಗಲೇ ಸ್ಟಾರ್ ಏರ್ ಜೋಧ್‌ಪುರ್, ಸೂರತ್, ಇಂಧೋರ್, ನಾಸಿಕ್ ನಡುವಿನ ವಿಮಾನ ಸೇವೆಯನ್ನು ರದ್ದುಗೊಳಿಸಿದೆ. ಚಳಿಗಾಲದ ವೇಳಾಪಟ್ಟಿಯಂತೆ ಬೆಳಗಾವಿ-ಅಹಮದಾಬಾದ್ ವಿಮಾನ ಸಹ ರದ್ದಾಗುವ ನಿರೀಕ್ಷೆ ಇದೆ. ಆದ್ದರಿಂದ ಬೆಳಗಾವಿಗೆ ಹಲವು ಪ್ರಯಾಣಿಕ ವಿಮಾನಗಳು ಕಡಿಮೆಯಾಗಿವೆ.
ಬೆಳಗಾವಿಯ ಜನರು ನಗರದಿಂದ ಚೆನ್ನೈ, ವಾರಣಾಸಿ, ಪುಣೆ, ಕೋಲ್ಕತ್ತಾಗೆ ಹೊಸ ವಿಮಾನ ಮತ್ತು ಮುಂಬೈ ಹಾಗೂ ಹೈದರಾಬಾದ್‌ಗೆ ಹೆಚ್ಚುವರಿ ವಿಮಾನಕ್ಕೆ ಬೇಡಿಕೆ ಇಡುತ್ತಿದ್ದಾರೆ. ಆದರೆ ಈಗಿರುವ ವಿಮಾನ ಸೇವೆಗಳೇ ರದ್ದಾಗುತ್ತಿವೆ. ಬೆಳಗಾವಿಯಿಂದ ಕಳೆದ 2 ವರ್ಷಗಳಲ್ಲಿ ಯಾವುದೇ ಹೊಸ ಮಾರ್ಗದಲ್ಲಿ ವಿಮಾನ ಸೇವೆ ಆರಂಭವಾಗಿಲ್ಲ.
ಸಾಂಬ್ರಾದಿಂದ ಹೊಸ ಮಾರ್ಗದಲ್ಲಿ ವಿಮಾನ ಹಾರಾಟ ನಡೆಸುವುದು ಇರಲಿ ಇರುವ ಮಾರ್ಗದ ವಿಮಾನಗಳನ್ನು ಉಳಿಸಿಕೊಳ್ಳಲು ಜನಪ್ರತಿನಿಧಿಗಳು ಸಾಕಷ್ಟು ಪ್ರಯತ್ನ ನಡೆಸಿದ್ದಾರೆ. ಬೆಳಗಾವಿಯಲ್ಲಿ ಟರ್ಮಿನಲ್ -2 ನಿರ್ಮಾಣವಾಗುತ್ತಿದ್ದು, ವಿಮಾನ ನಿಲ್ದಾಣ ಹೆಚ್ಚುವರಿಯಾಗಿ 56 ಪ್ರದೇಶಕ್ಕೆ ವಿಸ್ತರಣೆಯಾಗುತ್ತಿದೆ.
ಬೆಳಗಾವಿ ವಿಮಾನ ನಿಲ್ದಾಣದ ಆವರಣದಲ್ಲಿ ವಿಮಾನ ಹಾರಾಟ ತರಬೇತಿ ಕೇಂದ್ರ ನಿರ್ಮಾಣ ಕಾರ್ಯವೂ ಭರದಿಂದ ಸಾಗಿದೆ. ಒಂದು ಬ್ಯಾಚ್‌ನಲ್ಲಿ 100 ಅಭ್ಯರ್ಥಿಗಳಿಗೆ ತರಬೇತಿ ನೀಡುವ ಮಾದರಿಯಲ್ಲಿ ಕೇಂದ್ರ ನಿರ್ಮಾಣವಾಗಲಿದೆ. ಬಳಿಕ ಬೆಳಗಾವಿಯ ಯುವಕ/ ಯುವತಿಯರು ಪೈಲೆಟ್ ತರಬೇತಿ ಪಡೆದಲು ಬೆಂಗಳೂರು, ಮೈಸೂರು ಅಥವ ಬೇರೆ ಜಿಲ್ಲೆಗೆ ಹೋಗುವುದು ತಪ್ಪಲಿದೆ.
ಬೆಳಗಾವಿ ತಾಲೂಕಿನಲ್ಲಿರುವ ಸಾಂಬ್ರಾ ವಿಮಾನ ನಿಲ್ದಾಣ 3.69 ಕೋಟಿ ರೂ. ತೆರಿಗೆ ಪಾವತಿ ಮಾಡಿಲ್ಲ ಎಂದು ಗ್ರಾಮ ಪಂಚಾಯಿತಿ ನೋಟಿಸ್ ನೀಡಿದೆ. ಬೆಳಗಾವಿ ನಗರದಿಂದ ಸುಮಾರು 10 ಕಿ. ಮೀ. ದೂರದಲ್ಲಿ ಬೆಳಗಾವಿ-ಬಾಗಲಕೋಟೆ ರಸ್ತೆಯಲ್ಲಿ ವಿಮಾನ ನಿಲ್ದಾಣವಿದೆ. ಗ್ರಾಮ ಪಂಚಾಯಿತಿಗೆ 4.50 ಕೋಟಿ ರೂ. ತೆರಿಗೆ ಬರುವುದು ಬಾಕಿ ಇದೆ. ಇದರಲ್ಲಿ ವಿಮಾನ ನಿಲ್ದಾಣವೇ 3.69 ಕೋಟಿ ರೂ. ತೆರಿಗೆ ಪಾವತಿ ಮಾಡಬೇಕಿದೆ.
ವಿಮಾನ ನಿಲ್ದಾಣಕ್ಕೆ ಹಣಕಾಸಿನ ಕೊರತೆ ಇಲ್ಲ. ವಿವಿಧ ಕಾರಣಕ್ಕೆ ತೆರಿಗೆ ಪಾವತಿ ವಿಳಂಬವಾಗಿದೆ. ನಿಯಮಾನುಸಾರ ತೆರಿಗೆ ಪಾವತಿ ಮಾಡಲಾಗುತ್ತದೆ ಎಂದು ಸಾಂಬ್ರಾ ವಿಮಾನ ನಿಲ್ದಾಣದ ನಿರ್ದೇಶಕ ಎಸ್. ತ್ಯಾಗರಾಜನ್ ಹೇಳಿದ್ದಾರೆ.












Click it and Unblock the Notifications