ಹುಬ್ಬಳ್ಳಿ ಹಾಗೂ ಬೆಳಗಾವಿ ವಿಮಾನ ನಿಲ್ದಾಣಗಳಿಗೆ ಈ ಹೆಸರುಗಳನ್ನಿಡಲು ಚಿಂತನೆ
ಬೆಳಗಾವಿ, ಡಿಸೆಂಬರ್, 13: ಮಲೆನಾಡಿನ ಹೆಬ್ಬಾಗಿಲು ಅಂತಲೇ ಕರೆಸಿಕೊಳ್ಳುವ ಶಿವಮೊಗ್ಗದ ಸೋಗಾನೆ ಬಳಿಯಿರುವ ವಿಮಾನ ನಿಲ್ದಾಣಕ್ಕೆ ಕುವೆಂಪು ಹೆಸರಿಡಲು ತೀರ್ಮಾನ ಮಾಡಲಾಗಿದೆ. ಆದರೆ ಇನ್ನೂ ಘೋಷಣೆ ಆಗಿಲ್ಲ ಅಷ್ಟೇ. ಇದೀಗ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮತ್ತು ಬೆಳಗಾವಿ ವಿಮಾನ ನಿಲ್ದಾಣಕ್ಕೆ ಕಿತ್ತೂರು ರಾಣಿ ಚೆನ್ನಮ್ಮ ಹೆಸರಿಡಬೇಕು ಎಂಬ ಬೇಡಿಕೆಗಳನ್ನು ಸರ್ಕಾರ ಪರಿಶೀಲಿಸುತ್ತಿದೆ ಎಂದು ಸಚಿವ ಎಂ.ಬಿ.ಪಾಟೀಲ್ ಬೆಳಗಾವಿಯಲ್ಲಿ ಹೇಳಿದರು.
ವಿಮಾನ ನಿಲ್ದಾಣಗಳ ಮರುನಾಮಕರಣದ ಕುರಿತು ರಾಜ್ಯ ವಿಧಾನಮಂಡಲದ ಉಭಯ ಸದನಗಳಲ್ಲಿ ನಿರ್ಣಯ ಅಂಗೀಕರಿಸುವ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಚರ್ಚೆ ಮಾಡುವುದಾಗಿ ತಿಳಿಸಿದರು.
ಬುಧವಾರ (ಡಿಸೆಂಬರ್ 13) ಶೂನ್ಯ ವೇಳೆಯಲ್ಲಿ ಕಾಂಗ್ರೆಸ್ ಶಾಸಕ ಎನ್‌ಎಚ್ ಕೋನರೆಡ್ಡಿ ಮತ್ತು ಶ್ರೀನಿವಾಸ್ ಮಾನೆ ಅವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಾಗೂ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಕಿತ್ತೂರು ರಾಣಿ ಚೆನ್ನಮ್ಮ ಹೆಸರಿಡಬೇಕು ಎಂದು ಹಲವು ದಿನಗಳಿಂದ ಬೇಡಿಕೆಯಿದೆ. ಹಾಗೂ ಸರ್ಕಾರಕ್ಕೆ ವಿವಿಧ ಸಂಘಟನೆಗಳಿಂದ ಮನವಿ ಸಲ್ಲಿಕೆ ಆಗಿದೆ ಎಂದರು.
ಯಾವ ನಗರದಲ್ಲಿ ವಿಮಾನ ನಿಲ್ದಾಣವನ್ನು ನಿರ್ಮಿಸಲಾಗುವುದೋ ಆ ನಗರದ ಹೆಸರನ್ನು ಇಡುವುದು ಅಭ್ಯಾಸ ಆಗಿದೆ. ಅಂತಹ ಹೆಸರನ್ನು ಬದಲಾಯಿಸುವುದು ಕೇಂದ್ರ ಸರ್ಕಾರದ ನಾಗರಿಕ ವಿಮಾನಯಾನ ಸಚಿವಾಲಯದ ವ್ಯಾಪ್ತಿಯಲ್ಲಿ ಬರುತ್ತದೆ ಎಂದು ಹೇಳಿದರು.

ರಾಜ್ಯ ಸರ್ಕಾರವು ರಾಜ್ಯದ ಯಾವುದೇ ವಿಮಾನ ನಿಲ್ದಾಣವನ್ನು ಮರುನಾಮಕರಣ ಮಾಡಲು ಬಯಸಿದರೆ, ರಾಜ್ಯ ವಿಧಾನಮಂಡಲದ ಉಭಯ ಸದನಗಳಲ್ಲಿ ಈ ಕುರಿತು ನಿರ್ಣಯವನ್ನು ಮಂಡಿಸಿ ಅಂಗೀಕರಿಸಬೇಕು ಮತ್ತು ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಬೇಕು ಎಂದು ತಿಳಿಸಿದರು.
ಇನ್ನು ಈ ಕುರಿತು ವಿಧಾನಮಂಡಲದ ಉಭಯ ಸದನಗಳಲ್ಲಿ ಪ್ರಸ್ತಾವನೆ ಮಂಡಿಸಿ ಮುಂದಿನ ಕ್ರಮಕೈಗೊಳ್ಳುವ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡುತ್ತೇನೆ ಎಂದರು. ಇನ್ನು ಇದೇ ವೇಳೆ ಈ ಕುರಿತು ನಿರ್ಣಣ ಕೈಗೊಳ್ಳುವಂತೆ ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ಮನವಿ ಮಾಡಿದರು.
ಬಳ್ಳಾರಿಯಲ್ಲಿ ಏರ್‌ಪೋರ್ಟ್ ಆದ್ರೆ ರೆಡ್ಡಿ ಮೊದಲ ಆಸೆ ಏನು?
ರಾಜ್ಯದ ಹಲವು ಜಿಲ್ಲೆಗಳಲ್ಲಿ ವಿಮಾನ ನಿಲ್ದಾಣಗಳಿವೆ. ಹಾಗೆಯೇ ಬಳ್ಳಾರಿಯಲ್ಲಿ ಏನಾದ್ರೂ ವಿಮಾನ ನಿಲ್ದಾಣ ಆದ್ರೆ ಅದಕ್ಕೆ ಶ್ರೀ ಹನುಮಾನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅಂತಾ ನಾಮಕಾರಣ ಮಾಡಬೇಕು ಎಂಬುದು ನನ್ನ ಆಸೆಯಾಗಿದೆ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು ಬೆಳಗಾವಿ ಅಧಿವೇಶನದ ವೇಳೆ ಹೇಳಿದರು.
ಅಯೋಧ್ಯೆಯಲ್ಲಿ ಶ್ರೀರಾಮ ಇಂಟರ್ ನ್ಯಾಷನಲ್ ಏರ್‌ಪೋರ್ಟ್ ಇದೆ. ಇನ್ನು ಬಳ್ಳಾರಿಯಲ್ಲಿ ವಿಮಾನ ನಿಲ್ದಾಣ ಆದ್ರೆ ಅದಕ್ಕೆ ಶ್ರೀ ಹನುಮಾನ್ ಇಂಟರ್ ನ್ಯಾಷನಲ್ ಏರ್‌ಪೋರ್ಟ್ ಎಂದು ನಾಮಕರಣ ಮಾಡಲಿ ಅಂತಾ ನನ್ನ ಆಸೆ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು.
ಬೆಳಗಾವಿ ಅಧಿವೇಶನದಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿ ವಿಮಾನ ನಿಲ್ದಾಣಗಳಲ್ಲಿ ಏರ್ ಬಸ್ಗಳು ಇವತ್ತು ಬರುತ್ತಿವೆ ಅಂದರೆ ನಾನು ಮಾಡಿದ ಕೆಲಸವೇ ಕಾರಣ. ದುರಾದೃಷ್ಟ ಅಂದರೆ ನಾನು ಹುಟ್ಟಿ ಬೆಳೆದ ಗಣಿ ನಾಡು ಬಳ್ಳಾರಿಯಲ್ಲಿ ಇದುವರೆಗೂ ವಿಮಾನ ನಿಲ್ದಾಣವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ವಿಜಯನಗರದಲ್ಲಿ ಅಟಲ್ ಬಿಹಾರಿ ವಾಜಪೇಯಿ ಹೆಸರಲ್ಲಿ ನಾನು ಜೂವಾಲಾಜಿಕಲ್ ಪಾರ್ಕ್ ಕಟ್ಟಿದ್ದೆ. ಅಲ್ಲಿ ನೈಟ್ ಸಫಾರಿ, ಥೀಮ್ ಪಾರ್ಕ್, ಶ್ರೀಕೃಷ್ಣದೇವರಾಯನ ಪ್ರತಿಮೆಯನ್ನು ಇಂಗ್ಲೆಂಡಿನ ಲೇಡಿ ಲಿಬರ್ಟಿ ಪ್ರತಿಮೆ ತರಹ ಮಾಡಬೇಕೆಂಬ ಆಸೆ ಇತ್ತು. ತುಂಗಭದ್ರ ನದಿಯಲ್ಲಿ ಸೌಂಡ್ ಅಂಡ್ ಲೈಟ್ ಮಾಡಬೇಕೆಂಬ ಆಸೆಯಿತ್ತು. ಈ ಕನಸುಗಳನ್ನು 13-14 ವರ್ಷಗಳ ಹಿಂದೆಯೇ ನಾನು ಕಂಡಿದ್ದೆ. ಈಗಿನ ಸರ್ಕಾರ ಈ ಅಭಿವೃದ್ಧಿ ಕೆಲಸಗಳನ್ನು ಮಾಡಲಿ ಎಂದರು.












Click it and Unblock the Notifications