Travel Guide: ಮೈದುಂಬಿದ ಗಾಯತ್ರಿ ಜಲಾಶಯ; ಸ್ವರ್ಗದಂತಹ ಜಾಗಕ್ಕೆ ಹೋಗೋದು ಹೇಗೆ?
ಚಿತ್ರದುರ್ಗ, ನವೆಂಬರ್, 22: ಒಡೆಯರ್ ಕಾಲದಲ್ಲಿ ನಿರ್ಮಾಣ ಮಾಡಿದ್ದ ಗಾಯತ್ರಿ ಜಲಾಶಯವನ್ನು ನೋಡಲು ಪ್ರತಿದಿನವೂ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರ ದಂಡೇ ಹರಿದುಬರುತ್ತಿದೆ. ಹಾಗಾದರೆ ಇದು ಎಲ್ಲಿ ಬರುತ್ತದೆ. ತಲುಪುವ ಮಾರ್ಗಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಒಡೆಯರ್ ಅವರ ಕಾಲದಲ್ಲಿ ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿ ಹೋಬಳಿಯ ಕರಿಯಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಸುವರ್ಣಮುಖಿ ನದಿಗೆ 1963ರಲ್ಲಿ ಗಾಯತ್ರಿ ಜಲಾಶಯವನ್ನು ಅಡ್ಡಲಾಗಿ ನಿರ್ಮಿಸಲಾಗಿದೆ. ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು ಅತಿ ಕಡಿಮೆ ವೆಚ್ಚ ಅಂದರೆ 40 ಲಕ್ಷ ರೂಪಾಯಿ ಖರ್ಚು ಮಾಡಿ ಈ ಜಲಾಶಯ ನಿರ್ಮಾಣ ಮಾಡಲಾಗಿದೆ.

ಗಾಯತ್ರಿ ಎಂದು ಹೆಸರಿಟ್ಟಿದ್ದೇಕೆ?: ಗಾರೆ ಮತ್ತು ಸಿಮೆಂಟ್ ಬಳಸಿ ಈ ಜಲಾಶಯವನ್ನು ನಿರ್ಮಾಣ ಮಾಡಲಾಗಿದೆ. ಅಂದಿನ ಚಿತ್ರದುರ್ಗ ಜಿಲ್ಲಾ ಬೋರ್ಡ್ ಅಧ್ಯಕ್ಷರಾಗಿದ್ದ ವಕೀಲ ಕೆ. ಕೆಂಚಪ್ಪ ಜಯಚಾಮರಾಜ ಒಡೆಯರ್ ಆಹ್ವಾನಿಸಿ ಜಲಾಶಯಕ್ಕೆ ಅಡಿಗಲ್ಲು ಹಾಕಿಸಿದ್ದರು. ಈ ಡ್ಯಾಂ ಅನ್ನು ಜಯಚಾಮರಾಜ ಒಡೆಯರ್ ಮನೆತನದ ಹೆಣ್ಣುಮಗಳಾದ ಗಾಯತ್ರಿದೇವಿ ನೆನೆಪಿಗಾಗಿ ನಿರ್ಮಾಣ ಮಾಡಿ ಅವರ ಹೆಸರನ್ನೇ ನಾಮಕರಣ ಮಾಡಲಾಗಿದೆ.
ಗಾಯಿತ್ರಿ ಜಲಾಶಯ ಸುಮಾರು 7,000 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶಕ್ಕೆ ನೀರುಣಿಸುತ್ತದೆ. ಜಲಾಶಯವು 145 ಅಡಿ ಎತ್ತರ ಹೊಂದಿದೆ. ಇನ್ನು 16 ಕಿಲೋ ಮೀಟರ್ ಉದ್ದದ ಬಲನಾಲೆ ಹಾಗೂ 7 ಕಿ.ಮೀ. ಉದ್ದದ ಎಡನಾಲೆ ಎಂಬ ಎರಡು ನಾಲೆಗಳಿವೆ. ಎರಡು ಕಾಲುವೆಗಳ ಮೂಲಕ 0.67 ಟಿಎಂಸಿ ನೀರನ್ನು ಕೃಷಿಗೆ ಬಳಸಿಕೊಳ್ಳಲಾಗುತ್ತದೆ. ಅಷ್ಟೇ ಅಲ್ಲದೆ ಇದು ಕೂಡ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾಗಿದ್ದು, ಇಲ್ಲಿಗೆ ಪ್ರತಿನಿತ್ಯವೂ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರ ದಂಡೇ ಹರಿದುಬರುತ್ತದೆ.
ಬೆಂಗಳೂರಿನಿಂದ ಎಷ್ಟು ದೂರ: ಬೆಂಗಳೂರಿನಿಂದ ಪ್ರಯಾಣ ಮಾಡಲು ಬಯಸಿದರೆ ರಾಷ್ಟ್ರೀಯ ಹೆದ್ದಾರಿ 4ರ ಎಡಭಾಗದಲ್ಲಿ ಸಿಗುತ್ತದೆ. ಇದು ಹಿರಿಯೂರಿನಿಂದ 20 ಕಿಲೋ ಮೀಟರ್, ಚಿತ್ರದುರ್ಗದಿಂದ 65 ಕಿಲೋ ಮೀಟರ್, ಬೆಂಗಳೂರಿನಿಂದ 150 ಕಿಲೋ ಮೀಟರ್ ವಿಸ್ತೀರ್ಣ ಆಗಲಿದೆ.
ಈ ಜಲಾಶಯದ ನೀರು ಹಿರಿಯೂರು ತಾಲ್ಲೂಕಿನ ಜವಗೊಂಡನಹಳ್ಳಿಗೆ ಸೀಮಿತಗೊಳ್ಳದೇ ಪಕ್ಕದ ಶಿರಾ ತಾಲೂಕಿನ ಹುಣಸೆಹಳ್ಳಿ, ಉಜ್ಜನಕುಂಟೆ, ಮೇಳೆ ಕೋಟೆ ಮತ್ತಿತರರ ಗ್ರಾಮದ ರೈತರ ಜಮೀನುಗಳಿಗೆ ಹರಿಯುತ್ತದೆ. ಜಲಾಶಯ ಒಮ್ಮೆ ಭರ್ತಿಯಾದರೆ ಸುತ್ತಮುತ್ತಲಿನ ಪ್ರದೇಶದಲ್ಲಿ ಅಂತರ್ಜಲ ಮಟ್ಟ ಹೆಚ್ಚಳ ಆಗುತ್ತದೆ.
ಈ ಜಲಾಶಯವು 2017ರ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಲ್ಲಿ ಎರಡು ಬಾರಿ ಕೋಡಿ ಬಿದ್ದಿತ್ತು. ಬಳಿಕ ಮಳೆ ಇಲ್ಲದ ಕಾರಣ ಜಲಾಶಯಕ್ಕೆ ದೊಡ್ಡ ಪ್ರಮಾಣದಲ್ಲಿ ನೀರು ಹರಿದು ಬರಲು ಸಾಧ್ಯವಾಗಲಿಲ್ಲ. ಡ್ಯಾಂನಲ್ಲಿ ನೀರು ಇಲ್ಲದೆ ದಿನ ಕಳೆದಂತೆ ಜಲಾಶಯ ಬತ್ತಿ ಹೋಗಿತ್ತು. ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗಿತ್ತು.
ನಾಲ್ಕು ವರ್ಷಗಳ ನಂತರ 2021 ನವೆಂಬರ್ ತಿಂಗಳಲ್ಲಿ ಭಾರೀ ಪ್ರಮಾಣದಲ್ಲಿ ಅಕಾಲಿಕ ಮಳೆ ಸುರಿದಿದ್ದರಿಂದ ಮೈದುಂಬಿ ಕೊಡಿ ಬಿದ್ದಿತು. ಇದೀಗ 2024ರಲ್ಲಿ ಡ್ಯಾಂ ಕೋಡಿ ಬೀಳಲಿದೆ. ಇತ್ತ ಹಿರಿಯೂರಿನ ಮತ್ತೊಂದು ಜಲಾಶಯವಿರುವ ವಾಣಿ ವಿಲಾಸ ಸಾಗರ ಡ್ಯಾಂ ಕೂಡ ಬಹುತೇಕ ಭರ್ತಿಯಾಗಿದ್ದು, ಕೋಡಿ ಬೀಳಲು 1.90 ಅಡಿ ಬಾಕಿಯಿದೆ. ಇದೀಗ ವಾಣಿ ವಿಲಾಸ ಜಲಾಶಯಕ್ಕೆ 624 ಕ್ಯೂಸೆಕ್ ಒಳಹರಿವು ನೀರು ಹರಿದು ಬರುತ್ತಿದ್ದು, ಇದರಿಂದ ಪ್ರಸ್ತುತ ಜಲಾಶಯದ ನೀರಿನ ಮಟ್ಟ 128.10 ಅಡಿ ತಲುಪಿದೆ.
ಒಟ್ಟಾರೆಯಾಗಿ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವಾಣಿ ವಿಲಾಸ ಜಲಾಶಯ ಮತ್ತು ಗಾಯಿತ್ರಿ ಜಲಾಶಯ ಎರಡು ಭರ್ತಿಯಾಗಿದ್ದು, ಕೋಡಿ ಬೀಳಲು ಕ್ಷಣಗಣನೆ ಆರಂಭವಾಗಿದ್ದು, ಕೋಡಿಯನ್ನು ಕಣ್ತುಂಬಿಕೊಳ್ಳಲು ರೈತರು ಕಾತುರದಿಂದ ಕಾಯುತ್ತಿದ್ದಾರೆ.
ಗಾಯತ್ರಿ ಜಲಾಶಯದ ನೀರಿನ ಸಂಗ್ರಹಣಾ ಸಾಮರ್ಥ್ಯವು 0.975 ಟಿಎಂಸಿಗಳಾಗಿದ್ದು, ಇದರಲ್ಲಿ 0.337 ಟಿಎಂಸಿ ಬಳಕೆಗೆ ಲಭ್ಯವಿದೆ ಹಾಗೂ ಬಳಕೆಗೆ ಬರುವ ನೀರಿನ ಪ್ರಮಾಣ 0.638 ಟಿಎಂಸಿ ಇರುತ್ತದೆ.
ಪ್ರಸ್ತುತ ಜಲಾಶಯದ ನೀರಿನ ಸಂಗ್ರಹಣೆಯಲ್ಲಿ ಮೂಲ ಬಧ್ಧತೆಯನುಸಾರ ಹಂಚಿಕೆಯಾದ ನೀರಿನ ಪ್ರಮಾಣದ ವಿವರಗಳ ಗಮನಿಸಿದಾಗ, ಅನುಮೋದಿತ ಮಾಸ್ಟರ್ ಪ್ಲಾನ್‌ನಂತೆ ಗಾಯತ್ರಿ ಜಲಾಶಯದ ಅಚ್ಚುಕಟ್ಟು ಪ್ರದೇಶಕ್ಕೆ ಹಂಚಿಕೆಯಾಗಿರುವ ನೀರಿನ ಪ್ರಮಾಣ 0.45 ಟಿಎಂಸಿ ಆಗಿರುತ್ತದೆ. ಗಾಯತ್ರಿ ಜಲಾಶಯದಿಂದ ಜವನಗೊಂಡನಹಳ್ಳಿ ಮತ್ತು 37 ಗ್ರಾಮಗಳಿಗೆ ಕುಡಿಯುವ ನೀರಿಗಾಗಿ 0.028 ಟಿಎಂಸಿ ನೀರನ್ನು ಬಳಸಲು ಅನುಮತಿಸಲಾಗಿರುತ್ತದೆ.
ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿ ಹೋಬಳಿಯ ಗಾಯಿತ್ರಿ ಜಲಾಶಯ ಬಹುತೇಕ ಭರ್ತಿಯಾಗಿದ್ದು, ಜಲಾಶಯ ಕೋಡಿ ಬೀಳಲು ಕೇವಲ 2 ಅಡಿ ನೀರು ಮಾತ್ರ ಬಾಕಿಯಿದೆ.












Click it and Unblock the Notifications