Shakti Yojana: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ KSRTC ಬಸ್ ಏರಿ ರೈಟ್.. ರೈಟ್ ಎಂದ ಮಹಿಳೆಯರು
ಮೈಸೂರು, ಜೂನ್, 11: ಮಹಿಳೆಯರಿಗೆ ಉಚಿತ ಪ್ರಯಾಣ ಒದಗಿಸುವ ಶಕ್ತಿಯೋಜನೆಗೆ ಭಾನುವಾರ ನಗರದಲ್ಲಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರು ಚಾಲನೆ ನೀಡಿದರು.
ನಂತರ ಮಾತನಾಡಿದ ಎಚ್.ಸಿ.ಮಹಾದೇವಪ್ಪ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಕರ್ನಾಟಕದಲ್ಲಿನ ಪ್ರತಿಯೊಬ್ಬ ಮಹಿಳೆಯರಿಗೆ ಅನುಕೂಲವಾಗುವಂತೆ ಕಾರ್ಯಕ್ರಮಗಳನ್ನು ನೀಡಿದೆ. ಸ್ತ್ರೀಯರ ಸಬಲೀಕರಣಕ್ಕಾಗಿ ರಚನೆಯಾಗಿರುವ ಕಾರ್ಯಕ್ರಮಗಳಲ್ಲಿ "ಶಕ್ತಿ ಯೋಜನೆಯು ಮಹಿಳೆಯರಿಗೆ ಉಚಿತ ಪ್ರಯಾಣ" ಕಾರ್ಯಕ್ರಮವು ಪ್ರಮುಖವಾಗಿದೆ. ಈ ಯೋಜನೆಗೆ ಇಂದಿನಿಂದ ರಾಜ್ಯದಲ್ಲಿ ಅನುಷ್ಟಾನಗೊಳಿಸಲಾಗಿದೆ ಎಂದು ತಿಳಿಸಿದರು.

ಕರ್ನಾಟಕ ಸರ್ಕಾರ ಮತ್ತು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮೈಸೂರು ವಿಭಾಗದ ವತಿಯಿಂದ ಕರ್ನಾಟಕ ರಾಜ್ಯಾದ್ಯಂತ ಮಹಿಳೆಯರಿಗೆ ನಗರ ಸಾರಿಗೆ, ಸಾಮಾನ್ಯ ಸಾರಿಗೆ ಮತ್ತು ವೇಗದೂತ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣದ ಶಕ್ತಿ ಯೋಜನೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ ಎಂದರು.
ಕರ್ನಾಟಕದಲ್ಲಿ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ರಚನೆ ಆಗಿರುವ ಕಾಂಗ್ರೆಸ್ ಸರ್ಕಾರವು ಪ್ರತಿಯೊಬ್ಬರಿಗೂ ಉತ್ತಮವಾದ ಆಡಳಿತವನ್ನು ನೀಡುತ್ತಿದೆ. ಈ ಬಾರಿ ಕಾಂಗ್ರೆಸ್ ಸರ್ಕಾರವು ನೀಡಿರುವ 5 ಗ್ಯಾರಂಟಿಗಳಲ್ಲಿ ಮೊದಲನೆಯದಾಗಿ ಶಕ್ತಿ ಯೋಜನೆಗೆ ಚಾಲನೆ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಉಳಿದ ಯೋಜನೆಗಳನ್ನು ಜಾರಿಗೊಳಿಸಲಾಗುವುದು ಎಂದರು.
ಶಕ್ತಿ ಯೋಜನೆಯಡಿಯಲ್ಲಿ ರಾಜ್ಯದಲ್ಲಿ ಪ್ರತಿನಿತ್ಯ 40 ಲಕ್ಷಕ್ಕೂ ಅಧಿಕ ಮಹಿಳೆಯರು ಪ್ರಯಾಣ ಮಾಡುತ್ತಾರೆ. ಇದರಿಂದ ಸರ್ಕಾರಕ್ಕೆ ವರ್ಷಕ್ಕೆ 4050 ಕೋಟಿಯಷ್ಟು ಖರ್ಚು ಬರಲಿದೆ. ಪ್ರತಿ ಮಹಿಳೆಯರು ಕೂಡ ಸ್ವಾವಲಂಬಿಯಾಗಿ ಜೀವನ ಮಾಡಲು ನಮ್ಮ ಸರ್ಕಾರವು ಅನೇಕ ಯೋಜನೆಗಳನ್ನು ಜಾರಿ ಮಾಡಲಿದೆ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ಸರ್ಕಾರವು ನೀಡಿರುವ ಉಳಿದ ಯೋಜನೆಗಳಾದ ಗೃಹ ಲಕ್ಷ್ಮಿ ,ಅನ್ನ ಭಾಗ್ಯ , ಯುವ ನಿಧಿ , ಗೃಹ ಜ್ಯೋತಿ ಯೋಜನೆಗಳಿಗೆ ಚಾಲನೆ ನೀಡಲಾಗುವುದು. ಚುನಾವಣಾ ಸಂದರ್ಭದಲ್ಲಿ ರಾಜ್ಯದಲ್ಲಿ ಪ್ರತಿಯೊಬ್ಬರಿಗೂ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಕಾರ್ಡ್ ನೀಡಲಾಗಿದೆ. ಅದರಂತೆಯೇ ಪ್ರತಿಯೊಬ್ಬರಿಗೂ ನಮ್ಮ ಸರ್ಕಾರದ ಯೋಜನೆಗಳು ತಲುಪುವಂತೆ ಮಾಡಲಾಗುವುದು. ರಾಜ್ಯದಲ್ಲಿ ರುವ ಪ್ರತಿಯೊಂದು ಕುಟುಂಬವು ಸಹ ಸ್ವಾವಲಂಬನೆಯಿಂದ ಜೀವನ ನಡೆಸುವಂತೆ ನಮ್ಮ ಸರ್ಕಾರವು ಯೋಜನೆಗಳನ್ನು ರೂಪಿಸಿದೆ ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ಶಾಸಕರಾದ ತನ್ವಿರ್ ಶೇಠ್, ಡಿ. ತಿಮ್ಮಯ್ಯ, ಸಿ.ಎನ್. ಮಂಜೇಗೌಡ, ಎಚ್.ವಿಶ್ವನಾಥ್, ಜಿ.ಟಿ.ದೇವೇಗೌಡ, ಕೆ.ಹರೀಶ್ ಗೌಡ, ಮರಿತಿಬ್ಬೇಗೌಡ, ಜಿಲ್ಲಾಧಿಕಾರಿಗಳಾದ ಡಾ.ಕೆ.ವಿ.ರಾಜೇಂದ್ರ, ಮಹಾ ಪೌರರಾದ ಶಿವಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳಾದ ಕೆ.ಎಂ.ಗಾಯತ್ರಿ, ಮಹಾನಗರ ಪಾಲಿಕೆಯ ಆಯುಕ್ತರಾದ ಲಕ್ಷ್ಮೀಕಾಂತ ರೆಡ್ಡಿ, ಪೊಲೀಸ್ ಆಯುಕ್ತರಾದ ಬಿ.ರಮೇಶ್, ಪೊಲೀಸ್ ಅಧಿಕ್ಷಕ ಸೀಮಾ ಲಾಟ್ಕರ್ ಹಾಗೂ ಕೆ.ಎಸ್.ಆರ್.ಟಿ.ಸಿ. ಸಿಬ್ಬಂದಿಗಳು ಉಪಸ್ಥಿತರಿದ್ದರು.
ಮೈಸೂರಿನ ಕೆಎಸ್‌ಆರ್‌ಟಿಸಿ ವಿಭಾಗದಲ್ಲಿ 1071 ವಾಹನಗಳಿವೆ. ಇವುಗಳಲ್ಲಿ 871 ಬಸ್‌ಗಳು ಉಚಿತ ಸೇವೆ ನೀಡಲಿವೆ. ನಗರ ವ್ಯಾಪ್ತಿಯಲ್ಲಿ 248, ಗ್ರಾಮಾಂತರ ವ್ಯಾಪ್ತಿಯಲ್ಲಿ 246 ಬಸ್‌ಗಳು ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸಲಿವೆ. 370 ಬಸ್‌ಗಳು ಅಂತರ ಜಿಲ್ಲೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತವೆ ಎಂದರು.
ಜಿಲ್ಲೆಯಿಂದ ಅಂತಾರಾಜ್ಯಕ್ಕೆ ಸಂಚರಿಸುವ, ಹವಾ ನಿಯಂತ್ರಿತ, ಸ್ಲೀಪರ್ ಬಸ್‌ಗಳಲ್ಲಿ ಈ ಸೇವೆ ದೊರೆಯುವುದಿಲ್ಲ. ಹಾಗೆಯೇ ಮೈಸೂರು ವಿಭಾಗದಲ್ಲಿ ನಿತ್ಯವೂ 126.84 ಲಕ್ಷ ರೂಪಾಯಿ ವಹಿವಾಟು ನಡೆಯಲಿದೆ ಎಂದು ತಿಳಿಸಿದರು.












Click it and Unblock the Notifications