ಪ್ರವಾಸಿಗರಿಗೆ ನಿರಾಸೆ; ಮಡೆನೂರು ಜಲಾಶಯ ವೀಕ್ಷಣೆಗೆ ನಿರ್ಬಂಧ
ಶಿವಮೊಗ್ಗ, ಜೂನ್ 12; ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿರುವ ಮಡೆನೂರು (ಹಿರೇಭಾಸ್ಕರ) ಡ್ಯಾಂ ನೋಡಲು ನಿರ್ಬಂಧ ಹೇರಲಾಗಿದೆ. ಲಿಂಗನಮಕ್ಕಿ ಜಲಾಶಯದಲ್ಲಿ ನೀರಿನ ಮಟ್ಟ ಕುಸಿದಿದ್ದು, ಡ್ಯಾಂ ಒಡಲಲ್ಲಿ ಮುಳುಗಿರುವ ಮಡೆನೂರು ಡ್ಯಾಂ ಕಾಣುತ್ತಿದೆ.
ಸಾಗರ ತಾಲೂಕಿನಲ್ಲಿರುವ ಈ ಮಡೆನೂರು ಜಲಾಶಯ ಕಾರ್ಗಲ್ ವನ್ಯಜೀವಿ ವಿಭಾಗದ ವ್ಯಾಪ್ತಿಗೆ ಬರುತ್ತದೆ. ಹೊರ ರಾಜ್ಯದ ಪ್ರವಾಸಿಗರಿಂದ ಡ್ಯಾಂ ಸುತ್ತಲಿನ ಪ್ರದೇಶ ಅನೈತಿಕ ಚಟುವಟಿಕೆಗಳ ತಾಣವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದರು. ಆದ್ದರಿಂದ ಅರಣ್ಯ ಇಲಾಖೆ ಜಲಾಶಯಕ್ಕೆ ಭೇಟಿ ನಿರ್ಬಂಧಿಸಿದೆ.

ಮಲೆನಾಡಿನ ಮೊದಲ ಅಣೆಕಟ್ಟು ಎಂಬ ಹೆಗ್ಗಳಿಕೆಯನ್ನು ಮಡೆನೂರು ಡ್ಯಾಂ ಹೊಂದಿದೆ. ಆದರೆ ಶರಾವತಿ ನದಿಗೆ ಅಡ್ಡಲಾಗಿ ಲಿಂಗನಮಕ್ಕಿ ಜಲಾಶಯ ನಿರ್ಮಾಣ ಮಾಡಿದ ಬಳಿಕ ಮಡೆನೂರು ಡ್ಯಾಂ ಅದರ ಒಡಲಲ್ಲಿ ಮುಳುಗಿದೆ. ಮೇ ತಿಂಗಳಿನಲ್ಲಿ ಜಲಾಶಯದ ನೀರು ಕಡಿಮೆಯಾದಾಗ ಈ ಡ್ಯಾಂ ಕಾಣುತ್ತದೆ.
ಸಂಪರ್ಕಿಸುವ ರಸ್ತೆ ಬಂದ್; ಅರಣ್ಯ ಇಲಾಖೆ ಅಧಿಕಾರಿಗಳು ಡ್ಯಾಂ ಪ್ರವೇಶ ದ್ವಾರದ ಬಳಿ ಇರುವ ಅಂಬಾರಗೋಡ್ಲು ಸಮೀಪದ ರಸ್ತೆಯನ್ನು ಭಾನುವಾರ ಮುಚ್ಚಿದ್ದಾರೆ. ವನ್ಯಜೀವಿ ವಿಭಾಗ ಕಾರ್ಗಲ್, ನಿರ್ಬಂದಿತ ಪ್ರದೇಶ, ಅಕ್ರಮ ಪ್ರವೇಶ ನಿಷೇಧಿಸಿದೆ ಎಂದು ಫಲಕ ಹಾಕಿದ್ದಾರೆ. ಅಕ್ರಮವಾಗಿ ಪ್ರವೇಶ ಮಾಡಿದರೆ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಸೆಕ್ಷನ್ 27ರ ಅನ್ವಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಸ್ಥಳೀಯರು ಮುಳುಗಡೆ ಪ್ರದೇಶದಲ್ಲಿ ಪೂಜೆಗೆ ತೆರಳಲು ಅವಕಾಶ ನೀಡಲಾಗಿದೆ. ಆದರೆ ಪ್ರವಾಸಿಗರು ಇದನ್ನು ದುರುಪಯೋಗ ಮಾಡಿಕೊಂಡು ಅತಿಕ್ರಮ ಪ್ರವೇಶ ಮಾಡಿದರೆ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. 1939 ರಿಂದ 1948ರ ನಡುವೆ ಮಡೆನೂರು ಜಲಾಶಯ ನಿರ್ಮಾಣ ಮಾಡಲಾಗಿದೆ.

ಮಡೆನೂರು ಜಲಾಶಯದ ಪ್ರದೇಶ ಕರ್ನಾಟಕ ವಿದ್ಯುತ್ ನಿಗಮ (ಕೆಪಿಸಿ)ಗೆ ಸೇರಿದೆ. ಇದು ಶರಾವತಿ ನದಿ ಕಣಿವೆ ಅಭಯಾರಣ್ಯ ವ್ಯಾಪ್ತಿಗೆ ಬರುತ್ತದೆ. ಆದ್ದರಿಂದ ಅರಣ್ಯ ಇಲಾಖೆ ಪ್ರವಾಸಿಗರ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದೆ. ಇದರಿಂದಾಗಿ ಜಲಾಶಯ ನೋಡಲು ಬರುವ ಪ್ರವಾಸಿಗರಿಗೆ ನಿರಾಸೆಯಾಗಿದೆ.
ಲಿಂಗನಮಕ್ಕಿ ಅಣೆಕಟ್ಟೆಗೂ ಮೊದಲು ಮಡೆನೂರು ಜಲಾಶಯ ನಿರ್ಮಾಣ ಮಾಡಲಾಗಿತ್ತು. ನೀರಿನಲ್ಲಿ ಮುಳುಗಿರುವ ಜಲಾಶಯ ಶಿಥಿಲಗೊಂಡಿದೆ. ಅಲ್ಲಲ್ಲಿ ಹಾನಿಯಾಗಿದೆ. ಕೆಲವು ದಿನಗಳಿಂದ ತಂಡೋಪ ತಂಡವಾಗಿ ಪ್ರವಾಸಿಗರು ಇಲ್ಲಿಗೆ ಆಗಮಿಸಿದ್ದು. ಜಲಾಶಯದ ಚಿತ್ರ, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಶಿಥಿಲಗೊಂಡಿರುವ ಜಲಾಶಯಕ್ಕೆ ಪ್ರವಾಸಿಗರು ಭೇಟಿ ನೀಡುವುದು ಸುರಕ್ಷಿತವಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಶರಾವತಿ ಮತ್ತು ಎಣ್ಣೆಹೊಳೆ ನದಿಗಳ ಸಂಗಮ ಸ್ಥಳದ ಹಿರೇಬಚ್ಚಗಾರು ಎಂಬಲ್ಲಿ ವಿಶ್ವವಿಖ್ಯಾತ ಜೋಗ ಜಲಪಾತದ ಸುಮಾರು 13 ಮೈಲುಗಳ ಮೇಲ್ಭಾಗದಲ್ಲಿ ಈ ಡ್ಯಾಂ ಇದೆ. ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ 1750 ಅಡಿಗೆ ಕುಸಿದರೆ ಅದರ ಒಡಲಲ್ಲಿ ಇರುವ ಹಿರೇಭಾಸ್ಕರ ಅಥವ ಮಡೆನೂರು ಡ್ಯಾಂ ಗೋಚರವಾಗುತ್ತದೆ.
1956ರಲ್ಲಿ ಶರಾವತಿ ಜಲವಿದ್ಯುತ್ ಯೋಜನೆ ವಿಸ್ತಾರಗೊಂಡ ಬಳಿಕ 1964ರಲ್ಲಿ ಮಡೆನೂರು ಡ್ಯಾಂ ಲಿಂಗನಮಕ್ಕಿ ಜಲಾಶಯದ ಒಡಲು ಸೇರಿತು. ಕೆಲವು ಕಬ್ಬಿಣ, ಲೋಹದ ವಸ್ತುಗಳು ಡ್ಯಾಂನಿಂದ ಕಳುವಾಗಿವೆ. ಆದರೆ ಡ್ಯಾಂ ರಚನೆ ಮಾತ್ರ ಇಂದಿಗೂ ಅಧ್ಯಯನ ಯೋಗ್ಯವಾಗಿದೆ ಮತ್ತು ಹಲವು ಕಡೆ ಗಟ್ಟಿಮುಟ್ಟಾಗಿಯೇ ಇದೆ.












Click it and Unblock the Notifications