ಜನಸಂದಣಿ ಬೇಡವೇ, ಕುಟುಂಬದೊಂದಿಗೆ ಹೋಗಲು 7 ಸುಂದರ ಹಿಲ್ ಸ್ಟೇಷನ್‌ಗಳು
ಬೇಸಿಗೆ ರಜೆ ಪ್ರಾರಂಭವಾದರೆ ಸಾಕು ಹೆಚ್ಚಿನವರು ನೈನಿತಾಲ್, ಮಸ್ಸೂರಿ ಕಡೆಗೆ ಹೋಗಲು ಇಷ್ಟಪಡುತ್ತಾರೆ. ಆದರೆ ಈ ಬಾರಿ ಜನನಿಬಿಡವಲ್ಲದ ಪ್ರವಾಸಿ ಸ್ಥಳಗಳನ್ನು ಬಿಟ್ಟು, ಕಡಿಮೆ ಜನಸಂದಣಿ ಇರುವ ಪ್ರಶಾಂತವಾದ ಗಿರಿಧಾಮಗಳನ್ನು ಆಯ್ಕೆ ಮಾಡಿದರೆ ನಿಮ್ಮ ಪ್ರವಾಸವನ್ನು ಇನ್ನಷ್ಟು ವಿಶೇಷವಾಗುತ್ತದೆ. ಕುಟುಂಬದೊಂದಿಗೆ, ವಿಶೇಷವಾಗಿ ಮಕ್ಕಳೊಂದಿಗೆ ಭೇಟಿ ನೀಡಲು ಸೂಕ್ತವಾದ 7 ಸುಂದರ ಮತ್ತು ಕಡಿಮೆ ಪರಿಚಿತ ಹಿಲ್ ಸ್ಟೇಷನ್‌ಗಳಿವು.
ಕನತಾಲ್, ಉತ್ತರಾಖಂಡ್
ಕನತಾಲ್ ಉತ್ತರಾಖಂಡದ ಟೆಹ್ರಿ ಗರ್ವಾಲ್ ಜಿಲ್ಲೆಯಲ್ಲಿರುವ ಒಂದು ಶಾಂತಿಯುತ ಮತ್ತು ಸುಂದರವಾದ ಗಿರಿಧಾಮ ಆಗಿದೆ. ಇದು ಚಂಬಾ ಮತ್ತು ಮಸ್ಸೂರಿ ನಡುವೆ ನೆಲೆಸಿದ್ದು ವರ್ಷಪೂರ್ತಿ ಆಹ್ಲಾದಕರ ಹವಾಮಾನವನ್ನು ಹೊಂದಿದೆ. ಶಾಂತಿ ಮತ್ತು ಸಾಹಸ ಚಟುವಟಿಕೆಗಳನ್ನು ಬಯಸುವವರಿಗೆ ಕನತಾಲ್ ಉತ್ತಮ ಆಯ್ಕೆ. 9,995 ಅಡಿ ಎತ್ತರದಲ್ಲಿರುವ ಸುರ್ಕಂದ ದೇವಿ ದೇವಸ್ಥಾನದಿಂದ ಗರ್ವಾಲ್ ಹಿಮಾಲಯದ ಅದ್ಭುತ ನೋಟ ಸಿಗುತ್ತದೆ. ಕೊಡಿಯಾ ಕಾಡಿನಲ್ಲಿ ಜೀಪ್ ಸಫಾರಿ ಅಥವಾ ನಡಿಗೆ ಮಾಡಬಹುದು.

ಪಾಂಗೋಟ್, ಉತ್ತರಾಖಂಡ್
ಪಾಂಗೋಟ್ ಉತ್ತರಖಂಡದ ನೈನಿತಾಲ್ ಜಿಲ್ಲೆಯಲ್ಲಿರುವ ಒಂದು ಶಾಂತಿಯುತವಾದ ಮತ್ತು ಸುಂದರವಾದ ಗಿರಿಧಾಮವಾಗಿದೆ. ಪಕ್ಷಿವೀಕ್ಷಣೆಗೆ ಪ್ರಸಿದ್ಧವಾದ ಪಾಂಗೋಟ್‌ನಲ್ಲಿ 250ಕ್ಕೂ ಹೆಚ್ಚಿನ ಪಕ್ಷಿಗಳ ಜಾತಿಗಳನ್ನು ಇಲ್ಲಿ ಕಾಣಬಹುದು. ನೈನಾ ಶಿಖರಕ್ಕೆ ಟ್ರೆಕ್ ಮಾಡಬಹುದು. ಕೈಂಚಿ ಧಾಮ ಆಶ್ರಮ ಕೂಡ ಇಲ್ಲಿಗೆ ಸಮೀಪದಲ್ಲಿದೆ.
ಬರೋಟ್ ಕಣಿವೆ, ಹಿಮಾಚಲ ಪ್ರದೇಶ
ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯಲ್ಲಿರುವ ಬರೋಟ್ ಕಣಿವೆ ಟ್ರೌಟ್ ಮೀನುಗಾರಿಕೆಗೆ ಪ್ರಸಿದ್ಧ ಈ ಪ್ರದೇಶ ಉಹ್ಲ್ ನದಿಯ ಸುತ್ತಲೂ ಹರಡಿದೆ. ವಿಂಚ್ ಕ್ಯಾಂಪ್‌ಗೆ ಟ್ರೆಕ್ ಮಾಡಿ ಸುಂದರ ದೃಶ್ಯಗಳನ್ನು ಆನಂದಿಸಬಹುದು. 1,830 ಮೀಟರ್ ಎತ್ತರದಲ್ಲಿದ್ದು, ದೇವದಾರ್ ಕಾಡುಗಳು ಮತ್ತು ಧೌಲಧಾರ್ ಪರ್ವತ ಶ್ರೇಣಿಗಳಿಂದ ಆವೃತವಾಗಿದೆ.
ಶೋಜಾ, ಹಿಮಾಚಲ ಪ್ರದೇಶ
ಶೋಜಾ ಹಿಮಾಚಲ ಪ್ರದೇಶದ ಸೆರಾಜ್ ಕಣಿವೆಯಲ್ಲಿರುವ ಒಂದು ಸುಂದರವಾದ ಮತ್ತು ಶಾಂತಿಯುತ ಗಿರಿಧಾಮವಾಗಿದೆ. ಜಲೋರಿ ಪಾಸ್ ಮತ್ತು ಸೆರೋಲ್ಸರ್ ಸರೋವರ ಇಲ್ಲಿನ ಪ್ರಮುಖ ಆಕರ್ಷಣೆ. ಇದು ಸಮುದ್ರ ಮಟ್ಟದಿಂದ 2368 ಮೀಟರ್ ಎತ್ತರದಲ್ಲಿದೆ. ರಘುಪುರ್ ಕೋಟೆ ಅವಶೇಷಗಳಿಂದ ಕಣಿವೆಗಳ ಅದ್ಭುತ ನೋಟ ಸಿಗುತ್ತದೆ. ಪ್ರಕೃತಿ ಮಧ್ಯೆ ಶಾಂತ ಸಮಯ ಕಳೆಯಲು ಸೂಕ್ತ ಸ್ಥಳ.
ವಾಗಮನ್, ಕೇರಳ
ವಾಗಮನ್ ಕೇರಳದ ಇಡುಕ್ಕಿ-ಕೊಟ್ಟಾಯಂ ಗಡಿಯಲ್ಲಿರುವ ಒಂದು ಸುಂದರವಾದ ಗಿರಿಧಾಮ. ಇದಕ್ಕೆ 'ಏಷ್ಯಾದ ಸ್ಕಾಟ್ಲೆಂಡ್' ಎಂದು ಕರೆಯುತ್ತಾರೆ ಮತ್ತು ಇದು ಸಮುದ್ರ ಮಟ್ಟದಿಂದ 1,100 ಮೀಟರ್ ಎತ್ತರದಲ್ಲಿದೆ. ಹಚ್ಚ ಹಸಿರಿನ ಬೆಟ್ಟಗಳು, ಪೈನ್ ಅರಣ್ಯಗಳು, ಟೀ ತೋಟಗಳು ಮತ್ತು ಆಹ್ಲಾದಕರ ವಾತಾವರಣಕ್ಕೆ ಹೆಸರುವಾಸಿಯಾಗಿದೆ. ಪ್ರಕೃತಿ ಸೌಂದರ್ಯ ಮತ್ತು ಆಧ್ಯಾತ್ಮಿಕ ಶಾಂತಿ ಎರಡನ್ನು ಪ್ರವಾಸಿಗರು ಖುಷಿಯಾಗಿ ಅನುಭವಿಸಬಹುದು.
ವಾಲ್ಪಾರೈ, ತಮಿಳುನಾಡು
ವಾಲ್ಪರೈ ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಅಣ್ಣಾಮಲೈ ಬೆಟ್ಟಗಳಲ್ಲಿರುವ (ಪಶ್ಚಿಮ ಘಟ್ಟಗಳು) ಒಂದು ಅತ್ಯಂತ ಸುಂದರವಾದ ಗಿರಿಧಾಮವಾಗಿದೆ. ಸಮುದ್ರ ಮಟ್ಟದಿಂದ 3,500 ಅಡಿಗಳಿಗಿಂತಲೂ ಎತ್ತರದಲ್ಲಿರುವ ಇದು, ದಟ್ಟವಾದ ಚಹಾ ತೋಟಗಳು, ಕಾಫಿ ಎಸ್ಟೇಟ್‌ಗಳು, ಹಚ್ಚ ಹಸಿರಿನ ಪರ್ವತಗಳು ಮತ್ತು ಅದ್ಭುತವಾದ ಜಲಪಾತಗಳಿಗೆ ಹೆಸರುವಾಸಿಯಾಗಿದೆ.
ಲಂಬಸಿಂಗಿ, ಆಂಧ್ರಪ್ರದೇಶ
ಲಂಬಸಿಂಗಿ ಆಂಧ್ರಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯಲ್ಲಿರುವ ಒಂದು ಸಣ್ಣ, ಸುಂದರ ಗಿರಿಧಾಮವಾಗಿದೆ. ಇದನ್ನು 'ಆಂಧ್ರಪ್ರದೇಶದ ಕಾಶ್ಮೀರ' ಎಂದು ಕರೆಯಲಾಗುತ್ತದೆ. ಕಾಫಿ ತೋಟಗಳು, ದಟ್ಟವಾದ ಅರಣ್ಯಗಳು, ಜಲಪಾತಗಳು ಮತ್ತು ಸುಂದರ ಸೂರ್ಯೋದಯಕ್ಕೆ ಇದು ಹೆಸರುವಾಸಿಯಾಗಿದೆ.
ಈ ಬೇಸಿಗೆಯಲ್ಲಿ ಜನನಿಬಿಡವಲ್ಲದ ಪ್ರಕೃತಿಯ ಮಧ್ಯೆ ವಿಶ್ರಾಂತಿ ಪಡೆಯಲು ಈ ಗಿರಿಧಾಮಗಳು ಉತ್ತಮ ಆಯ್ಕೆ ಎಂದು ಹೇಳಬಹುದು.














Click it and Unblock the Notifications