Vande Bharat Express: ಬೆಂಗಳೂರು ನಗರಕ್ಕೆ ಮತ್ತೊಂದು ವಂದೇ ಭಾರತ್ ರೈಲಿಗಾಗಿ ಬೇಡಿಕೆ
ಬೆಂಗಳೂರು, ನವೆಂಬರ್ 04: ಭಾರತೀಯ ರೈಲ್ವೆಯ ಸೆಮಿ ಹೈಸ್ಪೀಡ್ ರೈಲು ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ವಿವಿಧ ರಾಜ್ಯಗಳಲ್ಲಿ ಬಹಳ ಬೇಡಿಕೆ ಇದೆ. ಕರ್ನಾಟಕದಲ್ಲಿ ಹಲವು ಈ ಮಾದರಿ ರೈಲುಗಳು ಸಂಚಾರವನ್ನು ನಡೆಸುತ್ತಿವೆ. ಆದರೆ ರಾಜ್ಯದ ರಾಜಧಾನಿ ಬೆಂಗಳೂರು ಮತ್ತು ಇತರ ನಗರ ಸಂಪರ್ಕಿಸಲು ವಂದೇ ಭಾರತ್ ರೈಲು ಬೇಕು ಎಂಬ ಬೇಡಿಕೆಯೂ ಇದೆ. ಈಗ ಕೇರಳ ಸಹ ಬೆಂಗಳೂರು ನಗರಕ್ಕೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಬೇಕು ಎಂದು ಬೇಡಿಕೆ ಇಟ್ಟಿದೆ.
ಕೇಂದ್ರ ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್ ಭಾನುವಾರ ಕೇರಳ ರಾಜ್ಯಕ್ಕೆ ಭೇಟಿ ನೀಡಿದ್ದರು. ವಿವಿಧ ರೈಲ್ವೆ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದ್ದರು. ಅವರನ್ನು ರಾಜ್ಯಕ್ಕೆ ಸ್ವಾಗತಿಸಿದ್ದ ಹಲವಾರು ಜನರು ಅವರ ಮುಂದೆ ವಂದೇ ಭಾರತ್ ರೈಲಿನ ಕುರಿತಾಗಿಯೇ ಹಲವು ಬೇಡಿಕೆಗಳನ್ನು ಇಟ್ಟಿದ್ದರು. ಈ ರೈಲುಗಳನ್ನು ಮಂಜೂರು ಮಾಡಬೇಕು ಎಂದು ಸಚಿವರನ್ನು ಒತ್ತಾಯಿಸಿದ್ದರು.

ರೈಲ್ವೆ ಸಚಿವರ ಮುಂದೆ ಮೂರು ಬೇಡಿಕೆ: ಸಚಿವ ಅಶ್ವಿನಿ ವೈಷ್ಣವ್ ಮುಂದೆ ಕೇರಳದ ಜನರು ಇಟ್ಟ ಬೇಡಿಕೆಗಳಲ್ಲಿ ಮೂರು ಪ್ರಮುಖವಾಗಿವೆ. ಎರ್ನಾಕುಲಂ-ಬೆಂಗಳೂರು ವಂದೇ ಭಾರತ್ ರೈಲು ಓಡಿಸಬೇಕು, ರಾಜ್ಯದಲ್ಲಿರುವ ಎರಡು ವಂದೇ ಭಾರತ್ ರೈಲಿನ ಬೋಗಿಗಳ ಸಂಖ್ಯೆ ಹೆಚ್ಚಿಸಬೇಕು ಮತ್ತು ತ್ರಿವೆಂಡ್ರಮ್-ಕೊಯಮತ್ತೂರು ನಡುವೆ ವಂದೇ ಭಾರತ್ ರೈಲು ಸೇವೆ ಆರಂಭಿಸಬೇಕು ಎಂಬುದು ಪ್ರಮುಖ ಬೇಡಿಕೆಯಾಗಿದೆ.
ದಕ್ಷಿಣ ರೈಲ್ವೆ ಎರ್ನಾಕುಲಂ-ಬೆಂಗಳೂರು ನಗರದ ಕಂಟೋನ್ಮೆಂಟ್ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರವನ್ನು ಆಗಸ್ಟ್‌ನಲ್ಲಿ ಪ್ರಾಯೋಗಿಕವಾಗಿ ಆರಂಭಿಸಿತ್ತು. ವಾರದಲ್ಲಿ ಮೂರು ದಿನಗಳ ಕಾಲ ಈ ರೈಲು ಸಂಚಾರವನ್ನು ನಡೆಸುತ್ತಿತ್ತು. ಈ ರೈಲು ಮುಂದುವರೆಸಬೇಕು, ವಾರದ ಏಳು ದಿನವೂ ಓಡುವಂತೆ ಮಾಡಬೇಕು ಎಂದು ಬೇಡಿಕೆ ಸಲ್ಲಿಸಲಾಗಿದೆ.
ವೇಳಾಪಟ್ಟಿಯಂತೆ ರೈಲು ಸಂಖ್ಯೆ 06001 ಎರ್ನಾಕುಲಂ-ಬೆಂಗಳೂರು ಕಂಟೋನ್ಮೆಂಟ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಎರ್ನಾಕುಲಂ ಜಂಕ್ಷನ್‌ನಿಂದ ಮಧ್ಯಾಹ್ನ 12:50ಕ್ಕೆ ಹೊರಟು ರಾತ್ರಿ 10 ಗಂಟೆಗೆ ಬೆಂಗಳೂರು ಕಂಟೋನ್ಮೆಂಟ್ ತಲುಪುತ್ತಿತ್ತು. ರೈಲು ಸಂಖ್ಯೆ 06002 ಬೆಂಗಳೂರು ಕಂಟೋನ್ಮೆಂಟ್-ಎರ್ನಾಕುಲಂ ರೈಲು ಬೆಂಗಳೂರಿನಿಂದ ಬೆಳಗ್ಗೆ 5:30ಕ್ಕೆ ಹೊರಟು ಮಧ್ಯಾಹ್ನ 2.20ಕ್ಕೆ ಎರ್ನಾಕುಲಂ ತಲುಪುತ್ತಿತ್ತು. ಹಬ್ಬದ ಸಂದರ್ಭದಲ್ಲಿ ವಾರಕ್ಕೆ ಮೂರು ದಿನ ಈ ರೈಲನ್ನು ವಿಶೇಷವಾಗಿ ಓಡಿಸಲಾಗಿತ್ತು.
ಈ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆ ಎರ್ನಾಕುಲಂನಿಂದ ಬುಧವಾರ, ಶುಕ್ರವಾರ ಮತ್ತು ಭಾನುವಾರ ಮತ್ತು ಬೆಂಗಳೂರಿನಿಂದ ಗುರುವಾರ, ಶನಿವಾರ ಮತ್ತು ಸೋಮವಾರ ಸಂಚಾರವನ್ನು ನಡೆಸುತ್ತಿತ್ತು. ಈ ರೈಲಿಗೆ ತ್ರಿಶೂರ್, ಪಾಲಕ್ಕಾಡ್, ಪೊದನೂರ್, ತಿರುಪ್ಪೂರ್, ಈರೋಡ್ ಮತ್ತು ಸೇಲಂನಲ್ಲಿ ನಿಲುಗಡೆ ಇತ್ತು. ಈ ರೈಲನ್ನು ಪುನಃ ಆರಂಭಿಸಬೇಕು ಎಂದು ಬೇಡಿಕೆ ಇಡಲಾಗಿದೆ.
ಇನ್ನೊಂದು ಬೇಡಿಕೆ ಬೋಗಿಗಳ ಸಂಖ್ಯೆ ಹೆಚ್ಚಳವಾಗಿದೆ. ಸದ್ಯ ಕೇರಳದಲ್ಲಿ ತಿರುವನಂತಪುರಂ-ಮಂಗಳೂರು ಮತ್ತು ತಿರುವನಂತಪುರಂ-ಕಾಸರಗೋಡು ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರವನ್ನು ನಡೆಸುತ್ತಿವೆ. ಈ ರೈಲುಗಳು ಸಂಪೂರ್ಣ ಭರ್ತಿಯಾಗುತ್ತಿದ್ದು, ಹೆಚ್ಚಿನ ಬೋಗಿಗಳನ್ನು ಇದಕ್ಕೆ ಜೋಡಣೆ ಮಾಡಬೇಕು ಎಂಬುದು ಬೇಡಿಕೆಯಾಗಿದೆ.
ತಿರುವನಂತಪುರಂ-ಮಂಗಳೂರು ನಡುವೆ ಈಗ 8 ಬೋಗಿಯ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರ ನಡೆಸುತ್ತಿದೆ. ಈ ರೈಲನ್ನು 16 ಬೋಗಿಯ ರೈಲಾಗಿ ಪರಿವರ್ತನೆ ಮಾಡಬೇಕು ಎಂದು ಬೇಡಿಕೆ ಇಡಲಾಗಿದೆ. ಅದೇ ರೀತಿ ತಿರುವನಂತಪುರಂ-ಕಾಸರಗೋಡು ನಡುವೆ ಸದ್ಯ 16 ಬೋಗಿಯ ರೈಲು ಸಂಚಾರವಿದೆ. ಇದನ್ನು 20 ಬೋಗಿಯ ರೈಲಾಗಿ ಪರಿವರ್ತಿಸಬೇಕು ಎಂದು ಬೇಡಿಕೆ ಸಲ್ಲಿಸಲಾಗಿದೆ.
ಸದ್ಯದ ಮಾಹಿತಿಯಂತೆ ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಭರವಸೆಯಂತೆ ಕೇರಳ ರಾಜ್ಯಕ್ಕೆ ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ಹೆಚ್ಚುವರಿ ಬೋಗಿಗಳನ್ನು ರೈಲ್ವೆ ಇಲಾಖೆ ಮಂಜೂರು ಮಾಡಿದೆ. ಶೀಘ್ರದಲ್ಲೇ ಈ ಬೋಗಿಗಳು ಕೇರಳ ತಲುಪಲಿದ್ದು, ಈಗಿರುವ ರೈಲುಗಳಿಗೆ ಜೋಡಣೆ ಮಾಡಲಾಗುತ್ತದೆ.












Click it and Unblock the Notifications