Doddaballapura-Hoskote Toll: ನವೆಂಬರ್ 17ರಿಂದ ಟೋಲ್ ಶುಲ್ಕ ವಸೂಲಿ ಆರಂಭ, ಯಾವ್ಯಾವ ವಾಹನಗಳಿಗೆ ಎಷ್ಟು?- ಮಾಹಿತಿ
ಬೆಂಗಳೂರು, ನವೆಂಬರ್, 13: ವಾಹನ ಸವಾರರು ಇನ್ಮುಂದೆ ದೊಡ್ಡಬಳ್ಳಾಪುರ-ಹೊಸಕೋಟೆ ಮಾರ್ಗದಲ್ಲಿ ಪ್ರಯಾಣ ಮಾಡಲು ರಾಷ್ಟ್ರೀಯ ಹೆದ್ದಾರಿ ಬಳಕೆ ಮಾಡಿದರೆ ಶುಲ್ಕ ಪಾವತಿ ಮಾಡಬೇಕಾಗುತ್ತದೆ. ಹಾಗಾದರೆ ಈ ನಿಯಮ ಯಾವಾಗಿನಿಂದ ಆರಂಭ ಹಾಗೂ ಯಾವ್ಯಾವ ವಾಹನಗಳಿಗೆ ಎಷ್ಟು ಶುಲ್ಕ ಕಟ್ಟಬೇಕು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ದೊಡ್ಡಬಳ್ಳಾಪುರ ಬೈಪಾಸ್‌ನಿಂದ ನಲ್ಲೂರು ಟೋಲ್‌ವರೆಗಿನ 34.15 ಕಿಲೋ ಮೀಟರ್‌ಗೆ ಟೋಲ್ ಶುಲ್ಕ ವಸೂಲಿಯು ನವೆಂಬರ್ 17ರಿಂದ ಆರಂಭವಾಗಲಿದೆ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಾಹಿತಿ ನೀಡಿದ್ದು, ದರ ಪಟ್ಟಿಯನ್ನು ಸಹ ಬಿಡುಗಡೆ ಮಾಡಿದೆ.
ದಾಬಸ್ ಪೇಟೆ-ಹೊಸೂರು ನಡುವಿನ ರಾಷ್ಟ್ರೀಯ ಹೆದ್ದಾರಿ 648ರ 4 ಪಥದ ರಸ್ತೆ ಕಾಮಗಾರಿಯು ಬಹುತೇಕ ಪೂರ್ಣ ಆಗಿದೆ. ಈ ಹೆದಾರಿಯ ನಿರ್ಮಾಣದಿಂದ ಬೆಂಗಳೂರು ನಗರ ಒಳಗಡೆ ಬರುವ ವಾಹನಗಳಿಗೆ ತಡೆ ಬೀಳಲಿದೆ. ಇದರಿಂದ ನಗರದ ಸಂಚಾರ ಸಮಸ್ಯೆ ಕೂಡ ಬರೆಹರಿಯಲಿದೆ. ಜೊತೆಗೆ ಬೆಂಗಳೂರು ನಗರದ ಹೊರವರ್ತುಲ ರಸ್ತೆಯಾಗಿ ಇದು ಬಳಕೆ ಆಗಲಿದೆ.
ಪ್ರಮುಖವಾಗಿ ಈ ಮಾರ್ಗವು ನೆಲಮಂಗಲ, ದೊಡ್ಡಬಳ್ಳಾಪುರ, ದೇವನಹಳ್ಳಿ, ಹೊಸಕೋಟೆ ಮಾರ್ಗವಾಗಿ ಹೊಸೂರನ್ನು ತಲುಪಲಿದೆ. ದೊಡ್ಡಬಳ್ಳಾಪುರ ಬೈಪಾಸ್‌ನಿಂದ ನಲ್ಲೂರು ಗ್ರಾಮದವರೆಗಿನ ರಸ್ತೆ ಪೂರ್ಣ ಆಗಿದ್ದು, 34.15 ಕಿ.ಮೀ. ಪ್ರಯಾಣಕ್ಕೆ ವಾಹನ ಸವಾರರು ನವೆಂಬರ್ 17ರಿಂದ ಶುಲ್ಕ ಪಾವತಿ ಮಾಡಬೇಕಿದೆ.
ದೊಡ್ಡಬಳ್ಳಾಪುರ ಬೈಪಾಸ್‌ನಿಂದ ಆರಂಭಗೊಂಡು ಹೊಸಕೋಟೆವರೆಗಿನ 4 ಪಥದ ರಸ್ತೆಯ 47 ಕಿಲೋ ಮಿಟರ್‌ನಿಂದ 76.150 ಕಿಲೋ ಮೀಟರ್‌ವರೆಗೆ ಬಳಕೆದಾರರಿಗೆ ನಲ್ಲೂರು ದೇವನಹಳ್ಳಿ ಸುಂಕ ವಸೂಲಾತಿ ಕೇಂದ್ರದಲ್ಲಿ ಶುಲ್ಕ ಸಂಗ್ರಹ ಮಾಡಲಾಗುತ್ತದೆ. ಇದು 2024ರ ಮಾರ್ಚ್31ರವರೆಗೆ ಜಾರಿಯಲ್ಲಿ ಇರಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ರಾಜ್ಯದ ರಾಷ್ಟ್ರೀಯ ಹೆದ್ದಾರಿ 648ರ 34.15 ಕಿಲೋ ಮೀಟರ್ ಉದ್ದದ ಟೋಲಿಂಗ್ ರಸ್ತೆಯನ್ನು ಹೊಂದಿದ್ದು, ಇದಕ್ಕೆ ಶುಲ್ಕ ನಿಗದಿಪಡಿಸಲು ಈಗಾಗಲೇ ಅನುಮೋದನೆ ನೀಡಲಾಗಿದೆ ಎಂದು ಹೆದ್ದಾರಿ ಪ್ರಾಧಿಕಾರ ತಿಳಿಸಿದೆ.
ಯಾವ್ಯಾವ ವಾಹನಗಳಿಗೆ ಎಷ್ಟು ಶುಲ್ಕ?
1. ಕಾರು, ಜೀಪು, ವ್ಯಾನು, ಲಘು ಮೋಟಾರು ವಾಹನಗಳ ಏಕಮುಖ ಸಂಚಾರಕ್ಕೆ 70 ರೂಪಾಯಿ ಹಾಗೂ ಅದೇ ದಿನ ವಾಪಾಸ್ ಬಂದರೆ 105 ರೂಪಾಯಿ ಪಾವತಿಸಬೇಕು.
2. ಇದೇ ಒಂದೇ ತಿಂಗಳಲ್ಲಿ 50 ಸಂಚರಿಸುವ ಮಾಸಿಕ ಪಾಸ್‌ಗೆ 2375 ರೂಪಾಯಿ ನಿಗದಿಪಡಿಸಲಾಗಿದೆ. ಜಿಲ್ಲೆಯ ಒಳಗೆ ನೋಂದಣಿಯಾಗಿರುವ ವಾಣಿಜ್ಯ ವಾನಹಗಳಿಗಾಗಿ 35 ರೂಪಾಯಿ ಶುಲ್ಕ ಪಾವತಿಸುವಂತೆ ಸೂಚನೆ ನೀಡಲಾಗಿದೆ.
3. ಲಘು ವಾಣಿಜ್ಯ ವಾಹನಗಳು, ಲಘು ಸರಕು ವಾಹನಗಳು ಮತ್ತು ಮಿನಿ ಬಸ್‌ಗಳಿಗೆ ಏಕಮುಖ ಸಂಚಾರಕ್ಕೆ 115 ರೂಪಾಯಿ ಹಾಗೂ ಅದೇ ದಿನ ಮರಳಿ ಬಂದರೆ 175 ರೂಪಾಯಿ ಹಾಗೂ ಮಾಸಿಕ ಪಾಸ್ ರೂಪದಲ್ಲಿ3835 ರೂಪಾಯಿ ಪಾವತಿಸಬೇಕು. ಜಿಲ್ಲೆಯೊಳಗೆ ನೋಂದಣಿಯಾಗಿರುವ ವಾಣಿಜ್ಯ ವಾನಹಗಳಿಗಾಗಿ 60 ರೂಪಾಯಿ ಶುಲ್ಕ ಪಾವತಿಸುವಂತೆ ಸೂಚಿಸಲಾಗಿದೆ.

4. ಬಸ್ ಅಥವಾ ಟ್ರಕ್‌ಗಳಿಗೆ ಏಕ ಮುಖ ಸಂಚಾರಕ್ಕೆ 240 ರೂಪಾಯಿ, ಅದೇ ದಿನ ಮರಳಿ ಬಂದರೆ 360 ರೂಪಾಯಿ ಪಾವತಿಸಬೇಕು. ಮಾಸಿಕ 8,040 ರೂಪಾಯಿ ಪಾವತಿಸಬೇಕಾಗುತ್ತದೆ. ಜಿಲ್ಲೆಯೊಳಗೆ ನೋಂದಣಿ ಮಾಡಿಸಿಕೊಂಡಿರುವ ವಾಣಿಜ್ಯ ವಾಹನಗಳಿಗೆ 120 ರೂಪಾಯಿ ನಿಗದಿ ಮಾಡಲಾಗಿದೆ.
5. ಮೂರು ಆಕ್ಸೆಲ್ ವಾಣಿಜ್ಯ ವಾಹನ ಏಕಮುಖ ಸಂಚಾರಕ್ಕೆ 265 ರೂಪಾಯಿ, ಅದೇ ದಿನ ಮರಳಿ ಬಂದರೆ 360 ರೂಪಾಯಿ ಪಾವತಿಸಬೇಕು. ಮಾಸಿಕ ಪಾವತಿಗೆ 8770 ರೂಪಾಯಿ, ಜಿಲ್ಲೆಯೊಳಗೆ ನೋಂದಣಿಯಾಗಿರುವ ವಾಣಿಜ್ಯ ವಾಹನಗಳ 130 ರೂಪಾಯಿ ಶುಲ್ಕ ನಿಗದಿ ಮಾಡಿದೆ.
6. ಇನ್ನು ಭಾರೀ ವಾಹನಗಳಿಗೆ ಒಂದು ಬಾರಿ ಸಂಚಾರಕ್ಕೆ 380 ರೂಪಾಯಿ, ಅದೇ ದಿನ ಹಿಂತಿರುಗಿ ಬಂದರೆ 565 ರೂಪಾಯಿ ಶುಲ್ಕವನ್ನು ಪಾವತಿ ಮಾಡಬೇಕು. ಮಾಸಿಕ 12605 ರೂಪಾಯಿ ಪಾವತಿ ಮಾಡಬೇಕು. ಮತ್ತು ಜಿಲ್ಲೆಯೊಳಗೆ ನೋಂದಣಿಯಾದ ವಾಹನಗಳಿಗೆ 130 ರೂಪಾಯಿ ನಿಗದಿ ಮಾಡಿದೆ.












Click it and Unblock the Notifications