‘ಉತ್ತನಹಳ್ಳಿ ಮಾರಮ್ಮ’ ಅವತರಿಸಿದ್ದು ಹೇಗೆ? ಇಲ್ಲಿದೆ ಹತ್ತು ಹಲವು ವಿಶೇಷತೆ!

ಮೈಸೂರು, ಫೆಬ್ರವರಿ 17: ಮೈಸೂರು ಎಂದಾಕ್ಷಣ ನಮ್ಮ ಕಣ್ಮುಂದೆ ಹಾದು ಬರುವುದು ಚಾಮುಂಡಿಬೆಟ್ಟ ಮತ್ತು ಅದರ ಮೇಲಿನ ತಾಯಿ ಚಾಮುಂಡೇಶ್ವರಿಯ ದೇಗುಲ. ಚಾಮುಂಡಿಬೆಟ್ಟವು ಚಾಮುಂಡೇಶ್ವರಿಯ ನೆಲೆಯಾಗಿದ್ದು, ಚಾಮುಂಡೇಶ್ವರಿ ಬೆಟ್ಟಕ್ಕೆ ಅನತಿ ದೂರದಲ್ಲಿ ಪುಟ್ಟದೊಂದು ಗುಡ್ಡವಿದ್ದು ಅಲ್ಲಿ ಚಾಮುಂಡೇಶ್ವರಿಯ ಸಹೋದರಿ ಜ್ವಾಲಾಮುಖಿ ತ್ರಿಪುರ ಸುಂದರಿ ನೆಲೆಸಿದ್ದಾಳೆ. ಈಕೆ ಚಾಮುಂಡೇಶ್ವರಿಯಷ್ಟೇ ಕಾರ್ಣಿಕವನ್ನು ಹೊಂದಿದ್ದು, ದುಷ್ಟಸಂಹಾರದ ವೇಳೆ ಚಾಮುಂಡೇಶ್ವರಿಗೆ ಆಸರೆಯಾಗಿ ನಿಂತಿರುವುದು ಈಕೆಯ ಶಕ್ತಿಯಾಗಿದೆ.

ಇಷ್ಟಕ್ಕೂ ಜ್ವಾಲಾಮುಖಿ ತ್ರಿಪುರ ಸುಂದರಿ ಎಂದರೆ ಹೆಚ್ಚಿನವರಿಗೆ ಗೊತ್ತಾಗದಿರಬಹುದು ಆದರೆ ಉತ್ತನಳ್ಳಿ ಮಾರಮ್ಮ ಎಂದರೆ ಎಲ್ಲರಿಗೂ ಗೊತ್ತಾಗಿ ಬಿಡುತ್ತದೆ. ಉತ್ತನಹಳ್ಳಿ ಜ್ವಾಲಾಮುಖಿ ತ್ರಿಪುರ ಸುಂದರಿ ದೇಗುಲವು ಮೈಸೂರಿನಿಂದ ಸುಮಾರು 13 ಕಿ.ಮೀ. ದೂರದಲ್ಲಿದೆ. ಈ ದೇಗುಲಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿಯೇ ಆಗಮಿಸುತ್ತಾರೆ. ಸದಾ ಪ್ರಶಾಂತವಾಗಿರುವುದು ಈ ಸ್ಥಳದ ವಿಶೇಷವಾಗಿದೆ. ಊರಿನಿಂದ ಎತ್ತರದ ಗುಡ್ಡದ ಮೇಲೆ ನೆಲೆ ನಿಂತಿರುವ ತಾಯಿ ತ್ರಿಪುರ ಸುಂದರಿ ಜ್ವಾಲಾಮುಖಿ ದೇವಿಯು ತನ್ನ ಬಳಿಗೆ ಬರುವ ಭಕ್ತರನ್ನು ಸಂಕಷ್ಟಗಳನ್ನು ದೂರಮಾಡಿ ಇಷ್ಟಾರ್ಥಗಳನ್ನು ನೆರವೇರಿಸುತ್ತಾ ಬರುತ್ತಿದ್ದಾಳೆ.

Discover the Special Significance of Uttanahalli Maramma Temple

ವಾರದ ಎಲ್ಲ ದಿನಗಳಲ್ಲಿಯೂ ಇಲ್ಲಿ ಪೂಜಾ ಕೈಂಕರ್ಯಗಳು ನಡೆಯುತ್ತವೆಯಾದರೂ ಮಂಗಳವಾರ ಮತ್ತು ಶುಕ್ರವಾರ ದೇವಿಗೆ ವಿಶೇಷ ಪೂಜೆಗಳು ನಡೆಯುತ್ತವೆ. ಈ ವೇಳೆ ಭಕ್ತರ ಸಂಖ್ಯೆಯೂ ಹೆಚ್ಚಾಗಿರುತ್ತದೆ. ಇನ್ನು ಜ್ವಾಲಾಮುಖಿ ತ್ರಿಪುರ ಸುಂದರಿ ಅರ್ಥಾತ್ ಉತ್ತನಹಳ್ಳಿ ಮಾರಮ್ಮನ ದೇಗುಲದ ಬಗ್ಗೆ ಹೇಳಬೇಕೆಂದರೆ ಇದು ಇತರೆ ದೇಗುಲದಂತೆ ಬೃಹತ್ ಗೋಪುರವನ್ನು ಹೊಂದದೆ ಗ್ರಾಮೀಣ ಭಾಗಗಳಲ್ಲಿ ಮಾರಮ್ಮನ ದೇಗುಲಗಳು ಹೇಗಿರುತ್ತವೆಯೋ ಹಾಗೆಯೇ ಇದೆ. ಆದರೆ ಹತ್ತು ಹಲವು ವಿಶೇಷತೆ ಹೊಂದಿರುವುದು ಅಲ್ಲಿಗೆ ತೆರಳಿದವರಿಗಷ್ಟೆ ಗೊತ್ತಾಗುತ್ತದೆ.

ಜ್ವಾಲಾಮುಖಿ ತ್ರಿಪುರ ಸುಂದರಿ ದೇಗುಲ

ಉತ್ತನಹಳ್ಳಿ ಗ್ರಾಮಕ್ಕೆ ಹೊಂದಿಕೊಂಡಂತೆ ಪುಟ್ಟ ಗುಡ್ಡದ ಮೇಲೆ ದೇವಾಲಯ ನಿರ್ಮಾಣವಾಗಿದೆ. ರಸ್ತೆಯಿಂದ ಏರು ರಸ್ತೆಯಲ್ಲಿ ಸಾಗಿದರೆ ದೇಗುಲವನ್ನು ತಲುಪಬಹುದಾಗಿದೆ. ಈ ದೇವಾಲಯಕ್ಕೆ ಎರಡು ಕಡೆ ಪ್ರವೇಶ ದ್ವಾರ ಗಳಿದ್ದು, ಒಂದು ಕಡೆಯ ಪ್ರವೇಶ ದ್ವಾರವು ನೂರೊಂದು ಮೆಟ್ಟಿಲುಗಳನ್ನು ಒಳಗೊಂಡಿದೆ. ದೇಗುಲದ ಗರ್ಭಗುಡಿ ಇರುವ ಮಂಟಪವು ಗೋಡೆಯಿಂದ ಆವೃತಗೊಂಡಿದ್ದು, ಪುಟ್ಟ ಗೋಪುರವನ್ನು ಹೊಂದಿದೆ. ದೇಗುಲದ ಒಳಾಂಗಣದಲ್ಲಿ ಮಾರಮ್ಮನ ಬಲಗಡೆ ಶಿವನ ದೇವಾಲಯ, ಮಾರಮ್ಮನ ದೇವಾಲಯಕ್ಕೆ ಹೊಂದಿಕೊಂಡಂತೆ ಭೈರವೇಶ್ವರ, ಸಿದ್ದೇಶ್ವರ ದೇವಾಲಯಗಳಿವೆ.

Discover the Special Significance of Uttanahalli Maramma Temple

ಉತ್ತನಹಳ್ಳಿ ಜನರಿಗೆ ಗ್ರಾಮದೇವತೆಯಾಗಿರುವ 'ಉತ್ತನಹಳ್ಳಿ ಮಾರಮ್ಮ' ಇಲ್ಲಿ ನೆಲೆನಿಂತಿದ್ದೇಗೆ? ಆಕೆ ಸೃಷ್ಟಿಯಾಗಿದ್ದು ಹೇಗೆ? ಹೀಗೆ ಎಲ್ಲವನ್ನೂ ನೋಡುತ್ತಾ ಹೋದರೆ ತಾಯಿ ಚಾಮುಂಡೇಶ್ವರಿಯ ಬೆವರಿನಿಂದ ಸೃಷ್ಟಿಯಾದಳೆಂಬ ಕಥೆಯು ಪ್ರಚಲಿತದಲ್ಲಿದೆ. ಪುರಾಣ ಕಾಲದಲ್ಲಿ ದುಷ್ಟಸಂಹಾರಕ್ಕಾಗಿ ಹುಟ್ಟಿ ಬಂದ ಚಾಮುಂಡೇಶ್ವರಿಯ ಸಹೋದರಿಯಾಗಿರುವ ಜ್ವಾಲಾಮುಖಿ ತ್ರಿಪುರ ಸುಂದರಿಯು ಮಹಿಷಾಸುರನ ಸಂಹಾರದ ವೇಳೆ ಸಹಕರಿಸಿದ್ದು ಎಲ್ಲರಿಗೂ ಗೊತ್ತೇ ಇದೆ.

ದುಷ್ಟ ಸಂಹಾರಕ್ಕಾಗಿ ಅವತರಿಸಿದ ಚಾಮುಂಡಿ

ಈ ಕುರಿತಂತೆ ಪುರಾಣದ ಕಥೆಗಳ ಪ್ರಕಾರ ಮಹಿಷಮಂಡಲದ ರಾಜನಾಗಿದ್ದ ಮಹಿಷಾಸುರನ್ನು ಅಟ್ಟಹಾಸದಿಂದ ಮೆರೆಯುತ್ತಾ ಋಷಿ ಮುನಿಗಳ ಯಜ್ಞ ಯಾಗಾದಿಗಳಿಗೆ ಅಡಚಣೆ ಮಾಡುತ್ತಾ ಮೆರೆಯುತ್ತಿದ್ದನು. ಈತನ ಉಪಟಳದಿಂದ ನೊಂದ ಋಷಿಮುನಿಗಳು ಈತನ ಸಂಹಾರ ಮಾಡಿ ತಮ್ಮನ್ನು ರಕ್ಷಿಸುವಂತೆ ದೇವತೆಗಳ ಬಳಿಗೆ ಹೋಗುತ್ತಾರೆ. ಅಲ್ಲದೆ 'ತ್ರಿಮೂರ್ತಿ'ಗಳೆಂದು ಕರೆಯಲ್ಪಡುವ ಬ್ರಹ್ಮ, ವಿಷ್ಣು, ಮಹೇಶ್ವರರಲ್ಲಿ ತಮ್ಮ ತಮ್ಮ ಸಂಕಷ್ಟವನ್ನು ಹೇಳಿಕೊಂಡು ಮಹಿಷಾಸುರನ ಸಂಹಾರ ಮಾಡುವಂತೆ ಬೇಡಿಕೊಳ್ಳುತ್ತಾರೆ.

Discover the Special Significance of Uttanahalli Maramma Temple

ಈ ವೇಳೆ ಮಹಿಷಾಸುರ ಶಕ್ತಿ ಮತ್ತು ಆತ ಪಡೆದಿದ್ದ ವರಗಳ ಬಗ್ಗೆ ತಿಳಿದಿದ್ದ ಆ ತ್ರಿಮೂರ್ತಿಗಳು ತಮ್ಮಿಂದ ಆತನನ್ನು ಸಂಹಾರ ಮಾಡುವುದು ಸಾಧ್ಯವಾಗದ ಮಾತು. ಆದರೆ ಮಹಿಷಾಸುರನ ಸಾವು ಹೆಣ್ಣಿನಿಂದಷ್ಟೇ ಸಾಧ್ಯ ಎಂಬುದು ಬ್ರಹ್ಮನಿಗೆ ಗೊತ್ತಿದ್ದ ಕಾರಣದಿಂದ ಶಿವನ ಅರ್ಧಾಂಗಿಯಾದ ಪಾರ್ವತಿಯು ಭೂಲೋಕದ ಕಲ್ಯಾಣಕ್ಕಾಗಿ ತಾನು ಕಂಕಣಬದ್ಧಳಾಗಿರುವುದಾಗಿ ತಿಳಿಸಿ ಮಹಿಷಾಸುರನನ್ನು ಸಂಹಾರ ಮಾಡಲು ಪಣ ತೊಡುತ್ತಾಳೆ. ಈ ವೇಳೆ ಆಕೆಗೆ ದೇವಾನುದೇವತೆಗಳೆಲ್ಲರೂ ತಮ್ಮ ಶಕ್ತಿ, ಧೈರ್ಯವನ್ನೆಲ್ಲ ಧಾರೆ ಎರೆಯುವುದಲ್ಲದೆ, ಚಾಮುಂಡಿ ಎಂಬ ಹೆಸರನ್ನಿಟ್ಟು, ರುದ್ರನು ತ್ರಿಶೂಲವನ್ನೂ, ಇಂದ್ರನು ವಜ್ರಾಯುಧವನ್ನು, ವಿಷ್ಣು ಚಕ್ರವನ್ನು, ಬ್ರಹ್ಮ ಕಮಂಡಲನ್ನು ಸರ್ವಶಕ್ತಿ ಪಡೆದು ಮಹಿಷಾಮಂಡಲಕ್ಕೆ ಚಾಮುಂಡಿ ಬರುತ್ತಾಳೆ.

ಚಾಮುಂಡಿ ಬೆವರಿನಿಂದ ಅವತರಿಸಿದ ತ್ರಿಪುರ ಸುಂದರಿ

ಅಸಾಮಾನ್ಯ ಶಕ್ತಿಯನ್ನು ಹೊಂದಿ ಬಂದ ಚಾಮುಂಡಿಗೂ ಮಹಿಷಾಸುರನಿಗೂ ಮಹಾ ಕಾಳಗ ನಡೆಯುತ್ತದೆ. ಈ ವೇಳೆ ಮಹಿಷಾಸುರನ ಒಂದು ಹನಿ ರಕ್ತ ಮಣ್ಣಲ್ಲಿ ಬಿದ್ದರೂ ಸಹ ಆ ಒಂದು ಹನಿ ರಕ್ತದಿಂದ ಸಾವಿರಾರು ರಾಕ್ಷಸರು ಹುಟ್ಟಿಕೊಳ್ಳುತ್ತಿರುತ್ತಾರೆ. ಇದನ್ನು ನೋಡಿದ ಚಾಮುಂಡೇಶ್ವರಿಗೆ ಚಿಂತೆಯಾಗುತ್ತದೆ. ಅಲ್ಲದೆ ಅವರನ್ನು ಸಂಹಾರ ಮಾಡುವ ವೇಳೆ ಬೆವರು ಸುರಿಯಲಾರಂಭಿಸುತ್ತದೆ. ಈ ಸಮಯದಲ್ಲಿ ಚಾಮುಂಡೇಶ್ವರಿ ತನ್ನ ಮೊಗದ ಮೇಲೆ ಬಂದ ಬೆವರನ್ನು ಕೈನಿಂದ ವರೆಸಿ ಎಸೆದಾಗ ಅಲ್ಲಿ ಜ್ವಾಲಾಮುಖಿ ತ್ರಿಪುರ ಸುಂದರಿ ಸೃಷ್ಟಿಯಾಗುತ್ತಾಳೆ.

ಆಶ್ಚರ್ಯಗೊಂಡ ಚಾಮುಂಡೇಶ್ವರಿ ಯಾರು ನೀರು ಎಂದು ಪ್ರಶ್ನಿಸುತ್ತಾಳೆ. ಈ ವೇಳೆ ಜ್ವಾಲಾಮುಖಿ ತ್ರಿಪುರ ಸುಂದರಿಯು ನಾನು ನಿನ್ನ ಸಹೋದರಿಯೆಂದೂ ನಿನಗೆ ಸಹಾಯ ಮಾಡಲು ಬಂದಿರುವುದಾಗಿ ಹೇಳಿ ಯುದ್ಧ ಮುಂದುವರೆಸುವಂತೆ ಸೂಚಿಸುತ್ತಾಳೆ. ಚಾಮುಂಡೇಶ್ವರಿ ಮಹಿಷಾಸುರನ ಸಂಹಾರಕ್ಕೆ ಮುಂದಾಗಿ ಆತನಿಗೆ ತ್ರಿಶೂಲದಿಂದ ಚುಚ್ಚಿದಾಗ ಚಿಮ್ಮುವ ರಕ್ತ ನೆಲಕ್ಕೆ ಬೀಳದಂತೆ ತ್ರಿಪುರ ಸುಂದರಿ ನಾಲಿಗೆಯನ್ನು ಚಾಚಿ ಹೀರುತ್ತಾಳೆ. ಇದರಿಂದ ಚಾಮುಂಡೇಶ್ವರಿ ಮಹಿಷಾಸುರನ ಸಂಹಾರ ಮಾಡಲು ಸಹಕಾರಿಯಾಗುತ್ತದೆ.

ಭಕ್ತರನ್ನು ಹರಸುವ ಉತ್ತನಹಳ್ಳಿ ಮಾರಮ್ಮ

ಮಹಿಷಾಸುರನ ಸಂಹಾರದ ನಂತರ ತಾಯಿ ಚಾಮುಂಡೇಶ್ವರಿ ಅಲ್ಲಿಯೇ ನೆಲೆಗೊಳ್ಳುವುದಲ್ಲದೆ, ಸಹೋದರಿ ತ್ರಿಪುರ ಸುಂದರಿಗೂ ತನ್ನ ಬಳಿಯೇ ನೆಲೆಸುವಂತೆ ಹೇಳುತ್ತಾಳೆ ಆದರೆ ಇದಕ್ಕೊಪ್ಪದ ಜ್ವಾಲಾಮುಖಿ ತ್ರಿಪುರ ಸುಂದರಿ ಅಲ್ಲಿಂದ ಐದು ಬಳಪದಕಲ್ಲುಗಳನ್ನು ಎತ್ತಿಕೊಂಡು ಹೊರಡುತ್ತಾಳೆ ಹೀಗೆ ಹೋಗುವಾಗ ಕಲ್ಲನ್ನು ಎಡವಿ ಬೀಳುತ್ತಾಳೆ. ಆಕೆ ಬಿದ್ದ ಬೆಟ್ಟವನ್ನು 'ಬಿದ್ ಬೆಟ್ಟ' ಎಂದು ಕರೆಯುತ್ತಾರೆ. ಅಲ್ಲಿಂದ ಎದ್ದು ನಡೆದು ಬಂದ ಆಕೆ ಬೆಟ್ಟದ ತಪ್ಪಲಿನಲ್ಲಿರುವ ಉತ್ನಳಮ್ಮನಾಗಿ ನೆಲೆಸಿದಳೆಂದೂ ಉತ್ನಳಮ್ಮ ನೆಲೆಸಿದ ಸ್ಥಳ ಉತ್ತನಹಳ್ಳಿ ಆಯಿತು. ಇವತ್ತು ಉತ್ತನಹಳ್ಳಿ ಮಾರಮ್ಮನಾಗಿ ಗ್ರಾಮದ ದೇವತೆಯಾಗಿ ಎಲ್ಲರನ್ನು ಹರಸುತ್ತಾ ಬರುತ್ತಿದ್ದಾಳೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+