ಮಹತ್ವದ ರೈಲು ಯೋಜನೆಗಾಗಿ ಹೋರಾಟ ಆರಂಭಿಸಿದ ಉತ್ತರ ಕರ್ನಾಟಕದ ಜನರು
ಕೊಪ್ಪಳ, ಮಾರ್ಚ್ 29: ಉತ್ತರ ಕರ್ನಾಟಕ ಭಾಗದ ಜನರು ಕರ್ನಾಟಕ, ಮಹಾರಾಷ್ಟ್ರ ಹಾಗೂ ತೆಲಂಗಾಣ ರಾಜ್ಯಗಳನ್ನು ಸಂಪರ್ಕಿಸುವ ಮಹತ್ವದ ರೈಲು ಯೋಜನೆ ಜಾರಿಯಾಗಿ ಹೋರಾಟವನ್ನು ಆರಂಭಿಸಿದ್ದಾರೆ. ಹಲವು ವರ್ಷಗಳಿಂದ ಈ ಹೊಸ ರೈಲು ಮಾರ್ಗ ಯೋಜನೆಗಾಗಿ ಜನರು ಬೇಡಿಕೆ ಈಡುತ್ತಿದ್ದರು. ಈ ಜನಪ್ರತಿನಿಧಿಗಳನ್ನು ಭೇಟಿಯಾಗಿ ಯೋಜನೆ ಜಾರಿಗಾಗಿ ಮನವಿಗಳನ್ನು ಸಲ್ಲಿಕೆ ಮಾಡುತ್ತಿದ್ದಾರೆ.
ಕುಷ್ಟಗಿ-ನರಗುಂದ-ಘಟಪ್ರಭಾ ಹೊಸ ರೈಲು ಮಾರ್ಗಕ್ಕಾಗಿ ಹೋರಾಟ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಗಿದೆ. ಈ ಯೋಜನೆ ಜಾರಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮುಂದಾಗಬೇಕು ಎಂದು ಹೋರಾಟವನ್ನು ಆರಂಭಿಸಲಾಗಿದೆ. ಧಾರವಾಡ ಸಂಸದ, ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಮತ್ತು ಹೊಸ ಮತ್ತು ನವೀಕರಿಸಬಹುದಾದ ಇಂಧನ ಖಾತೆಗಳ ಸಚಿವ ಪ್ರಹ್ಲಾದ್ ಜೋಶಿಗೆ ಮನವಿ ಸಲ್ಲಿಕೆ ಮಾಡಲಾಗಿದೆ.

ಸಚಿವ ಪ್ರಹ್ಲಾದ್ ಜೋಶಿಯನ್ನು ಬಿಜೆಪಿ ಕಾರ್ಯಕಾರಣಿ ಸದಸ್ಯ ಡಾ. ಬಸವರಾಜ್ ಕ್ಯಾವಟರ್, ರೈಲ್ವೆ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ವೀರೇಶ ಬಂಗಾರ ಶೆಟ್ಟರ್ ಮುಂತಾದವರು ಭೇಟಿ ಮಾಡಿ ಕುಷ್ಟಗಿ-ನರಗುಂದ-ಘಟಪ್ರಭಾ ರೈಲ್ವೆ ಮಾರ್ಗದ ಬೇಡಿಕೆ ಸಲ್ಲಿಕೆ ಮಾಡಿದರು. ಈ ಮಾರ್ಗ ನಿರ್ಮಾಣದಿಂದ ಮಹಾರಾಷ್ಟ್ರ ಹಾಗೂ ತೆಲಂಗಾಣ ರಾಜ್ಯಗಳಿಗೆ ಸಂಪರ್ಕ ಸುಲಭವಾಗಲಿದೆ ಎಂದು ಹೇಳಿದರು.
ಸಚಿವರ ಭರವಸೆ ಏನು?: ಮನವಿ ಸ್ವೀಕರಿಸಿದ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿ, "ನರಗುಂದ ಮಾರ್ಗವಾಗಿ ಘಟಪ್ರಭಾ ಹೊಸ ರೈಲು ಮಾರ್ಗದ ಬೇಡಿಕೆಗೆ ಸಂಬಂಧಿಸಿದಂತೆ ಮುಂದಿನ ವರ್ಷದ ಬಜೆಟ್‌ನಲ್ಲಿ ಸೇರ್ಪಡೆ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ" ಎಂದು ಭರವಸೆ ನೀಡಿದರು.
ಡಾ. ಬಸವರಾಜ್ ಕ್ಯಾವಟರ್ ಮಾತನಾಡಿ, "ಈ ರೈಲು ಮಾರ್ಗ ಮಹಾರಾಷ್ಟ್ರ, ತೆಲಂಗಾಣ ರಾಜ್ಯಗಳಿಗೆ ಸಂಪರ್ಕ ಸೇತು ಆಗಲಿದೆ. ಕೃಷಿ, ತೋಟಗಾರಿಕೆ, ವಾಣಿಜ್ಯ ಉತ್ಪನ್ನಗಳು, ಸರಕು ಸಾಗಣೆಗೆ ಸಹಾಯಕವಾಗಲಿದೆ. ಹೆಚ್ಚಿನ ಉದ್ಯೋಗಗಳು ಸಹ ಸೃಷ್ಟಿಯಾಗಲಿದೆ" ಎಂದರು.
"ಹೊಸ ರೈಲು ಮಾರ್ಗ ಉತ್ತರ ಮತ್ತು ದಕ್ಷಿಣ ಭಾಗಕ್ಕೆ ಸಂಪರ್ಕ ಸೇತು ಆಗಲಿದೆ. ಆದ್ದರಿಂದ ಪ್ರಯಾಣಿಕರ ಸಂಚಾರದ ಜೊತೆಗೆ ಸರಕು ಸಾಗಣೆ ವೆಚ್ಚವೂ ಕಡಿಮೆಯಾಗಿ ಹಣ ಉಳಿತಾಯವಾಗಲಿದೆ. ಇದರಿಂದಾಗಿ ಧಾರ್ಮಿಕ ಮತ್ತು ಪ್ರೇಕ್ಷಣಿಯ ಸ್ಥಳಗಳಿಗೆ ಹೆಚ್ಚು ಜನರು ಭೇಟಿ ನೀಡಲು ಅನುಕೂಲವಾಗಲಿದೆ" ಎಂದು ಸಚಿವರಿಗೆ ವಿವರಣೆ ನೀಡಲಾಗಿದೆ.
ಸಚಿವ ಪ್ರಹ್ಲಾದ್ ಜೋಶಿ, "ಈ ಬೇಡಿಕೆಗಳು ನ್ಯಾಯಸಮ್ಮತವಾಗಿದೆ. ರೈಲ್ವೆ ಸಚಿವರ ಜೊತೆ ಈ ಕುರಿತು ಮಾತುಕತೆ ನಡೆಸಲಾಗುತ್ತದೆ. 2026-2027ನೇ ಸಾಲಿನ ಬಜೆಟ್‌ನಲ್ಲಿ ಇದನ್ನು ಸೇರಿಸಲಾಗುವುದು. ಸಾಧ್ಯವಾದಲ್ಲಿ ಹೊಸ ರೈಲ್ವೆ ಮಾರ್ಗ ಸೇರಿಸುವ ಅವಕಾಶ ಇದ್ದರೆ ಅದಕ್ಕೆ ಕೂಡ ಪ್ರಯತ್ನಿಸಲಾಗುವುದು" ಎಂದು ಭರವಸೆ ಕೊಟ್ಟರು.
ಕುಷ್ಟಗಿ ನಿಲ್ದಾಣವನ್ನು ಕೇವಲ ನಿಲ್ದಾಣವನ್ನಾಗಿ ಮಾಡದೆ ಜಂಕ್ಷನ್ ಆಗಿ ಪರಿವರ್ತನೆ ಮಾಡಬೇಕು ಎಂದು ಒತ್ತಾಯಿಸಲಾಗಿದೆ. 2025ರ ಜನವರಿಯಲ್ಲಿಯೇ ಕುಷ್ಟಗಿ-ನರಗುಂದ-ಘಟಪ್ರಭಾ ರೈಲು ಯೋಜನೆ ಕುರಿತು ಹೋರಾಟ ನಡೆಸಲು ತೀರ್ಮಾನ ಮಾಡಲಾಗಿತ್ತು. ನರಗುಂದದಿಂದ ಪಟ್ಟಣದ ಮಾರ್ಗವಾಗಿ ಘಟಪ್ರಭಾ ತನಕ ರೈಲು ಸಂಪರ್ಕ ಕಲ್ಪಿಸುವ ನೂತನ ಯೋಜನೆ ಜಾರಿಗಾಗಿ ಜಿಲ್ಲಾ ಮಟ್ಟದಲ್ಲಿ ಹೋರಾಟ ಪ್ರಾರಂಭಿಸಲು ನಿರ್ಣಯಿಸಲಾಗಿತ್ತು.












Click it and Unblock the Notifications