ಕಲಬುರಗಿ; ಚಿಂಚೋಳಿಗೆ ಬರಲಿದೆ 4 ಪಥದ ರಾಷ್ಟ್ರೀಯ ಹೆದ್ದಾರಿ
ಬೆಂಗಳೂರು, ಅಕ್ಟೋಬರ್ 17: ಕರ್ನಾಟಕ ಸಲ್ಲಿಕೆ ಮಾಡಿದ್ದ ಬಾಪೂರ-ಮಹಿಬೂಬನಗರ ರಾಷ್ಟ್ರೀಯ ಹೆದ್ದಾರಿಗೆ ಯೋಜನೆಗೆ ಕೇಂದ್ರ ಸರ್ಕಾರದ ಒಪ್ಪಿಗೆ ಸಿಕ್ಕಿದೆ. ಕಲಬುರಗಿ ಜಿಲ್ಲೆಯ ಚಿಂಚೋಳಿಯಲ್ಲಿ 32 ಕಿ. ಮೀ. ನಾಲ್ಕು ಪಥದ ರಸ್ತೆ ಹಾದು ಹೋಗಲಿದೆ.
ಕೇಂದ್ರ ಭೂ ಸಾರಿಗೆ ಸಚಿವಾಲಯ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಒಪ್ಪಿಗೆ ನೀಡಿದೆ. ವಿಸ್ತೃತ ಯೋಜನಾ ವರದಿಯನ್ನು ತಯಾರು ಮಾಡಿ ಸಲ್ಲಿಕೆ ಮಾಡುವಂತೆ ಸೂಚನೆ ಕೊಟ್ಟಿದೆ. ಖಾಸಗಿ ಸಂಸ್ಥೆ ಸ್ಥಳ ಪರಿಶೀಲನೆ ಮಾಡಿ, ಡಿಪಿಆರ್ ತಯಾರು ಮಾಡಲಿದೆ.

ಈ 4 ಪಥದ ರಾಷ್ಟ್ರೀಯ ಹೆದ್ದಾರಿ ಯೋಜನೆಗೆ ಸುಮಾರು 400 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಸುಮಾರು 60 ಕೋಟಿ ಭೂ ಸ್ವಾಧೀನ ಕಾರ್ಯಕ್ಕೆ ವೆಚ್ಚವಾಗಲಿದೆ. ಯೋಜನೆ ಅನ್ವಯ 9.8 ಕಿ. ಮೀ. ಬೈಪಾಸ್ ಸಹ ನಿರ್ಮಾಣವಾಗಲಿದೆ.
ಯೋಜನೆಯ ವಿವರ; ಬಾಪೂರ-ಮಹಿಬೂಬನಗರ ರಾಷ್ಟ್ರೀಯ ಹೆದ್ದಾರಿಯ ಭಾಗವಾಗಿ ಒಟ್ಟು 32 ಕಿ. ಮೀ. ರಾಷ್ಟ್ರೀಯ ಹೆದ್ದಾರಿ ಚಿಂಚೋಳಿ ತಾಲೂಕಿನಲ್ಲಿ ಹಾದು ಹೋಗಲಿದೆ. ಈ ಪೈಕಿ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ಖಾಸಗಿ ಸಹಭಾಗಿತ್ವದಲ್ಲಿ 4 ವರ್ಷಗಳ ಹಿಂದೆ 16 ಕಿ. ಮೀ. ರಸ್ತೆಯನ್ನು ಅಭಿವೃದ್ಧಿಗೊಳಿಸಿದೆ. ಈ ಒಪ್ಪಂದ ಮುಗಿಯುವ ತನಕ ಇಲ್ಲಿ ಕಾಮಗಾರಿ ಮಾಡಲು ಸಾಧ್ಯವಿಲ್ಲ.
ಇದರ ಮುಂದಿನ ಭಾಗವಾಗಿ ಅಂದರೆ ಚಿಂಚೋಳಿಯಿಂದ ತೆಲಂಗಾಣದ ಗಡಿ ಮಿರಿಯಾಣ ತನಕ 15.8 ಕಿ. ಮೀ. ರಾಷ್ಟ್ರೀಯ ಹೆದ್ದಾರಿಯನ್ನು ನಿರ್ಮಾಣ ಮಾಡಲಾಗುತ್ತದೆ. 6.7 ಕಿ. ಮೀ. ಮತ್ತು 3.1 ಕಿ. ಮೀ. ಸೇರಿ ಎರಡು ಬೈಪಾಸ್ ಸಹ ಈ ಯೋಜನೆಯ ಭಾಗವಾಗಿ ನಿರ್ಮಾಣವಾಗಲಿದೆ.
ಈ ರಸ್ತೆಯನ್ನು ಈಗಾಗಲೇ ಲೋಕೋಪಯೋಗಿ ಇಲಾಖೆಯಿಂದ ರಾಷ್ಟ್ರೀಯ ಹೆದ್ದಾರಿ ಹುಮನಾಬಾದ್ ಉಪ ವಿಭಾಗಕ್ಕೆ ಹಸ್ತಾಂತರ ಮಾಡಿಕೊಳ್ಳಲಾಗಿದೆ. ಡಿಪಿಆರ್ ತಯಾರಾಗಿ, ಯೋಜನೆಯ ಟೆಂಡರ್ ಪ್ರಕ್ರಿಯೆಗಳು ಮುಗಿದ ಬಳಿಕ ಈ 4 ಪಥದ ರಸ್ತೆ ಕಾಮಗಾರಿಯೂ ಆರಂಭವಾಗಲಿದೆ.
ಕಲಬುರಗಿ ಸಂಸದ ಡಾ. ಉಮೇಶ್ ಜಾಧವ್ ಈ ಯೋಜನೆಯ ಕುರಿತು ಪ್ರಜಾವಾಣಿ ಜೊತೆ ಮಾತನಾಡಿದ್ದಾರೆ. "ಈ ರಾಷ್ಟ್ರೀಯ ಹೆದ್ದಾರಿ ಕ್ರಿಯಾ ಯೋಜನೆಗೆ ಅನುಮತಿ ಸಿಕ್ಕಿದೆ. ಇದರಿಂದಾಗಿ ಸಿಮೆಂಟ್, ಎಥೆನಾಲ್ ಕೈಗಾರಿಕೆಗಳಿಗೆ ಹಾಗೂ ವಾಣಿಜ್ಯೋದ್ಯಮ ಅಭಿವೃದ್ಧಿಗೆ ಸಹಾಯಕವಾಗಲಿದೆ" ಎಂದು ಹೇಳಿದ್ದಾರೆ.
ಬಾಪೂರ-ಚಿಂಚೋಳಿ ರಸ್ತೆ ರಾಯಚೂರು-ವನ್ಮಾರಪಳ್ಳಿ ರಾಜ್ಯ ಹೆದ್ದಾರಿ 15ರ ವ್ಯಾಪ್ತಿಗೆ ಸೇರಿತ್ತು. ಇದು ಚಿಂಚೋಳಿ ಪಟ್ಟಣದ ಮೂಲಕ ಸಾಗುತ್ತಿತ್ತು. ಆದರೆ ಕಿರಿದಾದ ರಸ್ತೆಯನ್ನು ಅಗಲೀಕರಣ ಮಾಡಬೇಕು ಎಂದು ಬೇಡಿಕೆ ಇಡಲಾಗಿತ್ತು.
ಈ ಬೇಡಿಕೆಯಿಂತೆ ಈಗ 9.8 ಉದ್ದದ ಎರಡು ಬೈಪಾಸ್ ನಿರ್ಮಾಣವಾಗಲಿದೆ. ಡಿಪಿಆರ್‌ಗೆ ಅನುಮೋದನೆ ಪಡೆದು ಕಾಮಗಾರಿ ಆರಂಭಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಚತುಷ್ಪಥ ರಸ್ತೆಯಿಂದಾಗಿ ವಾಣಿಜ್ಯ ಚಟುವಟಿಕೆಗಳಿಗೆಗ ಸಹ ಅನುಕೂಲವಾಗಲಿದೆ.
ಈ ಹಿಂದೆ ಸಂಸದ ಡಾ. ಉಮೇಶ್ ಜಾಧವ್ ಬಾಪೂರ-ಮಹಿಬೂಬನಗರ ರಾಷ್ಟ್ರೀಯ ಹೆದ್ದಾರಿ 167 ಚಿಂಚೋಳಿ ಪಟ್ಟಣದ ಮೂಲಕ ಹಾದು ಹೋಗುತ್ತಿರುವುದರಿಂದ ರಸ್ತೆ ವಿಸ್ತರಿಸದೇ, ಈಗಿರುವ ಅಂಗಡಿಗಳನ್ನು ಹಾಗೆಯೇ ಉಳಿಸಿಕೊಳ್ಳವ ಕುರಿತು ಪರಿಶೀಲನೆ ನಡೆಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಆಗ ಬೈಪಾಸ್ ನಿರ್ಮಾಣದ ಪ್ರಸ್ತಾಪ ಕೇಳಿ ಬಂದಿತ್ತು.












Click it and Unblock the Notifications