ಬಿಎಂಟಿಸಿ ಹೊಸ ಮಾರ್ಗ, ಯಶವಂತಪುರ ಕಡೆ ಜನರಿಗೆ ಅನುಕೂಲ
ಬೆಂಗಳೂರು, ಆಗಸ್ಟ್ 31: ಪ್ರಯಾಣಿಕರ ಬೇಡಿಕೆಯಂತೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಆಗಸ್ಟ್ ತಿಂಗಳಿನಲ್ಲಿ ಹೊಸ ಮಾರ್ಗವೊಂದನ್ನು ಪರಿಚಯಿಸಿದೆ. ಬೆಂಗಳೂರು ಗ್ರಾಮಾಂತರ ಭಾಗದ ಪ್ರಯಾಣಿಕರನ್ನು ಗುರಿಯಾಗಿಸಿಕೊಂಡು ಹೊಸ ಮಾರ್ಗದಲ್ಲಿ ಬಸ್ ಸಂಚಾರವನ್ನು ಆರಂಭಿಸಲಾಗಿದೆ. ಪ್ರಯಾಣಿಕರು ಬಸ್ ಸೇವೆಯ ಉಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ.
ಬಿಎಂಟಿಸಿ ಯಶವಂತಪುರ-ಕೋಡಿಹಳ್ಳಿ (ಮೋಟಗಾನಹಳ್ಳಿ) ನಡುವಿನ ಮಾರ್ಗದಲ್ಲಿ ಹೊಸ ಬಸ್ ಸಂಚಾರವನ್ನು ಆರಂಭಿಸಿದೆ. ಆಗಸ್ಟ್ ತಿಂಗಳಿನಲ್ಲಿ ಬಿಎಂಟಿಸಿ ಹೊಸ ಬಸ್ ಸೇವೆ ಆರಂಭಿಸುತ್ತಿರುವ ಮಾರ್ಗದಲ್ಲಿ ಇದೂ ಸಹ ಒಂದು. ನೆಲಮಂಗಲ, ಜಾಲಹಳ್ಳಿ ಕ್ರಾಸ್, ಯಶವಂಪುರ ಕಡೆಗೆ ಸಂಚಾರ ನಡೆಸುವ ಜನರಿಗೆ ಈ ಬಸ್ ಸಹಾಯಕವಾಗಿದೆ.

ಬಸ್ ಮಾರ್ಗದ ವಿವರ: ಬಿಎಂಟಿಸಿ ಹೊಸ ಬಸ್ ಮಾರ್ಗದ ಕುರಿತು ಮಾಹಿತಿ ನೀಡಿದೆ.
ಯಶವಂತಪುರ-ಕೋಡಿಹಳ್ಳಿ (ಮೋಟಗಾನಹಳ್ಳಿ). ಕೋಡಿಹಳ್ಳಿ ಇಂದ ಕೆಂಪೇಗೌಡ ಬಸ್ ನಿಲ್ದಾಣ ಕಡೆಗೆ ಹೊರಡುವ ಸಮಯ 07:15. ಕೋಡಿಹಳ್ಳಿ ಇಂದ ಯಶವಂತಪುರ ಕಡೆಗೆ ಹೊರಡುವ ಸಮಯ 19:00. ನೆಲಮಂಗಲದಿಂದ ಕೋಡಿಹಳ್ಳಿ ಕಡೆಗೆ ಹೊರಡುವ ಸಮಯ 06:15. ಯಶವಂತಪುರದಿಂದ ಕೋಡಿಹಳ್ಳಿ ಕಡೆಗೆ ಹೊರಡುವ ಸಮಯ 16:55.
ಬಿಎಂಟಿಸಿ ಪರಿಚಯಿಸಿರುವ ಈ ಹೊಸ ಮಾರ್ಗದ ಬಸ್ ಕೋಡಿಹಳ್ಳಿ-ತಿರುಮಲಾಪುರ-ಮೋಟಗಾನಹಳ್ಳಿ-ಬಸವನಹಳ್ಳಿ-ಮಹದೇವಪುರ-ಯ೦ಟಗಾನಹಳ್ಳಿ-ನೆಲಮಂಗಲ- ಅರಿಶಿನಕುಂಟೆ-ದಾಸನಪುರ-ಮಾಕಳಿ-ಮಾದನಾಯಕನಹಳ್ಳಿ-ಮಾದವಾರ-8ನೇ ಮೈಲಿ-ಜಾಲಹಳ್ಳಿ ಕ್ರಾಸ್-ಗೊರಗುಂಟೆಪಾಳ್ಯ-ಯಶವಂತಪುರ ಮಾರ್ಗದಲ್ಲಿ ಸಂಚಾರ ನಡೆಸಲಿದೆ.
ಇದೇ ತಿಂಗಳಿನಲ್ಲಿ ಬಿಎಂಟಿಸಿ 300-ಆರ್ ಸಂಖ್ಯೆಯ ಹೊಸ ಮಾರ್ಗವನ್ನು ಘೋಷಣೆ ಮಾಡಿತ್ತು. ಈ ಮಾರ್ಗದ ಬಸ್‌ಗಳು ಯಶವಂತಪುರ ರೈಲು ನಿಲ್ದಾಣ ಮತ್ತು ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ರೈಲು ನಿಲ್ದಾಣದ ನಡುವೆ ಸಂಪರ್ಕ ಕಲ್ಪಿಸುತ್ತದೆ. ಯಶವಂತಪುರ ರೈಲು ನಿಲ್ದಾಣ ಮತ್ತು ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ನಡುವಿನ ಬಸ್ ಯಶವಂತಪುರ ಬಸ್ ನಿಲ್ದಾಣ, ಕಂಟೋನ್ಮೆಂಟ್ ರೈಲು ನಿಲ್ದಾಣ, ಮಾರುತಿ ಸೇವಾ ನಗರ ಮೂಲಕ ಸಂಚರಿಸಲಿದೆ ಎಂದು ಬಿಎಂಟಿಸಿ ಹೇಳಿತ್ತು.
ಬಿಎಂಟಿಸಿ ಅಧಿಕಾರಿಗಳ ಮಾಹಿತಿ ಪ್ರಕಾರ ಒಂದು ವರ್ಷದಲ್ಲಿ 40 ವಿವಿಧ ಪ್ರದೇಶಗಳಿಂದ ಹೊಸ ಬಸ್ ಮಾರ್ಗವನ್ನು ಪರಿಚಯಿಸಲಾಗಿದೆ. ಈ ಮಾರ್ಗದಲ್ಲಿ ಪರಿಚಯಿಸಿದ ಎಲ್ಲಾ ಬಸ್‌ಗಳು ನಾನ್ ಎಸಿ ಬಸ್ ಆಗಿದೆ. ಸಂಸ್ಥೆಯ ಈ ಪ್ರಯೋಗ ಯಶಸ್ವಿಯೂ ಆಗಿದ್ದು, ಹೊಸ ಮಾರ್ಗದ ಬಸ್‌ಗಳು ಶೇ 70ರಷ್ಟು ಭರ್ತಿಯಾಗಿ ಸಂಚಾರ ನಡೆಸುತ್ತಿವೆ, ಪ್ರಯಾಣಿಕರು ಸಹ ಬಸ್ ಸೇವೆ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.
ನಿಲ್ದಾಣಗಳಲ್ಲಿಯೂ ಪಾಸುಗಳು ಲಭ್ಯ: ಬಿಎಂಟಿಸಿ ಸೆಪ್ಟೆಂಬರ್ 15ರಿಂದ ಅನ್ವಯವಾಗುವಂತೆ ಡಿಜಿಟಲ್ ವ್ಯವಸ್ಥೆಯಲ್ಲಿ ಮೊಬೈಲ್ ಅಪ್ಲಿಕೇಶನ್ ಮುಖಾಂತರ ದಿನದ, ವಾರದ ಮತ್ತು ಮಾಸಿಕ ಪಾಸು ವಿತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿತ್ತು. ಪ್ರಯಾಣಿಕರು ತಮ್ಮ ಮೊಬೈಲ್‌ನಲ್ಲಿ ಪ್ಲೇ-ಸ್ಟೋರ್ ಮೂಲಕ ಟುಮ್ಯಾಕ್ ಅಪ್ಲಿಕೇಶನ್ ಅನ್ನು (Tummoc app) ಡೌನ್‌ಲೋಡ್ ಮಾಡಿಕೊಂಡು ಪಾಸು ಪಡೆಯಬಹುದಾಗಿದೆ. ಪಾಸುಗಳನ್ನು ಪೂರ್ಣ ಪ್ರಮಾಣದಲ್ಲಿ ಡಿಜಿಟಲ್ ವ್ಯವಸ್ಥೆಯಲ್ಲಿ ವಿತರಿಸಲಾಗುತ್ತದೆ ಎಂದು ಹೇಳಿತ್ತು.
ಆದರೆ ಸಾಮಾಜಿಕ ಜಾಲತಾಣದಲ್ಲಿ ಈ ನಡೆಗೆ ಟೀಕೆಗಳು ವ್ಯಕ್ತವಾಗಿದೆ. ಆದ್ದರಿಂದ ಬಿಎಂಟಿಸಿ ಡಿಜಿಟಲ್ ಮಾದರಿಯಲ್ಲಿ ಪಾಸುಗಳು ಲಭ್ಯ. ಅಲ್ಲದೇ ಬಸ್ ನಿಲ್ದಾಣದಲ್ಲಿಯೂ ಪಾಸುಗಳು ಸಿಗಲಿದ್ದು, ಪ್ರಯಾಣಿಕರು ಅಲ್ಲಿಯೂ ದೈನಿಕ, ಸಾಪ್ತಾಹಿಕ (ವಾರ) ಹಾಗೂ ಮಾಸಿಕ ಪಾಸುಗಳನ್ನು ಪಡೆಯಬಹುದಾಗಿದೆ ಎಂದು ಸ್ಪಷ್ಟನೆ ನೀಡಿದೆ.












Click it and Unblock the Notifications